Top Stories
live cricket updates
Point Table
  • teams
rankteamplayedwonlostn/rnrrpoints
1Australia76100.90612
2New Zealand65011.30611
3India54010.8099
4England74301.0518
5Bangladesh7331-0.1337
6Sri Lanka6222-1.1196
7Pakistan6231-1.2655
8West Indies61410.193
9South Africa7151-0.3243
10Afghanistan7070-1.6340
venue
today's star

Aaron Finch

Australia


Runs - 100

Wickets -

most runs

David Warner

Australia

500

most wickets

Mitchell Starc

Australia

19

most sixes

Eoin Morgan

England

22

world cup 2019 teams
video
World Cup 2019 Virat Kohli may hit century against West Indies
Video Icon

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಶತಕ ಬಾರಿಸಲು ಸಫಲರಾಗಿಲ್ಲ. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಶತಕ ಸಿಡಿಸುತ್ತಾರೆ ಎನ್ನುವುದು ಅವರ ಅಭಿಮಾನಿಗಳ ಲೆಕ್ಕಾಚಾರ.
ಈಗಾಗಲೇ ಏಕದಿನ ಕ್ರಿಕೆಟ್ ನಲ್ಲಿ 41 ಶತಕ ಸಿಡಿಸಿರುವ ವಿರಾಟ್ ಕೊಹ್ಲಿ ಈ ವಿಶ್ವಕಪ್ ಟೂರ್ನಿಯಲ್ಲೇ 50 ಶತಕ ಪೂರೈಸುತ್ತಾರೆ ಎಂದು ಅವರ ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ವಿಂಡೀಸ್ ವಿರುದ್ಧ ಶತಕ ಸಿಡಿಸಿಯೇ ಸಿಡಿಸುತ್ತಾರೆ ಎಂದು ಹೇಳಲು ಕಾರಣವಿದೆ. ಯಾಕೆ ಹೀಗೆ ಹೇಳುತ್ತಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
 
 

world cup timeline
  • champions:  west indies
  • runners-up:  australia
  • most runs:  Glenn Turner (333)
  • most wickets:  Gary Gilmore (11)
1975

ಜೂನ್ 21ರಂದು ನಡೆದ ಮೊದಲ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಲಂಡನ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿತ್ತು. 6 ಎಸೆತಗಳನ್ನೊಳಗೊಂಡ 60 ಓವರ್ ಗಳ ಪಂದ್ಯದಲ್ಲಿ ಪ್ರಶಸ್ತಿ ಸುತ್ತಿನಲ್ಲಿ ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಟಾಸ್ ಗೆದ್ದ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಜೆಫ್ ಥಾಮ್ಸನ್ ಹಾಗೂ ಡೆನಿಸ್ ಲಿಲ್ಲಿ ವೇಗಿಗಳ ದಾಳಿಗೆ ಕೆರಿಬಿಯನ್ ತಂಡ ತತ್ತರಿಸಿ ಹೋಯಿತು. ಇವರಿಗೆ ಸ್ಪಿನ್ನರ್ ಗ್ಯಾರಿ ಗಿಲ್ಮೋರ್ ಕೂಡಾ ಸಾಥ್ ನೀಡಿದರು. ಒಂದು ಹಂತದಲ್ಲಿ 50 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆರಿಬಿಯನ್ ತಂಡಕ್ಕೆ ನಾಯಕ ಕ್ಲೈವ್ ಲಾಯ್ಡ್ ಮತ್ತು ರೋಹನ್ ಕನ್ನೈ ಆಸರೆಯಾದರು.

ಲಾಯ್ಡ್ ಕೇವಲ 85 ಎಸೆತಗಳಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್ ಸಹಿತ 102 ರನ್ ಬಾರಿಸುವುದರ ಜತೆಗೆ ತಂಡವನ್ನು ಸುಸ್ಥಿಗೆ ಕೊಂಡ್ಯೊಯ್ದರು. ಅಂತಿಮವಾಗಿ ವೆಸ್ಟ್ ಇಂಡೀಸ್ 291 ರನ್ ಕಲೆಹಾಕಿತು. ಆಸ್ಟ್ರೇಲಿಯಾದ ಗ್ಯಾರಿ ಗಿಲ್ಮೋರ್ 48 ರನ್ ನೀಡಿ 5 ವಿಕೆಟ್ ಕಬಳಿಸಿದರು. ಆಸ್ಟ್ರೇಲಿಯಾ ತಂಡದಲ್ಲಿ ಸ್ಟಾರ್ ಆಟಗಾರರಿದ್ದರೂ ಕೆರಿಬಿಯನ್ ದಾಳಿಗೆ ಆರಂಭದಲ್ಲೇ ತತ್ತರಿಸಿ ಹೋಯಿತು. ತಂಡದ ಮೊತ್ತ 25 ರನ್ ಗಳಿದ್ದಾಗ ಕೇಯಿಸ್ ಬೋಯಿಸ್ ಬೌಲಿಂಗ್ ನಲ್ಲಿ ಸ್ಲಿಪ್ ನಲ್ಲಿದ್ದ ಕಲ್ಲಿಚರ್ರನ್ ಹಿಡಿದ ಅದ್ಭುತ ಕ್ಯಾಚ್ ಗೆ ರಿಕ್ ಮೆಕ್’ಕೋಸ್ಕರ್ ಪೆವಿಲಿಯನ್ ಸೇರಬೇಕಾಯಿತು. ಬೋಯಿಸ್ 4 ವಿಕೆಟ್ ಕಬಳಿಸುವ ಮೂಲಕ ವೆಸ್ಟ್ ಇಂಡೀಸ್ ತಂಡ 17 ರನ್ ಗಳ ಜಯ ಸಾಧಿಸುವುದರೊಂದಿಗೆ ಚೊಚ್ಚಲ ವಿಶ್ವಕಪ್ ಟೂರ್ನಿಯ ಚಾಂಪಿಯನ್ ಆಗಿ ಹೊರಹೊಮ್ಮಿತು.

ಕ್ಷೇತ್ರ ರಕ್ಷಣೆಯಲ್ಲೂ ಮಿಂಚಿನ ಪ್ರದರ್ಶನ ತೋರಿದ ವೆಸ್ಟ್ ಇಂಡೀಸ್ ತಂಡ 5 ರನೌಟ್ ಮಾಡುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿತು. ಅಲನ್ ಟರ್ನರ್ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ ಆಸ್ಟ್ರೇಲಿಯಾದ ರನ್ ವೇಗಕ್ಕೆ ಕಡಿವಾಣ ಬಿದ್ದಿತು. ನಾಯಕ ಇಯಾನ್ ಚಾಪೆಲ್ 62 ರನ್ ಬಾರಿಸುವುದರೊಂದಿಗೆ ಆಸ್ಟ್ರೇಲಿಯಾ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್’ಮನ್ ಎನಿಸಿದರು. ಡಗ್ ವಾಲ್ಟರ್ 35 ರನ್ ಬಾರಿಸುವುದರೊಂದಿಗೆ ನಾಯಕನಿಗೆ ತಕ್ಕ ಸಾಥ್ ನೀಡಿದರು. ಆದಾಗಿಯೂ ಕ್ಲೈವ್ ಲಾಯ್ಡ್ ಶತಕ ಹಾಗೂ ವಿಕೆಟ್ ಕಬಳಿಸುವುದರೊಂದಿಗೆ ವೆಸ್ಟ್ ಇಂಡೀಸ್ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು. ಲಾಯ್ಡ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

  • champions:  west indies
  • runners-up:  england
  • most runs:  Gordon Greenidge (253)
  • most wickets:  Mike Hendrick (10)
1979

ಎರಡನೇ ಆವೃತ್ತಿಯ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಲಾರ್ಡ್ಸ್ ಮತ್ತೊಮ್ಮೆ ಆತಿಥ್ಯ ವಹಿಸಿತ್ತು. ಈ ಬಾರಿ ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಆತಿಥೇಯ ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಸೆಣಸಿದವು. ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ವೆಸ್ಟ್ ಇಂಡೀಸ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ನಾಯಕ ಕ್ಲೈವ್ ಲಾಯ್ಡ್ ಕೇವಲ 13 ರನ್ ಬಾರಿಸಿ ಪೆವಿಲಿಯನ್ ಸೇರುವ ಮೂಲಕ ನಿರಾಸೆ ಅನುಭವಿಸಿದರು. ಅಷ್ಟರಲ್ಲಾಗಲೇ ಕೆರಿಬಿಯನ್ ಪಾಳಯದಲ್ಲಿ ಹೊಸ ದಿಗ್ಗಜ ಕ್ರಿಕೆಟಿಗ ಉಗಮದ ಮುನ್ಸೂಚನೆ ಸಿಕ್ಕಿತ್ತು.

ವೀವ್ ರಿಚರ್ಡ್’ಸನ್ ಇಂಗ್ಲೆಂಡ್ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು. 157 ಎಸೆತಗಳನ್ನು ಎದುರಿಸಿದ ರಿಚರ್ಡ್ಸ್ 138 ರನ್ ಬಾರಿಸಿದರು. ಇವರಿಗೆ ಕಾಲಿಸ್ ಕಿಂಗ್ 66 ಎಸೆತಗಳಲ್ಲಿ 86 ರನ್ ಬಾರಿಸುವ ಮೂಲಕ ಉತ್ತಮ ಸಾಥ್ ನೀಡಿದರು. 60 ಓವರ್ ಮುಕ್ತಾಯದ ವೇಳೆಗೆ ವೆಸ್ಟ್ ಇಂಡೀಸ್ 286/6 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಉತ್ತಮ ಆರಂಭವನ್ನೇ ಪಡೆಯಿತು. ಮೊದಲ ವಿಕೆಟ್ ಗೆ ಮೈಕ್ ಬ್ರಿಯರ್ಲಿ[64] ಹಾಗೂ ಜೆಫ್ ಬಾಯ್ಕಟ್[57] ಮೊದಲ 38 ಓವರ್ ಗಳಲ್ಲಿ 129 ರನ್ ಗಳ ಜತೆಯಾಟವಾಡಿತು. ಗ್ರಾಹಂ ಗೂಚ್ 32 ರನ್ ಬಾರಿಸುವ ಮೂಲಕ ತಂಡದ ಮೊತ್ತವನ್ನು 183/2 ಕ್ಕೇರಿಸಿದರು. ಆ ಬಳಿಕ ಜೋಯೆಲ್ ಮಾರಕ ದಾಳಿಗೆ ತತ್ತರಿಸಿದ ಇಂಗ್ಲೆಂಡ್ 11 ಓವರ್ ಗಳ ಅಂತರದಲ್ಲಿ 194 ರನ್ ಗಳಿಗೆ ಸರ್ವಪತನ ಕಂಡಿತು.

ಗಾರ್ನರ್ ಗೆ ಸಾಥ್ ನೀಡಿದ ಮೈಕಲ್ ಹೋಲ್ಡಿಂಗ್ಸ್ ಇಬ್ಬರು ಇಂಗ್ಲಿಷ್ ಬ್ಯಾಟ್ಸ್’ಮನ್ ಗಳನ್ನು ಪೆವಿಲಿಯನ್ ಅಟ್ಟಿದರು. ಇಂಗ್ಲೆಂಡ್ ಕೇವಲ 11 ಓವರ್’ಗಳಲ್ಲಿ ಕೊನೆಯ 8 ವಿಕೆಟ್ ಗಳನ್ನು ಕಳೆದುಕೊಂಡಿತು. ಇನ್ನು ಕೊನೆಯ 7 ಬ್ಯಾಟ್ಸ್’ಮನ್ ಗಳ ಪೈಕಿ ಐವರು ಬ್ಯಾಟ್ಸ್’ಮನ್ ಗಳು ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇಂಗ್ಲೆಂಡ್ ತಂಡವನ್ನು 92 ರನ್ ಗಳಿಂದ ಮಣಿಸಿದ ವೆಸ್ಟ್ ಇಂಡೀಸ್ ಮತ್ತೊಮ್ಮೆ ಪ್ರಶಸ್ತಿ ಎತ್ತಿಹಿಡಿಯಿತು. ವೀವ್ ರಿಚರ್ಡ್ಸ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.

  • champions:  india
  • runners-up:  west indies
  • most runs:  David Gower (384)
  • most wickets:  Roger Binny (18)
1983

ಮೂರನೇ ಆವೃತ್ತಿಯ ಕ್ರಿಕೆಟ್ ವಿಶ್ವಕಪ್’ನಲ್ಲಿ ಕಪಿಲ್ ಡೆವಿಲ್ಸ್ ಪಡೆ ಪವಾಡ ಸದೃಶ ರೀತಿಯಲ್ಲಿ ವಿಶ್ವಕಪ್ ಜಯಿಸಿ ಹೊಸ ಇತಿಹಾಸ ಬರೆಯಿತು. ಏಕದಿನ ಕ್ರಿಕೆಟ್’ನಲ್ಲಿ ಕಳಪೆ ಫಾರ್ಮ್’ನಲ್ಲಿದ್ದ ಭಾರತ ವಿಶ್ವಕಪ್ ಗೆಲ್ಲುವ ಮೂಲಕ ಸಂಚಲನ ಮೂಡಿಸಿತು. ಜೂನ್ 25ರಂದು ಲಾರ್ಡ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಹಾಗೂ ಮಾರಕ ವೇಗಿಗಳ ದಂಡನ್ನೇ ಹೊಂದಿದ್ದ ವಿಂಡೀಸ್ ಪಡೆಗೆ ಶಾಕ್ ನೀಡುವಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿತ್ತು.

ಟಾಸ್ ಸೋತ ಭಾರತ, ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿದ್ದ ವೆಸ್ಟ್ ಇಂಡೀಸ್ ಎದುರು ಮೊದಲು ಬ್ಯಾಟಿಂಗ್ ಇಳಿಯಿತು. ಭಾರತ 54.4 ಓವರ್ ಗಳಲ್ಲಿ 183 ರನ್ ಗಳಿಗೆ ಸರ್ವಪತನ ಕಂಡಿತು. ಮೊಹಿಂದರ್ ಅಮರ್ ನಾಥ್ 80 ಎಸೆತಗಳಲ್ಲಿ 26 ಹಾಗೂ ಕ್ರಿಸ್ ಶ್ರೀಕಾಂತ್ 57 ಎಸೆತಗಳಲ್ಲಿ 38 ರನ್ ಬಾರಿಸುವ ಮೂಲಕ ವಿಂಡೀಸ್ ವೇಗಿಗಳೆದುರು ಅಲ್ಪ ಪ್ರತಿರೋಧ ತೋರಿದರು. ಇದು ಕಳೆದೆರಡು ವಿಶ್ವಕಪ್ ಫೈನಲ್’ನಲ್ಲಿ ದಾಖಲಾದ ಅತಿ ಕಡಿಮೆ ಮೊತ್ತವಾಗಿತ್ತು. ಆ್ಯಂಡಿ ರಾಬರ್ಟ್ಸ್ ಮೂರು ವಿಕೆಟ್ ಪಡೆದರೆ, ಮಾಲ್ಕಮ್ ಮಾರ್ಶಲ್, ಜೋಯೆಲ್ ಗಾರ್ನರ್ ಮತ್ತು ಮೈಕಲ್ ಹೋಲ್ಡಿಂಗ್ಸ್ ಭಾರತೀಯ ಬ್ಯಾಟ್ಸ್’ಮನ್’ಗಳನ್ನು ಇನ್ನಿಲ್ಲದಂತೆ ಕಾಡಿದರು. ಶ್ರೀಕಾಂತ್, ಅಮರ್ ನಾಥ್ ಬಳಿಕ 20+ ರನ್ ಬಾರಿಸಿದ ಮತ್ತೋರ್ವ ಬ್ಯಾಟ್ಸ್’ಮನ್ ಎಂದರೆ ಅದು ಸಂದೀಪ್ ಪಾಟೀಲ್[27].

ವಿಂಡೀಸ್ ಪಡೆ ಭಾರತೀಯ ತಂಡದಿಂದ ಅಮೋಘ ಬೌಲಿಂಗ್ ಪ್ರದರ್ಶನದ ನಿರೀಕ್ಷೆಯನ್ನೂ ಮಾಡಿರಲಿಲ್ಲ. ವಿಂಡೀಸ್ ದಿಗ್ಗಜ ರಿಚರ್ಡ್ಸ್ 33 ರನ್ ಬಾರಿಸಿದಾಗ ಕಪಿಲ್ ದೇವ್ ವಿಕೆಟ್ ಕಬಳಿಸುವ ಮೂಲಕ ಭಾರತದ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆ ಬಳಿಕ ಭಾರತೀಯರ ದಾಳಿಗೆ ಕ್ಲೈವ್ ಲಾಯ್ಡ್[8], ಗೋಮ್ಸ್[5] ಮತ್ತು ಪಾವೋದ್ ಬಚ್ಚಾಸ್[8] ಎರಡಂಕಿ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಡೆಸ್ಮಂಡ್ ಹೇನ್ಸ್[13], ಜೆಫ್ ಡೌಸನ್[25] ಹಾಗೂ ಮಾಲ್ಕಮ್ ಮಾರ್ಶಲ್[18] ಎರಡಂಕಿ ಮೊತ್ತ ದಾಖಲಿಸಲು ಸಫಲರಾದರು. ಅಮರ್ ನಾಥ್ ಕೊನೆಯ ಬ್ಯಾಟ್ಸ್’ಮನ್ ಮೈಕಲ್ ಹೋಲ್ಡಿಂಗ್ಸ್[6] ವಿಕೆಟ್ ಕಬಳಿಸುವ ಮೂಲಕ 52 ಓವರ್’ಗಳಲ್ಲಿ ವಿಂಡೀಸ್ ತಂಡವನ್ನು ಕಪಿಲ್ ಡೆವಿಲ್ಸ್ ಪಡೆ ಆಲೌಟ್ ಮಾಡಿತು.

ವಿಂಡೀಸ್ ತಂಡವನ್ನು ಕೇವಲ 140 ರನ್ ಗಳಿಗೆ ಕಟ್ಟಿಹಾಕಿದ ಭಾರತ ತಂಡ ಮೈದಾನದಲ್ಲೇ ಕುಣಿದು ಕುಪ್ಪಳಿಸಿತು. 7 ಓವರ್’ಗಳಲ್ಲಿ ಕೇವಲ 12 ರನ್ ನೀಡಿ 3 ವಿಕೆಟ್ ಕಬಳಿಸಿದ ಮೊಯೀಂದರ್ ಅಮರ್ ನಾಥ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು. ಇಂಗ್ಲೆಂಡ್ ನ ಡೇವಿಡ್ ಗೋವರ್ 384 ರನ್ ಬಾರಿಸುವುದರೊಂದಿಗೆ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಆಟಗಾರ ಎನಿಸಿದರು. ಶ್ರೀಲಂಕಾ ವಿರುದ್ಧ 120 ಎಸೆತಗಳಲ್ಲಿ 130 ರನ್ ಬಾರಿಸಿದ್ದರು. ಭಾರತ ವಿಶ್ವಕಪ್ ಜತೆಗೆ ಇತರ ಪ್ರಶಸ್ತಿಗಳನ್ನು ಬಾಚಿಕೊಂಡಿತು. ರೋಜರ್ ಬಿನ್ನಿ 18 ವಿಕೆಟ್ ಕಬಳಿಸುವ ಮೂಲಕ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್ ಎನಿಸಿದರು. ಜಿಂಬಾಬ್ವೆ ವಿರುದ್ಧ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ 175* ಗರಿಷ್ಠ ವೈಯುಕ್ತಿಕ ರನ್ ಬಾರಿಸಿದ ಸಾಧನೆ ಮಾಡಿದರು. ಹೀಗಿತ್ತು ನೋಡಿ 1983ರಲ್ಲಿ ಟೀಂ ಇಂಡಿಯಾ ವಿಶ್ವಕಪ್ ಗೆಲುವು.

  • champions:  australia
  • runners-up:  england
  • most runs:  Graham Gooch (471)
  • most wickets:  Craig Mcdermott (18)
1987

ಮೊದಲ ಬಾರಿಗೆ ಕ್ರಿಕೆಟ್ ಮಹಾ ಸಂಗ್ರಾಮ ಇಂಗ್ಲೆಂಡ್’ನಿಂದ ಸ್ಥಳಾಂತರಗೊಂಡಿತು. ಈ ಹಿಂದೆ ಇಂಗ್ಲೆಂಡ್’ನಲ್ಲಿ ನಡೆದ ವಿಶ್ವಕಪ್ ಟೂರ್ನಿಯನ್ನು ಪ್ರೊಡೆನ್ಷಿಯಲ್ ಕಪ್ ಎಂದು ಕರೆಯಲಾಗುತ್ತಿತ್ತು. ಆದರೆ ನಾಲ್ಕನೇ ಆವೃತ್ತಿಯ ವಿಶ್ವಕಪ್ ಟೂರ್ನಿಗೆ ರಿಲಯನ್ಸ್ ಪ್ರಾಯೋಜಕತ್ವ ನೀಡಿದ್ದರಿಂದ ರಿಲಯನ್ಸ್ ಕಪ್ ಎಂದೇ ಪ್ರಖ್ಯಾತಿಯಾಯಿತು. ಈ ಟೂರ್ನಿಗೆ ಕಮರ್ಶಿಯಲ್ ಟಚ್ ಸಿಕ್ಕಿದ್ದರಿಂದ ಕ್ರಿಕೆಟ್ ಮತ್ತಷ್ಟು ಜನಪ್ರಿಯತೆ ಗಳಿಸಿತು. ಈ ಆವೃತ್ತಿಯಲ್ಲಿ ಏಕದಿನ ಮಾದರಿಯ ಕ್ರಿಕೆಟ್ ಗೆ ಬದಲಾವಣೆ ತರಲಾಯಿತು.

ಪಂದ್ಯದ ಓವರ್’ಗಳ ಸಂಖ್ಯೆಯನ್ನು 60 ಓವರ್ ಗಳಿಂದ 50 ಓವರ್ ಗಳಿಗೆ ಇಳಿಸಲಾಯಿತು. ಆ ಬಳಿಕ ಇದೇ ಓವರ್ ಗಳ ಸಂಖ್ಯೆ ಏಕದಿನ ಕ್ರಿಕೆಟ್ ನಲ್ಲಿ ಮುಂದುವರಿಯಿತು. ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದ ಹಾಲಿ ಚಾಂಪಿಯನ್ ಭಾರತ ಮತ್ತೊಮ್ಮೆ ವಿಶ್ವಕಪ್ ಗೆಲ್ಲಬಹುದು ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್’ನಲ್ಲಿ ಸೋತು ಆಘಾತ ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ್ದ ಇಂಗ್ಲೆಂಡ್ 254 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ 219 ರನ್’ಗಳಿಗೆ ಸರ್ವಪತನ ಕಂಡು 35 ರನ್ ಗಳಿಂದ ಸೋಲೊಪ್ಪಿಕೊಂಡಿತು. ಟೀಂ ಇಂಡಿಯಾ ವಿರುದ್ಧ ಗೆಲುವು ಸಾಧಿಸಿದ ಇಂಗ್ಲೆಂಡ್ ಫೈನಲ್‌ಗೆ ಲಗ್ಗೆ ಇಟ್ಟಿತು. ಇತ್ತ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಗೆಲುವು ಸಾಧಿಸಿದ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿತು.

ನವೆಂಬರ್ 8 ರಂದು ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಡೇವಿಡ್ ಬೂನ್ ಸಿಡಿಸಿದ 75 ರನ್ ನೆರವಿನಿಂದ ಆಸ್ಟ್ರೇಲಿಯಾ 253 ರನ್ ಸಿಡಿಸಿತು. ರನ್ ಚೇಸ್ ಮಾಡಿದ ಇಂಗ್ಲೆಂಡ್ 246 ರನ್ ಸಿಡಿಸಿ ಶರಣಾಯಿತು. ಈ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿ ಗೆದ್ದುಕೊಂಡರೆ, ಇಂಗ್ಲೆಂಡ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು. 1987ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಚೇತನ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ದಾಖಲೆ ಬರೆದರು. ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ದ ನಡೆದ ಪಂದ್ಯದಲ್ಲಿ ಚೇತನ್ ಶರ್ಮಾ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಮೊದಲ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

  • champions:  pakistan
  • runners-up:  england
  • most runs:  Martin Crowe (456)
  • most wickets:  Wasim Akram (18)
1992

ವಿಶ್ವಕಪ್ ಟೂರ್ನಿ ಹೊಸ ರೂಪ ಸಿಕ್ಕಿದ್ದು 1992ರಲ್ಲಿ. ಆರಂಭಿಕ 4 ವಿಶ್ವಕಪ್ ಟೂರ್ನಿಯಲ್ಲಿ ಬಿಳಿ ಜರ್ಸಿ ತೊಟ್ಟು ಆಡಿದ್ದ ಕ್ರಿಕೆಟಿಗರು 1992ರಲ್ಲಿ ಮೊದಲ ಬಾರಿಗೆ ಕಲರ್ ಜರ್ಸಿಯಲ್ಲಿ ತಂಡಗಳು ಕಣಕ್ಕಿಳಿದಿದ್ದವು. ಭಾರತ ಕಡು ನೀಲಿ ಜರ್ಸಿ ತೊಟ್ಟಿತ್ತು. ಜರ್ಸಿ ಮೇಲ್ಬಾಗದಲ್ಲಿ ಬಿಳಿ, ಕೆಂಪು, ಹಸಿರು ಹಾಗೂ ನೀಲಿ ಬಣ್ಣದ ಪಟ್ಟಿ ಹೊಂದಿತ್ತು. ಕೇವಲ ಜರ್ಸಿ ಮಾತ್ರವಲ್ಲ, ರೆಡ್ ಬಾಲ್ ಬದಲು ಬಿಳಿ ಬಾಲ್ ಬಳಸಲಾಯಿತು. ವರ್ಣಬೇಧ ನೀತಿಗೆ ಮುಕ್ತಿ ನೀಡಿದ ಸೌತ್ಆಫ್ರಿಕಾ ಮೊದಲ ಬಾರಿಗೆ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿತು.

1992ರ ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿತ್ತು. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಈ ವಿಶ್ವಕಪ್ ಟೂರ್ನಿ ಆತಿಥ್ಯ ವಹಿಸಿದ್ದವು. ಎ ಹಾಗೂ ಬಿ ಗುಂಪಿನ ಹೋರಾಟ ವಿಧಾನದ ಬದಲು ರೌಂಡ್ ರಾಬಿನ್ ವಿಧಾನ ಅನುಸರಿಸಲಾಯಿತು. ಹೀಗಾಗಿ 28 ರೌಂಡ್ ರಾಬಿನ್ ಪಂದ್ಯ , 2 ಸೆಮಿಫೈನಲ್ ಹಾಗೂ ಫೈನಲ್ ಪಂದ್ಯ ಆಯೋಜಿಸಲಾಗಿತ್ತು. ನ್ಯೂಜಿಲೆಂಡ್, ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಸೆಮಿಫೈನಲ್ ಪ್ರವೇಶಿಸಿದ್ದವು. ಈ ವಿಶ್ವಕಪ್‌ನಲ್ಲಿ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡ ಆಸ್ಟ್ರೇಲಿಯಾ ಸೆಮಿಫೈನಲ್ ಹಂತದಿಂದ ಹೊರಬಿತ್ತು. ಟೀಂ ಇಂಡಿಯಾ ರೌಂಡ್ ರಾಬಿನ್ ಹಂತದಿಂದಲೇ ತವರಿಗೆ ವಾಪಾಸ್ಸಾಯಿತು. ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ಮಣಿಸಿದ ಪಾಕಿಸ್ತಾನ ಫೈನಲ್ ಪ್ರವೇಶಿಸಿದರೆ, ಇತ್ತ ಸೌತ್ಆಫ್ರಿಕಾ ತಂಡವನ್ನು ಮಣಿಸಿದ ಇಂಗ್ಲೆಂಡ್ ಫೈನಲ್‌ಗೆ ಎಂಟ್ರಿಕೊಟ್ಟಿತು.

ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 6 ವಿಕೆಟ್ ನಷ್ಟಕ್ಕೆ 249 ರನ್ ಸಿಡಿಸಿತು. ನಾಯಕ ಇಮ್ರಾನ್ ಖಾನ್ 72 ರನ್ ಸಿಡಿಸಿ ಮಿಂಚಿದರು. ಇದಕ್ಕುತ್ತರವಾಗಿ ಇಂಗ್ಲೆಂಡ್ 49.2 ಓವರ್‌ಗಲ್ಲಿ 227 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ 22 ರನ್ ಗೆಲುವು ಸಾಧಿಸಿ, ಚೊಚ್ಚಲ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಿತು.

  • champions:  sri lanka
  • runners-up:  australia
  • most runs:  Sachin Tendulakar (523)
  • most wickets:  Anil Kumble (15)
1996

1996ರ ವಿಶ್ವಕಪ್ ಟೂರ್ನಿಯಲ್ಲಿ ಏಷ್ಯಾ ರಾಷ್ಟ್ರಗಳಾದ ಭಾರತ,ಪಾಕಿಸ್ತಾನ ಹಾಗೂ ಶ್ರೀಲಂಕಾ ಆತಿಥ್ಯವಹಿಸಿದ್ದವು. ಉದ್ಘಾಟನಾ ಪಂದ್ಯ ಗುಜರಾತ್‌ನ ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿತ್ತು. ನಥನ್ ಆಸ್ಟ್ಲೇ ಶತಕದಿಂದ ನ್ಯೂಜಿಲೆಂಡ್ ಎದುರಾಳಿ ಇಂಗ್ಲೆಂಡ್ ವಿರುದ್ಧ 11 ರನ್ ಗೆಲುವು ಸಾಧಿಸಿತು. ಈ ವಿಶ್ವಕಪ್ ಟೂರ್ನಿ ವಿವಾದಕ್ಕೂ ಕಾರಣವಾಗಿತ್ತು. 1996ರಲ್ಲಿ ತಮಿಳು ಟೈಗರ್ಸ್ ಬಾಂಬ್ ದಾಳಿಯಿಂದ ಲಂಕಾದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಮಂಡಳಿ ತಂಡಗಳನ್ನು ಲಂಕಾಗೆ ಕಳುಹಿಸಲು ಹಿಂದೇಟು ಹಾಕಿತು. ಹೀಗಾಗಿ ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಪಂದ್ಯಗಳನ್ನೂ ಐಸಿಸಿ ಮುಂದೂಡಿತು. ಹೀಗಾಗಿ ಶ್ರೀಲಂಕಾ ಯಾವುದೇ ಕ್ವಾಲಿಫೈ ಹಂತದ ಪಂದ್ಯ ಆಡದೇ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿತು.

ಶ್ರೀಲಂಕಾ 4 ಪಂದ್ಯಗಳನ್ನು ಆಯೋಜಿಸಿದರೆ, ಭಾರತ 17 ಹಾಗೂ ಪಾಕಿಸ್ತಾನ 16 ಪಂದ್ಯ ಆಯೋಜಿಸಿದ್ದವು. ಭಾರತದ ಪಾಲಿಗೂ ಈ ವಿಶ್ವಕಪ್ ಟೂರ್ನಿ ಸಿಹಿ-ಕಹಿ ನೆನಪು ಕಟ್ಟಿಕೊಟ್ಟಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ, ಬದ್ಧವೈರಿ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಿತ್ತು. ಭಾರತ 287 ರನ್ ಸಿಡಿಸಿತ್ತು. ಆದರೆ ಪಾಕಿಸ್ತಾನ 49 ಓವರ್‌ನಲ್ಲಿ 248 ರನ್ ಸಿಡಿಸಿತು. ಸ್ಲೋ ಓವರ್ ರೇಟ್‌ನಿಂದ ಪಾಕಿಸ್ತಾನಕ್ಕೆ 1 ಓವರ್ ಕಡಿತಗೊಳಿಸಲಾಗಿತ್ತು. 39 ರನ್‌ಗಳಿಂದ ಪಾಕ್ ತಂಡವನ್ನು ಮಣಿಸಿದ ಭಾರತ ಸೆಮಿಫೈನಲ್ ಪ್ರವೇಶಿತು.

ಭಾರತ-ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್-ಆಸ್ಟ್ರೇಲಿಯಾ ಸೆಮೀಸ್ ಹಂತದಲ್ಲಿ ಹೋರಾಡಿದವು. ಭಾರತ ಹಾಗೂ ಶ್ರೀಲಂಕಾ ನಡುವಿನ ಸೆಮಿಫೈನಲ್ ಪಂದ್ಯ ಭಾರಿ ವಿವಾದಕ್ಕೆ ಕಾರಣವಾಯಿತು. ಲಂಕಾ 8 ವಿಕೆಟ್ ನಷ್ಟಕ್ಕೆ 251 ರನ್ ಸಿಡಿಸಿತ್ತು. ಈ ಗುರಿ ಬೆನ್ನಟ್ಟಲು ಕಣಕ್ಕಿಳಿದ ಭಾರತ, ಸಚಿನ್ ತೆಂಡುಲ್ಕರ್ 65 ರನ್ ಸಿಡಿಸಿ ಔಟಾಗುವ ವೇಳೆಗೆ ಭಾರತ 98 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಸಚಿನ್ ವಿಕೆಟ್ ಪತನದ ಬಳಿಕ ಶುರುವಾದ ಪೆವಿಲಿಯನ್ ಪರೇಡ್ ಭಾರತದ ಅಭಿಮಾನಿಗಳನ್ನು ಕೆರಳಿಸಿತು. ನಾಯಕ ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ದಿಗ್ಗಜ ಬ್ಯಾಟ್ಸ್‌ಮನ್‌ಗಳು ಬಂದ ಹಾಗೇ ಪೆವಿಲಿಯನ್ ಸೇರಿಕೊಂಡರು. 120 ರನ್‌ಗೆ 8 ವಿಕೆಟ್ ಕಳೆದುಕೊಂಡ ಭಾರತ ಸೋಲಿನತ್ತ ಹೆಜ್ಜೆ ಹಾಕಿತ್ತು. ಟೀಂ ಇಂಡಿಯಾ ಪ್ರದರ್ಶನ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಯಿತು. ಕೈಯಲ್ಲಿದ್ದ ಬಾಟಲಿ ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಮೈದಾನಕ್ಕೆ ಎಸೆದರು. ಧ್ವಜಗಳನ್ನು ಹರಿದು ಹಾಕಲಾಯಿತು. ಲಂಕಾ ಆಟಗಾರರಿಗೆ ಫೀಲ್ಡಿಂಗ್ ಮಾಡುವುದೇ ಕಷ್ಟವಾಯಿತು. ಪರಿಸ್ಥಿತಿ ಕೈಮೀರುತ್ತಿದೆ ಅನ್ನುವಷ್ಟರಲ್ಲೇ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಇಷ್ಟೇ ಅಲ್ಲ ಶ್ರೀಲಂಕಾ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು. ಭಾರತದ ಬ್ಯಾಟ್ಸ್‌ಮನ್‌ಗಳು ಫಿಕ್ಸಿಂಗ್ ಮಾಡಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿತು.

ಲಂಕಾ ಫೈನಲ್ ಪ್ರವೇಶಿಸಿದರೆ, ಅತ್ತ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದ ಆಸ್ಟ್ರೇಲಿಯಾ ಫೈನಲ್‌ಗೆ ಲಗ್ಗೆ ಇಟ್ಟಿತು. ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 241 ರನ್ ಬಾರಿಸಿತು. ಅರವಿಂದ್ ಡಿಸಿಲ್ವಾ ಭರ್ಜರಿ ಶತಕ ದಿಂದ ಶ್ರೀಲಂಕಾ 46.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. 7 ವಿಕೆಟ್ ಗೆಲುವು ಸಾಧಿಸಿದ ಅರ್ಜುನ್ ರಣತುಂಗಾ ನಾಯಕತ್ವದ ಶ್ರೀಲಂಕಾ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಸರಣಿಯಲ್ಲಿ ಸಚಿನ್ ತೆಂಡೂಲ್ಕರ್ 523 ರನ್ ಸಿಡಿಸಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದರೆ, ಅನಿಲ್ ಕುಂಬ್ಳೆ 15 ವಿಕೆಟ್ ಕಬಳಿಸಿ, ಗರಿಷ್ಠ ವಿಕೆಟ್ ಪಡೆದ ಬೌಲರ್ ಅನ್ನೋ ಹೆಗ್ಗಳಿಕೆಗೆ ಪಾತ್ರರಾದರು.

  • champions:  australia
  • runners-up:  pakistan
  • most runs:  Rahul Dravid (461)
  • most wickets:  Geoff Allott (20)
1999

1999ರ ವಿಶ್ವಕಪ್ ಟೂರ್ನಿ ಆತಿಥ್ಯವನ್ನು ಇಂಗ್ಲೆಂಡ್, ವೇಲ್ಸ್, ಸ್ಕಾಟ್‌ಲೆಂಡ್, ಐರ್ಲೆಂಡ್ ಹಾಗೂ ನೆದರ್ಲೆಂಡ್ ದೇಶಗಳು ವಹಿಸಿದ್ದವು. ಲೀಗ್ ಹಂತಕ್ಕೆ ತಂಡಗಳನ್ನು ಎ ಗುಂಪು ಹಾಗೂ ಬಿ ಗುಂಪು ಎಂದು ವಿಂಗಡಿಸಲಾಗಿತ್ತು. 1996ರ ವರೆಗೆ ಪ್ರಾಯೋಜಕತ್ವದ ಹೆಸರಿನಲ್ಲೇ ವಿಶ್ವಕಪ್ ಆಯೋಜಿಸಲಾಗುತ್ತಿತ್ತು. ಆದರೆ 1999ರಲ್ಲಿ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಎಂದು ನಾಮಕರಣ ಮಾಡಲಾಯಿತು.

ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ , ಹಾಲಿ ಚಾಂಪಿಯನ್ ಶ್ರೀಲಂಕಾ ತಂಡವನ್ನು ಮಣಿಸಿ ಶುಭಾರಂಭ ಮಾಡಿತು. ಇತ್ತ ತಂದೆಯ ಅಕಾಲಿಕ ಮರಣದಿಂದ ಸಚಿನ್ ತೆಂಡುಲ್ಕರ್ ತವರಿಗೆ ವಾಪಾಸ್ಸಾದರು. ಸಚಿನ್ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ, ಜಿಂಬಾಬ್ವೆ ವಿರುದ್ಧ ಸೋತು ಮುಖಭಂಗ ಅನುಭವಿಸಿತು. ಟೀಂ ಇಂಡಿಯಾ ಸೂಪರ್ ಸಿಕ್ಸ್ ಹಂತದಿಂದ ಹೊರಬಿತ್ತು. ನ್ಯೂಜಿಲೆಂಡ್-ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ - ಸೌತ್ ಆಫ್ರಿಕಾ ಸೆಮಿಫೈನಲ್ ಹಂತದಲ್ಲಿ ಹೋರಾಡಿದವು.

ಪ್ರಶಸ್ತಿ ಸುತ್ತಿಗೆ ಪಾಕಿಸ್ತಾನ ಹಾಗೂ ಆಸ್ಟ್ರೇಲಿಯಾ ಲಗ್ಗೆ ಇಟ್ಟವು . ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ದಾಳಿಗೆ ನಲುಗಿದ ಪಾಕಿಸ್ತಾನ 39 ಓವರ್‌ಗಳಲ್ಲಿ 132 ರನ್‌ಗೆ ಆಲೌಟ್ ಆಯಿತು. ಸುಲಭ ಗುರಿಯನ್ನು ಆಸ್ಟ್ರೇಲಿಯಾ 20.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಸ್ಟೀವ್ ವ್ಹಾ ನಾಯಕತ್ವದ ಆಸ್ಟ್ರೇಲಿಯಾ 8 ವಿಕೆಟ್ ಭರ್ಜರಿ ಗೆಲುವು ಸಾಧಿಸಿ, ವಿಶ್ವಕಪ್ ಗೆದ್ದುಕೊಂಡಿತು. ಇಲ್ಲಿಂದ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಅಧಿಪತ್ಯ ಆರಂಭಗೊಂಡಿತು.

  • champions:  australia
  • runners-up:  india
  • most runs:  Sachin Tendulkar (673)
  • most wickets:  Chaminda Vaas (23)
2003

1983ರ ವಿಶ್ವಕಪ್ ಬಳಿಕ 2003ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅಧಿಪತ್ಯ ಸಾಧಿಸಿತು. ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾ ಅತ್ಯುತ್ತಮ ಪ್ರದರ್ಶನದ ಮೂಲಕ ಫೈನಲ್ ಪ್ರವೇಶಿಸಿತ್ತು. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ, ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಭಾರತ ಟಾಸ್ ಗೆದ್ದಿದ್ದೇ ಬಂತು, ಬ್ಯಾಟಿಂಗ್ ಇಳಿದ ಆಸ್ಟ್ರೇಲಿಯಾ ಅಬ್ಬರಿಸಿತು. ಆ್ಯಡಂ ಗಿಲ್‌ಕ್ರಿಸ್ಟ್ ಹಾಗೂ ಮಾಥ್ಯೂ ಹೇಡನ್ ಮೊದಲ ವಿಕೆಟ್‌ಗೆ 105 ರನ್ ಜೊತೆಯಾಟ ನೀಡಿದರು. ರಿಕಿ ಪಾಂಟಿಂಗ್ ಹಾಗೂ ಡೆಮಿನ್ ಮಾರ್ಟಿನ್ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ತೀವ್ರ ನಿರಾಸೆ ಮೂಡಿಸಿತು. ಪಾಂಟಿಂಗ್ 121 ಎಸೆತದಲ್ಲಿ ಅಜೇಯ 140 ರನ್ ಸಿಡಿಸಿದರೆ, ಮಾರ್ಟಿನ್ 84 ಎಸೆತದಲ್ಲಿ ಅಜೇಯ 88 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ 2 ವಿಕೆಟ್ ನಷ್ಟಕ್ಕೆ 359 ರನ್ ಸಿಡಿಸಿತು.

360 ರನ್‌ಗಳ ಬೃಹತ್ ಟಾರ್ಗೆಟ್ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತು. ಮೊದಲ ಓವರ್‌ನಲ್ಲೇ ಸಚಿನ್ ತೆಂಡೂಲ್ಕರ್ ವಿಕೆಟ್ ಪತನ ಟೀಂ ಇಂಡಿಯಾವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿತು. ವಿರೇಂದ್ರ ಸೆಹ್ವಾಗ್ ಹೋರಾಟ ಭಾರತೀಯರಲ್ಲಿ ಕೊಂಚ ಸಮಾಧಾನ ತಂದಿತು. ಸೆಹ್ವಾಗ್ 81 ಎಸೆತದಲ್ಲಿ 82 ರನ್ ಸಿಡಿಸಿದರೆ, ರಾಹುಲ್ ದ್ರಾವಿಡ್ 47 ರನ್‌ಗಳ ಕಾಣಿಕೆ ನೀಡಿದರು. ಆಸೀಸ್ ದಾಳಿಗೆ ತತ್ತರಿಸಿದ ಭಾರತ 39.2 ಓವರ್‌ಗಳಲ್ಲಿ 234 ರನ್‌ಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ 125 ರನ್ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಸತತ 2ನೇ ಬಾರಿಗೆ ಹಾಗೂ ಒಟ್ಟು 3ನೇ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.

2003ರ ವಿಶ್ವಕಪ್ ಟೂರ್ನಿಯಲ್ಲಿ 14 ತಂಡಗಳು ಪಾಲ್ಗೊಂಡಿದ್ದವು. ಒಟ್ಟು 54 ಪಂದ್ಯಗಳನ್ನು ಆಯೋಜಿಸಲಾಗಿತ್ತು. ಸಚಿನ್ ತೆಂಡೂಲ್ಕರ್ 673 ರನ್ ಸಿಡಿಸಿ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರೆ, ಶ್ರೀಲಂಕಾದ ಚಮಿಂಡ ವಾಸ್ 23 ವಿಕೆಟ್‌ಗಳೊಂದಿಗೆ ಗರಿಷ್ಠ ವಿಕೆಟ್ ಪಡೆದ ಬೌಲರ್ ಅನ್ನೋ ದಾಖಲೆ ಬರೆದರು. ಫೆಬ್ರವರಿ 9 ರಿಂದ ಮಾರ್ಚ್ 23ರ ವರೆಗೆ ನಡೆದ ಈ ವಿಶ್ವಕಪ್ ಟೂರ್ನಿಯನ್ನು ಸೌತ್ ಆಫ್ರಿಕಾ, ಜಿಂಬಾಬ್ವೆ ಹಾಗೂ ಕೀನ್ಯಾ ಆತಿಥ್ಯವಹಿದ್ದವು.

  • champions:  australia
  • runners-up:  sri lanka
  • most runs:  Mathew Hayden ‍(659)
  • most wickets:  Glenn Mcgrath (26)
2007

2007ರ ವಿಶ್ವಕಪ್ ಟೂರ್ನಿಯನ್ನು ಭಾರತೀಯರು ನೆನೆಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಕನ್ನಡಿಗ ರಾಹುಲ್ ದ್ರಾವಿಡ್ ನೇತೃತ್ವದ ಟೀಂ ಇಂಡಿಯಾ ಅನುಭವಿ ಹಾಗೂ ಯುವ ಆಟಗಾರರನ್ನೊಳಗೊಂಡ ತಂಡವನ್ನು ಕಣಕ್ಕಿಳಿಸಿತ್ತು. ಆದರೆ ಬಾಂಗ್ಲಾದೇಶ ವಿರುದ್ಧ ಸೋತ ಟೀಂ ಇಂಡಿಯಾ ಲೀಗ್ ಹಂತದಿಂದಲೇ ಹೊರಬಿತ್ತು. ಟೀಂ ಇಂಡಿಯಾ ಹೀನಾಯ ಸೋಲು ಹಾಗೂ ಕಳಪೆ ಪ್ರದರ್ಶನ ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿತ್ತು. ಕ್ರಿಕೆಟಿಗರ ಮನೆ ಮೇಲೆ ಕಲ್ಲು ತೂರಾಟಗಳು ನಡೆದವು. ಇತ್ತ ಪಾಕಿಸ್ತಾನ ಕೂಡ ಲೀಗ್ ಹಂತದಿಂದಲೇ ಹೊರಬಿತ್ತು. ಪಾಕ್ ಕೋಚ್ ಬಾಬ್ ವೂಲ್ಮರ್ ಅನುಮಾನಾಸ್ಪದ ಸಾವು ತಂಡಕ್ಕೆ ಹೊಡೆತ ನೀಡಿತು. ವೆಸ್ಟ್ ಇಂಡೀಸ್ ವಿಶ್ವಕಪ್ ಟೂರ್ನಿಗೆ ಆತಿಥ್ಯವಹಿಸಿದ್ದರೂ ಗ್ರೂಪ್ 8 ಹಂತದಿಂದ ಹೊರಬಿದ್ದಿತ್ತು.

ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಫೈನಲ್ ಪ್ರವೇಶಿಸಿದ್ದವು. ಮಳೆಯಿಂದಾಗಿ ಪಂದ್ಯವನ್ನು 38 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಆಡ್ಯಂ ಗಿಲ್‌ಗ್ರಿಸ್ಟ್ ಭರ್ಜರಿ ಶತಕದಿಂದ ಆಸ್ಟ್ರೇಲಿಯಾ 4 ವಿಕೆಟ್ ನಷ್ಟಕ್ಕೆ 281 ರನ್ ಸಿಡಿಸಿತು. ಲಂಕಾಗೆ 36 ಓವರ್‌ಗಳಲ್ಲಿ 269 ರನ್ ಟಾರ್ಗೆಟ್ ನೀಡಲಾಯಿತು. ಸನತ್ ಜಯಸೂರ್ಯ ಹಾಗೂ ಕುಮಾರ್ ಸಂಗಕ್ಕಾರ ಹೊರತು ಪಡಿಸಿದರೆ ಲಂಕಾ ಬ್ಯಾಟ್ಸ್‌ಮನ್‌‌ಗಳು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. ಹೀಗಾಗಿ ನಿಗದಿತ 36 ಓವರ್‌ಗಳಲ್ಲಿ ಶ್ರೀಲಂಕಾ 8 ವಿಕೆಟ್ ಕಳೆದುಕೊಂಡು 215 ರನ್ ಸಿಡಿಸಿತು. ಅಂತಿಮ 3 ಓವರ್ ಮಂದ ಬೆಳಕಿನಲ್ಲೇ ಆಡಲಾಯಿತು. ಮಂದ ಬೆಳಕಿನ ಕಾರಣ ಪಂದ್ಯ ಮುಂದಿನ ದಿನಕ್ಕೆ ಮುಂದೂಡಲು ಅಂಪೈರ್ ನಿರ್ಧರಿಸಿದ್ದರು. ಆದರೆ ಲಂಕಾ ನಾಯಕ ಮಹೇಲಾ ಜಯವರ್ಧನೆ ಇದಕ್ಕೆ ಒಪ್ಪಲಿಲ್ಲ. ಮಂದಬೆಳಕಿನಲ್ಲೇ ಉಭಯ ತಂಡಗಳು ಆಡಿದವು. ಡಕ್ವರ್ತ್ ನಿಯಮದ ಪ್ರಕಾರ ಆಸ್ಟ್ರೇಲಿಯಾ 53 ರನ್‌ಗಳ ಗೆಲುವು ಸಾಧಿಸಿತು.

  • champions:  india
  • runners-up:  sri lanka
  • most runs:  Tillakaratne Dilshan (500)
  • most wickets:  Zaheer Khan, Shahid Afridi (21)
2011

2011ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಹೊಸ ದಾಖಲೆ ಬರೆಯಿತು. ಇದೇ ಮೊದಲ ಬಾರಿಗೆ ಆತಿಥ್ಯ ವಹಿಸಿದ ದೇಶ ವಿಶ್ವಕಪ್ ಗೆದ್ದುಕೊಂಡಿತು. ಎಂ.ಎಸ್.ಧೋನಿ ನಾಯಕತ್ವದ ಟೀಂ ಇಂಡಿಯಾ ಲೀಗ್ ಹಾಗೂ ಸೆಮಿಫೈನಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನದ ಮೂಲಕ ಫೈನಲ್ ತಲುಪಿತ್ತು. ಇತ್ತ ಶ್ರೀಲಂಕಾ ಫೈನಲ್‌ನಲ್ಲಿ ಭಾರತಕ್ಕೆ ಎದುರಾಳಿಯಾಗಿ ಕಣಕ್ಕಿಳಿದಿತ್ತು. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯ ಕ್ರಿಕೆಟ್ ಇತಿಹಾಸದ ಸುವರ್ಣಾಕ್ಷರಗಳಲ್ಲಿ ದಾಖಲಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡಕ್ಕೆ ಮಹೇಲಾ ಜಯವರ್ದನೆ ಶತಕ ಸಿಡಿಸಿ ನೆರವಾದರು. ನಾಯಕ ಕುಮಾರ ಸಂಗಕ್ಕಾರ 48 ಹಾಗೂ ನುವಾನ್ ಕುಲಸೇಖರ ಸಿಡಿಸಿದ 32 ರನ್‌ಗಳ ನೆರವಿನಿಂದ ಶ್ರೀಲಂಕಾ 6 ವಿಕೆಟ್ ನಷ್ಟಕ್ಕೆ 274 ರನ್ ಸಿಡಿಸಿತು. 275 ರನ್‌ಗಳ ಟಾರ್ಗೆಟ್ ಪಡೆದ ಟೀಂ ಇಂಡಿಯಾ ಮೊದಲ ಓವರ್‌ನಲ್ಲೇ ವಿರೇಂದ್ರ ಸೆಹ್ವಾಗ್ ವಿಕೆಟ್ ಕಳೆದುಕೊಂಡಿತು. ಸಚಿನ್ ತೆಂಡುಲ್ಕರ್ 18 ರನ್ ಸಿಡಿಸಿ ಔಟಾದರು. ಅಷ್ಟರಲ್ಲಾಗಲೇ ಟೀಂ ಇಂಡಿಯಾ ಆತಂಕ ಹೆಚ್ಚಾಯಿತು. ಆದರೆ ಗೌತಮ್ ಗಂಭೀರ್ ಅದ್ಭುತ ಹೋರಾಟ ಟೀಂ ಇಂಡಿಯಾಗೆ ಚೇತರಿಕೆ ನೀಡಿತು. ಇತ್ತ ವಿರಾಟ್ ಕೊಹ್ಲಿ 35 ರನ್ ಸಿಡಿಸಿ ಔಟಾದರು. ಯುವರಾಜ್ ಸಿಂಗ್ ಬದಲು ಬ್ಯಾಟಿಂಗ್ ಆರ್ಡರ್‌ನಲ್ಲಿ ಬಡ್ತಿ ಪಡೆದ ಧೋನಿ ಕ್ರೀಸ್‌ಗಿಳಿದರು. ಗೌತಮ್ ಗಂಭೀರ್ 97 ರನ್ ಸಿಡಿಸಿ ಭಾರತದ ಗೆಲುವನ್ನು ಸುಗಮಗೊಳಿಸಿದರು. ಧೋನಿ ಅಮೋಘ ಇನ್ನಿಂಗ್ಸ್ ಟೀಂ ಇಂಡಿಯಾ ಗೆಲುವನ್ನು ಖಚಿತ ಪಡಿಸಿತು. ಧೋನಿ ಸಿಕ್ಸರ್ ಸಿಡಿಸೋ ಮೂಲಕ ಭಾರತಕ್ಕೆ 6 ವಿಕೆಟ್ ಗೆಲುವು ತಂದುಕೊಟ್ಟರು. ಧೋನಿ ಅಜೇಯ 91 ಹಾಗೂ ಯುವರಾಜ್ ಸಿಂಗ್ ಅಜೇಯ 21 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 48.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 2ನೇ ಬಾರಿಗೆ ಭಾರತ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು.

ಲಂಕಾದ ತಿಲಕರತ್ನೆ ದಿಲ್ಶ್ಯಾನ್ 500 ರನ್ ಸಿಡಿಸುವ ಮೂಲಕ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್‌ಮನ್ ಎನಿಸಿಕೊಂಡರೆ, ಟೀಂ ಇಂಡಿಯಾದ ಜಹೀರ್ ಖಾನ್ ಹಾಗೂ ಪಾಕಿಸ್ತಾನದ ಶಾಹಿದ್ ಅಫ್ರಿದಿ 21 ವಿಕೆಟ್ ಕಬಳಿಸುವ ಮೂಲಕ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರಸ್ಥಾನ ಹಂಚಿಕೊಂಡರು. ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ವಿಶ್ವಕಪ್ ಟೂರ್ನಿಗೆ ಆತಿಥ್ಯ ವಹಿಸಿದ್ದವು. ಪಾಕಿಸ್ತಾನಕ್ಕೂ ಆತಿಥ್ಯ ನೀಡಲಾಗಿತ್ತು. ಆದರೆ 2009ರಲ್ಲಿ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲಿನ ಭಯೋತ್ವಾದಕ ದಾಳಿಯಿಂದಾಗಿ ಪಾಕಿಸ್ತಾನದ ಆತಿಥ್ಯವನ್ನು ಐಸಿಸಿ ರದ್ದುಗೊಳಿಸಿತ್ತು.

  • champions:  australia
  • runners-up:  new zealand
  • most runs:  Martin Guptill (547)
  • most wickets:  Mitchell Starc, Trent Boult (22)
2015

2015ರ ವಿಶ್ವಕಪ್ ಟೂರ್ನಿಯಲ್ಲೂ ಎಂ.ಎಸ್.ಧೋನಿ ನಾಯಕತ್ವದ ಟೀಂ ಇಂಡಿಯಾ ಪ್ರಶಸ್ತಿ ಗೆಲ್ಲೋ ನೆಚ್ಚಿನ ತಂಡವಾಗಿತ್ತು. ಹಾಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಕಣಕ್ಕಿಳಿದ ಟೀಂ ಇಂಡಿಯಾ ಲೀಗ್ ಹಂತದಲ್ಲಿ ಅದ್ಭುತ ಪ್ರದರ್ಶನ ನೀಡಿ ಸೆಮಿಫೈನಲ್ ಪ್ರವೇಶಿಸಿತ್ತು. ಸೆಮೀಸ್ ಹೋರಾಟದಲ್ಲಿ ಸ್ಟೀವ್ ಸ್ಮಿತ್ ಶತಕ ಹಾಗೂ ಆ್ಯರೋನ್ ಫಿಂಚ್ 81 ರನ್‌ಗಳ ನೆರವಿನಿಂದ ಆಸ್ಟ್ರೇಲಿಯಾ 7 ವಿಕೆಟ್ ನಷ್ಟಕ್ಕೆ 328 ರನ್ ಸಿಡಿಸಿತು. ಟೀಂ ಇಂಡಿಯಾ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು. ನಾಯಕ ಎಂ.ಎಸ್.ಧೋನಿ 65 ರನ್ ಸಿಡಿಸಿದರು. 46.5 ಓವರ್‌ಗಳಲ್ಲಿ ಟೀಂ ಇಂಡಿಯಾ 233 ರನ್ ಸಿಡಿಸಿ ಆಲೌಟ್ ಆಯಿತು. 95 ರನ್ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿತು.

ಫೈನಲ್ ಹೋರಾಟದಲ್ಲಿ ವಿಶ್ವಕಪ್ ಆತಿಥ್ಯ ತಂಡಗಳಾದ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಚೊಚ್ಚಲ ವಿಶ್ವಕಪ್ ಟ್ರೋಫಿ ಗೆಲ್ಲೋ ವಿಶ್ವಾಸದಲ್ಲಿದ್ದ ನ್ಯೂಜಿಲೆಂಡ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಗ್ರ್ಯಾಂಟ್ ಎಲಿಯಟ್ ಸಿಡಿಸಿದ 83 ರನ್ ಹೊರತು ಪಡಿಸಿದರೆ ಇತರ ಕಿವೀಸ್ ಬ್ಯಾಟ್ಸ್‌ಮನ್‌‌ಗಳು ಅಬ್ಬರಿಸಲಿಲ್ಲ. ಹೀಗಾಗಿ ನ್ಯೂಜಿಲೆಂಡ್ 45 ಓವರ್‌ಗಳಲ್ಲಿ 183 ರನ್‌ಗಳಿಗೆ ಆಲೌಟ್ ಆಯಿತು. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಸುಲಭ ಗುರಿ ಪಡೆದ ಆಸ್ಟ್ರೇಲಿಯಾಗೆ ಡೇವಿಡ್ ವಾರ್ನರ್ 45, ನಾಯಕ ಮೈಕಲ್ ಕ್ಲಾರ್ಕ್ 74 ಹಾಗೂ ಸ್ಟೀವ್ ಸ್ಮಿತ್ ಅಜೇಯ 56 ರನ್ ಸಿಡಿಸುವ ಮೂಲಕ 7 ವಿಕೆಟ್ ಗೆಲುವು ತಂದುಕೊಟ್ಟರು. ಈ ಮೂಲಕ ಆಸೀಸ್ 5ನೇ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದುಕೊಂಡಿತು. ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗಪ್ಟಿಲ್ 547 ರನ್ ಸಿಡಿಸೋ ಮೂಲಕ ಗರಿಷ್ಠ ರನ್ ಸಿಡಿಸಿದ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರೆದರು. ಆಸ್ಟ್ರೇಲಿಯಾದ ಮೆಚೆಲ್ ಸ್ಟಾರ್ಕ್ ಹಾಗೂ ನ್ಯೂಜಿಲೆಂಡ್‌ನ ಟ್ರೆಂಟ್ ಬೋಲ್ಟ್ 22 ವಿಕೆಟ್ ಕಬಳಿಸೋ ಮೂಲಕ ಗರಿಷ್ಠ ವಿಕೆಟ್ ಕಬಳಿಸಿದ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಹಂಚಿಕೊಂಡರು.