ಯುಕೆಯಲ್ಲಿನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅಡಿಯಲ್ಲಿ ಮೂರು ವರ್ಷ ಕಾಯುವ ಬದಲು, ಬ್ರಿಟಿಷ್ ಪ್ರಜೆ ಜೀನ್ ಪಾಲ್ ಭಾರತಕ್ಕೆ ಬಂದು ಕಡಿಮೆ ವೆಚ್ಚದಲ್ಲಿ ಯಶಸ್ವಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು. ಈ ಘಟನೆಯು ಭಾರತದ ವೈದ್ಯಕೀಯ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ವಿದೇಶಿಯರಿಗೆ ಕೈಗೆಟುಕುವ ದರದಲ್ಲಿ ಸಿಗುತ್ತಿರುವ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ಎತ್ತಿ ತೋರಿಸುತ್ತದೆ.
ಇತ್ತೀಚಿಗೆ ಬ್ರಿಟಿಷ್ ಪ್ರಜೆ ಜೀನ್ ಪಾಲ್ ಅವರ ಕಥೆಯು ವಿದೇಶದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ರೋಗಿಗಳು ತಮ್ಮ ತಾಯ್ನಾಡಿನ ಆರೋಗ್ಯ ರಕ್ಷಣಾ ವ್ಯವಸ್ಥೆಯ ಹಿನ್ನಡೆಗಳನ್ನು ಹೇಗೆಎದುರಿಸುತ್ತಿದ್ದಾರೆ ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಅವರು ಯುಕೆಯಂತಹ ದೂರದ ಊರಿನಿಂದ ಭಾರತಕ್ಕೆ ಬಂದು ಇಲ್ಲಿನ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಕಡಿಮೆ ವೆಚ್ಚದಲ್ಲಿ ಪಡೆದು ಉತ್ತಮ ಆರೋಗ್ಯದ ಮೂಲಕ ಹಿಂತಿರುಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ವಿದೇಶಿಯರು ಭಾರತಕ್ಕೆ ವೈದ್ಯಕೀಯ ಚಿಕಿತ್ಸೆಗೆ ಬರುತ್ತಿರುವುದು ಹೆಚ್ಚುತ್ತಿದೆ.
ಬ್ರಿಟಿಷ್ ಪ್ರಜೆಯ ಭಾರತದ ವೈದ್ಯಕೀಯ ಪ್ರಯಾಣ
ಬ್ರಿಟನ್‌ನ ರಾಷ್ಟ್ರೀಯ ಆರೋಗ್ಯ ಸೇವೆ (NHS) ಅಡಿಯಲ್ಲಿ ಜೀನ್ ಪಾಲ್ ಅವರಿಗೆ ಮೂರು ವರ್ಷಗಳ ಕಾಲ ಕಾಯುವ ಅನಿವಾರ್ಯತೆ ಎದುರಾಯಿತು. ಇದರಿಂದಾಗಿ ಅವರು 'ತಮ್ಮ ಸಾಕುನಾಯಿಗಳನ್ನು ವಾಯುವಿಹಾರಕ್ಕೆ ಕರೆದೊಯ್ಯುವುದು ಹಾಗೂ ಪತ್ನಿಯ ಕೈಹಿಡಿದು ಕಾಲುವೆಯ ದಂಡೆಯಲ್ಲಿ ಸಂಜೆ ವಿಹರಿಸುವುದು' ಮುಂತಾದ ಜೀವನದ ಸಣ್ಣಪುಟ್ಟ ಸಂತೋಷಗಳಿಂದ ವಂಚಿತರಾಗಬೇಕಾಯಿತು. ಯುಕೆ ಮತ್ತು ಭಾರತ ಮೂಲದ 'ದಿ ಮೆಡಿಕಲ್ ಟ್ರಾವೆಲ್ ಕಂಪನಿ' ಆಗಸ್ಟ್ 10 ರಂದು ತನ್ನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಈ ವಿಷಯವನ್ನು ಹಂಚಿಕೊಂಡಿದೆ.
ಪೋಸ್ಟ್‌ನ ಪ್ರಕಾರ, ನಿರಂತರ ಕೀಲು ನೋವಿನಿಂದ ಬಳಲುತ್ತಿದ್ದ ಅವರು ಖಾಸಗಿಯಾಗಿ ಇಮೇಜಿಂಗ್ ಸ್ಕ್ಯಾನ್ ಮಾಡಿಸಿಕೊಂಡಾಗ ಅವರ ವೈದ್ಯಕೀಯ ಪ್ರಯಾಣ ಪ್ರಾರಂಭವಾಯಿತು. ಈ ಸ್ಕ್ಯಾನ್ ವರದಿಗಳನ್ನು ಸಾಮಾನ್ಯ ವೈದ್ಯರಿಗೆ ತೋರಿಸಿದಾಗ, ಅವರನ್ನು ಮೂಳೆಚಿಕಿತ್ಸಾ ವಿಭಾಗಕ್ಕೆ ಸಜೆಸ್ಟ್ ಮಾಡಲಾಯ್ತು. ತಜ್ಞ ವೈದ್ಯರು ಪರಿಶೀಲಿಸಿ, ಜೀನ್ ಅವರ ಎರಡೂ ಮೊಣಕಾಲುಗಳ ಸಂಪೂರ್ಣ ಬದಲಿ ಶಸ್ತ್ರಚಿಕಿತ್ಸೆ ಅತ್ಯಗತ್ಯವೆಂದು ದೃಢಪಡಿಸಿದರು. ಆದರೆ, ಸ್ಥಳೀಯ NHS ನಿಯಮಾವಳಿಗಳ ಪ್ರಕಾರ ಎರಡೂ ಮೊಣಕಾಲುಗಳಿಗೆ ಏಕಕಾಲದಲ್ಲಿ ಶಸ್ತ್ರಚಿಕಿತ್ಸೆ ಮಾಡಲು ಅವಕಾಶವಿರಲಿಲ್ಲ ಮತ್ತು ಇದಕ್ಕೆ ಹಲವು ವರ್ಷ ಕಾಯಬೇಕಾದ ಪರಿಸ್ಥಿತಿಯಿತ್ತು.
ಇಷ್ಟೊಂದು ಸುದಿರ್ಘ ಕಾಲ ಕಾಯಲು ಇಷ್ಟವಿಲ್ಲದ ಜೀನ್, 'ದಿ ಮೆಡಿಕಲ್ ಟ್ರಾವೆಲ್ ಕಂಪನಿ'ಯನ್ನು ಸಂಪರ್ಕಿಸಿದರು. ಅವರು ಭಾರತಕ್ಕೆ ವಿಮಾನ ಹತ್ತುವ ಮುನ್ನವೇ, ಸಂಸ್ಥೆಯ ಯುಕೆ ವೈದ್ಯಕೀಯ ನಿರ್ದೇಶಕರು ಹಾಗೂ ಆಹಾರ ತಜ್ಞರು ಅವರಿಗೆ ಅಗತ್ಯ ಶಾರೀರಿಕ ಪೂರ್ವಸಿದ್ಧತೆಗಳ ಮಾರ್ಗದರ್ಶನ ನೀಡಿದರು. ಶಸ್ತ್ರಚಿಕಿತ್ಸೆಗೆ ಸೂಕ್ತ ದೈಹಿಕ ಅರ್ಹತೆ ಪಡೆಯಲು ಜೀನ್ ಕೆಲವೇ ತಿಂಗಳುಗಳಲ್ಲಿ ಸುಮಾರು 19 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡರು. ಭಾರತಕ್ಕೆ ಬಂದ ತಕ್ಷಣ ಅವರನ್ನು ಮ್ಯಾಕ್ಸ್ ಹೆಲ್ತ್‌ಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅಲ್ಲಿನ ವೈದ್ಯರು ಯಶಸ್ವಿಯಾಗಿ ಎರಡೂ ಮೊಣಕಾಲುಗಳ ಶಸ್ತ್ರಚಿಕಿತ್ಸೆ ನೆರವೇರಿಸಿದರು.
ವೆಚ್ಚ ಮತ್ತು ಸೌಲಭ್ಯಗಳ ಹೋಲಿಕೆ
ಸದರಿ ಪೋಸ್ಟ್ ಎರಡೂ ದೇಶಗಳ ಆರೋಗ್ಯ ವ್ಯವಸ್ಥೆಯ ನಡುವಿನ ಆರ್ಥಿಕ ಹಾಗೂ ಕಾರ್ಯಾಚರಣೆಯ ಗಮನಾರ್ಹ ವ್ಯತ್ಯಾಸವನ್ನು ತೋರಿಸಿದೆ. ಯುಕೆಯಲ್ಲಿ ಖಾಸಗಿಯಾಗಿ ಶಸ್ತ್ರಚಿಕಿತ್ಸೆ, ಶಸ್ತ್ರಚಿಕಿತ್ಸೋತ್ತರ ಆರೈಕೆ ಮತ್ತು ಭೌತಚಿಕಿತ್ಸೆಗೆ (Physiotherapy) ಮಾತ್ರವೇ ಅಂದಾಜು £ 40,000 ಪೌಂಡ್ (ಸರಿಸುಮಾರು ₹51,56,468) ವೆಚ್ಚವಾಗುತ್ತಿತ್ತು.
ಭಾರತದಲ್ಲಿ ಒಟ್ಟು ವೆಚ್ಚ ಸುಮಾರು £14,000 ಪೌಂಡ್ (ಸರಿಸುಮಾರು ₹18,04,811) ಆಗಿದೆ. ಇದರಲ್ಲಿ ಎರಡೂ ಮೊಣಕಾಲುಗಳ ಬದಲಿ ಶಸ್ತ್ರಚಿಕಿತ್ಸೆ, ರೌಂಡ್-ಟ್ರಿಪ್ ವಿಮಾನ ದರ, ವಸತಿ, ಊಟ, ವೈದ್ಯಕೀಯ ವಿಮೆ ಮತ್ತು ಸಮಗ್ರ ಕ್ಲಿನಿಕಲ್ ಆರೈಕೆ ಸಂಪೂರ್ಣವಾಗಿ ಒಳಗೊಂಡಿತ್ತು.
ಶಸ್ತ್ರಚಿಕಿತ್ಸೆಯ ನಂತರ ಜೀನ್ ಅವರು ಎರಡು ವಾರಗಳ ಕಾಲ ವಿಶೇಷ ಆರೈಕೆ ಕೇಂದ್ರದಲ್ಲಿದ್ದು, ತೀವ್ರ ದೈನಂದಿನ ವ್ಯಾಯಾಮಗಳ ಮೂಲಕ ಸುರಕ್ಷಿತವಾಗಿ ತನ್ನ ದಿನಚರಿಯನನು ಮರಳಿ ಪಡೆದರು. ಇಂದು ಅವರು ಸಂಪೂರ್ಣ ಗುಣಮುಖರಾಗಿ ಯುಕೆಗೆ ಹಿಂತಿರುಗಿದ್ದು, ಮತ್ತೆ ತಮ್ಮ ಸಾಕುನಾಯಿಗಳೊಂದಿಗೆ ಮತ್ತು ಧರ್ಮಪತ್ನಿಯೊಂದಿಗೆ ಕಾಲುವೆಯ ದಂಡೆಯಲ್ಲಿ ಸಂಜೆಯ ನಡಿಗೆಯನ್ನು ಸಂತಸದಿಂದ ಪುನರಾರಂಭಿಸಿದ್ದಾರೆ.
ಭಾರತದ ಪ್ರವಾಸೋದ್ಯಮ ಸಚಿವಾಲಯದ ಅಧಿಕೃತ ಮಾಹಿತಿಯ ಪ್ರಕಾರ, 2025 ರ ಆರಂಭದಲ್ಲೇ ದೇಶಕ್ಕೆ ವೈದ್ಯಕೀಯ ಉದ್ದೇಶಗಳಿಗಾಗಿ 1,31,856 ವಿದೇಶಿ ಪ್ರವಾಸಿಗರು ಆಗಮಿಸಿದ್ದಾರೆ. ಅಂತರರಾಷ್ಟ್ರೀಯ ರೋಗಿಗಳು ದೀರ್ಘಾವಧಿಯ ಕಾಯಲು ಇಷ್ಟಪಡದೆ ವಿಶೇಷ ಆರೈಕೆಗಾಗಿ ಭಾರತದ 'ಹೀಲ್ ಇನ್ ಇಂಡಿಯಾ' (Heal in India) ಯೋಜನೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಂಭವಿಸುತ್ತಿರುವ ಈ ಬದಲಾವಣೆಯ ನೈಜ ಪರಿಣಾಮವನ್ನು ರೋಗಿಗಳ ವೈಯಕ್ತಿಕ ಅನುಭವಗಳ ಮೂಲಕ ಸ್ಪಷ್ಟವಾಗಿ ಅರ್ಥೈಸಿಕೊಳ್ಳಬಹುದು.


