ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಜೈನ ಧಾರ್ಮಿಕ ಸಮಾರಂಭದಲ್ಲಿ ಕೋಟಿ ಮೌಲ್ಯದ ಚಿನ್ನದ ಕಳಸವನ್ನು ಕದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ. ಸಾಧುವೇಷದಲ್ಲಿ ಬಂದ ಆರೋಪಿ ಜನಜಂಗುಳಿಯಲ್ಲಿ ಕಳಸವನ್ನು ಕದ್ದು ಪರಾರಿಯಾಗಿದ್ದ

ಸಾಧುವಿನ ವೇಷದಲ್ಲಿ ಬಂದು ಚಿನ್ನದ ಕಳಸಕ್ಕೆ ಕನ್ನ:

ನವದೆಹಲಿ: ಅತ್ಯಂತ ಹೆಚ್ಚು ಭದ್ರತೆ ಇರುವ ದೇಶದ ಪ್ರಮುಖ ಐತಿಹಾಸಿಕ ತಾಣವಾಗಿರುವ ಕೆಂಪು ಕೋಟೆಯಲ್ಲಿಯೇ ಒಂದು ಕೋಟಿ ಮೌಲ್ಯದ ಚಿನ್ನದ ಕಳಸ ಕದ್ದು ಎಸ್ಕೇಪ್ ಆಗಿದ್ದ ಖದೀಮನನ್ನು ಕಡೆಗೂ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಭೂಷಣ್ ವರ್ಮಾ ಎಂದು ಗುರುತಿಸಲಾಗಿದೆ. ಆರೋಪಿ ಸಾಧುವೇಷದಲ್ಲಿ ಬಂದು ಜನಜಂಗುಳಿಯ ಮಧ್ಯೆ ಈ ಅಮೂಲ್ಯವಾದ ಕೋಟಿ ಮೌಲ್ಯದ ವಜ್ರ ಸಹಿತ ಚಿನ್ನದ ಕಳಸ ಹಾಗೂ ಅದರ ಮೇಲಿದ್ದ ಚಿನ್ನದ ತೆಂಗಿನ ಕಾಯನ್ನು ತನ್ನ ಜೋಳಿಗೆಯೊಳಗೆ ಇಳಿಸಿಕೊಂಡು ಅಮಾಯಕನಂತೆ ಹೊರಟು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಭಾರಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಖದೀಮನ ಜಾಡು ಹಿಡಿದು ಕಾರ್ಯಾಚರಣೆಗೆ ಇಳಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶದ ಹಾಪುರ್‌ನಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈನ ಸಮುದಾಯದ 'ದಶ್‌ಲಕ್ಷಣ್‌ ಮಹಾಪರ್ವ' ಕಾರ್ಯಕ್ರಮದ ವೇಳೆ ಘಟನೆ 

ವಜ್ರ, ಪಚ್ಚೆ ಹರಳು ಹಾಗೂ ರತ್ನ ಖಚಿತವಾದ ಈ ಚಿನ್ನದ ಕಳಸ 115 ಗ್ರಾಂ ತೂಗುತ್ತಿದ್ದರೆ ಚಿನ್ನದ ತೆಂಗಿನಕಾಯಿ ಎರಡೂ ಸೇರಿ ಅಂದಾಜು 760 ಗ್ರಾಂ ತೂಕ ಇದ್ದವು. ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ ಜೈನ ಸಮುದಾಯದ ಧಾರ್ಮಿಕ ಆಚರಣೆ ವೇಳೆ ಈ ಘಟನೆ ನಡೆದಿತ್ತು. ಈ ಎರಡು ವಸ್ತುಗಳನ್ನು ಧಾರ್ಮಿಕ ಆಚರಣೆಯಲ್ಲಿ ಬಳಸಲಾಗಿತ್ತು. ಜೈನ ಸಮುದಾಯದ 'ದಶ್‌ಲಕ್ಷಣ್‌ ಮಹಾಪರ್ವ' ಹೆಸರಿನ 10 ದಿನಗಳ ಧಾರ್ಮಿಕ ಕಾರ್ಯಕ್ರಮದ ವೇಳೆ ಘಟನೆ ನಡೆದಿದೆ. ಈ ಕಾರ್ಯಕ್ರಮವು ಆಗಸ್ಟ್ 28ರಂದು ಕೆಂಪು ಕೋಟೆ ಆವರಣದಲ್ಲಿರುವ ಆಗಸ್ಟ್ 15 ರ ಉದ್ಯಾನವನದಲ್ಲಿ ನಡೆದಿತ್ತು.

ಉದ್ಯಮಿ ಸುಧೀರ್ ಜೈನ್ ಅವರಿಗೆ ಸೇರಿದ ಕಳಸ:

ಆರೋಪಿ ಭೂಷಣ್ ವರ್ಮಾ, ಅಲ್ಲಿ ಸೇರಿದ್ದ ಭಕ್ತರೊಂದಿಗೆ ಬೆರೆಯಲು ಸಾಂಪ್ರದಾಯಿಕ ಧೋತಿ ಕುರ್ತಾ ಧರಿಸಿದ್ದ, ಆದರೆ ಆತ ಜೈನ ಸಮುದಾಯಕ್ಕೆ ಸೇರಿದವನಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈತನ ವಿರುದ್ಧ ಹಲವು ಪ್ರಕರಣಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ಈ ಚಿನ್ನದ ಕಳಸ ಉದ್ಯಮಿ ಸುಧೀರ್ ಜೈನ್ ಎಂಬುವವರಿಗೆ ಸೇರಿದ್ದಾಗಿತ್ತು. ಅವರು ಈ ಕಾರ್ಯಕ್ರಮಕ್ಕಾಗಿ ಈ ಬಂಗಾರದ ಕಳಸವನ್ನು ತಂದಿದ್ದರು. ಆದರೆ ಇಲ್ಲಿ ಸೇರಿದ ಜನರ ಗುಂಪಿನ ಲಾಭ ಪಡೆದ ಆರೋಪಿ ಇದೇ ಸಮಯವನ್ನು ಬಳಸಿಕೊಂಡು ಚಿನ್ನದ ಕಳಸವನ್ನೇ ಎಗರಿಸಿದ್ದಾನೆ.

ಕಳ್ಳ ಜನಸಂದಣಿಯ ಲಾಭ ಪಡೆದುಕೊಂಡ, ರತ್ನಗಳು ಕೇವಲ ಸೌಂದರ್ಯಕ್ಕಾಗಿ. ಆದರೆ ಕಲಶ ನಮ್ಮ ಭಾವನೆಗಳಿಗೆ ಸಂಬಂಧಿಸಿದೆ. ಅಂತಹ ವಸ್ತುವಿನ ಮೇಲೆ ನಾವು ಮೌಲ್ಯವನ್ನು ಹಾಕಲು ಸಾಧ್ಯವಿಲ್ಲ ಎಂದು ಸುಧೀರ್‌ ಜೈನ್ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 45 ಲಕ್ಷ ರೂ. ವೆಚ್ಚ ಮಾಡಿ ಅಮೆರಿಕಾಗೆ ಹೋಗಿದ್ದ ರೈತನ ಏಕೈಕ ಪುತ್ರ ದುಷ್ಕರ್ಮಿಯ ಗುಂಡೇಟಿಗೆ ಬಲಿ

ಇದನ್ನೂ ಓದಿ: ಟಾಯ್ಲೆಟ್‌ನಲ್ಲಿ ಕುಳಿತಿದ್ದವನ ಆ ಜಾಗಕ್ಕೆ ಕಚ್ಚಿದ ಹಾವು

View post on Instagram