ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಅಜಾಗರೂಕತೆಯಿಂದಾಗಿ ಯುವತಿಯೊಬ್ಬರು ಭೀಕರ ಅಪಘಾತಕ್ಕೀಡಾಗಿದ್ದಾರೆ. ಲಕ್ಷಾಂತರ ರೂಪಾಯಿ ವೈದ್ಯಕೀಯ ವೆಚ್ಚವಾಗಿದ್ದು, ಜೀವನ್ಮರಣ ಹೋರಾಟ ನಡೆಸುತ್ತಿರುವ ಸಂತ್ರಸ್ತೆಗೆ ಕಂಪನಿಯಿಂದ ಯಾವುದೇ ಪರಿಹಾರ ಸಿಕ್ಕಿಲ್ಲ.
ಬೆಂಗಳೂರಿನಲ್ಲಿ ಆ್ಯಪ್ ಆಧಾರಿತ ಬೈಕ್ ಟ್ಯಾಕ್ಸಿಗಳ ಸುರಕ್ಷತೆಯ ಕುರಿತು ದೊಡ್ಡ ಪ್ರಶ್ನೆ ಮೂಡಿಸುವಂತಹ ಭೀಕರ ಅಪಘಾತವೊಂದು ಸಂಭವಿಸಿದೆ. ಕೇವಲ ಒಂದು ಕಿಲೋಮೀಟರ್ ಪ್ರಯಾಣಕ್ಕಾಗಿ ಬೈಕ್ ಟ್ಯಾಕ್ಸಿ ಹತ್ತಿದ 32 ವರ್ಷದ ಯುವತಿಯೊಬ್ಬರು, ಚಾಲಕನ ನಿರ್ಲಕ್ಷ್ಯದಿಂದಾಗಿ ಇಂದು ಆಸ್ಪತ್ರೆಯ ಮಂಚದ ಮೇಲೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ವೈದ್ಯಕೀಯ ಚಿಕಿತ್ಸೆಯ ಬಿಲ್ ಈಗಾಗಲೇ 20 ಲಕ್ಷ ರೂಪಾಯಿ ದಾಟಿದ್ದು, ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಪರಿಹಾರಕ್ಕಾಗಿ ಪರದಾಡುತ್ತಿದೆ.
ದುರಂತ ಸಂಭವಿಸಿದ್ದು ಹೇಗೆ?
ಕೇರಳ ಮೂಲದ ಸಾನಿ ಕೃಷ್ಣ ಅವರು ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು. ಜೂನ್ 17ರ ಬೆಳಿಗ್ಗೆ ಬೈರಸಂದ್ರದಲ್ಲಿರುವ ತಮ್ಮ ನಿವಾಸದಿಂದ ದೊಮ್ಮಲೂರಿನಲ್ಲಿದ್ದ ಕಚೇರಿಗೆ ಹೋಗಲು ಅವರು ರಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ಸಾಧಾರಣವಾಗಿ ಸ್ವಂತ ಕಾರಿನಲ್ಲಿ ಓಡಾಡುತ್ತಿದ್ದ ಸಾನಿ, ಅಂದು ಆಕಸ್ಮಿಕವಾಗಿ ಬೈಕ್ ಬುಕ್ ಮಾಡಿದ್ದರು. ಆದರೆ ಬಾಗ್ಮನೆ ಟೆಕ್ ಪಾರ್ಕ್ ಬಳಿ ಚಲಿಸುವಾಗ, ಬೈಕ್ ಸವಾರ ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಮುಂಭಾಗದಲ್ಲಿದ್ದ ಟ್ರ್ಯಾಕ್ಟರ್ ಅನ್ನು ಹಿಂದಿಕ್ಕಲು ಯತ್ನಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಬೈಕ್ ಟ್ರ್ಯಾಕ್ಟರ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.
ಮಾರಣಾಂತಿಕ ಗಾಯ, ₹25 ಲಕ್ಷಕ್ಕೂ ಹೆಚ್ಚು ಖರ್ಚು!
ಈ ಅಪಘಾತ ಸಾನಿ ಅವರ ಜೀವನವನ್ನೇ ಬುಡಮೇಲು ಮಾಡಿದೆ. ಘಟನೆಯಲ್ಲಿ ಅವರ ಪಕ್ಕೆಲುಬಿನ 7 ಮೂಳೆಗಳು ಮುರಿದಿದ್ದು, ಭುಜ ಜಜ್ಜಲ್ಪಟ್ಟಿದೆ. ಮುಖಕ್ಕೆ ತೀವ್ರ ಗಾಯಗಳಾಗಿದ್ದರಿಂದ ಪ್ಲಾಸ್ಟಿಕ್ ಸರ್ಜರಿ ಮಾಡಬೇಕಾಯಿತು. ಅಷ್ಟೇ ಅಲ್ಲದೆ, ಗಂಭೀರ ಗಾಯಗೊಂಡಿದ್ದ ಅವರ ಗುಲ್ಮವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗಿದೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಸಾಲು ಸಾಲು ಆಪರೇಷನ್‌ಗಳ ನಂತರ, ಅವರನ್ನು ಹೆಚ್ಚಿನ ಚಿಕಿತ್ಸೆಗೆ ಕೇರಳದ ಕೋಝಿಕ್ಕೋಡ್‌ನ ಮಿತ್ರಾಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತ ನಡೆದು ವಾರಗಳು ಕಳೆದರೂ ಅವರು ಇನ್ನೂ ಹಾಸಿಗೆ ಹಿಡಿದಿದ್ದು, ಮಾನಸಿಕ ಆಘಾತದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬಸ್ಥರ ಪ್ರಕಾರ ಚಿಕಿತ್ಸೆಯ ವೆಚ್ಚ ಈಗಾಗಲೇ 25 ಲಕ್ಷ ರೂಪಾಯಿ ದಾಟಿದೆ.
ಮಹಿಳಾ ಸುರಕ್ಷತೆ' ಬರಿ ಜಾಹೀರಾತಿಗಷ್ಟೇನಾ?
ವಿಶೇಷ ಎಂದರೆ, ಸಾನಿ ಅವರು ರಾಪಿಡೋ ಆ್ಯಪ್‌ನಲ್ಲಿ 'ಮಹಿಳಾ ಸುರಕ್ಷತಾ ವೈಶಿಷ್ಟ್ಯ' ಆಯ್ಕೆ ಮಾಡಿಕೊಂಡೇ ರೈಡ್ ಬುಕ್ ಮಾಡಿದ್ದರು. ಕಂಪನಿಯು ಮಹಿಳಾ ಸುರಕ್ಷತೆಯ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡುತ್ತದೆ, ಆದರೆ ನಿಜಕ್ಕೂ ಆಪತ್ತು ಬಂದಾಗ ಯಾವ ಬೆಂಬಲವೂ ಸಿಗುವುದಿಲ್ಲ. ಇದೆಲ್ಲವೂ ಬರಿ ಮಾರುಕಟ್ಟೆಯ ಗಿಮಿಕ್" ಎಂದು ಸಾನಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ರಾಪಿಡೋ ಸಂಸ್ಥೆಯು 5 ಲಕ್ಷ ರೂ.ವರೆಗೆ ಅಪಘಾತ ವಿಮೆ ಮತ್ತು 1 ಲಕ್ಷ ರೂ.ವರೆಗೆ ವೈದ್ಯಕೀಯ ವೆಚ್ಚದ ವಿಮೆ ನೀಡುವುದಾಗಿ ಜಾಹೀರಾತು ನೀಡುತ್ತದೆ. ಆದರೆ ಕುಟುಂಬಸ್ಥರು ಪದೇ ಪದೇ ಸಂಪರ್ಕಿಸಿದರೂ ಕಂಪನಿಯಿಂದ ಸೂಕ್ತ ಸ್ಪಂದನೆ ಅಥವಾ ಪರಿಹಾರ ಧನ ಸಿಕ್ಕಿಲ್ಲ ಎಂದು ಸಾನಿ ಅವರ ಸಹೋದರ ದಿಬುಲ್ ಪಿ ಆರೋಪಿಸಿದ್ದಾರೆ.
ಪೋಲೀಸ್ ತನಿಖೆ ಮತ್ತು ರಾಪಿಡೋ ಸ್ಪಷ್ಟನೆ!
ಘಟನೆಗೆ ಸಂಬಂಧಿಸಿದಂತೆ ಜೀವನ್ ಭೀಮಾ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ನಿರ್ಲಕ್ಷ್ಯದ ಚಾಲನೆ ಮತ್ತು ಜನರ ಜೀವಕ್ಕೆ ಅಪಾಯ ತಂದೊಡ್ಡಿದ ಆರೋಪದ ಮೇಲೆ ಬೈಕ್ ಸವಾರ ಆಸಿಸ್ ಬೇಗ್ ಹಾಗೂ ಟ್ರ್ಯಾಕ್ಟರ್ ಚಾಲಕ ಪರಶುರಾಮ್ ವಿರುದ್ಧ ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್!
ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭಾರಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಪಿಡೋ ಸಂಸ್ಥೆ, "ನಾವು ಸಂತ್ರಸ್ತ ಕುಟುಂಬದ ಜೊತೆ ಸಂಪರ್ಕದಲ್ಲಿದ್ದೇವೆ ಮತ್ತು ಅಗತ್ಯ ಸಹಾಯ ಒದಗಿಸುತ್ತಿದ್ದೇವೆ" ಎಂದು ಹೇಳಿಕೆ ನೀಡಿದೆ. ಆದರೆ ಕುಟುಂಬಸ್ಥರು ಮಾತ್ರ ಇದುವರೆಗೂ ಯಾವುದೇ ಆರ್ಥಿಕ ಸಹಾಯ ಹಸ್ತ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಘಟನೆಯು ನಗರದಲ್ಲಿ ಚಲಿಸುವ ಬೈಕ್ ಟ್ಯಾಕ್ಸಿಗಳ ಸುರಕ್ಷತೆಯ ಮೇಲಿದ್ದ ನಂಬಿಕೆಯನ್ನು ಸಂಪೂರ್ಣವಾಗಿ ಕುಸಿಯುವಂತೆ ಮಾಡಿದೆ.


