Genetic Disorders: ಮದುವೆಯು ಜೀವನದ ನಿರ್ಣಾಯಕ ನಿರ್ಧಾರವಾಗಿದೆ, ಅದಕ್ಕಾಗಿಯೇ ಸಂಗಾತಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು ಎನ್ನಲಾಗುತ್ತದೆ. ಆದರೆ ತಜ್ಞರು ಹೇಳುತ್ತಾರೆ ನೀವು ಯಾವುದೇ ಕಾರಣಕ್ಕೂ ಈ ಸಂಬಂಧದಲ್ಲಿ ಮದುವೆ ಆಗಬಾರದು ಎಂದು, ಇದರಿಂದ ಹುಟ್ಟುವ ಮಕ್ಕಳಿಗೆ ಸಮಸ್ಯೆ ಹೆಚ್ಚಾಗುತ್ತದೆ.

ರಕ್ತಸಂಬಂಧದಲ್ಲಿ ಮದುವೆ ಆಗೋದು ತಪ್ಪು

ಮದುವೆ ಎನ್ನುವುದು ಜೀವನದ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದು. ಮದುವೆ ಸಂದರ್ಭದಲ್ಲಿ ಪ್ರೀತಿ, ಕುಟುಂಬ, ಆರ್ಥಿಕ ಸ್ಥಿತಿ ಮಾತ್ರವಲ್ಲ, ಆರೋಗ್ಯದ ಅಂಶವನ್ನೂ ಗಮನಿಸುವುದು ಅಗತ್ಯ ಎಂದು ತಜ್ಞರು ಹೇಳುತ್ತಾರೆ. ವಿಶೇಷವಾಗಿ ರಕ್ತ ಸಂಬಂಧಿಗಳ (ಸೋದರ ಸಂಬಂಧ, ಮೊದಲ ಕಜಿನ್‌ಗಳು ಅಥವಾ ಆಪ್ತ ಸಂಬಂಧಿಕರು) ನಡುವಿನ ಮದುವೆಗಳು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ನಿಕಟ ಸಂಬಂಧದಲ್ಲಿ ಮದುವೆಯಾಗುವುದರಿಂದ ಮಕ್ಕಳಲ್ಲಿ ಆನುವಂಶಿಕ ಅಸ್ವಸ್ಥತೆಗಳ ಅಪಾಯ ಹೆಚ್ಚಾಗುತ್ತದೆ; ಆದ್ದರಿಂದ, ಅಂತಹ ಸಂಬಂಧಗಳನ್ನು ತಪ್ಪಿಸಬೇಕು. ಆದರೆ, ಅಂತಹ ಮದುವೆ ಈಗಾಗಲೇ ನಡೆದಿದ್ದರೆ, ಈ ಅಪಾಯವನ್ನು ತಗ್ಗಿಸಲು ಸಹಾಯ ಮಾಡುವ ಮುನ್ನೆಚ್ಚರಿಕೆಗಳು ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ತಜ್ಞರು.

ಅನುವಂಶಿಕ ಕಾಯಿಲೆ ಮಕ್ಕಳನ್ನು ಕಾಡುವ ಸಾಧ್ಯತೆ ಹೆಚ್ಚು

ರಕ್ತ ಸಂಬಂಧದಲ್ಲಿ ಮದುವೆಯಾಗುವುದರಿಂದ, ಪತಿ ಮತ್ತು ಪತ್ನಿ ಇಬ್ಬರೂ ಒಂದೇ ಆನುವಂಶಿಕ ಕಾಯಿಲೆಯನ್ನು ಹೊಂದಿರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಬ್ಬರೂ ಒಂದೇ ಆನುವಂಶಿಕ ಅಸ್ವಸ್ಥತೆಯನ್ನು ಪಡೆದಿದ್ದರೆ, ಗರ್ಭಾವಸ್ಥೆಯಲ್ಲಿ ಮಗುವಿಗೆ ಈ ಕಾಯಿಲೆ ಬರುವ ಸಾಧ್ಯತೆ 25% ವರೆಗೆ ಇರುತ್ತದೆ, 50% ದಷ್ಟು ಮಗು ಆ ಕಾಯಿಲೆಯನ್ನು ಮುಂದಿನ ಜನರೇಶನ್ ಗೆ ಕ್ಯಾರಿ ಮಾಡುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಥಲಸೇಮಿಯಾ, ಕೆಲವು ಚಯಾಪಚಯ (ಮೆಟಾಬಾಲಿಕ್) ಕಾಯಿಲೆಗಳು, ಜನ್ಮಜಾತ ದೋಷಗಳು ಹಾಗೂ ಅಪರೂಪದ ಆನುವಂಶಿಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಈಗಾಗಲೇ ಮದುವೆಯಾಗಿದ್ದರೆ ಏನು ಮಾಡಬೇಕು?

ಆದರೆ, ರಕ್ತ ಸಂಬಂಧದಲ್ಲಿ ಮದುವೆಯಾದ ಪ್ರತಿಯೊಬ್ಬ ದಂಪತಿಗೂ ಸಮಸ್ಯೆ ಉಂಟಾಗುತ್ತದೆ ಎಂಬುದು ತಪ್ಪು ಕಲ್ಪನೆ. ಬಹುತೇಕ ಮಕ್ಕಳು ಆರೋಗ್ಯವಾಗಿಯೇ ಜನಿಸುತ್ತಾರೆ. ಆದರೂ, ಸಂಬಂಧವಿರುವ ದಂಪತಿಗಳಲ್ಲಿ ಸಾಮಾನ್ಯ ಜನರಿಗೆ ಹೋಲಿಸಿದರೆ ಅಪಾಯದ ಪ್ರಮಾಣ ಸ್ವಲ್ಪ ಹೆಚ್ಚಿರುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಒಂದು ವೇಳೆ ಕುಟುಂಬದಲ್ಲಿ ಈಗಾಗಲೇ ಆನುವಂಶಿಕ ಕಾಯಿಲೆಗಳ ಇತಿಹಾಸವಿದ್ದರೆ ಅಥವಾ ರಕ್ತ ಸಂಬಂಧದಲ್ಲಿ ಮದುವೆಯಾಗಲು ನಿರ್ಧರಿಸಿದ್ದರೆ, ಮದುವೆಗೂ ಮುನ್ನ ಅಥವಾ ಗರ್ಭಧಾರಣೆಗೆ ಮೊದಲು ಜೆನೆಟಿಕ್ ಕೌನ್ಸೆಲಿಂಗ್ ಹಾಗೂ ಅಗತ್ಯವಿರುವ ಜೆನೆಟಿಕ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ಸಂಭವನೀಯ ಅಪಾಯಗಳನ್ನು ಮುಂಚಿತವಾಗಿ ಅರ್ಥಮಾಡಿಕೊಂಡು ಸೂಕ್ತ ವೈದ್ಯಕೀಯ ಸಲಹೆ ಪಡೆಯಬಹುದು. ಅಥವಾ ಐವಿಎಫ್ ಮಾಡಿಸಿಕೊಳ್ಳುವ ಮೂಲಕ ಮಗುವನ್ನು ಅಂತಹ ಸಮಸ್ಯೆಗಳಿಂದ ರಕ್ಷಿಸಬಹುದು.

ಒಟ್ಟಲ್ಲಿ ಹೇಳುವುದಾದರೆ, ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ಪ್ರೀತಿಯ ಜೊತೆಗೆ ಆರೋಗ್ಯದ ಅಂಶಕ್ಕೂ ಸಮಾನ ಮಹತ್ವ ನೀಡುವುದು ಭವಿಷ್ಯದ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಉತ್ತಮ ನಿರ್ಧಾರವಾಗಬಹುದು.