- ದಿವ್ಯಾ ಪೆರ್ಲ

ಒಬ್ಬ ನರ್ಸ್ ತಾನು ಆರೈಕೆ ಮಾಡೋ ರೋಗಿ ಯಾವ ಜಾತಿ, ಯಾವ ಧರ್ಮ, ಯಾವ ಪಕ್ಷ, ಯಾವ ಊರು ಎಂಬೆಲ್ಲಾ ವಿಚಾರದ ಬಗ್ಗೆ ನೋಡುವುದೇ ಇಲ್ಲ. ರೋಗಿ ಯಾರೇ ಇರಲಿ, ಅವರನ್ನು ಮಗುವಿನಂತೆ ಆರೈಕೆ ಮಾಡಿ ಹುಷಾರಾಗಿಸಿ, ಮನೆಗೆ ಕಳುಹಿಸೋದಷ್ಟೇ ಅವರ ಏಕೈಕ ಗುರಿ.

ಬರೀ ವೈದ್ಯರಷ್ಟೇ ಇದ್ದಾರೆ, ದಾದಿಯರೇ ಇಲ್ಲ ಎಂದಾದರೆ ಹೇಗಿರಬಹುದು ಆಸ್ಪತ್ರೆಗಳ ಸ್ಥಿತಿ ? ಟೈಂ ಟೈಂಗೆ ಬಂದು ತಿಂಡಿ ತಿಂದಿರಾ, ಸ್ನಾನ ಮಾಡಿದ್ರಾ? ಆಹಾರ ಸೇರುತ್ತಾ? ಔಷಧ ತಗೊಂಡ್ರಾ? ನೋವಿದೆಯಾ? ಎಂಬೆಲ್ಲ ಕಾಳಜಿಯ ಪ್ರಶ್ನೆಗಳು ನರ್ಸ್‌ಗಳ ನಿತ್ಯ ಸಂಭಾಷಣೆ.

ಮಣಿಪಾಲದ ಕೆಎಂಸಿ ಆಸ್ಪತ್ರೆಯಿಂದ ದೆಹಲಿಗೆ ಕೊರೋನಾ ವಾರಿಯರ್ಸ್

ಡಾಕ್ಟರ್ ಬಂದು ಮೇಲ್ವಿಚಾರಣೆ ಮಾಡಿ ಹೋಗಿ ಬಿಡುತ್ತಾರೆ, ಅವರ ರೌಂಡ್ಸ್ ಮುಗಿದರೆ ಆಯ್ತು. ಆದರೆ ರೋಗಿಯ ಆಪ್ತರು ಜೊತೆಯಲ್ಲಿದ್ದರೂ, ನರ್ಸ್‌ಗಳು ಮತ್ತೆ ಮತ್ತೆ ಬಂದು ವಿಚಾರಿಸಿ, ನಗುಮುಖದಿಂದ ಮಾತನಾಡಿಸಿ ಉಪಚರಿಸಿ ಹೋಗುತ್ತಾರೆ. ಇವರು ರೋಗಿಗಳ ನೋವಿಗೆ ಸ್ಪಂದಿಸೋ ಶ್ವೇತವರ್ಣದಲ್ಲಿರೋ ದೇವತೆಗಳು, ತಮ್ಮ ಕಾಳಜಿಯ ಮೂಲಕ ರೋಗಿಯನ್ನು  ಗುಣಮುಖರಾಗಿಸಿ ಮನೆಗೆ ಕಳುಹಿಸೋ ಕಿನ್ನರರು..!

ಸದ್ಯದ ಪರಿಸ್ಥಿತಿಯಲ್ಲಿ ದಾದಿಯರು ಹೇಗಿದ್ದಾರೆ?

ಕೊರೋನಾದಿಂದಾಗಿ ಶಿಫ್ಟ್‌ಗಳ ಅರ್ಥವನ್ನೇ ತಿಳಿಯದವರಂತೆ ಹಗಲು ರಾತ್ರಿ ದುಡಿಯುತ್ತಿರುವ ದಾದಿಯರಿಗೆ ಮನೆ ಇದೆ, ಮಕ್ಕಳಿದ್ದಾರೆ, ಕುಟುಂಬವೂ ಇರುತ್ತೆ. ಆದರೆ ಕೊರೋನಾ ಬಂದ ಮೇಲೆ ಇವೆಲ್ಲವೂ ಅವರ ಎರಡನೇ ಆದ್ಯತೆ ಆಗಿಬಿಟ್ಟಿದೆ. ಅನಿವಾರ್ಯತೆಯ ಜೊತೆ ವೃತ್ತಿ ಧರ್ಮ ಅವರನ್ನು ಮನೆಯಲ್ಲಿರಲು ಬಿಡುತ್ತಿಲ್ಲ. ತಮ್ಮ ಕೆಲಸ ಕೊರೋನಾ ಕಾಲದಲ್ಲಿ ಎಷ್ಟು ಅಪಾಯಕಾರಿ ಎಂದು ತಿಳಿದರೂ ನರ್ಸ್‌ಗಳು ಕೆಲಸಕ್ಕೆ ಬರಲು ಹಿಂಜರಿದಿಲ್ಲ, ಹಾಗೊಂದು ವೇಳೆ ಹಿಂಜರಿದಿದ್ದರೆ ವಿಶ್ವದ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲೂ ಸಾಧ್ಯವಾಗುತ್ತಿರಲಿಲ್ಲ. ಆಕ್ಸಿಜನ್, ವೆಂಟಿಲೇಟರ್, ಬೆಡ್ ಇಲ್ಲ ಎಂದು ಪರದಾಡಿದಂತೆ ನರ್ಸ್‌ಗಳಿಲ್ಲ ಎಂದು ಒದ್ದಾಡಬೇಕಾಗಿತ್ತು. ಆದರೆ ಹಾಗಾಗಿಲ್ಲ, ಅದರರ್ಥ ದಾದಿಯರು ಸಂಪೂರ್ಣ ಸೇವೆಯನ್ನು ನೀಡುತ್ತಲೇ ಬಂದಿದ್ದಾರೆ.

ಅಂತಾರಾಷ್ಟ್ರೀಯ ದಾದಿಯರ ದಿನ ಹುಟ್ಟಿದ್ದು ಹೇಗೆ ?

ಪ್ರತಿವರ್ಷ ಮೇ 12 ರಂದು ಅಂತಾರಾಷ್ಟ್ರೀಯ ದಾದಿಯರ ದಿನಾಚರಣೆಯನ್ನು ಆಚರಿಸುತ್ತಾರೆ. ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ ದಿನವಿದು. ದಾದಿಯರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಗುರುತಿಸಲು ವಿಶ್ವದಾದ್ಯಂತ ಈ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ದಾದಿಯರ ಸಮಿತಿ 1965ರಿಂದ ದಾದಿಯರ ದಿನವನ್ನು ಆಚರಿಸಿಕೊಂಡು ಬಂದಿದೆ. 1953ರಲ್ಲಿ ಅಮೆರಿಕದ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಇಲಾಖೆಯ ಅಧಿಕಾರಿ ದೊರೊಥಿ ಸದರ್ಲ್ಯಾಂಡ್ ದಾದಿಯರ ದಿನವನ್ನು ಘೋಷಿಸಬೇಕೆಂದು ಪ್ರಸ್ತಾಪಿಸಿದ್ದರು. ಆದರೆ ಅಂದಿನ ಅಧ್ಯಕ್ಷರಾಗಿದ್ದ ಡ್ವೈಟ್ ಡಿ. ಐಸೆನ್‌ಹೋವರ್ ಇದನ್ನು ಒಪ್ಪಲಿಲ್ಲ.

ಮುಂದೆ ಡಾಕ್ಟರ್‌, ನರ್ಸ್‌ ತೀವ್ರ ಕೊರತೆ : ಈಗಲೇ ಸಿದ್ಧರಾಗಿ ಎಂದು ಡಾ.ದೇವಿಶೆಟ್ಟಿ ಎಚ್ಚರಿಕೆ

ಆಧುನಿಕ ಶುಶ್ರೂಷೆಯ ಸಂಸ್ಥಾಪಕಿ ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನಾಚರಣೆಯಾದ್ದರಿಂದ ಮೇ 12ನ್ನು ದಾದಿಯರ ದಿನವಾಗಿ ಆಚರಿಸಲು 1974 ರಲ್ಲಿ ನಿರ್ಧರಿಸಲಾಯಿತು. ಪ್ರತಿ ವರ್ಷವೂ ಅಂತಾರಾಷ್ಟ್ರೀಯ ದಾದಿಯರ ಸಮಿತಿ ಅಂತಾರಾಷ್ಟ್ರೀಯ ದಾದಿಯರ ದಿನದ ಕಿಟ್ ಸಿದ್ಧಪಡಿಸುತ್ತದೆ. ಅದನ್ನು ಎಲ್ಲೆಡೆ ವಿತರಿಸುತ್ತದೆ.

ಕಳೆದ ವರ್ಷ ಮಾರ್ಚ್‌ನಿಂದ ಸುಮಾರು 3000 ದಾದಿಯರು ಸಾವು

ಕೊರೋನಾ ಕಾಣಿಸಿಕೊಂಡ ನಂತರ ಕನಿಷ್ಠ 3000 ದಾದಿಯರು ಸಾವನ್ನಪ್ಪಿದ್ದಾರೆ. ಜಾಗತಿಕವಾಗಿ ಒಟ್ಟು ಪ್ರಕರಣಗಳಲ್ಲಿ 10%ಗಿಂತ  ಹೆಚ್ಚಿನವರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ ಎಂದು ಇಂಟರ್ನ್ಯಾಷನಲ್ ಕೌನ್ಸಿಲ್ ಆಫ್ ನರ್ಸಸ್ (ಐಸಿಎನ್) ವರದಿಯಲ್ಲಿ ಹೇಳಿತ್ತು. ಕಳೆದ ವರ್ಷ ಮಾರ್ಚ್‌ನಿಂದ ವಿಶ್ವಾದ್ಯಾಂತ 60 ರಾಷ್ಟ್ರಗಳಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡಿ ಮಡಿದ ದಾದಿಯರ ಸಂಖ್ಯೆ 3 ಸಾವಿರ.

ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿನಿಂದಾಗಿ ಏಪ್ರಿಲ್‌ನಲ್ಲಿ ಇದುವರೆಗೆ ಕನಿಷ್ಠ 34 ವೈದ್ಯರು ಅಸುನೀಗಿದ್ದಾರೆ, ಎಂದು ಭಾರತೀಯ ವೈದ್ಯಕೀಯ ಸಂಘ ಹೇಳಿದೆ. ಕಳೆದ ವರ್ಷ ದೇಶಾದ್ಯಂತ 730 ವೈದ್ಯರು ಮೃತಟ್ಟಿದ್ದರು.

ವಿಸ್ತಾರ ವಿಮಾನಗಳಲ್ಲಿ ವೈದ್ಯರು, ನರ್ಸ್‌ಗಳಿಗೆ ದೇಶಾದ್ಯಂತ ಉಚಿತ ಪ್ರಯಾಣ

ಫ್ರಂಟ್‌ಲೈನ್ ವಾರಿಯರ್ಸ್ ಆಗಿರೋ ವೈದ್ಯರು, ದಾದಿಯರನ್ನು ಸಂರಕ್ಷಿಸಬೇಕಾದ ಮಹತ್ವದ ಜವಾಬ್ದಾರಿ ಜನತೆಯ ಮೇಲಿದೆ. ಈ ಹಿಂದೆ ಕೊರೋನಾ ಎಚ್ಚರಿಕೆ ಬಗ್ಗೆ ವಿಡಿಯೋ ರಿಲೀಸ್ ಮಾಡಿದ್ದ ವೈದ್ಯೆಯೊಬ್ಬರು ನಿಮ್ಮನ್ನು ಉಳಿಸುವುದಕ್ಕಾದರೂ ನಮ್ಮನ್ನು ಉಳಿಸಿ, ದಯವಿಟ್ಟು ಮನೆಯಲ್ಲಿರಿ ಎಂದು ಕೇಳಿಕೊಂಡಿದ್ದರು.
ನೀವು ಬಂದಾಗ ನಮ್ಮಲ್ಲಿ ಬೆಡ್ ಇಲ್ಲ, ವೆಂಟಿಲೇಟರ್ ಇಲ್ಲ, ಐಸಿಯು ಇಲ್ಲ ಎಂದು ನಿಮ್ಮನ್ನು ತಿರುಗಿ ಕಳುಹಿಸುವ ಸ್ಥಿತಿಗೆ ನಮ್ಮನ್ನು ತಲುಪಿಸಬೇಡಿ, ರಕ್ಷಿಸಿ ಎಂದು ಬಂದ ರೋಗಿಯನ್ನು ಮರಳಿ ಕಳುಹಿಸುವಷ್ಟು ನೋವು ಬೇರೆ ಯಾವುದೂ ಇಲ್ಲ ಎಂದು ಕಣ್ಣೀರಿಟ್ಟಿದ್ದರು. ಆದರೆ ಜನರು ಇನ್ನೂ ಸ್ಟೇ ಹೋಂ ಸ್ಟೇ ಸೇಫ್ ಎನ್ನುವುದರ ಮಹತ್ವ ತಿಳಿದುಕೊಂಡಿಲ್ಲ ಎನ್ನುವುದೇ ವಿಪರ್ಯಾಸ.

ಹಗಲು, ರಾತ್ರಿ ಎಂಬ ಪರಿವೆಯಿಲ್ಲದೆ, ಪಿಪಿಇ ಕಿಟ್, ಮಾಸ್ಕ್ ಧರಿಸಿ ನಾಲ್ಕು ಗೋಡೆಯ ಮಧ್ಯೆ ಕೊರೋನಾ ರೋಗಿಗಳನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿರುವ ದಾದಿಯರು, ಮನೆಗೆ ಹೋಗದೇ ಅದೆಷ್ಟು ಸಮಯವಾಯ್ತೋ,, ಹೋದರೂ ತಮ್ಮ ಮನೆಯವರ ಜೊತೆ ಕುಳಿತು ನೆಮ್ಮದಿಯಾಗಿ ಒಂದು ತುತ್ತು ಉಣ್ಣುವುದಕ್ಕಾದರೂ ಅವರಿಗೆ ಸಾಧ್ಯವೇ? ಪುಟ್ಟ ಕಂದಮ್ಮನ ಎತ್ತಿ ಮುದ್ದಿಸಲು ಸಾಧ್ಯವೇ? ಖಂಡಿತಾ ಇಲ್ಲ. ಕೊರೋನಾ ಕುರಿತ ಹೆಚ್ಚಿನ ಜಾಗೃತಿ ಇರುವ ಇವರು ಸೋಂಕು ಹರಡುವ ಯಾವ ರಿಸ್ಕ್ ಕೂಡಾ ತೆಗೆದುಕೊಳ್ಳಲಾರರು.

ಕೊರೋನಾ ಪೀಡಿತರ ಶುಶ್ರೂಷೆಯಲ್ಲಿ ಗರ್ಭಿಣಿ!

ಕೊರೋನಾ ಅಬ್ಬರಿಸುತ್ತಲೇ ಇದೆ, ದಾದಿಯರು ಕುಗ್ಗದೇ ಮುನ್ನುಗುತ್ತಲೇ ಇದ್ದಾರೆ. ಕಳೆದ ವರ್ಷ ಮಾರ್ಚ್‌ನಿಂದಲೂ ಕೊರೋನಾದ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ. ಅದೆಷ್ಟೋ ಜನರನ್ನು ಸೋಂಕು ಮುಕ್ತರಾಗಿಸಿ ಬದುಕಿಗೆ ಮರಳಿ ಕರೆ ತಂದಿದ್ದಾರೆ. ಈ ಕೊರೋನಾ ಕಾಲದಲ್ಲಿ ಅವಿರತವಾಗಿ ದುಡಿಯುತ್ತಿರುವ, ಈ ಅಪಾಯಕಾರಿ ಸೋಂಕಿನ ವಿರುದ್ಧ ಅನಿರ್ದಿಷ್ಟಾವಧಿಗೆ ಸಮರ ಸಾರಿರುವ ದಾದಿಯರೆಂಬ ದೇವತೆಗಳಿಗೆ ದೊಡ್ಡ ನಮನ..

ಹಾಗೆಯೇ ದಾದಿಯರನ್ನು ರಕ್ಷಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆದರೆ ಅವರ ಕಷ್ಟಗಳ 1% ಕಷ್ಟವೂ ನಮಗಿಲ್ಲ. ಮನೆಯೊಳಗಿದ್ದು, ಸೋಂಕಿತರಾಗದೆ, ಸುರಕ್ಷಿತರಾಗಿದ್ದು ಅವರ ಹೊರೆ ಕಡಿಮೆ ಮಾಡುವುದೇ ಈ ಕೊರೋನಾ ಕಾಲದಲ್ಲಿ ನಾವು ದಾದಿಯರಿಗೆ ನೀಡಬಹುದಾದ ಬಹುದೊಡ್ಡ ಕೊಡುಗೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona