2008ರ ನವೆಂಬರ್ 11 (9/11) ದಾಳಿಯಲ್ಲಿ ಕಿರಿಯ ಪ್ರತ್ಯಕ್ಷದರ್ಶಿಯಾಗಿದ್ದ ಆಗ 9 ವರ್ಷದ ದೇವಿಕಾ ರಟ್ವಾನ್ ಕಸಬ್ ವಿರುದ್ಧ ಸಾಕ್ಷ್ಯ ನುಡಿದಿದ್ದರು. ಇದೀಗ ಅವರಿಗೆ ಜಾಗತಿಕ ಶಾಂತಿ ಗೌರವ ನೀಡಿ ಗೌರವಿಸಲಾಗಿದೆ. ಶಾರುಖ್ ಖಾನ್ ಜೊತೆ ಆಕೆಯ ಸಂಭಾಷಣೆ ಇಲ್ಲಿದೆ. ಕಸಬ್ನನ್ನು ಜಂಟಲ್ಮನ್ ಎಂದಿದ್ದ ನಟನನ್ನು ಈ ವೇದಿಕೆಗೆ ಕರೆಸಿರುವುದು ನೆಟ್ಟಿಗರ ಅಸಮಾಧಾನಕ್ಕೆ ಕಾರಣವಾಗಿದೆ.
ಮುಂಬೈ: 2008ರ ನವೆಂಬರ್ 9 ಅಮೆರಿಕದ ಪಾಲಿಗೆ ಅತ್ಯಂತ ಕರಾಳ ದಿನ. 9/11 ಎಂದೇ ಕುಖ್ಯಾತಿ ಪಡೆದಿರುವ ದಿನವಿದು. ಅಂದು ಅಲ್-ಖೈದಾ ಭಯೋತ್ಪಾದಕ ಸಂಘಟನೆಯ 19 ಉಗ್ರರು ಅಮೆರಿಕದ ವಿರುದ್ಧ ನಡೆಸಿದ ವಿಮಾನ ಅಪಹರಣ ಮತ್ತು ಆತ್ಮಾಹುತಿ ದಾಳಿಗಳ ಸರಣಿಯಾಗಿದೆ. ಈ ಉಗ್ರ ದಾಳಿಯಲ್ಲಿ 19 ಉಗ್ರರು ಸೇರಿದಂತೆ ಒಟ್ಟು 2,996 ಮಂದಿ ಮೃತಪಟ್ಟರು. ದಾಳಿಯ ನಂತರದ ವಿಷಕಾರಿ ಧೂಳು ಮತ್ತು ಅವಶೇಷಗಳ ಸಂಪರ್ಕದಿಂದ ಉಂಟಾದ ಆರೋಗ್ಯ ಸಮಸ್ಯೆಗಳಿಂದ ಮುಂದಿನ ವರ್ಷಗಳಲ್ಲಿ 9,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಘಟನೆಯಲ್ಲಿ ಅಪಹೃತ ನಾಲ್ಕು ವಾಣಿಜ್ಯ ವಿಮಾನಗಳನ್ನು ಪ್ರಮುಖ ಸ್ಥಳಗಳಿಗೆ ಅಪ್ಪಳಿಸಲಾಯಿತು. ಎರಡು ವಿಮಾನಗಳನ್ನು ಅವಳಿ ಗೋಪುರಗಳ (Twin Towers) ಉತ್ತರ ಮತ್ತು ದಕ್ಷಿಣ ಕಟ್ಟಡಗಳಿಗೆ ಅಪ್ಪಳಿಸಲಾಯಿತು, ಇದರಿಂದ ಎರಡೂ ಗೋಪುರಗಳು ಕುಸಿದು ಬಿದ್ದವು. ಮೂರನೇ ವಿಮಾನವು ಅಮೆರಿಕದ ರಕ್ಷಣಾ ಇಲಾಖೆಯ ಪ್ರಧಾನ ಕಚೇರಿಯಾದ ಪೆಂಟಗನ್ಗೆ ಡಿಕ್ಕಿ ಹೊಡೆಯಿತು.ನಾಲ್ಕನೇ ವಿಮಾನವು ವಾಷಿಂಗ್ಟನ್ ಡಿಸಿ ಕಡೆಗೆ ಸಾಗುತ್ತಿದ್ದಾಗ, ಪ್ರಯಾಣಿಕರು ಅಪಹರಣಕಾರರ ವಿರುದ್ಧ ತಿರುಗಿಬಿದ್ದ ಕಾರಣ ಪೆನ್ಸಿಲ್ವೇನಿಯಾದ ಗ್ರಾಮೀಣ ಪ್ರದೇಶದ ಹೊಲದಲ್ಲಿ ಪತನಗೊಂಡಿತು.
ಸುತ್ತಲೂ ಉಗ್ರರು. ಗುಂಡಿನ ದಾಳಿ. ಆ ಪರಿಸ್ಥಿತಿ ಅದೆಷ್ಟು ಘನಘೋರ ಆಗಿರುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ. ಅಂಥದ್ದರಲ್ಲಿ 9ರ ಬಾಲೆ ಹೇಗಿರಬೇಡ? ಆದರೆ ಈ ಇಡೀ ಘಟನೆಗೆ ಸಾಕ್ಷಿಯಾಗಿದ್ದಳು ಈ ಬಾಲಕಿ. ಈಕೆಯ ಹೆಸರು ದೇವಿಕಾ ರಟ್ವಾನ್ (Devika Rotawan). ಘಟನೆಯ ಅತ್ಯಂತ ಕಿರಿಯ ಪ್ರತ್ಯಕ್ಷದರ್ಶಿ ಮತ್ತು ಬದುಕುಳಿದಾಕೆ ಈಕೆ. ಈ ದಾಳಿಯ ಪ್ರಮುಖ ಉಗ್ರ ಅಜ್ಮಲ್ ಕಸಬ್ನನ್ನು ನ್ಯಾಯಾಲಯದಲ್ಲಿ ಗುರುತಿಸಿ ಸಾಕ್ಷ್ಯ ಹೇಳುವ ಮೂಲಕ ಆತನಿಗೆ ಶಿಕ್ಷೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಳು ಈ ಪುಟಾಣಿ. ದಾಳಿಯ ನಂತರ ನಡೆದ ವಿಚಾರಣೆಯಲ್ಲಿ, 2009ರ ಜೂನ್ 10ರಂದು ಊರುಗೋಲಿನ ಸಹಾಯದಿಂದಲೇ ನ್ಯಾಯಾಲಯಕ್ಕೆ ಹಾಜರಾದ ದೇವಿಕಾ, ಅಜ್ಮಲ್ ಕಸಬ್ನನ್ನು ಗುರುತಿಸಿ ನಿರ್ಭೀತಿಯಿಂದ ಸಾಕ್ಷ್ಯ ನುಡಿದರು. ಈ ಪ್ರಕರಣದಲ್ಲಿ ಸಾಕ್ಷ್ಯ ಹೇಳಿದ ಅತ್ಯಂತ ಕಿರಿಯ ವಯಸ್ಸಿನ ಸಾಕ್ಷಿ ಈಕೆಯಾಗಿದ್ದಾಳೆ. ಇದೀಗ ದೇವಿಕಾ ಅವರನ್ನು 2026 ರ ಜಾಗತಿಕ ಶಾಂತಿ ಗೌರವ ನೀಡಿ ಸನ್ಮಾನಿಸಲಾಗಿದೆ.
ಈಕೆಗೀಗ 27 ವರ್ಷ ವಯಸ್ಸು. ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಶಾರುಖ್ ಖಾನ್ ಎದುರು ಅಂದು ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಕಸಾಬ್ನಂಥ ಉಗ್ರನ ವಿರುದ್ಧ ಸಾಕ್ಷಿ ನುಡಿದದ್ದು ಹೇಗೆ ಎಂದು ನಟ ಕೇಳಿದಾಗ, ನನ್ನ ತಂದೆ ಯಾವತ್ತಿಗೂ ಧೈರ್ಯದಿಂದ ಇರುವಂತೆ ಹೇಳಿಕೊಡುತ್ತಿದ್ದರು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದರೆ, ಒಂದಿಷ್ಟು ಸವಾಲುಗಳನ್ನು ಎದುರಿಸಬೇಕು ಎಂದಿದ್ದರು. ಉಗ್ರರ ದಮನ ಮಾಡಲು ಅವರೇ ನನಗೆ ಸ್ಫೂರ್ತಿ ನೀಡಿರುವುದಾಗಿ ದೇವಿಕಾ ಹೇಳಿದ್ದಾರೆ. ಅದರ ವಿಡಿಯೋ ಈಗ ವೈರಲ್ ಆಗಿದೆ. ಆದರೆ ಕಸಾಬ್ನನ್ನು ಜಂಟಲ್ಮೆನ್ ಎಂದ ಶಾರುಖ್ ಖಾನ್ ಅವರನ್ನು ಈ ವೇದಿಕೆಗೆ ಕರೆಸಿರುವುದಕ್ಕೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.
ಅಂದು ಏನಾಗಿತ್ತು?
ಇನ್ನು, ಅಂದು ನಡೆದ ಉಗ್ರ ದಾಳಿ ಹಾಗೂ ದೇವಿಕಾ ಕುರಿತು ಹೇಳುವುದಾದರೆ, 2008ರ ನವೆಂಬರ್ 26ರ ರಾತ್ರಿ ದೇವಿಕಾಗೆ ಕೇವಲ 9 ವರ್ಷ ವಯಸ್ಸಾಗಿತ್ತು. ಅವರು ತಮ್ಮ ತಂದೆ ನಟ್ವರ್ಲಾಲ್ ಮತ್ತು ಸಹೋದರನೊಂದಿಗೆ ಪುಣೆಗೆ ತೆರಳಲು ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಸ್ (CST) ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದರು. ಈ ವೇಳೆ ಉಗ್ರ ಅಜ್ಮಲ್ ಕಸಬ್ ಮತ್ತು ಆತನ ಸಹಚರ ನಡೆಸಿದ ಗುಂಡಿನ ದಾಳಿಯಲ್ಲಿ ದೇವಿಕಾ ಅವರ ಬಲಗಾಲಿಗೆ ಗುಂಡು ತಗುಲಿ ತೀವ್ರವಾಗಿ ಗಾಯಗೊಂಡಿದ್ದಳು. ಗುಂಡಿನ ದಾಳಿಯ ನಂತರ ಅವರ ಕಾಲಿಗೆ ಆರು ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಯಿತು ಮತ್ತು ಅವರು 45 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಈ ಅವಧಿಯಲ್ಲಿ ಅವರು ದೀರ್ಘಕಾಲ ಊರುಗೋಲಿನ ಸಹಾಯದಿಂದ ನಡೆಯಬೇಕಾಯಿತು.
ಉಗ್ರನ ವಿರುದ್ಧ ಸಾಕ್ಷ್ಯ ಹೇಳಿದ ನಂತರ ದೇವಿಕಾ ಮತ್ತು ಅವರ ಕುಟುಂಬವು ಬೆದರಿಕೆಗಳು, ಸಾಮಾಜಿಕ ಬಹಿಷ್ಕಾರ ಮತ್ತು ತೀವ್ರ ಆರ್ಥಿಕ ಸಂಕಷ್ಟಗಳನ್ನು ಎದುರಿಸಬೇಕಾಯಿತು. ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಕೋಟಾದಡಿ ಸರ್ಕಾರದಿಂದ ಮನೆ ಪಡೆಯಲು ಅವರು ಬಾಂಬೆ ಹೈಕೋರ್ಟ್ನಲ್ಲಿ ಕಾನೂನು ಹೋರಾಟವನ್ನೂ ನಡೆಸಿದ್ದಾರೆ. ಇಷ್ಟೆಲ್ಲಾ ಕಷ್ಟಗಳ ನಡುವೆಯೂ ಶಿಕ್ಷಣ ಮುಂದುವರಿಸಿರುವ ದೇವಿಕಾ, ಮುಂದೆ ಐಪಿಎಸ್ (IPS) ಅಧಿಕಾರಿಯಾಗಿ ದೇಶ ಸೇವೆ ಮಾಡುವ ಮತ್ತು ಭಯೋತ್ಪಾದನೆಯ ವಿರುದ್ಧ ಹೋರಾಡುವ ಗುರಿ ಹೊಂದಿದ್ದಾರೆ. 2022ರಲ್ಲಿ ಮುಂಬೈನಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಭಯೋತ್ಪಾದನಾ ನಿಗ್ರಹ ಸಮಿತಿಯ (UNSC) ಸಭೆಯಲ್ಲೂ ಅವರು ತಮ್ಮ ಅನುಭವ ಹಂಚಿಕೊಂಡಿದ್ದರು.
















