ಮಿತ ಮದ್ಯಪಾನವೂ ಆರೋಗ್ಯಕ್ಕೆ ಹಾನಿಕಾರಕ ಎಂದು ಹೊಸ ಅಧ್ಯಯನ ತಿಳಿಸಿದೆ. ಜೀವಿತಾವಧಿ ಕಡಿಮೆಯಾಗುವುದರ ಜೊತೆಗೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚುತ್ತದೆ. ಮದ್ಯಪಾನ ತ್ಯಜಿಸುವುದೇ ಆರೋಗ್ಯಕರ ಜೀವನಕ್ಕೆ ಉತ್ತಮ ಮಾರ್ಗ.

ಸೀಮಿತ ಪ್ರಮಾಣದಲ್ಲಿ ಮದ್ಯಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ನಂಬಿಕೆ ಬಹಳ ಕಾಲದಿಂದಲೂ ಇತ್ತು. ಕೆಲವರು ಕೆಂಪು ವೈನ್‌ನಂತಹ ಪಾನೀಯಗಳು ಹೃದಯಕ್ಕೆ ಒಳ್ಳೆಯದು ಎಂದು ಭಾವಿಸಿದ್ದರು. ಆದರೆ, ಜರ್ನಲ್ ಆಫ್ ಸ್ಟಡೀಸ್ ಆನ್ ಆಲ್ಕೋಹಾಲ್ ಅಂಡ್ ಡ್ರಗ್ಸ್ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನವು ಹಿಂದಿನ ಎಲ್ಲ ನಂಬಿಕೆಗಳನ್ನು ಬುಡಮೇಲು ಮಾಡಿದೆ. ಈ ಸಂಶೋಧನೆಯ ಪ್ರಕಾರ, ಸಣ್ಣ ಪ್ರಮಾಣದ ಮದ್ಯವೂ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಜೀವಿತಾವಧಿಯನ್ನು ಕಡಿಮೆ ಮಾಡುವ ಜೊತೆಗೆ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಎಚ್ಚರಿಸಿದೆ.

ಮದ್ಯಪಾನದಿಂದ ಜೀವಿತಾವಧಿ ಹೇಗೆ ಕಡಿಮೆಯಾಗುತ್ತೆ?

ಪ್ರಮುಖ ಸಂಶೋಧಕ ಡಾ. ಟಿಮ್ ಸ್ಟಾಕ್‌ವೆಲ್ ಅವರ ಪ್ರಕಾರ, ವಾರಕ್ಕೆ ಕೇವಲ ಎರಡು ಪಿಂಟ್ ಮದ್ಯ ಸೇವಿಸಿದರೂ ಜೀವಿತಾವಧಿಯನ್ನು 3 ರಿಂದ 6 ದಿನಗಳವರೆಗೆ ಕಡಿಮೆ ಮಾಡಬಹುದು. ದಿನಕ್ಕೆ ಒಂದು ಬಾರಿ ಮದ್ಯ (ವಾರಕ್ಕೆ 7 ಬಾರಿ) ಸೇವಿಸುವವರ ಜೀವಿತಾವಧಿಯು ಸುಮಾರು ಎರಡೂವರೆ ತಿಂಗಳು ಕಡಿಮೆಯಾಗಬಹುದು. ಇನ್ನೂ ಗಂಭೀರವಾಗಿ, ವಾರಕ್ಕೆ 35 ಬಾರಿ ಮದ್ಯ ಸೇವಿಸುವ ವ್ಯಕ್ತಿಯ ಜೀವಿತಾವಧಿಯು ಎರಡು ವರ್ಷಗಳವರೆಗೆ ಕಡಿಮೆಯಾಗಬಹುದು ಎಂದಿದೆ. ಈ ಅಂಕಿಅಂಶಗಳು ಮದ್ಯಪಾನದಿಂದ ಆಗುವ ಅಪಾಯವನ್ನು ಸ್ಪಷ್ಟವಾಗಿ ಎಚ್ಚರಿಕೆ ನೀಡಿದೆ.

ಮದ್ಯಪಾನದಿಂದ ಆರೋಗ್ಯದ ಮೇಲಿನ ಪರಿಣಾಗಳೇನು?

ಮದ್ಯವು ದೇಹದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಇದು ಕ್ಯಾನ್ಸರ್, ಯಕೃತ್ತಿನ ಹಾನಿ, ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಬಹುದು. ವಿಜ್ಞಾನಿಗಳು ಹೇಳುವ ಪ್ರಕಾರ, ಮದ್ಯವು ದೇಹದಲ್ಲಿ ವಿಭಜನೆಯಾಗಿ ಅಸೆಟಾಲ್ಡಿಹೈಡ್ ಎಂಬ ಸಂಯುಕ್ತವಾಗಿ ಪರಿವರ್ತನೆಯಾಗುತ್ತದೆ ಎಂದು ಕಂಡುಕೊಂಡಿದ್ದಾರೆ, ಇದು ಡಿಎನ್ಎಗೆ ಹಾನಿಯನ್ನುಂಟುಮಾಡಿ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಡಾ. ಹೆಲೆನ್ ಕ್ರೋಕರ್ ಅವರು ಹೇಳುವಂತೆ, ಮದ್ಯಪಾನವು ಬಾಯಿ, ಗಂಟಲು, ಯಕೃತ್ತು, ಮತ್ತು ಕೊಲೊನ್‌ನಲ್ಲಿ ಕ್ಯಾನ್ಸರ್ ಅಪಾಯವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

WHO ಅಂಕಿ-ಅಂಶಗಳು ಏನು ಹೇಳುತ್ತೆ?

ವಿಶ್ವ ಆರೋಗ್ಯ ಸಂಸ್ಥೆ (WHO)ಯ ಅಂಕಿಅಂಶಗಳ ಪ್ರಕಾರ, ಪ್ರತಿದಿನ ಎರಡು ಪಿಂಟ್ ಬಿಯರ್ ಕುಡಿಯುವ ಪುರುಷರಿಗೆ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ ಶೇ. 38 ರಷ್ಟು ಹೆಚ್ಚಾಗುತ್ತದೆ.

ಬಾಯಿ ಮತ್ತು ಗಂಟಲಿನ ಕ್ಯಾನ್ಸರ್ ಅಪಾಯ ಶೇ. 94 ರಷ್ಟು ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯ ಶೇ. 84 ರಷ್ಟು ಹೆಚ್ಚಾಗುತ್ತದೆ. ದಿನಕ್ಕೆ ಒಂದು ಪೆಗ್ ಸೇವಿಸುವವರಿಗೂ ಕರುಳಿನ ಕ್ಯಾನ್ಸರ್ ಅಪಾಯ ಶೇ. 17 ರಷ್ಟು ಹೆಚ್ಚುತ್ತದೆ.

ಕೆಂಪು ವೈನ್‌ನ ಹೇಗೆ ಅಪಾಯ?

ಕೆಂಪು ವೈನ್‌ನಲ್ಲಿರುವ ರೆಸ್ವೆರಾಟ್ರೊಲ್ನಂತಹ ಉತ್ಕರ್ಷಣ ನಿರೋಧಕಗಳು ಆರೋಗ್ಯಕ್ಕೆ ಒಳ್ಳೆಯದು ಎಂಬ ನಂಬಿಕೆಯನ್ನು ಹೊಸ ಅಧ್ಯಯನವು ತಿರಸ್ಕರಿಸಿದೆ. ಈ ಉತ್ಕರ್ಷಣ ನಿರೋಧಕಗಳು ದ್ರಾಕ್ಷಿ, ಹಣ್ಣುಗಳು, ಹಸಿರು ಚಹಾ, ಮತ್ತು ಕಾಫಿಯಲ್ಲಿಯೂ ಲಭ್ಯವಿವೆ. ಆದ್ದರಿಂದ, ಮದ್ಯದಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ; ಬದಲಿಗೆ, ಅದರಿಂದ ಆಗುವ ಹಾನಿಯೇ ಹೆಚ್ಚು.

ಮದ್ಯಪಾನ ಬಿಡುವ ಸವಾಲು:

ಪುರುಷರಿಗೆ ಮದ್ಯಪಾನ ಬಿಡುವುದು ಕಷ್ಟಕರವಾಗಿರುವುದಕ್ಕೆ ಸಾಮಾಜಿಕ ಒತ್ತಡ ಮತ್ತು ರೂಢಿಗಳೇ ಕಾರಣ ಎಂದು ಪ್ರೊ. ರಿಚರ್ಡ್ ಕುಕ್ ವಿವರಿಸುತ್ತಾರೆ. ಶೇ. 25 ರಷ್ಟು ಪುರುಷರು ಕುಡಿಯದಿದ್ದರೆ ತಮ್ಮನ್ನು ಕಂಡರೆ ಜನರು ಬೇಸರಿಸಿಕೊಳ್ತಾರೆ ಎಂದು ತಿಳಿಯುತ್ತಾರೆ. ಶೇ. 20 ರಷ್ಟು ಪುರುಷರು ವಾರಾಂತ್ಯದಲ್ಲಿ ಮದ್ಯಪಾನದ ಮೂಲಕ ಕಚೇರಿಯ ಒತ್ತಡದಿಂದ ವಿಶ್ರಾಂತಿ ಪಡೆಯುವುದಾಗಿ ಒಪ್ಪಿಕೊಂಡಿದ್ದಾರೆ.

ತಜ್ಞರ ಸಲಹೆ ಏನು?

ತಜ್ಞರು ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸುವುದು ಆರೋಗ್ಯಕ್ಕೆ ಉತ್ತಮ ಎಂದು ಶಿಫಾರಸು ಮಾಡುತ್ತಾರೆ. ಇದು ಸಾಧ್ಯವಾಗದಿದ್ದರೆ, ಈ ಕೆಳಗಿನ ಕ್ರಮಗಳನ್ನು ಅನುಸರಿಸಿ:

  • ವಾರಕ್ಕೆ ಕುಡಿಯುವ ದಿನಗಳ ಸಂಖ್ಯೆಯನ್ನು ಕಡಿಮೆ ಮಾಡಿ.
  • ಕಡಿಮೆ ಆಲ್ಕೋಹಾಲ್ ಅಥವಾ ಆಲ್ಕೋಹಾಲ್ ರಹಿತ ಪಾನೀಯಗಳನ್ನು ಆಯ್ಕೆ ಮಾಡಿ.
  • ನಿಮ್ಮ ಮದ್ಯ ಸೇವನೆಯ ಪ್ರಮಾಣವನ್ನು ಟ್ರ್ಯಾಕ್ ಮಾಡಿ.

ಒಟ್ಟಾರೆ, ಮಿತವಾಗಿ ಕುಡಿಯುವುದು ಸುರಕ್ಷಿತ ಎಂಬ ತಪ್ಪು ಕಲ್ಪನೆಯನ್ನು ಈ ಸಂಶೋಧನೆ ಒಡ್ಡಿಹಾಕಿದೆ. ಆರೋಗ್ಯಕರ ಜೀವನಕ್ಕಾಗಿ ಮದ್ಯಪಾನವನ್ನು ಸಂಪೂರ್ಣವಾಗಿ ತಪ್ಪಿಸುವುದು ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಈಗಲೇ ಕ್ರಮ ಕೈಗೊಳ್ಳಿ!