ಪ್ರಾಣಿ ಪ್ರಿಯರಿಗೆ ಗುಡ್ ನ್ಯೂಸ್, ವಿಮಾನದಲ್ಲಿ ಮಾಲೀಕನ ಜೊತೆ 10ಕೆಜಿ ತೂಕದ ಪೆಟ್ಸ್ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಕ್ಯಾಬಿನ್‌ನಲ್ಲಿ ಮಾಲೀಕನ ಜೊತೆ ಸಾಕು ಪ್ರಾಣಿ ಪ್ರಯಾಣ ಮಾಡಬಹುದು. ಇನ್ನು 10 ಕೆಜಿಗಿಂತ ಮೇಲ್ಪಟ್ಟ ಸಾಕು ಪ್ರಾಣಿಗಳ ನಿಯಮದಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ.

ನವದೆಹಲಿ (ಡಿ.14) ಭಾರತದಲ್ಲಿ ವಿಮಾನ ಪ್ರಯಾಣ ಸರಳ ಹಾಗೂ ಕೈಗೆಟುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಸುರಕ್ಷತಾ ನಿಯಮಗಳು ಕಠಿಣಗೊಳ್ಳುತ್ತಿದ್ದರೆ, ಇತ್ತ ಪ್ರಯಾಣಿಕರ ತ್ವರಿತ ಪ್ರಯಾಣಕ್ಕೆ ಹಲವು ಬದಲಾವಣೆ ಮಾಡಲಾಗಿದೆ. ಇದರ ನಡುವೆ ಸಾಕು ಪ್ರಾಣಿ ಪ್ರಿಯರಿಗೆ ಏರ್ ಇಂಡಿಯಾ ಗುಡ್ ನ್ಯೂಸ್ ನೀಡಿದೆ. ಇದೀಗ ಸಾಕು ಪ್ರಾಣಿಗಳು ಮಾಲೀಕನ ಜೊತೆ ಪ್ರಯಾಣಕ್ಕೆ ಏರ್ ಇಂಡಿಯಾ ಅವಕಾಶ ನೀಡಿದೆ. 10 ಕೆಜಿ ಒಳಗಿನ ಸಾಕು ಪ್ರಾಣಿಗಳು ಮಾಲೀಕ ಕ್ಯಾಬಿನ್‌ನಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದರ ಜೊತೆಗೆ ಬುಕಿಂಗ್‌ನಲ್ಲೂ ಮಹತ್ತರ ಬದಲಾವಣೆ ಮಾಡಲಾಗಿದೆ.

10ಕೆಜಿ ಪೆಟ್ಸ್ ಪ್ರಯಾಣಕ್ಕೆ ಗ್ರೀನ್ ಸಿಗ್ನಲ್

ಏರ್ ಇಂಡಿಯಾ ವಿಮಾನ ವಿಶೇಷ ಯೋಜನೆಯೊಂದನ್ನು ಆರಂಭಿಸಿದೆ. 10 ಕೆಜಿ ಒಳಗಿನ ನಾಯಿ, ಬೆಕ್ಕು ಸೇರಿದಂತೆ ಸಾಕು ಪ್ರಾಣಿಗಳನ್ನು ಮಾಲೀಕನ ಕ್ಯಾಬಿನ್‌ನಲ್ಲೇ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಈ ಟಿಕೆಟ್ ಬುಕಿಂಗ್ ಸಮಯವನ್ನು ಪ್ರಯಾಣಕ್ಕೂ 72 ಗಂಟೆ ಮೊದಲು ಅನ್ನೋ ನಿಯಮದಿಂದ 48 ಗಂಟೆ ಮೊದಲು ಬುಕಿಂಗ್‌ಗೆ ಅವಕಾಶ ನೀಡಲಾಗಿದೆ.

ಒಂದು ವಿಮಾನದಲ್ಲಿ ಎರಡು ಸಾಕು ಪ್ರಾಣಿಗೆ ಅವಕಾಶ

ಸಾಕು ಪ್ರಾಣಿಗಳ ಜೊತೆ ವಿಮಾನದಲ್ಲಿ ಪ್ರಯಾಣಿಸಲು ಹಲವು ನಿರ್ಬಂಧಗಳಿವೆ. ಹಲವು ವಿಮಾನಯಾನ ಸಂಸ್ಥೆಗಳು ಅನುಮತಿ ನೀಡುವುದಿಲ್ಲ. ಇದೀಗ ಏರ್ ಇಂಡಿಯಾ ಮಹತ್ತರ ಬದಲಾವಣೆ ತಂದಿದೆ. 10ಕೆಜಿ ಒಳಗಿ ತೂಕದ ಸಾಕು ಪ್ರಾಣಿಗಳು ಮಾಲೀಕನ ಕ್ಯಾಬಿನ್‌ನಲ್ಲೇ ಪ್ರಯಾಣ ಎಂಜಾಯ್ ಮಾಡಬಹುದು. ಪೆಟ್ಸ್ ಟಿಕೆಟ್ ಬುಕಿಂಗ್ ವೇಳೆ ಎಕಾನಾಮಿ ಕ್ಯಾಬಿನ್ ನೀಡಲಾಗುತ್ತದೆ. ವಿಮಾನದ ಕೊನೆಯ ಎರಡು ಕ್ಯಾಬಿನ್ ಈ ರೀತಿ ಸಾಕು ಪ್ರಾಣಿಗಳ ಪ್ರಯಾಣಕ್ಕೂ ವಿನ್ಯಾಸ ಮಾಡಲಾಗಿದೆ. ಒಂದು ವಿಮಾನದಲ್ಲಿ ಗರಿಷ್ಠ ಎರಡು ಸಾಕು ಪ್ರಾಣಿ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.

ಸಾಕು ಪ್ರಾಣಿ ಪ್ರಯಾಣಕ್ಕೆ ಕ್ಯಾರಿಯರ್ ಮಾರ್ಗದರ್ಶನ

ಸಾಕು ಪ್ರಾಣಿಗಳನ್ನು ವಿಮಾನದಲ್ಲಿ ಕೊಂಡೊಯ್ಯಲು ಕೆಲ ಮಾರ್ಗಸೂಚಿ ನೀಡಲಾಗಿದೆ. ಸಾಕು ಪ್ರಾಣಿಗಳನ್ನು ಗೂಡು ಅಥವಾ ಕ್ಯಾರಿಯರ್ ಮೂಲಕ ಮಾತ್ರ ಕೊಂಡೊಯ್ಯಬೇಕು. ಈ ಕ್ಯಾರಿಯರ್ ಅತೀವ ಭಾರ, ಕಠಿಣವಾಗಿರಬಾರದು, ಸಾಫ್ಟ್ ಆಗಿ, ಸೋರಿಕೆಯಾಗದಂತೆ ಇರಬೇಕು. ಇದರ ಗಾತ್ರ 17x10x9 ಇಂಚಿಗಿಂತ ಹೆಚ್ಚಿರಬಾರದು.

10 ಕೆಜಿ ಮೇಲ್ಪಟ್ಟು ಹಾಗೂ 32 ಕೆಜಿ ಒಳಗಿನ ಸಾಕು ಪ್ರಾಣಿಗಳಿಗೂ ಏರ್ ಇಂಡಿಯಾ ವಿಮಾನ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ 10 ಕೆಜಿ ಮೇಲ್ಪಟ್ಟ ತೂಕದ ಸಾಕುಪ್ರಾಣಿಗಳ ಪ್ರಯಾಣಕ್ಕೆ ಪ್ರತ್ಯೇಕ ಬ್ಯಾಗೇಜ್ ಬುಕಿಂಗ್ ಮಾಡಬೇಕು. ಇದಕ್ಕೆ ಹಾರ್ಡ್ ಕೇಸ್ ಕ್ಯಾರಿಯರ್ ಅವಶ್ಯಕತೆ ಇದೆ. ಜೊತೆಗೆ IATA ಮಾರ್ಗಸೂಚಿಗಳನ್ನು ಪಾಲಿಸಿರಬೇಕು. ಇನ್ನು 32 ಕೆಜಿ ಮೇಲ್ಪಟ್ಟ ಸಾಕು ಪ್ರಾಣಿಗಳಿಗೆ ಪ್ರತ್ಯೇಕ ಕಾರ್ಗೋ ವಿಮಾನದಲ್ಲಿ ಟಿಕೆಟ್ ಬುಕಿಂಗ್ ಮಾಡಬೇಕು.

ಸಾಕು ಪ್ರಾಣಿಗಳ ಪ್ರಯಾಣಕ್ಕೆ ಟಿಕೆಟ್ ಬೆಲೆ ಎಷ್ಟು?

10 ಕೆಜಿ ಒಳಗಿನ ಸಾಕು ಪ್ರಾಣಿಗಳನ್ನು ಏರ್ ಇಂಡಿಯಾ ವಿಮಾನದಲ್ಲಿ ಕೊಂಡೊಯ್ಯಲು ಟಿಕೆಟ್ ಬೆಲೆ 7500 ರೂಪಾಯಿ. ಇದು ಭಾರತದೊಳಗಿನ ಪ್ರಯಾಣಕ್ಕೆ ತಗುಲುವ ಟಿಕೆಟ್ ಬೆಲೆ. ಇನ್ನು ಅಂತಾರಾಷ್ಟ್ರೀಯ ಪ್ರಾಯಣಕ್ಕೆ ಕಡಿಮೆ ಅವಧಿ ಪ್ರಯಾಣದ ಅಂತಾರಾಷ್ಟ್ರೀಯ ವಿಮಾನದಲ್ಲಿ 140 ಅಮೆರಿಕನ್ ಡಾಲರ್ ಹಾಗೂ ಸುದೀರ್ಘ ಪ್ರಯಾಣದ ಏರ್ ಇಂಡಿಯಾ ವಿಮಾನದಲ್ಲಿ 160 ಡಾಲರ್. ಬ್ಯಾಗೇಜ್ ಮೂಲಕ ಸಾಕು ಪ್ರಾಣಿಗಳ ಕೊಂಡೊಯ್ಯಲು ಭಾರತದ ದೇಶಿಯ ಸೇವೆಯಲ್ಲಿ 16,000 ರೂಪಾಯಿ ಹಾಗೂ ಅಂತಾರಾಷ್ಟ್ರೀಯ ವಿಮಾನದಲ್ಲಿ 350 ಡಾಲರ್.