ಮುಂಬೈ(ಜೂ.15): ವಿಶ್ವಕಪ್ ಟೂರ್ನಿಯಲ್ಲಿನ ಅತ್ಯಂತ ರೋಚಕ ಪಂದ್ಯ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೋರಾಟ. ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾದು ಕುಳಿತಿದೆ. ಟಿಕೆಟ್‌ಗಳು ಈ ಹಿಂದೆಯೇ ಸೋಲ್ಡ್ ಔಟ್ ಆಗಿದೆ. ಹೈ ವೋಲ್ಟೇಜ್ ಪಂದ್ಯ ಐಸಿಸಿಗೆ ಭಾರಿ ಲಾಭ ತಂದುಕೊಡಲಿದೆ. ಇನ್ನು ಪಂದ್ಯವನ್ನು ನೇರಪ್ರಸಾರ ಮಾಡೋ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಇಂಡೋ-ಪಾಕ್ ಪಂದ್ಯ ಒಂದರಿಂದಲೇ ಬರೋಬ್ಬರಿ 137 ಕೋಟಿ ರೂಪಾಯಿ ಸಂಪಾದಿಸಲಿದೆ.

ಜೂನ್ 16 ರಂದು ಮ್ಯಾಂಚೆಸ್ಟರ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಈ ಪಂದ್ಯದ ನೇರಪ್ರಸಾರದದ ನಡುವಿನ ಬ್ರೇಕ್, ಓವರ್ ನಡುವಿನ ಬ್ರೇಕ್, ಇನ್ನಿಂಗ್ಸ್ ಬ್ರೇಕ್‌ಗಳಲ್ಲಿ ವಾಹಿನಿ, ಜಾಹೀರಾತು ಪ್ರಸಾರ ಮಾಡಲಿದೆ. ಇಲ್ಲಿ ಜಾಹೀರಾತುದಾರರು ಪ್ರತಿ ಸೆಕೆಂಡಿಗೆ 2.5 ಲಕ್ಷ ರೂಪಾಯಿ ವಾಹಿನಿಗೆ ನೀಡಬೇಕು. ಉದಾಹರಣೆಗೆ 2 ನಿಮಿಷದ ಜಾಹೀರಾತು ಪ್ರಸಾರ ಮಾಡಲು ಜಾಹೀರಾತುದಾರರು 5 ಲಕ್ಷ ರೂಪಾಯಿ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ನೀಡಬೇಕು.

ನೇರ ಪ್ರಸಾರ ಮಾಡೋ ವಾಹಿನಿಗೆ 50 ಓವರ್ ಪಂದ್ಯಗಳಲ್ಲಿ ಒಟ್ಟು 5,500 ಸೆಕೆಂಡು ಬ್ರೇಕ್ ಸಿಗಲಿದೆ. ಪ್ರತಿ ಸೆಕೆಂಡು ಜಾಹೀರಾತು ಬೆಲೆ 2.5 ಲಕ್ಷ ರೂಪಾಯಿ. ಹೀಗಾಗಿ ಒಟ್ಟು 137.5 ಕೋಟಿ ರೂಪಾಯಿ ಕೇವಲ ಜಾಹೀರಾತಿನಿಂದ ವಾಹಿನಿ ಸಂಪಾದಿಸಲಿದೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿಯಲ್ಲಿ ಇತರ ಪಂದ್ಯಗಳ ವೇಳೆ ಜಾಹೀರಾತು ನೀಡಲು ಪ್ರತಿ ಸೆಕೆಂಡಿಗೆ 1.6 ರಿಂದ 1.8 ಲಕ್ಷ ರೂಪಾಯಿ. ಆದರೆ ಇಂಡೋ-ಪಾಕ್ ಪಂದ್ಯಕ್ಕೆ ಕನಿಷ್ಠ 2.5 ಲಕ್ಷ ರೂಪಾಯಿ ಪಾವತಿಸಬೇಕು.

ಸದ್ಯ ಬಹುತೇಕ ಸ್ಲಾಟ್‌ಗಳಲ್ಲಿ ಪ್ರತಿಷ್ಠಿತ 40 ಕಂಪನಿಗಳು ಜಾಹೀರಾತು ಪ್ರಸಾರ ಮಾಡಲು 6 ತಿಂಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿವೆ. ಇದೀಗ ಕೆಲ ಸ್ಲಾಟ್‌ಗಳಲ್ಲಿ ಜಾಹೀರಾತು ಪ್ರಸಾರಕ್ಕೆ ಅವಕಾಶವಿದೆ. ಆದರೆ ಹಣ ಮಾತ್ರ ದುಪ್ಪಟ್ಟು ಪಾವತಿಸಬೇಕು. ಇಂಡೋ-ಪಾಕ್ ಪಂದ್ಯದ ಜಾಹೀರಾತು ಬೆಲೆಗಿಂತ ಶೇಕಡಾ 50 ರಷ್ಟು ಹೆಚ್ಚು ಪಾವತಿಸಿದರೆ ಅಂತಿಮ ಹಂತದಲ್ಲಿ ಸ್ಟಾರ್ ವಾಹಿನಿ ಉಳಿಸಿಕೊಂಡಿರುವ ಸ್ಲಾಟ್ ಸಿಗಲಿದೆ. ಅಂದರೆ ಅಂತಿಮ ಹಂತದಲ್ಲಿ ಕಂಪನಿಗಳು ಜಾಹೀರಾತು ಪ್ರಸಾರ ಮಾಡಲು ಮುಂದಾದಲ್ಲಿ ಪ್ರತಿ ಸೆಕೆಂಡಿಗೆ 3.75 ಲಕ್ಷ ರೂಪಾಯಿ ನೀಡಬೇಕಿದೆ.