ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (PCOS) ಗಮನ ಮತ್ತು ಇತರ ಅರಿವಿನ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಐಐಟಿ ಬಾಂಬೆಯ ಅಧ್ಯಯನವೊಂದು ತಿಳಿಸಿದೆ.
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್), ಗಮನ ಮತ್ತು ಇತರ ಅರಿವಿನ ಸಾಮರ್ಥ್ಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಬಾಂಬೆಯ ಸಂಶೋಧಕರು ನಡೆಸಿದ ಅಧ್ಯಯನವೊಂದು ತಿಳಿಸಿದೆ. ಪಿಸಿಓಎಸ್ ಸಮಸ್ಯೆಯಿರುವ ಮಹಿಳೆಯರು ಹೆಚ್ಚಾಗಿ ಅನಿಯಮಿತ ಅಥವಾ ಸರಿಯಾಗಿ ಋತುಚಕ್ರವಾಗದಿರುವುದು, ಪಾಲಿಸಿಸ್ಟಿಕ್ ಅಂಡಾಶಯಗಳು ಮತ್ತು ಪುರುಷ ಹಾರ್ಮೋನ್ (ಆಂಡ್ರೊಜೆನ್) ಹೆಚ್ಚಿನ ಮಟ್ಟದಲ್ಲಿರುವುದು ಇಂತಹ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ.
ಎರಡು ಗುಂಪುಗಳಾಗಿ ವಿಂಗಡಣೆ
ಈ ಹಿಂದಿನ ಸಂಶೋಧನೆಗಳು ಪಿಸಿಓಎಸ್ ಹೊಂದಿರುವ ಮಹಿಳೆಯರಲ್ಲಿ ಆತಂಕ ಮತ್ತು ಖಿನ್ನತೆಯ ಹೆಚ್ಚಿದ ಮಟ್ಟವನ್ನು ತೋರಿಸಿವೆ. ಆದರೆ ಹೊಸ ಅಧ್ಯಯನವು ಗಮನದ ಮೇಲೆ ಕೇಂದ್ರೀಕರಿಸಿದೆ. ಹೌದು, ಐಐಟಿ ಬಾಂಬೆಯ ಮಾನವಿಕ ಮತ್ತು ಸಮಾಜ ವಿಜ್ಞಾನ ವಿಭಾಗದ ಸೈಕೋಫಿಸಿಯಾಲಜಿ ಪ್ರಯೋಗಾಲಯದ ಮೈತ್ರೇಯಿ ರೆಡ್ಕರ್ ಮತ್ತು ಪ್ರೊಫೆಸರ್ ಅಜೀಜುದ್ದೀನ್ ಖಾನ್, ಇದರಲ್ಲಿ ಭಾಗವಹಿಸುವವರನ್ನು ಎರಡು ಗುಂಪುಗಳಾಗಿ ನಿರ್ಣಯಿಸಿದರು. ಅವರಲ್ಲಿ ಪಿಸಿಓಎಸ್ ಹೊಂದಿರುವ 101 ಮಹಿಳೆಯರು ಮತ್ತು 72 ಆರೋಗ್ಯವಂತ ಮಹಿಳೆಯರು ಇದ್ದರು.
ಕಂಡುಬಂದ ದೋಷಗಳಿವು…
ಅಧ್ಯಯನಕ್ಕೆ ಮುನ್ನ ತಂಡವು ಅವರ ಹಾರ್ಮೋನುಗಳ ಮಟ್ಟವನ್ನು ನಕ್ಷೆ ಮಾಡಿ ಗಮನ ಕಾರ್ಯಗಳಿಗೆ ಒಳಪಡಿಸಿತು. ಆಗ ಪಿಸಿಓಎಸ್ ಇರುವ ಮಹಿಳೆಯರು ಶೇಕಡ 50 ಕ್ಕಿಂತ ಹೆಚ್ಚು ನಿಧಾನ ಪ್ರತಿಕ್ರಿಯೆಯನ್ನು ತೋರಿಸಿದರು. ಇನ್ನು ಕೇಂದ್ರೀಕೃತ ಗಮನ ಪರೀಕ್ಷೆಯಲ್ಲಿ ಆರೋಗ್ಯವಂತ ಮಹಿಳೆಯರಿಗಿಂತ ಶೇಕಡ 10 ರಷ್ಟು ಹೆಚ್ಚು ದೋಷಗಳು ಕಂಡುಬಂದವು. ಅಷ್ಟೇ ಅಲ್ಲ, ಪಿಸಿಓಎಸ್ ಇರುವ ಮಹಿಳೆಯರು ಸುಮಾರು ಶೇ. 20 ರಷ್ಟು ನಿಧಾನವಾಗಿ ಕಾರ್ಯನಿರ್ವಹಿಸಿದ್ದಾರೆ, ಹಾಗೆಯೇ ವಿಭಜಿತ ಗಮನ ಕಾರ್ಯದಲ್ಲಿ ಶೇ.3 ರಷ್ಟು ಹೆಚ್ಚುವರಿ ದೋಷಗಳಿವೆ ಎಂದು ಸಂಶೋಧಕರು ಹೇಳಿದ್ದಾರೆ.
ಹೆಚ್ಚು ಸವಾಲಿನಂತೆ ಕಾಣುವ ಕಾರ್ಯಗಳು
ಪಿಸಿಓಎಸ್‌ಗೆ ಸಂಬಂಧಿಸಿದ ಹಾರ್ಮೋನುಗಳ ಅಸಮತೋಲನವು ಜಾಗರೂಕತೆ ಕಡಿಮೆಯಾಗಲು ಮತ್ತು ಪ್ರತಿಕ್ರಿಯೆಯ ಸಮಯ ಹೆಚ್ಚಾಗಲು ಕಾರಣವಾಗಬಹುದು ಎಂದು ಸಂಶೋಧಕರು ವಿವರಿಸಿದರು. ಪಿಸಿಓಎಸ್ ಸಮಸ್ಯೆಯಿರುವವರು ಹೆಚ್ಚಿದ ಆಂಡ್ರೊಜೆನ್ ಮಟ್ಟಗಳ ಜೊತೆಗೆ, ಗಮನಕ್ಕೆ ಸಂಬಂಧಿಸಿದ ಇನ್ಸುಲಿನ್ ಪ್ರತಿರೋಧವನ್ನು ಹೊಂದಿದ್ದರು. ಇನ್ಸುಲಿನ್ ಪ್ರತಿರೋಧವು ಕಳಪೆ ಗ್ಲೂಕೋಸ್ ಚಯಾಪಚಯ ಕ್ರಿಯೆಗೆ ಕಾರಣವಾಗುತ್ತದೆ ಮತ್ತು ಮೆದುಳಿನ ಜೀವಕೋಶ (ನರಕೋಶ) ಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ, ಇದು ಕೇಂದ್ರೀಕೃತ ಗಮನ ಕಾರ್ಯಗಳಲ್ಲಿ ಕಳಪೆ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ. ಪಿಸಿಓಎಸ್‌ಗೆ ಸಂಬಂಧಿಸಿದ ಮಾನಸಿಕ ಆಯಾಸ ಉದಾಹರಣೆಗೆ ಆತಂಕ ಮತ್ತು ಹತಾಶೆ, ವಿಭಜಿತ ಗಮನ ಕಾರ್ಯ (ಒಂದು ಸಮಯದಲ್ಲಿ ಒಂದು ಕಾರ್ಯದ ಮೇಲೆ ಕೇಂದ್ರೀಕರಿಸುವುದು ಉತ್ತಮ. ನಾವು ಬಹುಕಾರ್ಯ ಮಾಡಲು ಪ್ರಯತ್ನಿಸಿದಾಗ, ನಮ್ಮ ಮೆದುಳು ಅರಿವಿನ ಓವರ್‌ಲೋಡ್‌ನಿಂದ ಬಳಲುತ್ತದೆ) ಗಳನ್ನು ಹೆಚ್ಚು ಸವಾಲಿನಂತೆ ಪರಿಣಾಮ ಬೀರುತ್ತದೆ.
ಏನು ಮಾಡಬಹುದು?
ವಿಭಜಿತ ಗಮನ ಕಾರ್ಯಗಳಲ್ಲಿ ನಿಖರತೆ ಕಡಿಮೆಯಾಗುವುದರಿಂದ ಕೆಲಸದ ಸ್ಮರಣೆಯ ಮೇಲೆ ಪರಿಣಾಮ ಬೀರಬಹುದು, ಇದು ಮಾಹಿತಿಯನ್ನು ತಾತ್ಕಾಲಿಕವಾಗಿ ಹಿಡಿದಿಟ್ಟುಕೊಳ್ಳುವುದನ್ನು ತಡೆಯುತ್ತದೆ ಎಂದು ಸಂಶೋಧನೆಯು ಎತ್ತಿ ತೋರಿಸುತ್ತದೆ. ಇದು ಚಾಲನೆ ಮಾಡುವಾಗ ನಿರ್ದೇಶನಗಳನ್ನು ಟ್ರ್ಯಾಕ್ ಮಾಡುವುದು ಅಥವಾ ಡಯಲ್ ಮಾಡಲು ಫೋನ್ ಸಂಖ್ಯೆಯನ್ನು ನೆನಪಿಟ್ಟುಕೊಳ್ಳುವುದು ಮುಂತಾದ ದೈನಂದಿನ ಚಟುವಟಿಕೆಗಳನ್ನು ಹೆಚ್ಚು ಸವಾಲಿನಂತೆ ತೋರುವಂತೆ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಜೊತೆಗೆ ಇದೇ ಸಂಶೋಧನೆಯಲ್ಲಿ ದೈಹಿಕ ಚಟುವಟಿಕೆಯ ಮಟ್ಟವನ್ನು ಹೆಚ್ಚಿಸುವುದು, ಪೌಷ್ಟಿಕ ಆಹಾರ ಸೇವಿಸುವುದು ಮತ್ತು ತೂಕವನ್ನು ಕಡಿಮೆ ಮಾಡುವುದು ಪಿಸಿಓಎಸ್ ಲಕ್ಷಣಗಳಿಗೆ ಮಾತ್ರವಲ್ಲದೆ, ಅರಿವಿನ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ನಿದ್ರೆಯ ನೈರ್ಮಲ್ಯವನ್ನು ಸುಧಾರಿಸುವುದು ಸಹ ಗಮನ ನಿಖರತೆ ಮತ್ತು ಪ್ರತಿಕ್ರಿಯೆ ಸಮಯವನ್ನು ಸುಧಾರಿಸಲು ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಪ್ರೊಫೆಸರ್ ಖಾನ್ ತಿಳಿಸಿದ್ದಾರೆ.
