ಅತೀ ಅಪರೂಪವೆನಿಸುವ ವೈದ್ಯಕೀಯ ಅದ್ಭುತವಿದು. ಒಂದೇ ಮಗು ತಾಯಿ ಗರ್ಭದಿಂದ ಎರಡು ಬಾರಿ ಜನಿಸಿದೆ. ಇದು ಹೇಗೆ ಸಾಧ್ಯ ಇದೆಂಥಾ ಅಚ್ಚರಿ ಎಂದು ನಿಮಗೂ ಅಶ್ಚರ್ಯವಾಗಬಹುದು. ಆದರೆ ಇದು ನಿಜವಾಗಿಯೂ ನಡೆದಂತಹ ಘಟನೆ. ಯಾಕೆ ಹಾಗೂ ಹೇಗೆ ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ

ಅತೀ ಅಪರೂಪವೆನಿಸುವ ವೈದ್ಯಕೀಯ ಅದ್ಭುತವಿದು. ಒಂದೇ ಮಗು ತಾಯಿ ಗರ್ಭದಿಂದ ಎರಡು ಬಾರಿ ಜನಿಸಿದೆ. ಇದು ಹೇಗೆ ಸಾಧ್ಯ ಇದೆಂಥಾ ಅಚ್ಚರಿ ಎಂದು ನಿಮಗೂ ಅಶ್ಚರ್ಯವಾಗಬಹುದು. ಆದರೆ ಇದು ನಿಜವಾಗಿಯೂ ನಡೆದಂತಹ ಘಟನೆ. ಆಕ್ಸ್‌ಫರ್ಡ್ ನಿವಾಸಿಯಾಗಿದ್ದ ಶಿಕ್ಷಕಿ ಲೂಸಿ ಇಸಾಕ್‌ ಎಂಬುವವರು 12 ವಾರಗಳ ಗರ್ಭಿಣಿಯಾಗಿದ್ದ ವೇಳೆಯೇ ಅವರು ಅಂಡಾಶಯ ಕ್ಯಾನ್ಸರ್‌ಗೆ ತುತ್ತಾಗಿರುವುದು ತಿಳಿದು ಬಂತು ಹೀಗಾಗಿ ಅವರು ಸುಧೀರ್ಘ 5 ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಸಮಯದಲ್ಲಿ ಶಸ್ತ್ರಚಿಕಿತ್ಸಕರು ಆಕೆಯ ಗರ್ಭಾಶಯವನ್ನು ತಾತ್ಕಾಲಿಕವಾಗಿ ತೆಗೆದುಹಾಕಿದರು. ಈ ವೇಳೆ ಆಕೆಯ ಗರ್ಭದಲ್ಲಿ ಇನ್ನಷ್ಟೇ ಸಂಪೂರ್ಣವಾಗಿ ಬೆಳೆದಿರದ ಮಗುವೂ ಇತ್ತು. ನಂತರ ಕ್ಯಾನ್ಸರ್ ಚಿಕಿತ್ಸೆ ಮುಗಿದ ನಂತರ ಅವರ ಮಗು ರಾಫರ್ಟಿ ಐಸಾಕ್ ಅವರನ್ನು ಮತ್ತೆ ತಾಯಿಯ ಗರ್ಭದೊಳಗೆ ಕೂರಿಸಿ ಒಳಗೆ ಕಳುಹಿಸಲಾಯ್ತು. ಮತ್ತು ಜನವರಿ ಅಂತ್ಯದ ವೇಳೆಗೆ ಆತ ನವಮಾಸ ತುಂಬಿ ಮತ್ತೆ ಜನಿಸಿದನು ಹೀಗಾಗಿ ಆ ಮಗುವಿಗೆ ಇದು 2ನೇ ಜನ್ಮವೆಂದೇ ಹೇಳಬಹುದು ಈ ಸಮಯದಲ್ಲಿ ಮಗು 6 ಪೌಂಡ್ 5 ಔನ್ಸ್ ತೂಕವಿತ್ತು ಎಂದು ಡೈಲಿ ಮೇಲ್ ವರದಿ ಮಾಡಿದೆ. 

ಶಸ್ತ್ರಚಿಕಿತ್ಸೆಯ ವಾರಗಳ ನಂತರ ತಾಯಿ ಲೂಸಿ ಮತ್ತು ಮಗು ರಾಫರ್ಟಿ ಇತ್ತೀಚೆಗೆ ಜಾನ್ ರಾಡ್‌ಕ್ಲಿಫ್ ಆಸ್ಪತ್ರೆಗೆ ಭೇಟಿ ನೀಡಿ ಶಸ್ತ್ರಚಿಕಿತ್ಸಕ ಸೋಲೆಮಾನಿ ಮಜ್ದ್‌ಗೆ ಧನ್ಯವಾದ ಅರ್ಪಿಸಿದರು. ಆಸ್ಪತ್ರೆಯ ವೈದ್ಯ ಸೋಲೆಮಾನಿ ಅವರು ಈ ಅನುಭವವನ್ನು ಅಪರೂಪದ ಮತ್ತು ಭಾವನಾತ್ಮಕ ಕ್ಷಣ ಎಂದಿದ್ದಲ್ಲದೇ, ಮಗುವಿನೊಂದಿಗೆ ಪರಿಚಿತತೆಯ ಭಾವನೆಯನ್ನು ಅನುಭವಿಸಿದ್ದಾಗಿ ಹೇಳಿದ್ದಾರೆ. 

ಇದನ್ನೂ ಓದಿ:3 ತಿಂಗಳಲ್ಲಿ 9 kg ತೂಕ ಇಳಿಸಿಕೊಂಡು ಬಳುಕೋ ಬಳ್ಳಿಯಂತಾದ ನಟಿ ಜ್ಯೋತಿಕಾ

32 ವರ್ಷದ ಲೂಸಿ 12 ವಾರಗಳ ಗರ್ಭಿಣಿಯಾಗಿದ್ದಾಗ, ಗರ್ಭಾವಸ್ಥೆಯಲ್ಲಿ ಮಾಡುವ ಅಲ್ಟ್ರಾಸೌಂಡ್‌ನಿಂದಾಗಿ ಅಂಡಾಶಯದ ಕ್ಯಾನ್ಸರ್ ರೋಗ ಇರುವುದು ಪತ್ತೆಯಾಯ್ತು. ಹೀಗಾಗಿ ಜಾನ್ ರಾಡ್ಕ್ಲಿಫ್ ಆಸ್ಪತ್ರೆಯ ವೈದ್ಯರು ಜನನದ ನಂತರದವರೆಗೆ ಚಿಕಿತ್ಸೆಯನ್ನು ವಿಳಂಬ ಮಾಡುವುದರಿಂದ ಕ್ಯಾನ್ಸರ್ ಹರಡಲು ಅವಕಾಶ ನೀಡುತ್ತದೆ ಮತ್ತು ಅವರ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದರು. ಹೀಗಾಗಿ ಅವರ ಗರ್ಭಧಾರಣೆಯಾಗಿ ಮೂರು ತಿಂಗಳುಗಳಿಗಿಂತಲೂ ಹೆಚ್ಚೇ ಆಗಿದ್ದ ಕಾರಣ ಪ್ರಮಾಣಿತ ಕೀಹೋಲ್ ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಸಾಧ್ಯವಿರಲಿಲ್ಲ, ಹೀಗಾಗಿ ಇದು ವೈದ್ಯರು ಪರ್ಯಾಯ ಆಯ್ಕೆಗಳನ್ನು ಹುಡುಕಲು ಮುಂದಾದರು.

ನಂತರ ಡಾ. ಸೊಲೇಮಾನಿ ಮಜ್ದ್ ನೇತೃತ್ವದ ತಂಡವು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹುಟ್ಟಲಿರುವ ಮಗು ರಾಫರ್ಟಿಯನ್ನು ಗರ್ಭದಲ್ಲಿಯೇ ಇರಿಸಿಕೊಂಡು ಕ್ಯಾನ್ಸರ್ ಕೋಶಗಳನ್ನು ತೆಗೆದುಹಾಕಲು ಅಪರೂಪದ ಮತ್ತು ಸಂಕೀರ್ಣವಾದ ವಿಧಾನವನ್ನು ಪ್ರಸ್ತಾಪಿಸಿದ್ದಾರೆ. ಜಾಗತಿಕವಾಗಿ ಕೆಲವೇ ಬಾರಿ ಮಾತ್ರ ನಡೆಸಲಾದ ಈ ಹೆಚ್ಚಿನ ಅಪಾಯದ ಶಸ್ತ್ರಚಿಕಿತ್ಸೆಯು ಲೂಸಿಯ ಗರ್ಭಾಶಯವನ್ನು ತಾತ್ಕಾಲಿಕವಾಗಿ ತೆಗೆದುಹಾಕುವುದನ್ನು ಕೂಡ ಒಳಗೊಂಡಿತ್ತು. ಅಪಾಯಗಳ ಹೊರತಾಗಿಯೂ ಲೂಸಿ ಮತ್ತು ಅವರ ಪತಿ ಆಡಮ್ ದೇವರ ಮೇಲೆ ಭಾರ ಹಾಕಿ ವೈದ್ಯಕೀಯ ತಂಡವನ್ನು ನಂಬಿ ಅಕ್ಟೋಬರ್‌ನಲ್ಲಿ ಈ ಕಾರ್ಯವಿಧಾನಕ್ಕೆ ಒಳಗಾದರು.

ಲೂಸಿಯ ಅವರ ಅಂಡಾಶಯದಲ್ಲಿದ್ದ ಕ್ಯಾನ್ಸರ್‌ ಗೆಡ್ಡೆಗಳು ಮುಂದುವರಿದ ಹಂತಕ್ಕೆ ತಲುಪಿದ್ದರಿಂದ ಈ ಶಸ್ತ್ರಚಿಕಿತ್ಸೆ ಡಾ. ಮಜ್ದ್ ಅವರಿಗೆ ಅತ್ಯಂತ ಸಂಕೀರ್ಣ ಪ್ರಕರಣವಾಗಿತ್ತು. ಆದರೂ, ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು ಮತ್ತು ಲೂಸಿಯವರು ಜನವರಿ ಅಂತ್ಯದಲ್ಲಿ ಸುರಕ್ಷಿತವಾಗಿ ರಾಫರ್ಟಿಗೆ ಜನ್ಮ ನೀಡಿದರು. 2022 ರಲ್ಲಿ ಲೂಸಿ ಪತಿ ಆಡಮ್ ಮೂತ್ರಪಿಂಡ ಕಸಿಗೆ ಒಳಗಾಗಿದ್ದರಿಂದ ಈ ಮಗುವಿನ ಜನನವು ಕುಟುಂಬಕ್ಕೆ ಭಾವನಾತ್ಮಕವಾಗಿ ಬಹಳ ವಿಶೇಷವಾಗಿತ್ತು. ನಾವು ಅನುಭವಿಸಿದ ಎಲ್ಲಾ ಅಡೆತಡೆಗಳ ನಂತರವೂ ಮಗು ರಾಫರ್ಟಿಯನ್ನು ನಮ್ಮ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಒಂದು ಅತ್ಯಂತ ಅದ್ಭುತ ಕ್ಷಣವಾಗಿತ್ತು ಎಂದು ಆಡಮ್ ಹೇಳಿದ್ದಾರೆ.

ಇದನ್ನೂ ಓದಿ:ನಕಲಿ ವೈದ್ಯನಿಂದ ಪೃಷ್ಠದ ಗಾತ್ರ ಹೆಚ್ಚಿಸುವ ಸರ್ಜರಿಗೆ ಒಳಗಾದ ಮಹಿಳೆ ಸಾವು

ರಾಫರ್ಟಿಯ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಲೂಸಿಯ ಗರ್ಭಕೋಶವನ್ನು ತಾತ್ಕಾಲಿಕವಾಗಿ ತೆಗೆದುಹಾಕುವುದರ ಜೊತೆಗೆ ಅದನ್ನು ಪ್ರಮುಖ ರಕ್ತನಾಳಗಳು ಮತ್ತು ಅಂಗಾಂಶಗಳಿಗೆ ಸಂಪರ್ಕದಲ್ಲಿರಿಸಿಕೊಂಡು ನಡೆಸುವ ಈ ಕಾರ್ಯವಿಧಾನದ ಸಮಯದಲ್ಲಿ 15 ವೈದ್ಯಕೀಯ ವೃತ್ತಿಪರರ ತಂಡವು ಡಾ. ಮಜ್ದ್ ಅವರ ಈ ಮಹತ್ಕಾರ್ಯದಲ್ಲಿ ಭಾಗಿಯಾಗಿದ್ದರು. 

ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ಮಗು ರಾಫರ್ಟಿ ಇದ್ದ ಲೂಸಿಯ ಗರ್ಭಕೋಶವನ್ನು ಸುರಕ್ಷಿತ ತಾಪಮಾನವನ್ನು ಕಾಪಾಡಿಕೊಳ್ಳಲು ಬೆಚ್ಚಗಿನ ಲವಣಯುಕ್ತ ಪ್ಯಾಕ್‌ನಲ್ಲಿ ಎಚ್ಚರಿಕೆಯಿಂದ ಸುತ್ತಿಡಲಾಯಿತು ಮತ್ತು ಇದನ್ನು ಇಬ್ಬರು ವೈದ್ಯರು ನಿಕಟವಾಗಿ ಮೇಲ್ವಿಚಾರಣೆ ಮಾಡಿದರು. ರಾಫರ್ಟಿ ಇರುವ ಗರ್ಭದ ತಾಪಮಾನ ಕಡಿಮೆಯಾಗದಂತೆ ತಡೆಯಲು ಪ್ಯಾಕ್ ಅನ್ನು ಪ್ರತಿ 20 ನಿಮಿಷಗಳಿಗೊಮ್ಮೆ ಬದಲಾಯಿಸಲಾಗುತ್ತಿತ್ತು. ವೈದ್ಯಕೀಯ ತಂಡವು ಪರೀಕ್ಷೆಗಾಗಿ ಲೂಸಿ ಗರ್ಭದಲ್ಲಿದ್ದ ಗೆಡ್ಡೆಯ ಮಾದರಿಯನ್ನು ತೆಗೆದುಹಾಕಿತು. ಇದು ಎರಡನೇ ದರ್ಜೆಯ ಕ್ಯಾನ್ಸರ್ ಇದು ಎಂಬುದನ್ನು ಬಹಿರಂಗಪಡಿಸಿತು. ಕ್ಯಾನ್ಸರ್ ಅಂಗಾಂಶವನ್ನು ತೆಗೆದುಹಾಕಿದ ನಂತರ, ಗರ್ಭಕೋಶವನ್ನು ನಿಧಾನವಾಗಿ ಅದರ ಮೂಲ ಸ್ಥಾನಕ್ಕೆ ಹಿಂತಿರುಗಿಸಲಾಯಿತು ಮತ್ತು ಲೂಸಿಯ ಹೊಟ್ಟೆಯನ್ನು ಮತ್ತೆ ಹೊಲಿಯಲಾಯಿತು ಎಂದು ವೈದ್ಯರು ಆ ಸಂಕೀರ್ಣದ ಶಸ್ತ್ರಚಿಕಿತ್ಸೆಯ ಬಗ್ಗೆ ಹೇಳಿಕೊಂಡಿದ್ದಾರೆ. 

ಸುಮಾರು 2 ಗಂಟೆಗಳ ಕಾಲ ಲೂಸಿಯಾ ಗರ್ಭಕೋಶವು ದೇಹದ ಹೊರಗೆ ಇತ್ತು. ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ರೋಗ ಇರುವ ಬಗ್ಗೆ ತಿಳಿದಿದ್ದು ಮತ್ತು ಚಿಕಿತ್ಸೆ ಪಡೆದಿರುವುದು ತನಗೆ ಸಿಕ್ಕ ನಂಬಲಾಗದಷ್ಟು ಅದೃಷ್ಟ ಎಂದು ಲೂಸಿ ಹೇಳಿದ್ದಾರೆ. ಯುಕೆಯಲ್ಲಿ ವಾರ್ಷಿಕವಾಗಿ 7,000 ಮಹಿಳೆಯರು ಅಂಡಾಶಯದ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಅದರಲ್ಲಿ ಮೂರನೇ ಎರಡರಷ್ಟು ತಡವಾಗಿ ರೋಗ ನಿರ್ಣಯ ಆಗುತ್ತದೆ. ಹೀಗಾಗಿ ವರ್ಷಕ್ಕೆ 4,000 ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತವೆ ಎಂಬ ಮಾಹಿತಿ ಇದೆ.