ಲಂಡನ್(ಜು.21): ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯ ಅದೆಷ್ಟು ರೋಚಕವಾಗಿತ್ತೋ, ಅಷ್ಟೇ ವಿವಾದಕ್ಕೂ ಕಾರಣವಾಗಿದೆ. ಅಂಪೈರ್ ತೀರ್ಪು, ಐಸಿಸಿ ನಿಯಮದ ವಿರುದ್ದ ಆಕ್ರೋಶಗಳು ವ್ಯಕ್ತವಾಗಿತ್ತು. ಫೈನಲ್ ಪಂದ್ಯದಲ್ಲಿ ಓವರ್ ಥ್ರೋಗೆ ನಿಯಮ ಬಾಹಿರವಾಗಿ ಹೆಚ್ಚುವರಿ ರನ್ ನೀಡಿದ ಅಂಪೈರ್ ಕುಮಾರ್ ಧರ್ಮಸೇನಾ ವಿರುದ್ಧ ಟೀಕೆ ಕೇಳಿಬಂದಿತ್ತು. ಇದೀಗ ಓವರ್ ಥ್ರೋ ಕುರಿತು ಕುಮಾರ ಧರ್ಮಸೇನಾ ಮೌನ ಮುರಿದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್‌ ಓವರ್‌ ಥ್ರೋ ವಿವಾದ: ವಿಲಿಯಮ್ಸನ್‌ಗೆ ಗೊತ್ತಿರ್ಲಿಲ್ಲ ನಿಯಮ!

ಫೈನಲ್ ಪಂದ್ಯದ ಅಂತಿಮ ಹಂತದಲ್ಲಿ ಬೆನ್ ಸ್ಟೋಕ್ಸ್ 2ನೇ ರನ್ ಪೂರೈಸೋ ಮೊದಲೇ ಓವರ್ ಥ್ರೋ ಬ್ಯಾಟ್‌ಗೆ ತಾಗಿ ಬೌಂಡರಿ ಗೆರೆ ದಾಟಿತ್ತು. ಹೀಗಾಗಿ ಅಂಪೈರ್ 2+4 ಓಟ್ಟು 6 ರನ್ ನೀಡಲಾಗಿತ್ತು. ಆದರೆ ನಿಯಮದ ಪ್ರಕಾರ ಸ್ಟೋಕ್ಸ್ 2 ರನ್ ಪೂರೈಸೋ ಮುನ್ನವೇ ಓವರ್ ಥ್ರೋ ಬ್ಯಾಟ್‌ಗೆ ತಾಗಿ ಬೌಂಡರಿ ಹೋಗಿತ್ತು. ಹೀಗಾಗಿ 1+4 ಓಟ್ಟು 5 ರನ್ ಮಾತ್ರ ನೀಡಬೇಕಿತ್ತು. ಈ ಕುರಿತು ಅಂಪೈರ್ ಕುಮಾರ ಧರ್ಮಸೇನಾ ತಪ್ಪೊಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

ಟಿವಿಯಲ್ಲಿ ರಿಪ್ಲೇ ನೋಡುವಾಗಿ ತಪ್ಪು ಸ್ಪಷ್ಟವಾಗಿದೆ. ತಪ್ಪು ತೀರ್ಪು ನೀಡಿರುವುದು ನೋವು ತಂದಿದೆ. ನಾನು ಲೆಗ್ ಅಂಪೈರ್ ಜೊತೆ ಚರ್ಚಿಸಿ 6 ರನ್ ನೀಡಿದ್ದೆ. ಇದು ತಪ್ಪಾಗಿದೆ ಎಂದು ಧರ್ಮಸೇನಾ ಹೇಳಿದ್ದಾರೆ. ಧರ್ಮಸೇನಾ ನೀಡಿದ ಹೆಚ್ಚುವರಿ ರನ್‌ನಿಂದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತ್ತು. ಬಳಿಕ ಸೂಪರ್ ಓವರ್ ಕೂಡ ಟೈನಲ್ಲಿ ಅಂತ್ಯಗೊಂಡ ಕಾರಣ ಗರಿಷ್ಠ ಬೌಂಡರಿ ಆಧಾರದಲ್ಲಿ ಇಂಗ್ಲೆಂಡ್‌ಗೆ ಗೆಲುವು ಘೋಷಿಸಲಾಯಿತು.