ಮ್ಯಾಂಚೆಸ್ಟರ್‌[ಜೂ.16]: 2019ರ ಏಕದಿನ ವಿಶ್ವಕಪ್‌ ಆರಂಭಗೊಂಡಾಗಿನಿಂದಲೂ ಕ್ರಿಕೆಟ್‌ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ದಿನ ಬಂದಿದೆ. ಭಾನುವಾರ ಇಲ್ಲಿನ ಓಲ್ಡ್‌ ಟ್ರಾಫರ್ಡ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟಿಗರು, ಅಭಿಮಾನಿಗಳ ದೇಶ ಭಕ್ತಿ ಉಕ್ಕಿ ಹರಿಯಲಿದೆ. ಕಾರಣ, ಬದ್ಧವೈರಿಗಳು ವಿಶ್ವಕಪ್‌ ಪಂದ್ಯದಲ್ಲಿ ಎದುರಾಗಲಿವೆ. ವಿಶ್ವದಾದ್ಯಂತ ಕೋಟ್ಯಂತರ ಕ್ರಿಕೆಟ್‌ ಪ್ರೇಮಿಗಳ ಹೃದಯ ಬಡಿತವೂ ಹೆಚ್ಚಾಗಿದ್ದು, ಆಟಗಾರರು ಹಾಗೂ ಅಭಿಮಾನಿಗಳ ಉತ್ಸಾಹಕ್ಕೆ ವರುಣ ದೇವ ತಣ್ಣೀರೆರಚದಿದ್ದರೆ ಸಾಕು ಎಂದು ಪ್ರಾರ್ಥನೆ ಸಲ್ಲಿಸಲಾಗುತ್ತಿದೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್‌ ಕದನ ತನ್ನದೇ ಆದ ಇತಿಹಾಸ ಹೊಂದಿದೆ. ಅದರಲ್ಲೂ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತೇ ಇಲ್ಲ. ವಿರಾಟ್‌ ಕೊಹ್ಲಿ ಪಡೆ ವಿಶ್ವಕಪ್‌ ಟ್ರೋಫಿ ಗೆಲುವುದನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದೆಯೋ ಪಾಕಿಸ್ತಾನ ವಿರುದ್ಧ ಗೆಲ್ಲುವುದನ್ನು ಅಷ್ಟೇ ಗಂಭೀರವಾಗಿ ತೆಗೆದುಕೊಂಡಿರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.

ಇಂಡೋ-ಪಾಕ್ ಫೈಟ್: ಮಳೆ ಬರುತ್ತಾ..? ಇಲ್ಲಿದೆ ನೋಡಿ ಹವಾಮಾನ ವರದಿ

ಟೂರ್ನಿಯಲ್ಲಿ ಆಡಿರುವ 3 ಪಂದ್ಯಗಳಲ್ಲಿ ಭಾರತ 2 ಗೆಲುವು ಸಾಧಿಸಿದೆ. ನ್ಯೂಜಿಲೆಂಡ್‌ ವಿರುದ್ಧದ ಪಂದ್ಯ ಮಳೆಯಿಂದಾಗಿ ಟಾಸ್‌ ಕೂಡಾ ಕಂಡಿರಲಿಲ್ಲ. ಭಾರತ ಅಜೇಯವಾಗಿ ಉಳಿದಿದೆ. ಅತ್ತ ಪಾಕಿಸ್ತಾನದ ಸ್ಥಿತಿ ವಿಭಿನ್ನವಾಗಿದೆ. ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಸೋತು, ಕೇವಲ 1ರಲ್ಲಿ ಮಾತ್ರ ಜಯಗಳಿಸಿದೆ. ಒಂದು ಪಂದ್ಯ ಮಳೆಗೆ ಬಲಿಯಾಗಿತ್ತು. ಸಹಜವಾಗಿಯೇ ಪಾಕಿಸ್ತಾನ ಒತ್ತಡದಲ್ಲಿದೆ. ಪಾಕ್‌ ದೌರ್ಬಲ್ಯಗಳನ್ನು ಭಾರತ ಲಾಭವಾಗಿಸಿಕೊಂಡು ಗೆಲುವಿನ ದಾರಿ ಹುಡುಕಿಕೊಳ್ಳಬೇಕಿದೆ.

ಇಂಡೋ-ಪಾಕ್ ಪಂದ್ಯ- ಪ್ರತಿ ಸೆಕೆಂಡ್ ಜಾಹೀರಾತಿಗೆ 2.5 ಲಕ್ಷ ರೂ!

ಕೆ.ಎಲ್‌.ರಾಹುಲ್‌ ಆರಂಭಿಕನಾಗಿ ಆಡಲು ಉತ್ಸುಕರಾಗಿದ್ದಾರೆ. ಪಂದ್ಯದ ಆರಂಭದಲ್ಲಿ ಮಳೆ ಇಲ್ಲದೆ ಪೂರ್ತಿ ಪಂದ್ಯ ನಡೆಯುವ ಸಾಧ್ಯತೆ ಕಂಡರೆ ವಿಜಯ್‌ ಶಂಕರ್‌ಗೆ ಅವಕಾಶ ಸಿಗಲಿದೆ. ಒಂದೊಮ್ಮೆ ಓವರ್‌ಗಳನ್ನು ಕಡಿತಗೊಳಿಸಿದರೆ ಅನುಭವಿ ದಿನೇಶ್‌ ಕಾರ್ತಿಕ್‌ಗೆ ಸ್ಥಾನ ಸಿಗಬಹುದು.

ಮೋಡ ಕವಿದ ವಾತಾವರಣವಿದ್ದು, ಚೆಂಡು ಸ್ವಿಂಗ್‌ ಆಗಲಿದೆ ಎನ್ನುವುದು ದೃಢಪಟ್ಟರೆ ಖಂಡಿತವಾಗಿಯೂ ಮೊಹಮದ್‌ ಶಮಿಗೆ ಅವಕಾಶ ಸಿಗಲಿದೆ. ಆಗ ಇಬ್ಬರು ಸ್ಪಿನ್ನರ್‌ಗಳ ಪೈಕಿ ಒಬ್ಬರು ಬೆಂಚ್‌ ಕಾಯಬೇಕಾಗುತ್ತದೆ. 2015ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್‌ ಕೊಹ್ಲಿ ಶತಕ ಸಿಡಿಸಿದ್ದರು. ಈ ವಿಶ್ವಕಪ್‌ನಲ್ಲಿ ಅವರಿಂದ ಶತಕ ನಿರೀಕ್ಷೆ ಮಾಡಲಾಗುತ್ತಿದ್ದು, ಪಾಕಿಸ್ತಾನ ವಿರುದ್ಧವೇ ದಾಖಲಾದರೆ ಅಭಿಮಾನಿಗಳಿಗೆ ಅದಕ್ಕಿಂತ ಖುಷಿ ಬೇರೆ ಇರುವುದಿಲ್ಲ.

ಇಂಡೋ-ಪಾಕ್ ಪಂದ್ಯಕ್ಕೆ ಕ್ರಿಸ್ ಗೇಲ್ ಸ್ಪೆಷಲ್ ಡ್ರೆಸ್ - ಯಾರಿಗೆ ಬೆಂಬಲ?

2018ರ ಏಷ್ಯಾಕಪ್‌ ಬಳಿಕ ಎರಡೂ ತಂಡಗಳು ಮುಖಾಮುಖಿಯಾಗಿಲ್ಲ. ಆ ಟೂರ್ನಿಯಲ್ಲಿ ಕೊಹ್ಲಿ ಅನುಪಸ್ಥಿತಿಯೂಲ್ಲೂ ಪಾಕ್‌ ವಿರುದ್ಧ ಭಾರತ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿತ್ತು. ಜತೆಗೆ 2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಸೋಲಿನ ಸೇಡಿಗಾಗಿ ಭಾರತ ಕಾಯುತ್ತಿದೆ.

ಪಿಚ್‌ ರಿಪೋರ್ಟ್‌

ಓಲ್ಡ್‌ ಟ್ರಾಫರ್ಡ್‌ ಪಿಚ್‌ ಬ್ಯಾಟ್ಸ್‌ಮನ್‌ ಸ್ನೇಹಿಯಾಗಿರಲಿದೆಯಾದರೂ ಸ್ಥಳೀಯ ವಾತಾವರಣ ವೇಗ ಹಾಗೂ ಸ್ವಿಂಗ್‌ ಬೌಲಿಂಗ್‌ಗೆ ನೆರವು ನೀಡಲಿದೆ. ಎರಡೂ ತಂಡಗಳ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಜವಾಬ್ದಾರಿ ಇರಲಿದೆ. ಕಳೆದ 5 ಪಂದ್ಯಗಳಲ್ಲಿ ಇಲ್ಲಿ ಮೊದಲ ಇನ್ನಿಂಗ್ಸ್‌ನ ಸರಾಸರಿ ಮೊತ್ತ ಕೇವಲ 201 ಇದೆ. ಹೀಗಾಗಿ ಮೊದಲು ಬ್ಯಾಟ್‌ ಮಾಡುವ ತಂಡ 260-270 ರನ್‌ ಕಲೆಹಾಕಿದರೆ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚಿರಲಿದೆ.

ಭಾರತ vs ಪಾಕ್‌ ವಿಶ್ವಕಪ್‌ ಮುಖಾಮುಖಿ

ವರ್ಷ    ಭಾರತ    ಪಾಕಿಸ್ತಾನ    ಫಲಿತಾಂಶ

1992    216/7    173    ಭಾರತಕ್ಕೆ 43 ರನ್‌ ಜಯ

1996    287/8    248/9    ಭಾರತಕ್ಕೆ 39 ರನ್‌ ಜಯ

1999    227/6    180/10    ಭಾರತಕ್ಕೆ 47 ರನ್‌ ಜಯ

2003    276/4    273/7    ಭಾರತಕ್ಕೆ 6 ವಿಕೆಟ್‌ ಜಯ

2011    260/9    231/10    ಭಾರತಕ್ಕೆ 29 ರನ್‌ ಜಯ

2015    300/7    224/10    ಭಾರತಕ್ಕೆ 76 ರನ್‌ ಜಯ


ಒಟ್ಟು ಮುಖಾಮುಖಿ: 131

ಭಾರತ: 54

ಪಾಕಿಸ್ತಾನ: 73

ಫಲಿತಾಂಶವಿಲ್ಲ: 04

ವಿಶ್ವಕಪ್‌ನಲ್ಲಿ ಭಾರತ vs ಪಾಕಿಸ್ತಾನ

ಪಂದ್ಯ: 06

ಭಾರತ: 06

ಪಾಕಿಸ್ತಾನ: 00

ಸಂಭವನೀಯ ಆಟಗಾರರು

ಭಾರತ: ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ(ನಾಯಕ), ವಿಜಯ್‌ ಶಂಕರ್‌, ಎಂ.ಎಸ್‌.ಧೋನಿ, ಹಾರ್ದಿಕ್‌ ಪಾಂಡ್ಯ, ಕೇದಾರ್‌ ಜಾಧವ್‌, ಭುವನೇಶ್ವರ್‌ ಕುಮಾರ್‌, ಕುಲ್ದೀಪ್‌ ಯಾದವ್‌, ಯಜುವೇಂದ್ರ ಚಹಲ್‌, ಜಸ್ಪ್ರೀತ್ ಬುಮ್ರಾ.

ಪಾಕಿಸ್ತಾನ: ಫಖರ್‌ ಜಮಾನ್‌, ಇಮಾಮ್‌ ಉಲ್‌ ಹಕ್‌, ಬಾಬರ್‌ ಆಜಂ, ಮೊಹಮದ್‌ ಹಫೀಜ್‌, ಶೋಯಿಬ್‌ ಮಲಿಕ್‌, ಸರ್ಫರಾಜ್‌ ಅಹ್ಮದ್‌ (ನಾಯಕ), ಆಸಿಫ್‌ ಅಲಿ, ಶದಾಬ್‌ ಖಾನ್‌, ಮೊಹಮದ್‌ ಆಮೀರ್‌, ವಾಹಬ್‌ ರಿಯಾಜ್‌, ಶಾಹೀನ್‌ ಅಫ್ರಿದಿ

ಸ್ಥಳ: ಮ್ಯಾಂಚೆಸ್ಟರ್‌
ಪಂದ್ಯ ಆರಂಭ: ಮಧ್ಯಾಹ್ನ 3ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1