ನಮ್ಮಲ್ಲಿ ಹೆಚ್ಚಿನವರು ಈಗ ದಿನಕ್ಕೆ ಎಂಟೋ ಒಂಬತ್ತೋ ಗಂಟೆಗಳ ಕಾಲ ಕುಳಿತುಕೊಂಡು ಕೆಲಸ ಮಾಡುತ್ತಾರೆ. ಕಂಪ್ಯೂಟರ್‌ಗಳಂತೂ ನಾವು ಕುಳಿತು ಕೆಲಸ ಮಾಡುವುದನ್ನು ಅನಿವಾರ್ಯಗೊಳಿಸಿವೆ. ದೀರ್ಘಕಾಲ ಕುಳಿತೇ ಇರೋದರಿಂದ ನಿಮ್ಮ ದೇಹದಲ್ಲಿ  ಬೊಜ್ಜು ಬೆಳೆಯಬಹುದು. ಬೊಜ್ಜಿನಿಂದ ಹೃದ್ರೋಗ, ಮಧುಮೇಹ, ಕರುಳಿನ ಕ್ಯಾನ್ಸರ್‌, ಸ್ನಾಯು ಮತ್ತು ಬೆನ್ನಿನ ಸಮಸ್ಯೆಗಳು, ಆಳವಾದ ಸಿರೆಥ್ರಂಬೋಸಿಸ್‌, ಖಿನ್ನತೆ ಇವೆಲ್ಲ ಉಂಟಾಗುವ ಸಂಭವ ಇದೆ.

ಸ್ಲಿಮ್ ಆಗಬೇಕಾ? ನೆಲದ ಮೇಲೆ ಕೂತು ಊಟ ಮಾಡಿ

ನಿಮಗೆ ಬೊಜ್ಜು ಬಂದರೆ ಅದು ನಿಮ್ಮ ಸಂತಾನಕ್ಕೂ ವಿಸ್ತರಿಸಬಹುದು. ದೈಹಿಕ ನಿಷ್ಕ್ರಿಯತೆ- ಇದು ಭೂಮಿಯ ನಾಲ್ಕನೇ ದೊಡ್ಡ ಕಿಲ್ಲರ್‌ ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದೆ. ಸ್ಮೋಕಿಂಗ್‌ ಇದರ ನಂತರ ಸ್ಥಾನದಲ್ಲಿದೆ. ಅಂದರೆ, ಜಡವಾಗಿ ಕುಳಿತೇ ಇರುವುದು ನಿಮ್ಮ ದೇಹಕ್ಕೆ ಸ್ಮೋಕಿಂಗ್‌ಗಿಂತ ಹೆಚ್ಚು ಹಾನಿ ಮಾಡುತ್ತದೆ. ಬ್ರಿಟನ್‌ ಈ ಬಗ್ಗೆ ಒಂದು ಕುತೂಹಲಕಾರಿ ಅಧ್ಯಯನ ನಡೆಸಿತು. ಬಸ್‌ ಡ್ರೈೖವರ್‌ ಹಾಗೂ ಕಂಡಕ್ಟರ್‌ಗಳ ಆರೋಗ್ಯದ ಸ್ಟಡಿ ಮಾಡಿ, ಕುಳಿತುಕೊಂಡು ಹೆಚ್ಚಿನ ಸಮಯ ಕಳೆಯುವ ಡ್ರೈವರ್‌ಗಳಲ್ಲಿ, ನಿಂತು ಓಡಾಡಿ ಕೆಲಸ ಮಾಡುವ ಕಂಡಕ್ಟರ್‌ಗಳಿಗಿಂತ ಅಧಿಕ ಹೃದ್ರೋಗದ ಸೂಚನೆಗಳು ಇದ್ದುದನ್ನು ಗುರುತಿಸಿತು.

ಸಿಟ್ಟಿಂಗ್‌ನಿಂದ ನಿಮ್ಮ ದೇಹಕ್ಕೆ ಏನಾಗುತ್ತದೆ?

ಹೆಚ್ಚು ಹೊತ್ತು ಕುಳಿತುಕೊಳ್ಳುವುದರಿಂದ ದೇಹದಲ್ಲಿ ಆಗುವ ಆಹಾರ ಜೀರ್ಣ ಕ್ರಿಯೆ, ಅದು ರಕ್ತಕ್ಕೆ ಸೇರುವ ಕ್ರಿಯೆಗಳೆಲ್ಲ ನಿಧಾನವಾಗುತ್ತವೆ. ಲಿಪೊಪ್ರೋಟೀನ್‌ ಲಿಪೇಸ್‌ ಎಂಬ ಕಿಣ್ವವು ನಮ್ಮ ಕೊಬ್ಬನ್ನು ಒಡೆದು ಶಕ್ತಿಯಾಗಿಸುತ್ತದೆ. ಕುಳಿತೇ ಇದ್ದರೆ ಲಿಪೋಪ್ರೊಟೀನ್‌ ರಿಲೀಸ್‌ ಆಗುವುದಿಲ್ಲ. ಹಾಗಾಗಿ ಬೊಜ್ಜು ಶಕ್ತಿಯಾಗಿ ಕನ್‌ವರ್ಟ್‌ ಆಗುವುದಿಲ್ಲ. ಮತ್ತೊಂದೆಡೆ, ರಕ್ತದಲ್ಲಿನ ಗ್ಲುಕೋಸ್‌ ಮಟ್ಟ ಮತ್ತು ರಕ್ತದೊತ್ತಡ ಎರಡೂ ಹೆಚ್ಚಾಗುತ್ತದೆ. ಆದಿಮಾನವನು ಬೇಟೆ ಮುಂತಾದ ಚುರುಕಾದ ಓಡಾಟದಿಂದ ಸಕ್ರಿಯನಾಗಿದ್ದ. ಹಾಗಾಗಿ ಆತನ ಕಾಲಿನ ಮೂಳೆಗಳು ಓಡಾಟಕ್ಕಾಗಿಯೇ ವಿಕಾಸಗೊಂಡಿವೆ. ಈಗ ಕುಳಿತೇ ಇರುವುದರಿಂದ ಕಾಲಿನ ಸ್ನಾಯುಗಳ ಚಟುವಟಿಕೆ ಸ್ಥಗಿತಗೊಳ್ಳುತ್ತದೆ. ಕ್ಯಾಲೋರಿಯ ಬಳಕೆ ನಿಮಿಷಕ್ಕೆ 1ಕ್ಕೆ ಇಳಿಯುತ್ತದೆ. ಒಳ್ಳೆಯ ಕೊಲೆಸ್ಟ್ರಾಲ್‌ ಅಂಶವು 20 ಶೇಕಡದಷ್ಟು ಇಳಿಯುತ್ತದೆ.

ಅಡ್ಡ ಪರಿಣಾಮ ಬೀರೋ ನಿದ್ರೆ ಮಾತ್ರೆಗಳು; ಮರೆವಿನಿಂದ ಚಿರನಿದ್ರೆವರೆಗೆ

24 ಗಂಟೆ ಕುಳಿತೇ ಇದ್ದರೆ ಇನ್ಸುಲಿನ್‌ ಪ್ರಮಾಣ 24 ಶೇಕಡಾ ಇಳಿಯುತ್ತದೆ ಮತ್ತು ಮಧುಮೇಹದ ಅಪಾಯವು ಹೆಚ್ಚಾಗುತ್ತದೆ. ಕುಳಿತುಕೊಳ್ಳುವ ಉದ್ಯೋಗ ಹೊಂದಿರುವ ಜನರಿಗೆ ಹೃದಯಸಂಬಂಧಿ ಕಾಯಿಲೆಗಳ ಸಾಧ್ಯತೆ ಇತರರಿಗಿಂತ ದುಪ್ಪಟ್ಟು. ಸರಿಯಾದ ದೈಹಿಕ ಚಟುವಟಿಕೆ ಇಲ್ಲದೆ ಹೋದರೆ ಕೆಲವು ಹಾರ್ಮೋನ್‌ಗಳು ಸ್ರವಿಸುವುದನ್ನು ನಿಲ್ಲಿಸುತ್ತವೆ. ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಹಾಗೂ ರಕ್ತದೊತ್ತಡ ಏರುತ್ತದೆ. ಅಪಧಮನಿಗಳ ಒಳಭಾಗ ದಪ್ಪವಾಗುತ್ತದೆ. ಇದು ಸ್ಮೋಕಿಂಗ್‌ನಿಂದಾಗುವ ಪರಿಣಾಮವನ್ನು ಹೋಲುತ್ತದೆ.

ನೀವೇನು ಮಾಡಬಹುದು?

- ಒಬ್ಬ ಪ್ರೌಢ ವ್ಯಕ್ತಿ ವಾರಕ್ಕೆ ಕನಿಷ್ಠ ಪಕ್ಷ ಎರಡೂವರೆ ಗಂಟೆಯಾದರೂ ವ್ಯಾಯಾಮ ಮಾಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಮಾಡಿದೆ. ದಿನಕ್ಕೆ ಕನಿಷ್ಠ ಅರ್ಧ ಗಂಟೆಯಾದರೂ ವ್ಯಾಯಾಮಕ್ಕೆ ಮೀಸಲಿಡಬೇಕು. ಮುಂಜಾನೆ ಒಮ್ಮೆ, ಸಂಜೆ ಒಮ್ಮೆ ಮನೆಯಿಂದ ಹೊರಗೆ ಅಡ್ಡಾಡುವುದು, ಪಾರ್ಕ್‌ನಲ್ಲಿ ವಾಕಿಂಗ್‌ ಮಾಡುವುದು ಆರೋಗ್ಯಕಾರಿ.

- ನಡೆಯುವುದನ್ನು ಹೆಚ್ಚು ಮಾಡಿ. ಒಂದು ಸ್ಟಾಪ್‌ ಮೊದಲೇ ಇಳಿದು ಕಚೇರಿಗೆ ಅಥವಾ ಮನೆಗೆ ನಡೆಯಿರಿ. ಕಚೇರಿಯಲ್ಲಿ ಲಿಫ್ಟ್‌ ಬಳಸದೆ ಮೆಟ್ಟಿಲಗಳನ್ನೇ ಹತ್ತಿಳಿಯಲು ಉಪಯೋಗಿಸಿ.

- ಕುಳಿತುಕೊಳ್ಳುವ ಸಮಯವನ್ನು ಹೇಗಾದರೂ ಕಡಿಮೆ ಮಾಡಲು ಪ್ರಯತ್ನಿಸಿ. ಕುಳಿತಿರುವ ಅವಕಾಶಗಳನ್ನೇ ನಿರಾಕರಿಸಿ. ನಿಂತು ಮಾತನಾಡಿ. ಡ್ರೈವಿಂಗ್‌ ಮಾಡುತ್ತಿದ್ದರೆ ಪ್ರಯಾಣದ ನಡುವೆ ಒಂದು ಗಂಟೆಗೊಮ್ಮೆ ಇಳಿದು ಅಡ್ಡಾಡಿ.

ನಿಮ್ಮ ಬಾಸ್ ಲೇಡಿನಾ? ಹಾಗಾದ್ರೆ ಈ ಸುದ್ದಿ ಓದಿ ಕೊಳ್ಳಿ

- ನಿಮ್ಮ ಮೊಬೈಲ್‌ನಲ್ಲಿ ಗಂಟೆಗೊಮ್ಮೆ ಅಲಾರಂ ಇಟ್ಟು ನಿಮ್ಮನ್ನು ನೀವೇ ಎಚ್ಚರಿಸಿಕೊಳ್ಳಿ. ಹೆಲ್ತ್‌ ಬ್ಯಾಂಡ್‌ ಕಟ್ಟಿಕೊಳ್ಳುವವರಾದರೆ ಗಂಟೆಗೊಮ್ಮೆ ಅದೇ ಎಚ್ಚರಿಸುತ್ತದೆ. ಆಧುನಿಕ ರಿಸ್ಟ್‌ ಬ್ಯಾಂಡ್‌ಗಳು ದಿನಕ್ಕೆಷ್ಟು ಗಂಟೆ ನೀವು ನಡೆಯಬೇಕು, ಎಷ್ಟು ನಡೆದಿದ್ದೀರಿ ಎಂದು ನಿಮಗೆ ಎಚ್ಚರಿಸುವ ಕೆಲಸವನ್ನು ಅಚ್ಚಕಟ್ಟಾಗಿ ಮಾಡುತ್ತವೆ.