ಅಪ್ಪ ನಂಗೆ ಚಿಪ್ಸ್‌, ಮಮ್ಮಿ ನಂಗೆ ಲೇಸ್‌, ಅಜ್ಜಿ ನಂಗೆ ಜ್ಯೂಸ್..‌ ಸ್ಕೂಲ್‌ಗೆ ಹೋಗುವ ಕೆಲವು ಮಕ್ಕಳ ಸಾಮಾನ್ಯ ಡೈಲಾಗ್‌ ಇದು. ಶಾಲೆಗೆ ಹೋಗ್ತ, ಬರ್ತಾ ತಿನ್ನೋದನ್ನೇ ಅಭ್ಯಾಸವಾಗಿ ಮಾಡ್ಕೊಂಡಿರ್ತಾರೆ. ಇದು ಮುಂದೊಂದು ದಿನ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಕೊನೆಗೂ ನಮ್ಮ ಅಧಿಕಾರಿಗಳು ಎಚ್ಚೆತ್ತುಕೊಂಡಂತೆ ಇದೆ.

ನವದೆಹಲಿ: ಮಕ್ಕಳು ಶಾಲೆಗಳಿಗೆ ಹೋಗುವಾಗ, ಬರುವಾಗ ಅಂಗಡಿ ತಿಂಡಿಗಳ ಸೆಳೆತಕ್ಕೆ ಒಳಾಗುತ್ತಾರೆ. ಅಪ್ಪನೋ, ಅಮ್ಮನೋ ಅಥವಾ ಅಜ್ಜ-ಅಜ್ಜಿ ನೀಡುವ ಸಣ್ಣ ಅಮೌಂಟ್‌ನಲ್ಲಿ ಲೇಸು, ಕುರ್‌ಕುರೆ, ಜ್ಯೂಸ್‌.. ಸೇರಿದಂತೆ ಕೊಬ್ಬಿನಾಂಶ, ಅತಿಯಾದ ಉಪ್ಪು, ಸಕ್ಕರೆ ಇರುವ ತಿಂಡಿತಿನಿಸಿಗಳನ್ನ ತಿಂದು ಬರುತ್ತಾರೆ. ಇಲ್ಲ ಮನೆಗಳಿಗೆ ತಂದು ತಿನ್ನುತ್ತಾರೆ. ಇದು ಮಕ್ಕಳ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರೋದ್ರಲ್ಲಿ ಯಾವುದೇ ಡೌಟಿಲ್ಲ. ಇದನ್ನು ಮನಗಂಡಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಮಹತ್ವದ ಪ್ರಸ್ತಾಪವನ್ನ ಇಟ್ಟಿದೆ.

ಹೌದು, ಶಾಲೆಗಳಿಂದ 50 ಮೀಟರ್‌ ಒಳಗೆ ಕೊಬ್ಬು, ಸಕ್ಕರೆ ಹಾಗೂ ಉಪ್ಪು ಅಧಿಕವಾಗಿರುವ ಆಹಾರ ಪದಾರ್ಥಗಳ ಮಾರಾಟವನ್ನು ನಿಷೇಧಿಸುವ ಪ್ರಸ್ತಾಪವನ್ನ ಮಾಡಿದೆ. ಪ್ರಧಿಕಾರದ ಪ್ರಸ್ತಾಪನೆ ಪ್ರಕಾರ..

  • ಚಿಪ್ಸ್‌
  • ತಂಪು ಪಾನೀಯ
  • ಚಾಕೊಲೇಟ್‌ಗಳು
  • ಸಮೋಸಾ
  • ಪಿಜ್ಜಾ-ಬರ್ಗರ್‌ನಂತ ಆಹಾರ ಗಳನ್ನ ನಿಷೇಧ ಮಾಡುವ ಸಾಧ್ಯತೆ ಇದೆ.

ಈ ಸಂಬಂಧ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಸುರಕ್ಷತೆಗೆ ಸಂಬಂಧಿಸಿ ಕೆಲವು ಮಾನದಂಡಗಳನ್ನ ಅಭಿವೃದ್ಧಿಪಡಿಸಲಿದೆ. ಅದರ ಪ್ರಕಾರ.. ಕೊಬ್ಬು, ಉಪ್ಪು ಮತ್ತು ಹೆಚ್ಚಿನ ಸಿಹಿ ಇರುವ ಆಹಾರ ಪದಾರ್ಥಗಳ ಮೇಲೆ ನಿರ್ಬಂಧ ಹೇರಲಿದೆ. FSSAI ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಜಿತ್ ಪುನ್ಯಾನಿ ನೀಡಿರುವ ಮಾಹಿತಿ ಪ್ರಕಾರ.. ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಅನಾರೋಗ್ಯಕರ ಆಹಾರ ಪದ್ಧತಿಯಿಂದ ದೂರವಿರುವುದು ಯೋಜನೆಯ ಉದ್ದೇಶ. ಮಕ್ಕಳಿಗೆ ಅಂತಹ ಆಹಾರವನ್ನು ಸುಲಭವಾಗಿ ಸಿಗುವುದನ್ನ ಕಡಿಮೆ ಮಾಡುವುದು ಈ ಪ್ರಸ್ತಾವನೆಯ ಉದ್ದೇಶವಾಗಿದೆ. ಅಂಗಡಿಯವರು HSS ಅಲ್ಲದ ಆಹಾರಗಳನ್ನು ಮಾರಾಟ ಮಾಡಬಹುದು ಎಂದಿದ್ದಾರೆ.

ವ್ಯಾಪಾರಸ್ಥರಿಂದ ಕಳವಳ

ಹೆಚ್‌ಎಸ್‌ಎಸ್‌ ಎಂದರೆ.. ಕೊಬ್ಬು, ಉಪ್ಪು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರಗಳನ್ನು HSS ಎಂದು ಕರೆಯುತ್ತಾರೆ. ಶಾಲೆಗಳ ಮುಂದೆ ನಿಷೇಧ ತರೋದ್ರಿಂದ ತಯಾರಿಕ ಕಂಪನಿಗಳ ಪಾಕ ವಿಧಾನವೂ ಬದಲಾಗಲಿದೆ ಎಂಬುದು ಪ್ರಾಧಿಕಾರದ ಲೆಕ್ಕಾಚಾರ. ಶಾಲೆಗಳ ಸುತ್ತಮುತ್ತ ಇಂತಹ ಆಹಾರ ಪದಾರ್ಥಗಳು ಹೇರಳವಾಗಿ ಸಿಗುತ್ತವೆ. ಇದು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಅನ್ನೋದು ತಜ್ಞರ ವಿಶ್ಲೇಷಣೆ. ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮಕ್ಕೆ ಮುಂದಾಗಿರೋದು ಒಳ್ಳೆಯ ಬೆಳವಣಿಗೆ. ಆದರೆ ಶಾಲೆಗಳ ಸಮೀಪ ಅಂಗಡಿ ನಡೆಸುತ್ತಿರುವ ಸಣ್ಣಪುಟ್ಟ ಅಂಗಡಿ ಮಾಲೀಕರು ಕಳವಳ ವ್ಯಕ್ತಪಡಿಸಿದ್ದಾರೆ. ಅವುಗಳ ಮಾರಾಟ ನಿಷೇಧಿಸಿದರೆ ನಮ್ಮ ವಾಪಾರ-ವಹಿವಾಟಿನಲ್ಲಿ ಗಮನಾರ್ಹ ಕುಸಿತ ಕಾಣಲಿದೆ ಎಂದು ವಾದಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಮಹಾರಾಷ್ಟ್ರ ಸರ್ಕಾರ ಹೆಚ್‌ಎಸ್‌ಎಸ್‌ ಆಹಾರ ಉತ್ಪನ್ನಗಳ ಕುರಿತು ಇನ್ನಷ್ಟು ಕಠಿಣ ನಿಯಮಗಳನ್ನ ಅಳವಿಡಿಸಿಕೊಂಡಿದೆ. ರಾಷ್ಟ್ರೀಯ ಆಹಾರ ಸುರಕ್ಷತಾ ಆಯುಕ್ತರ ನಿಯಮದಂತೆ ಶಾಲೆಗಳಿಂದ 50 ಮೀಟರ್‌ ಒಳಗಡೆ ಇರುವ ಅಂಗಡಿಗಳು ಅಂತಹ ಉತ್ಪನ್ನಗಳನ್ನ ಮಾರಾಟ ಮಾಡುವುದನ್ನ ನಿಷೇಧಿಸಲಾಗಿದೆ. ಸರ್ಕಾರದ ಆದೇಶ ಇದ್ದರೂ ಅಲ್ಲಿ 133 ಅಂಗಡಿಗಳು ಆದೇಶವನ್ನು ಉಲ್ಲಂಘಿಸುತ್ತಿರೋದು ಕಂಡುಬಂದಿದೆ. 51 ಅಂಗಡಿಗಳನ್ನ ಬಂದ್‌ ಮಾಡಿಸಲು ಆದೇಶ ನೀಡಲಾಗಿದೆ.

ವಿಶ್ವ ಬೊಜ್ಜು ಒಕ್ಕೂಟದ ಮಾಹಿತಿಯ ಪ್ರಕಾರ.. ಭಾರತದಲ್ಲಿ 5 ರಿಂದ 19 ವರ್ಷದೊಳಗಿನ ಅಧಿಕ ತೂಕ ಅಥವಾ ಬೊಜ್ಜು ಮಕ್ಕಳ ಸಂಖ್ಯೆ 2015 ರಲ್ಲಿ 28 ಮಿಲಿಯನ್‌ನಿಂದ 2025 ರ ವೇಳೆಗೆ ಸರಿಸುಮಾರು 41 ಮಿಲಿಯನ್‌ಗೆ ಏರಿದೆ. 2040 ರ ವೇಳೆಗೆ ಈ ಸಂಖ್ಯೆ 56 ಮಿಲಿಯನ್ ತಲುಪಬಹುದು ಎಂದು ಅಂದಾಜಿಸಲಾಗಿದೆ.