Buttermilk Benefits: ಪ್ರಿಯಾಂಕಾ ಚೋಪ್ರಾ ಫಿಟ್ ಆಗಿರಲು ಕಾರಣ ಮಜ್ಜಿಗೆ.! ದಕ್ಷಿಣ ಭಾರತೀಯ ಶೈಲಿಯ ಮಜ್ಜಿಗೆಗೆ ಶುಂಠಿ, ಕರಿಬೇವು, ಇಂಗು ಮತ್ತು ಹುರಿದ ಜೀರಿಗೆ ಸೇರಿಸುವುದರಿಂದ ರುಚಿ ಹೆಚ್ಚಾಗುತ್ತದೆ. ಹಾಗಾದರೆ, ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ಸಿಗುವ 5 ಆರೋಗ್ಯಕರ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಪ್ರಿಯಾಂಕಾ ಚೋಪ್ರಾ ಫಿಟ್ನೆಸ್ ಸೀಕ್ರೆಟ್ ಮಜ್ಜಿಗೆ
ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ತಾವು ಪ್ರತಿದಿನ ಮಜ್ಜಿಗೆ ಕುಡಿಯುವುದಾಗಿ ಹೇಳಿದ್ದಾರೆ. ಅಲ್ಲದೇ ತಮಗೆ ದಕ್ಷಿಣ ಭಾರತೀಯ ಶೈಲಿಯ ಮಸಾಲ ಮಜ್ಜಿಗೆ ಅಂದ್ರೆ, ತುಂಬಾನೆ ಇಷ್ಟ ಅನ್ನೋದನ್ನು ತಿಳಿಸಿದ್ದಾರೆ. ಇದೇನಾ ಪ್ರಿಯಾಂಕಾ ಫಿಟ್ನೆಸ್ ಸೀಕ್ರೆಟ್? ಪ್ರತಿದಿನ ಮಜ್ಜಿಗೆ ಕುಡಿಯುವುದರಿಂದ ದೇಹಕ್ಕೆ ಯಾವೆಲ್ಲ ಪ್ರಯೋಜನಗಳು ದೊರೆಯುತ್ತವೆ? ಮಜ್ಜಿಗೆ ಕುಡಿಯುವಾಗ ಯಾವ ಮುನ್ನೆಚ್ಚರಿಕೆಗಳನ್ನು ವಹಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ
ಮಜ್ಜಿಗೆಯಲ್ಲಿ ಪ್ರೋಬಯಾಟಿಕ್ಸ್ ಅಂದರೆ ದೇಹಕ್ಕೆ ಪ್ರಯೋಜನಕಾರಿಯಾದ ಬ್ಯಾಕ್ಟೀರಿಯಾಗಳು ಇವೆ. ಇವು ಕರುಳಿನ ಆರೋಗ್ಯವನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತವೆ. ಅಲ್ಲದೆ, ಜೀರ್ಣಕ್ರಿಯೆಗೆ ಬೆಂಬಲ ನೀಡುವ ಮೂಲಕ ಹೊಟ್ಟೆಯ ಆರೋಗ್ಯವನ್ನು ಕಾಪಾಡುತ್ತದೆ. ದಕ್ಷಿಣ ಭಾರತೀಯ ಶೈಲಿಯ ಮಜ್ಜಿಗೆಯಲ್ಲಿ ಶುಂಠಿ, ಕರಿಬೇವು ಮತ್ತು ಇಂಗನ್ನು ಸೇರಿಸಲಾಗುತ್ತದೆ. ಈ ಪದಾರ್ಥಗಳು ಗ್ಯಾಸ್ ಮತ್ತು ಹೊಟ್ಟೆ ಉಬ್ಬರದಂತಹ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿ ಪ್ರಿಯಾಂಕಾ ಪ್ರತಿದಿನ ಇದನ್ನ ಮಿಸ್ ಮಾಡದೆ ಕುಡಿಯುತ್ತಾರೆ.
ದೇಹವನ್ನು ಹೈಡ್ರೇಟ್ ಮಾಡುತ್ತದೆ
ಮಜ್ಜಿಗೆಯಲ್ಲಿ ನೀರಿನ ಜೊತೆಗೆ ಪೊಟ್ಯಾಸಿಯಂನಂತಹ ಅಗತ್ಯ ಖನಿಜಾಂಶಗಳೂ ಇವೆ. ಬೆವರುವುದರಿಂದ ದೇಹದಲ್ಲಿ ಕಡಿಮೆಯಾಗುವ ದ್ರವಾಂಶ ಮತ್ತು ಕೆಲವು ಎಲೆಕ್ಟ್ರೋಲೈಟ್ಗಳನ್ನು ಮರುಪೂರಣ ಮಾಡಲು ಇದು ಸಹಾಯ ಮಾಡಬಹುದು. ಫಿಟ್ನೆಸ್ ಬಗ್ಗೆ ಗಮನ ಹರಿಸುವ ಪಿಗ್ಗಿ ಹೈಡ್ರೇಟ್ ಆಗಿರಲು ಇದನ್ನ ಸೇವಿಸುತ್ತಾರೆ.
ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಅಂಶಗಳ ಮೂಲ
ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಬಿ ಗುಂಪಿಗೆ ಸೇರಿದ ಕೆಲವು ವಿಟಮಿನ್ಗಳು ಇರುತ್ತವೆ. ಮೂಳೆಗಳು ಮತ್ತು ಹಲ್ಲುಗಳನ್ನು ಬಲವಾಗಿಡಲು ಕ್ಯಾಲ್ಸಿಯಂ ಅತ್ಯಗತ್ಯವಾಗಿದೆ. ಅದೇ ರೀತಿ, ದೇಹವು ಶಕ್ತಿಯನ್ನು ಬಳಸಿಕೊಳ್ಳುವುದು ಸೇರಿದಂತೆ ಹಲವು ಪ್ರಮುಖ ಕಾರ್ಯಗಳಲ್ಲಿ ವಿಟಮಿನ್ ಬಿ ಮುಖ್ಯ.
ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಣೆಗೆ ಸಹಕಾರಿ
ಸಾಮಾನ್ಯವಾಗಿ ಸಕ್ಕರೆ ಸೇರಿಸಿದ ಮತ್ತು ಪ್ಯಾಕೆಟ್ಗಳಲ್ಲಿ ದೊರೆಯುವ ಡ್ರಿಂಕ್ಸ್ ಗಳಿಗೆ ಹೋಲಿಸಿದರೆ ಮಜ್ಜಿಗೆಯಲ್ಲಿ ಕಡಿಮೆ ಕ್ಯಾಲೊರಿ ಇದೆ. ಇದರಲ್ಲಿ ಪ್ರೋಟೀನ್ ಕೂಡ ಇದ್ದು, ಹೊಟ್ಟೆ ತುಂಬಿದ ಅನುಭವವನ್ನು ನೀಡಲು ಸಹಾಯ ಮಾಡುತ್ತದೆ. ಇದರಿಂದ ಅನಗತ್ಯ ಕ್ಯಾಲೊರಿಗಳ ಸೇವನೆಯನ್ನು ಕಡಿಮೆ ಮಾಡಿಕೊಳ್ಳಲು ನೆರವಾಗಬಹುದು.
ದೇಹಕ್ಕೆ ತಂಪಿನ ಅನುಭವ ನೀಡುತ್ತದೆ
ಮಜ್ಜಿಗೆಯಲ್ಲಿ ನೀರಿನ ಅಂಶ ಹೆಚ್ಚಿರುವುದರಿಂದ ದೇಹವನ್ನು ತಾಜಾವಾಗಿರಿಸಲು ಮತ್ತು ಬಿಸಿಲಿನ ಸಮಯದಲ್ಲಿ ಆರಾಮದಾಯಕ ಅನುಭವ ನೀಡಲು ಸಹಾಯ ಮಾಡುತ್ತದೆ. ಮಜ್ಜಿಗೆಗೆ ಹುರಿದ ಜೀರಿಗೆ ಪುಡಿ ಮತ್ತು ಸ್ವಲ್ಪ ಉಪ್ಪು ಸೇರಿಸಿದರೆ ಅದರ ರುಚಿ ಮತ್ತಷ್ಟು ಹೆಚ್ಚುತ್ತದೆ.
ಪ್ರತಿದಿನ ಮಜ್ಜಿಗೆ ಕುಡಿಯುವಾಗ ಈ ವಿಷಯಗಳನ್ನು ಗಮನಿಸಿ
- ಮಜ್ಜಿಗೆಯನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
- ಊಟದ ನಂತರ ಮಜ್ಜಿಗೆ ಕುಡಿಯುವುದು ಸೂಕ್ತ ಆಯ್ಕೆಯಾಗಿದೆ. ಆದರೆ, ಲ್ಯಾಕ್ಟೋಸ್ ಇನ್ಟಾಲರೆನ್ಸ್ ಅಂದರೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ತೊಂದರೆ ಇರುವವರು ಮಜ್ಜಿಗೆ ಕುಡಿದ ನಂತರ ಉಂಟಾಗುವ ಲಕ್ಷಣಗಳ ಬಗ್ಗೆ ಗಮನಹರಿಸಬೇಕು.
- ಮಜ್ಜಿಗೆ ಕುಡಿದ ಬಳಿಕ ಗ್ಯಾಸ್, ಹೊಟ್ಟೆನೋವು ಅಥವಾ ಅತಿಸಾರದಂತಹ ಸಮಸ್ಯೆಗಳು ಕಾಣಿಸಿಕೊಂಡರೆ ಅದರ ಸೇವನೆಯನ್ನು ಕಡಿಮೆ ಮಾಡಿ ಅಥವಾ ವೈದ್ಯರ ಸಲಹೆ ಪಡೆಯಿರಿ.


