ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ಕಾರು ಮತ್ತು ಸ್ಕೂಟಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಅನನ್ಯಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು
ಬೆಳ್ತಂಗಡಿ: ಕಾರು ಹಾಗೂ ಸ್ಕೂಟಿ ಮಧ್ಯೆ ನಡೆದ ಅಪಘಾತವೊಂದರಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುಂಜಾಲಕಟ್ಟೆ ಬಳಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ 21 ವರ್ಷದ ಅನನ್ಯಾ ಎಂದು ಗುರುತಿಸಲಾಗಿದೆ. ಸ್ಕೂಟರ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಪೃಥ್ವಿ ರಾವ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಇಬ್ಬರು ವಿದ್ಯಾರ್ಥಿನಿಯರು ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದರು.
ಬೆಳ್ತಂಗಡಿ ಬಳಿ ಕಾರು ಹೋಂಡಾ ಆಕ್ಟಿವಾ ಮಧ್ಯೆ ಅಪಘಾತ
ಇಬ್ಬರೂ ಬೆಳ್ತಂಗಂಡಿಯಿಂದ ಕಾಲೇಜಿಗೆ ಹೋಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ವ್ಯಾಗನಾರ್ ಕಾರು ಇವರು ಪ್ರಯಾಣಿಸುತ್ತಿದ್ದ ಹೋಂಡಾ ಆಕ್ಟಿವಾಗೆ ಡಿಕ್ಕಿ ಹೊಡೆದ ಪರಿಣಾಮ ಅನನ್ಯಾ ರಸ್ತೆಗೆಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ ಅವರ ಗೆಳತಿ ಪೃಥ್ವಿ ಸ್ಥಿತಿ ಗಂಭೀರವಾಗಿದೆ. ಬಂಟ್ವಾಳ ಬೆಳ್ತಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಕಾವಳಕಟ್ಟೆಯಿಂದ ಎನ್‌ಸಿ ರೋಡ್‌ಗೆ ಸಾಗುವ ದಾರಿಯಲ್ಲಿ ಸಿಗುವ ಅಪಾಯಕಾರಿ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಇಲ್ಲಿ ಈ ಹಿಂದೆಯೂ ಅನೇಕ ಅಪಘಾತಗಳು ಸಂಭವಿಸಿವೆ. ಮೃತ ಅನನ್ಯಾ ಅವರು ಕಡಬದ ಸುನೀಲ್ ಎಂಬುವವರ ಪುತ್ರಿ. ಸ್ಕೂಟಿಯಲ್ಲಿದ್ದ ಇನೋರ್ವ ಸವಾರೆ ಪೃಥ್ವಿ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿಯಾಗಿದ್ದು, ಇಲ್ಲಿನ ಪ್ರಣಮ್ಯ ಸ್ಟುಡಿಯೋದ ಮಾಲೀಕರ ಪುತ್ರಿಯಾಗಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: 3 ಐವಿ ಡ್ರಿಪ್‌ಗೆ ಒಂದು ಲಕ್ಷ : ಆಸ್ಪತ್ರೆಯ ಕಾರಣ ಮುಖ ತೆರೆದಿಟ್ಟ ಮಹಿಳೆ
ಇದನ್ನೂ ಓದಿ: 20ರಲ್ಲಿ ಮದ್ವೆಯಾಗಿ ಮಕ್ಕಳ ಮಾಡಿಕೊಳ್ಳಿ: ಯುವಜನತೆಗೆ ಸಲಹೆ ನೀಡಿದ ಝೋಹೋ ಸಹ ಸಂಸ್ಥಾಪಕ


