Indian nurse dies in Israel: ಇಸ್ರೇಲ್‌ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಮೂಲದ ನರ್ಸ್ ಒಬ್ಬರು ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 34 ವರ್ಷದ ಮಹಿಳೆ ಶರಣ್ಯ ಪ್ರಸನ್ನನ್ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಇಸ್ರೇಲ್‌ನಲ್ಲಿ ಹೋಮ್ ನರ್ಸ್ ಆಗಿದ್ದ ಕೇರಳದ ಮಹಿಳೆ ಸಾವು

ಕೊಟ್ಟಾಯಂ: ಇಸ್ರೇಲ್‌ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಮೂಲದ ನರ್ಸ್ ಒಬ್ಬರು ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 34 ವರ್ಷದ ಮಹಿಳೆ ಶರಣ್ಯ ಪ್ರಸನ್ನನ್ ಮೃತಪಟ್ಟವರು ಎಂದು ತಿಳಿದು ಬಂದಿದೆ. ಇವರು ಕೇರಳದ ಕೊಟ್ಟಾಯಂನ ಚಂಗನಶ್ಶೇರಿಯ ನಿವಾಸಿಯಾಗಿದ್ದು, ವಿಷ್ಣು ಎಂಬುವವರ ಪತ್ನಿಯಾಗಿದ್ದಾರೆ. ಇವರು ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ಕುಟುಂಬಕ್ಕೆ ಮಾಹಿತಿ ಸಿಕ್ಕಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ. ಮಂಗಳವಾರ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ. ಇವರು ಕುರಿಚಿ ಕಲ್ಲುಂಗಲ್‌ ಪ್ರಸನ್ನನ್ ಹಾಗೂ ಶೋಭಾ ದಂಪತಿಯ ಪುತ್ರಿಯಾಗಿದ್ದಾರೆ. ಇಬ್ಬರು ಮಕ್ಕಳು ಹಾಗೂ ಪತಿಯನ್ನು ಅವರು ಆಗಲಿದ್ದಾರೆ.

ವಿದೇಶದಲ್ಲಿ ಒಂದಾದ ಮೇಲೊಂದು ಸರಣಿ ದುರಂತ:
ವಿದೇಶದಲ್ಲಿ ಇತ್ತೀಚೆಗೆ ನಡೆದ 3ನೇ ರಸ್ತೆ ದುರಂತ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ಸೌದಿ ಅರೆಬೀಯಾದಲ್ಲಿ ಭಾರತೀಯ ಮೆಕ್ಕಾ ಮದೀನಾ ಉಮ್ರಾ ಯಾತ್ರಿಕರ ಬಸ್ಸೊಂದು ಡೀಸೆಲ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಟ್ಟು 45 ಜನ ಸಜೀವ ದಹನಗೊಂಡ ಘಟನೆ ನಡೆದಿತ್ತು, ಈ ದುರಂತದಲ್ಲಿ ಹೈದರಾಬಾದ್ ಮೂಲದ ಒಂದೇ ಕುಟುಂಬದ 18 ಜನ ಕೂಡ ಸಾವನ್ನಪ್ಪಿದ್ದಾರೆ. ಮೆಕ್ಕಾ ಯಾತ್ರೆಯ ಸಮಯದಲ್ಲಿ ಯಾರಾದರೂ ಯಾತ್ರಿಗಳು ಮೃತಪಟ್ಟರೆ ಅವರ ಶವಗಳನ್ನು ಸ್ವದೇಶಕ್ಕೆ ಕಳುಹಿಸುವುದಿಲ್ಲ ಎಂಬ ನಿಯಮವಿದೆ ಹೀಗಾಗಿ ಅವರ ಶವಗಳನ್ನು ಮದೀನಾದಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ.

ಸಿಡ್ನಿಯಲ್ಲಿ ರಸ್ತೆ ಅಪಘಾತಕ್ಕೆ 8 ತಿಂಗಳ ತುಂಬು ಗರ್ಭಿಣಿ ಸಾವು:

ಹಾಗೆಯೇ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ 8 ತಿಂಗಳ ತುಂಬು ಗರ್ಭಿಣಿ ಭಾರತೀಯ ಮಹಿಳೆಯೊಬ್ಬರು ಸಾವನ್ನಪಿದ್ದಾರೆ. ಪತಿ ಹಾಗೂ 3 ವರ್ಷದ ಮಗುವಿನ ಜೊತೆ ವಾಕ್ ಮಾಡುತ್ತಿದ್ದಾಗ 19 ವರ್ಷದ ಯುವಕನೋರ್ವ ಚಲಾಯಿಸುತ್ತಿದ್ದ ಬಿಎಂಡ್ಬ್ಯು ಕಾರು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಮೃತರನ್ನು ಸಮನ್ವಿತಾ ಧಾರೇಶ್ವರ್ ಎಂದು ಗುರುತಿಸಲಾಗಿದೆ. ಸಮನ್ವಿತಾ ಅವರು ಐಟಿ ಎಲ್ಸ್ಕೊ ಯೂನಿಫಾರ್ಮ್ಸ್‌ನಲ್ಲಿ ಟೆಸ್ಟ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: ಪಿಜಿ ಬಿಟ್ಟು ಹೋಗುವ ವೇಳೆ ಡೆಪಾಸಿಟ್ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಮೇಲೆ ಪಿಜಿ ಮಾಲೀಕಳಿಂದ ಹಲ್ಲೆ

ಇದನ್ನೂ ಓದಿ: ಬೆಳ್ತಂಗಡಿ ಬಳಿ ಕಾರು ಹೋಂಡಾ ಆಕ್ಟಿವಾ ಮಧ್ಯೆ ಅಪಘಾತ: ಫೈನಲ್ ಇಯರ್‌ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು