2015ರಲ್ಲಿ ನಡೆದ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಶೇ.93ರಷ್ಟು ಜನರು ನಿದ್ರಾವಂಚಿತರು. ಇದರಲ್ಲಿ ಹಲವರಿಗೆ ತಮಗೆ ನಿದ್ರೆ ಸಾಕಾಗುತ್ತಿಲ್ಲ ಎಂಬುದೇ ಅರಿವಿಗೆ ಸಿಗುತ್ತಿಲ್ಲವಾದರೆ, ಮತ್ತಷ್ಟು ಮಂದಿಗೆ ಇದಕ್ಕಾಗಿ ವೈದ್ಯರ ಸಹಾಯ ಪಡೆಯಬಹುದೆಂಬ ಅರಿವಿಲ್ಲ. ನಿದ್ರಾಹೀನತೆಯನ್ನು ಸಾರ್ವಜನಿಕ ಆರೋಗ್ಯ ಸಮಸ್ಯೆ ಎನ್ನುತ್ತದೆ ಕಾಯಿಲೆ ನಿಯಂತ್ರಣ ಹಾಗೂ ತಡೆ ಕೇಂದ್ರಗಳು. 

ಕೆಲವರು ಸ್ವಲ್ಪ ನಿದ್ದೆಯನ್ನೇ ಸಾಕೆಂದುಕೊಂಡು ಸುಸ್ತು, ಒತ್ತಡ ಹಾಗೂ ಇತರೆ ಆರೋಗ್ಯ ಸಮಸ್ಯೆಗಳನ್ನು ಕಡೆಗಣಿಸಿ ಬದುಕುತ್ತಿದ್ದರೆ ಮತ್ತೆ ಕೆಲವರು ಇದಕ್ಕಾಗಿ ನಿದ್ರಾ ಮಾತ್ರೆಗಳ ಮೊರೆ ಹೋಗುತ್ತಾರೆ. ದುರದೃಷ್ಟವೆಂದರೆ ನಿದ್ರಾ ಮಾತ್ರೆಗಲು ಕೂಡಾ ಈ ಸಮಸ್ಯೆಗೆ ಪರಿಹಾರವಲ್ಲ, ಏಕೆಂದರೆ ಅವು ನಿದ್ರೆ ತರಿಸಿದರೂ ಇತರೆ ಮತ್ತೊಂದಿಷ್ಟು ಸಮಸ್ಯೆಗಳನ್ನು ಹೊತ್ತು ತರುತ್ತವೆ. ಹೀಗಾಗಿ, ನಿದ್ರಾ ಮಾತ್ರೆಗಳ ಕುರಿತು ಯೋಚಿಸುವ ಮುನ್ನ ಅವುಗಳ ಅಡ್ಡ ಪರಿಣಾಮಗಳೇನೆಂದು ತಿಳಿದುಕೊಳ್ಳಿ.

ನೆಮ್ಮದಿಯ ನಿದ್ದೆ ಸುಖಕ್ಕೆ ಸೋಪಾನ; ಆರಾಮದಾಯಕ ನಿದ್ದೆ ಮಾಡಿ

ನಿದ್ರಾ ಮಾತ್ರೆಗಳಲ್ಲಿ ಕೆಲವು ಬಹಳಷ್ಟು ಅಡಿಕ್ಟಿವ್ ಆದರೆ, ಅಡಿಕ್ಷನ್ ಕಡಿಮೆ ಹೊಂದಿರುವ ಮಾತ್ರೆಗಳು ಹೆಚ್ಚು ಅಡ್ಡ ಪರಿಣಾಮ ಹೊಂದಿವೆ. ಮತ್ತೊಂದು ರೀತಿಯ ನಿದ್ರೆ ಮಾತ್ರೆಗಳು ಇಡೀ ದಿನ ನಿಮ್ಮನ್ನು ಅಮಲಿನಲ್ಲೇ ಇಡುತ್ತವೆ. ಸಾಮಾನ್ಯವಾಗಿ ನಿಮ್ಮ ನಿದ್ರಾಹೀನತೆ ಸಮಸ್ಯೆ ಗಂಭೀರ ಸ್ವರೂಪದಲ್ಲಿಲ್ಲವಾದರೆ ವೈದ್ಯರು ನಿದ್ರಾ ಮಾತ್ರೆಗಳನ್ನು ಸಲಹೆ ಮಾಡುವುದಿಲ್ಲ. ಹಾಗೊಂದು ವೇಳೆ ಪ್ರಿಸ್ಕ್ರೈಬ್ ಮಾಡಿದರೂ ಕೆಲ ದಿನಗಳಿಗಷ್ಟೇ ಬಳಕೆ ಮಾಡಲು ಸೂಚಿಸುತ್ತಾರೆ. ಏಕೆಂದರೆ ಇವುಗಳ ಅಡ್ಡ ಪರಿಣಾಮ ಹೆಚ್ಚು.

1. ಬೆಳಗಿನ ಹೊತ್ತಲ್ಲಿ ಅಮಲು

ನಿದ್ರೆ ಮಾತ್ರೆಗಳು ರಾತ್ರಿಯಲ್ಲಿ ನಿದ್ರೆ ಬರಿಸುವುದಷ್ಟೇ ಅಲ್ಲ, ಬೆಳಗಿನ ಹೊತ್ತು ಕೂಡಾ ನಿಮ್ಮನ್ನು ಅಮಲಿನಲ್ಲೇ ಇಡುತ್ತದೆ. ನಿರ್ಧಾರ ತೆಗೆದುಕೊಳ್ಳುವುದು, ಏಕಾಗ್ರತೆ ಸಾಧಿಸುವುದು ಕಷ್ಟವಾಗುತ್ತದೆ. ಗೊಂದಲಮಯ ಸ್ಥಿತಿಯಲ್ಲಿಡುತ್ತದೆ. ಕೆಲವರು ತಲೆ ತಿರುಗುವುದಾಗಿಯೂ ದೂರುತ್ತಾರೆ. ಅದರಲ್ಲೂ ವಯಸ್ಸಾದವರಲ್ಲಿ ರಿಸ್ಕ್ ಜಾಸ್ತಿ. ಏಕೆಂದರೆ ಈ ಡ್ರಗ್‌ನ್ನು ಸಂಪೂರ್ಣ ಹೊರ ಹಾಕಲು ಅವರ ದೇಹ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಎದ್ದಾಗ ಬೀಳುವಂತಾಗುವುದು, ಗೊಂದಲವಾಗುವುದು ಆಗಬಹುದು.

2. ಹ್ಯಾಲುಸಿನೇಶನ್ಸ್ ಹಾಗೂ ಕೆಟ್ಟ ಕನಸುಗಳು

ಝೆಡ್ ಡ್ರಗ್‌ಗಳನ್ನು ಅಲ್ಪಕಾಲಕ್ಕೆ ನಿದ್ರೆಗಾಗಿ ನೀಡಲಾಗುತ್ತದೆ. ಇವು ಕೆಲವರಲ್ಲಿ ಭ್ರಮಾಧೀನ ಸ್ಥಿತಿಯನ್ನು ಹುಟ್ಟುಹಾಕುತ್ತವೆ. ಇಲ್ಲದ್ದು ಇದೆಯೆಂಬಂತೆ ಕಾಣುವುದು, ಕೇಳುವುದು, ಕಲ್ಪನಾ ಲೋಕವೇ ನಿಜವೆನಿಸುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಮತ್ತೆ ಕೆಲವರಲ್ಲಿ ಕೆಟ್ಟ ಕನಸುಗಳ ಹಾವಳಿ ಹೆಚ್ಚುತ್ತದೆ. 

ಸುಖ ನಿದ್ರೆಗಿವು ಬೆಸ್ಟ್ ಫುಡ್

3. ಹದಗೆಡುವ ಸ್ಲೀಪ್ ಆ್ಯಪ್ನಿಯಾ

ನೀವು ಈಗಾಗಲೇ ಸ್ಲೀಪ್ ಆಪ್ನಿಯಾದಿಂದ ಬಳಲುತ್ತಿದ್ದರೆ, ನಿದ್ರೆಯ ಮಾತ್ರೆ ತಗೊಂಡ್ರೆ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಈ ಕಂಡಿಶನ್ ಇದ್ದಾಗ ನೀವು ನಿದ್ದೆ ಮಾಡುವಾಗ ಏರ್‌ವೇಸ್ ಬ್ಲಾಕ್ ಆಗಿ, ದೇಹಕ್ಕೆ ಆಮ್ಲಜನಕ ಕೊರತೆಯಾಗಿ ಎಚ್ಚರವಾಗುತ್ತದೆ. ಇದರಿಂದ ರಾತ್ರಿ ಪದೇ ಪದೆ ಎಚ್ಚರವಾಗುತ್ತದೆ. ಮಾತ್ರೆಗಳನ್ನು ತೆಗೆದುಕೊಂಡಾಗ ಈ ಸಮಸ್ಯೆ ಹೆಚ್ಚುತ್ತದೆ.

4. ಡ್ರಗ್ ಅವಲಂಬನೆ ಹಾಗೂ ಅಡಿಕ್ಷನ್

ನಿದ್ರೆ ಮಾತ್ರೆ ತೆಗೆದುಕೊಳ್ಳಲಾರಂಭಿಸಿದ ಕೆಲ ಸಮಯದ ಬಳಿಕ ನಿಮ್ಮಲ್ಲಿ ಡ್ರಗ್ ಟಾಲರೆನ್ಸ್ ಬೆಳೆದು, ಇನ್ನೂ ಹೆಚ್ಚಿನ ಡೋಸೇಜ್ ಇದ್ದರೆ ಮಾತ್ರ ಕೆಲಸ ಮಾಡುವುದು ಎಂದಾಗುತ್ತದೆ. ಇದು ಬೆಳೆಯುತ್ತಲೇ ಹೋಗುತ್ತದೆ. ಹೀಗೆ ಅತಿಯಾಗಿ ಮಾತ್ರೆ ಮೇಲೆ ಅವಲಂಬಿತರಾದಾಗ ಅದಿಲ್ಲದೆ ಒಂದು ದಿನವೂ ನಿದ್ರಿಸುವುದು ಸಾಧ್ಯವೇ ಇಲ್ಲ ಎನಿಸುತ್ತದೆ. ಅದಕ್ಕೆ ಅಡಿಕ್ಟ್ ಆಗುವ ಅಪಾಯಗಳಿರುತ್ತವೆ. ಆಲ್ಕೋಹಾಲ್‌ನಂತೆಯೇ ಇವುಗಳನ್ನು ಸಡನ್ ಆಗಿ ತೆಗೆದುಕೊಳ್ಳುವುದು ಬಿಟ್ಟರೆ ಕೂಡಾ ಸಂಕಟ, ಮೈ ನಡಗುವುದು, ಬೆವರುವುದು ಮುಂತಾದ ಸಮಸ್ಯೆಗಳು ತಲೆದೋರುತ್ತವೆ. 

5. ನೋವುಗಳು

ಮೆಲಟೋನಿನ್ ಹೊಂದಿದ ಮಾತ್ರೆಗಳು ನಿದ್ರೆ ಉತ್ತಮಗೊಳಿಸಬಹುದು. ಆದರೆ, ಅವು ತಲೆನೋವು, ಬೆನ್ನು ನೋವು, ಮಂಡಿ ನೋವಿಗೆ ಕಾರಣವಾಗುತ್ತವೆ.

6. ಡ್ರಗ್ ಇಂಟರ್ಯಾಕ್ಷನ್

ಕೆಲವೊಮ್ಮೆ ನಿದ್ರೆ ಮಾತ್ರೆ ತೆಗೆದುಕೊಳ್ಳುವಾಗ ಪೇನ್ ಕಿಲ್ಲರ್, ಕೆಮ್ಮಿನ ಮಾತ್ರೆ ಮತ್ತಿತರೆ ಮಾತ್ರೆಗಳನ್ನು ತೆಗೆದುಕೊಂಡಾಗ ಅದರಿಂದ ಕೋಮಾಗೆ ಹೋಗುವ, ಸಾಯುವ ಅಪಾಯಗಳೂ ಇವೆ. 

7. ಮರೆವಿನ ಅಪಾಯ

ದುಸ್ವಪ್ನಗಳು ಬೀಳದಂತೆ ತಡೆಯುವುದು ಹೇಗೆ? ಏನು ಮಾಡಬೇಕು?

ಬೆಂಜೋಡಯಾಝೆಪೈನ್ಸ್ (ನಿದ್ರೆ ಮಾತ್ರೆ) ಸೇವನೆಯಿಂದಾಗಿ ಮರೆವಿನ ಕಾಯಿಲೆ ಡಿಮೆನ್ಷಿಯಾ ಬರುವ ಅಪಾಯ ಹೆಚ್ಚು. ಹಾಗಾಗಿಯೇ ಬಹುಕಾಲ ಈ ಮಾತ್ರೆ ಸೇವಿಸಬಾರದು ಎನ್ನುತ್ತಾರೆ ಸಂಶೋಧಕರು. 

8. ಸಾವಿನ ಅಪಾಯ

ನಿದ್ರೆಗಾಗಿ ತೆಗೆದುಕೊಳ್ಳುವ ಹಿಪ್ನೋಟಿಕ್ ಡ್ರಗ್ಸ್ ಸಾವಿನ ಸಂಭವ ಹೆಚ್ಚಿಸುತ್ತದೆ. ವರ್ಷಕ್ಕೆ ಕೇವಲ 18 ಹಿಪ್ನೋಟಿಕ್ ಮಾತ್ರೆಗಳನ್ನು ತೆಗೆದುಕೊಂಡರೂ ಅದು ಸಾವಿನ ಅಪಾಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ. ಜೊತೆಗೆ ಕ್ಯಾನ್ಸರ್ ರಿಸ್ಕ್ ಕೂಡಾ ಹೆಚ್ಚುತ್ತದೆ.