ಗಣೇಶ ನಿಮಜ್ಜನದ ನಂತರ ಜುಹು ಬೀಚ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಮಹಾರಾಷ್ಟ್ರ ಸಿಎಂ ಪತ್ನಿ ಅಮೃತಾ ಫಡ್ನವಿಸ್ ಭಾಗವಹಿಸಿದ್ದರು. ಆದರೆ, ಅವರ ಉಡುಗೆಯೇ ಈಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮುಂಬೈನಲ್ಲಿ ಗಣೇಶ ಕಾರ್ಯ ಬಹಳ ಅದ್ದೂರಿಯಾಗಿ ನಡೆಯುತ್ತದೆ. ನಗರದ ವಿವಿಧೆಡೆ ಕೂರಿಸಿದ ಸಾವಿರಾರು ಗಣೇಶನ ವಿಗ್ರಹಗಳನ್ನು 10 ದಿನಗಳ ಕಾಲ ಪೂಜೆ ಮಾಡಿ ಸಮುದ್ರಗಳಲ್ಲಿ ನಿಮಜ್ಜನ ಮಾಡಲಾಗುತ್ತದೆ. ಆದರೆ ಈ ಗಣೇಶ ನಿಮಜ್ಜನದ ನಂತರ ಸಮುದ್ರತೀರಗಳು ಕಸದ ರಾಶಿಯಿಂದ ತುಂಬಿ ತುಳುಕುತ್ತಿರುತ್ತವೆ. ಇದನ್ನು ನಂತರ ಸ್ವಚ್ಛ ಮಾಡಲಾಗುತ್ತದೆ. ಹಾಗೆಯೇ ಈ ಬಾರಿ ಅಲ್ಲಿ ಗಣೇಶ ನಿಮಜ್ಜನ ನಂತರ ಜುಹು ಬೀಚ್‌ನಲ್ಲಿ ಸ್ವಚ್ಛತಾ ಕಾರ್ಯಗಳನ್ನು ನಡೆಸಲಾಯಿತು. ಈ ಸ್ವಚ್ಛತಾ ಕಾರ್ಯದಲ್ಲಿ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಲವು ಎನ್‌ಜಿಒ ಸಂಘಟನೆಗಳು, ನಾಗರಿಕರು, ಬಿಎಂಸಿ ಅಧಿಕಾರಿಗಳು ಭಾಗಿಯಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದರಲ್ಲದೇ ಇರುವುದೊಂದೇ ಭೂಮಿ ಭೂಮಿ ರಕ್ಷಣೆ ಮಾಡಿ ಎಂದು ಮನವಿ ಮಾಡಿದರು.
ಸ್ವಚ್ಛತೆಗಿಂತ ಮಹಾರಾಷ್ಟ್ರ ಸಿಎಂ ಪತ್ನಿಯ ಬಟ್ಟೆಯ ಬಗ್ಗೆಯೇ ಭಾರಿ ಚರ್ಚೆ:
ಆದರೆ ಈ ಸ್ವಚ್ಛತಾ ಕಾರ್ಯಕ್ಕಿಂತ ಈಗ ಈ ಸ್ವಚ್ಛತಾ ಕಾರ್ಯದ ವೇಳೆ ದೇವೇಂದ್ರ ಫಡ್ನವಿಸ್ ಪತ್ನಿ ಧರಿಸಿದ ಬಟ್ಟೆಯೇ ಹೆಚ್ಚು ಸುದ್ದಿಯಾಗುತ್ತಿದೆ. ಅನೇಕರು ಅವರು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ದೃಶ್ಯದ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸರ್ಕಾರಿ ಕಾರ್ಯಕ್ರಮದಲ್ಲಿ ಈ ರೀತಿ ಮೈಗಂಟಿದ ದೇಹದ ಉಬ್ಬುತಗ್ಗುಗಳು ಕಾಣುವಂತಹ ಬಟ್ಟೆ ಧರಿಸುವ ಅಗತ್ಯವಿತ್ತಾ ಎಂದು ಪ್ರಶ್ನೆ ಮಾಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗ್ತಿದೆ.
ಅಮೃತಾ ಫಡ್ನವೀಸ್ ವಿಡಿಯೋ ಭಾರಿ ವೈರಲ್:
@rose_k01 ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಅಮೃತಾ ಫಡ್ನವಿಸ್ ಧರಿಸಿರುವುದು ಏನು? ಇದು ಸರಿಯಾಗಿರುವ ಬಟ್ಟೆಯೇ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಈ ವೀಡಿಯೋವನ್ನು ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಈ ವೀಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅವರು ಮಾಡಿದ ಕೆಲಸವನ್ನು ಗೌರವಿಸಿ ಬಟ್ಟೆ ಮೇಲೆ ಕಣ್ಣೇಕೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. 100ರಲ್ಲಿ 80 ಜನ ಅವರನ್ನೇ ನೋಡುತ್ತಿದ್ದಾರೆ ಉಳಿದ 15 ರಷ್ಟು ಜನ ಅಕ್ಷಯ್‌ರನ್ನು ದೂಡುತ್ತಿದ್ದಾರೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆಯ ಗಂಡನಿಗೆ ಒಂದು ವೇಳೆ ಪ್ರಧಾನಿ ಸ್ಥಾನ ತಪ್ಪಿ ಹೋದರೆ ಅದಕ್ಕೆ ಆಕೆಯೇ ಕಾರಣ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಅದು ಅವಳ ಆಯ್ಕೆ. ಉಡುಪಿನಲ್ಲಿ ಏನು ತಪ್ಪಿದೆ? ಯಾವುದೇ ಬಾಲಿವುಡ್ ಸೆಲೆಬ್ರಿಟಿಗಳು ಅದನ್ನು ಧರಿಸಿದ್ದರೆ, ಯಾರಿಗೂ ಯಾವುದೇ ಸಮಸ್ಯೆ ಆಗ್ತಿರಲಿಲ್ಲ, ಅವರು ಮುಖ್ಯಮಂತ್ರಿಯ ಪತ್ನಿ ಎಂಬ ಕಾರಣಕ್ಕೆ, ಅವರು ಏನು ಮಾಡಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ ಎಂದು ಒಬ್ಬರು ಅಮೃತಾ ಫಡ್ನವಿಸ್ ಧಿರಿಸಿನ ಬಗ್ಗೆ ಸಮರ್ಥನೆ ನೀಡಿದ್ದಾರೆ. ಸಿಎಂ ಪತ್ನಿಯಾಗಿರುವುದಕ್ಕೂ ಸಿನಿಮಾತಾರೆಗೂ ತುಂಬಾ ವ್ಯತ್ಯಾಸವಿದೆ ಎಂದು ಕೆಲವರು ಅದಕ್ಕೆ ಈ ಸಮರ್ಥನೆಗೆ ಪ್ರತಿಕ್ರಿಯಿಸಿದ್ದಾರೆ.
ಅದೇನೆ ಇರಲಿ ಬಿಜೆಪಿಯ ಬಹುತೇಕ ನಾಯಕರು ಹೆಣ್ಣು ಮಕ್ಕಳು ಮೈ ಮುಚ್ಚುವ ಬಟ್ಟೆ ಧರಿಸಬೇಕು, ಸೀರೆ ಉಡಬೇಕು ಸಂಸ್ಕಾರ ಪಾಲನೆ ಮಾಡಬೇಕು ಎಂದು ಊರಿಗೆಲ್ಲಾ ಭಾಷಣ ಮಾಡ್ತಾರೆ. ಆದರೆ ಸ್ವತಃ ತಮ್ಮ ಪತ್ನಿಗೆ ಸಾರ್ವಜನಿಕ ಸ್ಥಳದಲ್ಲಿ ಹೇಗೆ ಬಟ್ಟೆ ಧರಿಸಬೇಕು ಎಂಬುದರ ಸಂಸ್ಕಾರ ನೀಡುವುದಕ್ಕೆ ಇವರಿಗೆ ಸಾಧ್ಯವಾಗಿಲ್ಲ. ಒಟ್ಟಿನಲ್ಲಿ ಮಾಡೋದೆಲ್ಲ ಅನಾಚಾರ ಮನೆ ಮುಂದೆ ಬೃಂದಾವನ ಎಂಬಂತಾಗಿದೆ ಇವರ ಕತೆ ಎಂದು ಜನ ಮಾತಾಡ್ತಿದ್ದಾರೆ.
ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದವರಿಗೆ ಧನ್ಯವಾದ ಸಲ್ಲಿಸಿದ ಅಮೃತಾ:
ಇತ್ತ ಕಾರ್ಯಕ್ರಮದಲ್ಲಿ ಮಾತನಾಡಿದ ಅಮೃತಾ ಫಡ್ನವಿಸ್, ಗಣೇಶ ವಿಸರ್ಜನೆಯ ನಂತರ ಇಂದು ಜುಹು ಬೀಚ್‌ನಲ್ಲಿ ನಾವು ದೊಡ್ಡ ಬೀಚ್ ಸ್ವಚ್ಛತಾ ಕಾರ್ಯವನ್ನು ಆಯೋಜಿಸಿದ್ದೇವೆ . ನಮ್ಮ ಕಡಲತೀರಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕಾಗಿರುವುದರಿಂದ ವಿವಿಧ ಸಂಸ್ಥೆಗಳು ನಮ್ಮೊಂದಿಗೆ ಸೇರಿಕೊಂಡಿವೆ ಎಂದರು. ಅಮೃತಾ ಫಡ್ನವೀಸ್ ಸ್ಥಾಪಿಸಿದ ಸರ್ಕಾರೇತರ ಸಂಸ್ಥೆಯಾದ ದಿವ್ಯಜ್ ಫೌಂಡೇಶನ್ ಆಯೋಜಿಸಿದ್ದ ಈ ಅಭಿಯಾನದಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತ ಭೂಷಣ್ ಗಗ್ರಾನಿ ಕೂಡ ಅವರೊಂದಿಗೆ ಸೇರಿಕೊಂಡರು. ಹಬ್ಬಗಳ ಆಚರಣೆಯಂತೆಯೇ ಕಡಲತೀರಗಳನ್ನು ಸ್ವಚ್ಛವಾಗಿಡುವುದು ನಾಗರಿಕರ ಅತ್ಯಂತ ಜವಾಬ್ದಾರಿಯಾಗಿದೆ ಎಂಬುದನ್ನು ಅವರು ಒತ್ತಿ ಹೇಳಿದರು ಮತ್ತು ಸ್ವಚ್ಛತಾ ಕಾರ್ಯಕ್ಕೆ ಬೆಂಬಲ ನೀಡಿದ ವಿವಿಧ ಸರ್ಕಾರೇತರ ಸಂಸ್ಥೆಗಳು ಮತ್ತು ಬಿಎಂಸಿಗೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ: ನೀರಿಗೆ ಬಿಟ್ಟ ಗಣೇಶನ ಸ್ವಾಗತಿಸಿದ ಬಾತುಕೋಳಿಗಳು : ಮಿಂಚಿನ ವೇಗದಲ್ಲಿ ಮೀನಿನ ಬೇಟೆಯಾಡಿದ ಬೆಕ್ಕು: ವೀಡಿಯೋ
ಇದನ್ನೂ ಓದಿ: ಅತೀ ಭದ್ರತೆಯ ಕೆಂಪು ಕೋಟೆಯಲ್ಲೇ ಕೋಟಿ ಮೌಲ್ಯದ ಚಿನ್ನದ ಕಳಸ ಕದ್ದವ ಕಡೆಗೂ ಅಂದರ್
