PG owner assaults Girl:ನೋಯ್ಡಾದಲ್ಲಿ ಪಿಜಿ ಖಾಲಿ ಮಾಡಿದ ಯುವತಿಯೊಬ್ಬಳು ತನ್ನ ಸೆಕ್ಯೂರಿಟಿ ಡೆಪಾಸಿಟ್ ವಾಪಸ್ ಕೇಳಿದ್ದಕ್ಕೆ ಪಿಜಿ ಮಾಲಕಿ ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವೀಡಿಯೋ ವೈರಲ್ ಆಗಿದ್ದು, ಪಿಜಿ ಮಾಲಕಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ದೇಶದ ಹಲವು ಮಹಾನಗರಿಗಳಲ್ಲಿ ಸಾವಿರಾರು ಪಿಜಿಗಳಿವೆ. ತಿಂಗಳಿಗೆ ಇಷ್ಟು ಅಂತ ನಿಗದಿತ ಹಣ ಪಡೆದು ಅವರು ದೂರದಿಂದ ಬಂದು ಮಹಾನಗರಿಗಳಲ್ಲಿ ಕೆಲಸ ಮಾಡುವ ಅನೇಕರಿಗೆ ಆಶ್ರಯ ನೀಡುತ್ತವೆ. ಮನೆ ಬಾಡಿಗೆ ಪಡೆಯುವುದಕ್ಕೆ ದುಬಾರಿ ಮೊತ್ತದ ಅಡ್ವಾನ್ಸ್ ಹಣ ಪಾವತಿ ಮಾಡಲು ಸಾಧ್ಯವಾಗದ ನೂರಾರು ಸಾವಿರಾರು ಯುವಕರು ಯುವತಿಯರು ಈ ಪೇಯಿಂಗ್ ಗೆಸ್ಟ್ ಎಂದು ಕರೆಯಲ್ಪಡುವ ಈ ಪಿಜಿಯಲ್ಲಿ ನೆಲೆ ನಿಲ್ಲುತ್ತಾರೆ. ಆದರೆ ಈ ಪಿಜಿಗಳಲ್ಲೂ ಆರಂಭದಲ್ಲಿ ಒಬ್ಬರು ಸೇರಬೇಕಾದರೆ ಒಂದು ತಿಂಗಳ ಬಾಡಿಗೆಯನ್ನು ಆರಂಭದಲ್ಲೇ ಭದ್ರತಾ ಠೇವಣೆ ಅಥವಾ ಅಡ್ವಾನ್ಸ್ ರೂಪದಲ್ಲಿ ಮುಂಗಡವಾಗಿ ಪಾವತಿ ಮಾಡಬೇಕಾಗುತ್ತದೆ. ಇದನ್ನು ಪಾವತಿ ಮಾಡಿದ ನಂತರವಷ್ಟೇ ನಿಮಗೆ ಪಿಜಿಗಳಲ್ಲಿ ವಾಸಕ್ಕೆ ಪ್ರವೇಶ ಕಲ್ಪಿಸಲಾಗುತ್ತದೆ. ಆದರೆ ಪಿಜಿ ಬಿಟ್ಟು ಹೋಗುವ ವೇಳೆ ಬಹುತೇಕ ಪಿಜಿ ಮಾಲೀಕರು ಈ ಅಡ್ವಾನ್ಸ್ ಹಣ ನೀಡುವುದಕ್ಕೆ ಹಿಂದೆ ಮುಂದೆ ನೋಡುತ್ತಾರೆ. ಯುವತಿಯರ ಜೊತೆ ಹಣ ಕೊಡಲ್ಲ ಅಂತ ಜಗಳ ಮಾಡುತ್ತಾರೆ. ಇದು ಬಹುತೇಕ ಪಿಜಿಗಳಲ್ಲಿ ನಡೆಯುವ ಅವಾಂತರವಾಗಿದೆ. ಪಿಜಿಗೆ ಸೇರುವ ವೇಳೆ ಈ ಅಡ್ವಾನ್ಸ್ ಹಣವನ್ನು ಪಿಜಿ ಬಿಡುವ ವೇಳೆ ಕೊಡಲಾಗುತ್ತದೆ ಎಂದು ಭರವಸೆ ನೀಡುವ ಪಿಜಿ ಆಪರೇಟರ್‌ಗಳು ಹೋಗುವ ವೇಳೆ ಬೇರೆಯದೇ ಕತೆ ಹೇಳಲು ಶುರು ಮಾಡುತ್ತಾರೆ. ಹೀಗಾಗಿ ಪಿಜಿಯನ್ನು ಖಾಲಿ ಮಾಡುವ ಸಮಯದಲ್ಲಿ ಬಹುತೇಕ ಹೆಣ್ಣು ಮಕ್ಕಳು ಜಗಳ ಮಾಡಿಯೇ ಹೋಗುತ್ತಾರೆ. ಕೆಲವರು ಹೋಗುವ ಸಮಯದಲ್ಲಿ ಕಿತ್ತಾಟವೇಕೆ ಎಂದು ಸುಮ್ಮನಾಗಿ ಬಿಡುತ್ತಾರೆ..
ಸೆಕ್ಯೂರಿಟಿ ಡೆಪಾಸಿಟ್ ವಾಪಸ್ ಕೇಳಿದ್ದಕ್ಕೆ ಯುವತಿಯ ಮೇಲೆ ಹಲ್ಲೆ
ಅದೇ ರೀತಿ ಇಲ್ಲೊಂದು ಕಡೆ ಹೀಗೆ ತಮ್ಮ ಅಡ್ವಾನ್ಸ್ ಹಣ ಅಥವಾ ಸೆಕ್ಯೂರಿಟಿ ಡೆಪಾಸಿಟ್ ಕೇಳಿದ್ ಯುವತಿಗೆ ಪಿಜಿ ಮಾಲಕಿಯೊಬ್ಬಳು ಹಲ್ಲೆ ಮಾಡಿದಂತಹ ಘಟನೆ ನಡೆದಿದೆ. ಈ ಹಲ್ಲೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರಿ ಆಕ್ರೋಶ ವ್ಯಕ್ತವಾಗಿದೆ.
ಉತ್ತರ ಪ್ರದೇಶದ ನೋಯ್ಡಾದಲ್ಲಿರು ಪಿಜಿಯೊಂದರಲ್ಲಿ ಈ ಘಟನೆ ನಡೆದಿದ್ದು, ವೀಡಿಯೋ ವೈರಲ್ ಆಗುತ್ತಿದ್ದಂತೆ ಈ ಪಿಜಿಗಳ ಅವಾಂತರದ ವಿರುದ್ಧ ಪಿಜಿ ಮಾಲೀಕರ ಈ ಮೋಸದ ವಿರುದ್ಧ ಅನೇಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನೋಯ್ಡಾದ ಸೆಕ್ಟರ್ 62 ರ ರಾಜ್ ಹೋಮ್ಸ್ ಪಿಜಿಯಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ಸಂಜೆ ನಡೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಮಹಿಳಾ ಪಿಜಿಯೊಂದರ ಆಪರೇಟರ್ ಯುವತಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ. ಅಲ್ಲಿದ್ದ ಯುವತಿಯರಿಗೂ ಕೂಡ ಪಿಜಿ ಮಾಲಕಿಯ ವರ್ತನೆಯಿಂದ ಶಾಕ್ ಆಗಿದ್ದು, ಗಾಬರಿಯಾಗಿ ನೋಡುತ್ತಾ ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
ವೀಡಿಯೋ ವೈರಲ್ ಪಿಜಿ ಮಾಲಕಿ ವಿರುದ್ಧ ಕ್ರಮಕ್ಕೆ ಆಗ್ರಹ:
ವರದಿಗಳ ಪ್ರಕಾರ ಈ ಪಿಜಿಯಲ್ಲಿ ತನ್ನ ಕೊಠಡಿಯನ್ನು ಖಾಲಿ ಮಾಡಿದ ನಂತರ, ವಿದ್ಯಾರ್ಥಿನಿ ತನ್ನ ಭದ್ರತಾ ಠೇವಣಿಯನ್ನು ಮರಳಿ ಪಡೆಯಲು ಈ ಪಿಜಿ ಆಪರೇಟರ್ ಬಳಿ ಬಂದಿದ್ದಾಳೆ. ತಾನು ಪಿಜಿ ಖಾಲಿ ಮಾಡಿರುವುದರಿಂದ ಭದ್ರತಾ ಠೇವಣಿ ವಾಪಸ್ ನೀಡುವಂತೆ ಕೇಳಿದ್ದಾಳೆ. ಈ ವೇಳೆ ಅವರಿಬ್ಬರ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪಿಜಿ ಆಪರೇಟರ್ ಹುಡುಗಿಯನ್ನು ಹೊಡೆಯಲು ಆರಂಭಿಸಿದ್ದಾರೆ. ವೀಡಿಯೊದಲ್ಲಿ, ಆಕೆ ಹುಡುಗಿಯ ಕೈ ಹಿಡಿದು ಮುಖಕ್ಕೆ ಹೊಡೆಯುವುದನ್ನು ಕಾಣಬಹುದು. ಅಲ್ಲದೇ ಹುಡುಗಿಯ ಕೂದಲನ್ನು ಹಿಡಿದು ಎಳೆದಾಡಿದ್ದಾರೆ ಎಂದು ತಿಳಿದು ಬಂದಿದೆ.
ಪಿಜಿ ಖಾಲಿ ಮಾಡಲು ಸಹಾಯ ಮಾಡುವುದಕ್ಕೆ ಹುಡುಗಿಯ ಜೊತೆ ಹೊರಗಿನಿಂದ ಬಂದ ಯುವಕನೊಬ್ಬ ಈ ವೀಡಿಯೊವನ್ನುಹೊರಗಿನಿಂದ ರೆಕಾರ್ಡ್ ಮಾಡಿದ್ದಾನೆ. ಪುರುಷರಿಗೆ ಒಳಗೆ ಹೋಗಲು ಅವಕಾಶವಿಲ್ಲದ ಕಾರಣ ಆತ ಅಸಹಾಯಕನಾಗಿ ಹೊರಗೆ ನಿಂತಿದ್ದ. ವೀಡಿಯೊ ವೈರಲ್ ಆದ ನಂತರ, ಪಿಜಿ ಆಪರೇಟರ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದು, ಕೇಸು ದಾಖಲಿಸುವಂತೆ ಅನೇಕರು ಆಗ್ರಹಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸೆಕ್ಟರ್ 58 ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹುಡುಗಿಯನ್ನು ಸಂಪರ್ಕಿಸಿ ಆಕೆಯ ಹೇಳಿಕೆಯನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ದೂರಿನ ಆಧಾರದ ಮೇಲೆ ಪಿಜಿ ಆಪರೇಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳ್ತಂಗಡಿ ಬಳಿ ಕಾರು ಹೋಂಡಾ ಆಕ್ಟಿವಾ ಮಧ್ಯೆ ಅಪಘಾತ: ಫೈನಲ್ ಇಯರ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು
ಇದನ್ನೂ ಓದಿ: 3 ಐವಿ ಡ್ರಿಪ್‌ಗೆ ಒಂದು ಲಕ್ಷ : ಆಸ್ಪತ್ರೆಯ ಕಾರಣ ಮುಖ ತೆರೆದಿಟ್ಟ ಮಹಿಳೆ


