ಭವಿಷ್ಯದಲ್ಲಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ನರ್ಸ್‌ಗಳ ಕೊರತೆ ದೇಶವನ್ನು ಕಾಡಲಿರುವುದರಿಂದ ಸರ್ಕಾರಗಳು ಈಗಲೇ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಬೇಕು ಎಂದು ಖ್ಯಾತ ವೈದ್ಯ ಡಾ.ದೇವಿಪ್ರಸಾದ್‌ ಶೆಟ್ಟಿ  ಎಚ್ಚರಿಕೆಯನ್ನು ನೀಡಿದ್ದಾರೆ. 

 ಬೆಂಗಳೂರು (ಏ.28): ಕೊರೋನಾ ಸೋಂಕಿನ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಭವಿಷ್ಯದಲ್ಲಿ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ನರ್ಸ್‌ಗಳ ಕೊರತೆ ದೇಶವನ್ನು ಕಾಡಲಿರುವುದರಿಂದ ಸರ್ಕಾರಗಳು ಈಗಲೇ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಬೇಕು ಎಂದು ಖ್ಯಾತ ವೈದ್ಯ ಡಾ.ದೇವಿಪ್ರಸಾದ್‌ ಶೆಟ್ಟಿ ಎಚ್ಚರಿಸಿದ್ದಾರೆ.

ದೇಶದಲ್ಲಿ ಕೊರೋನಾ ಮೊದಲನೇ ಕೊರೋನಾ ಅಲೆ ವೇಳೆ ಪಿಪಿಇ ಕಿಟ್‌, ಸ್ಯಾನಿಟೈಸರ್‌ ಕೊರತೆ ಕಾಡಿತ್ತು. ಎರಡನೇ ಅಲೆಯಲ್ಲಿ ಆಕ್ಸಿಜನ್‌, ಬೆಡ್‌ ಕೊರತೆ ಕಾಡಿದೆ. ಮುಂದೆ ವೈದ್ಯರು, ಪ್ಯಾರಾಮೆಡಿಕ್‌ ಹಾಗೂ ನರ್ಸ್‌ಗಳ ಕೊರತೆ ದೇಶವನ್ನು ಕಾಡಲಿದೆ. ದೇಶದಲ್ಲಿ ಕೊರೋನಾ ಸೋಂಕು ತೀವ್ರ ಗತಿಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಆದರೆ, ದೇಶದಲ್ಲಿ ಈಗಾಗಲೇ ಶೇ.78ರಷ್ಟುತಜ್ಞ ವೈದ್ಯರ ಕೊರತೆಯಿದೆ. ಅಂದಾಜಿನ ಪ್ರಕಾರ ಶೀಘ್ರವೇ 2 ಲಕ್ಷ ನರ್ಸ್‌ ಮತ್ತು 1.5 ಲಕ್ಷ ವೈದ್ಯರ ಅಗತ್ಯ ಬೀಳಲಿದೆ. ಹೀಗಾಗಿ ಸ್ನಾತಕೋತ್ತರ ವೈದ್ಯಕೀಯ, ಎಂಬಿಬಿಎಸ್‌, ನರ್ಸಿಂಗ್‌ ಶಿಕ್ಷಣ ಪೂರೈಸಿ ಅಂತಿಮ ಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುತ್ತಿರುವ ವೈದ್ಯ, ನರ್ಸ್‌, ಪ್ಯಾರಾಮೆಡಿಕಲ್‌ ವಿದ್ಯಾರ್ಥಿಗಳನ್ನು ತುರ್ತಾಗಿ ಸೇವೆಗೆ ಬಳಸಿಕೊಳ್ಳುವುದೊಂದೇ ಸರ್ಕಾರದ ಮುಂದಿರುವ ದಾರಿ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

"

ಕೈಗಾರಿಕೆಗಳು ಮತ್ತು ಸರ್ಕಾರದ ಪ್ರಯತ್ನದಿಂದ ಆಮ್ಲಜನಕದ ಸಮಸ್ಯೆ ಇನ್ನು ಕೆಲವೇ ವಾರಗಳಲ್ಲಿ ಪರಿಹಾರವಾಗುವ ವಿಶ್ವಾಸವಿದೆ. ಕೊರೋನಾ ಆರಂಭದ ಅಲೆಯಲ್ಲಿದ್ದ ಪಿಪಿಇ ಕಿಟ್‌, ವೆಂಟಿಲೇಟರ್‌ ಕೊರತೆಯ ಸಮಸ್ಯೆ ಪರಿಹರಿಸಿಕೊಂಡು ಈಗ ಆಮ್ಲಜನಕದ ಸಮಸ್ಯೆಗೆ ಬಂದಿದ್ದೇವೆ. ಇದೆಲ್ಲವನ್ನು ಮೀರಿದ ಸಮಸ್ಯೆ ವೈದ್ಯಕೀಯ ಸಿಬ್ಬಂದಿಗಳ ಕೊರತೆಯದ್ದು. ಈ ಸಮಸ್ಯೆಯ ಬಗ್ಗೆ ಚಿಂತಿಸಿ ನಿದ್ರೆ ಕಳೆದುಕೊಂಡಿದ್ದೇನೆ. ಪತ್ರಿಕೆಗಳಲ್ಲಿ ಮುಂದಿನ ದಿನಗಳಲ್ಲಿ ಐಸಿಯುಗಳಲ್ಲಿ ರೋಗಿಯ ಕಾಳಜಿ ವಹಿಸಲು ವೈದ್ಯರು, ನರ್ಸ್‌ಗಳಿಲ್ಲದೆ ರೋಗಿಗಳು ಮರಣವನ್ನಪ್ಪುತ್ತಿದ್ದಾರೆ ಎಂಬ ತಲೆಬರಹ ಬರುವುದರಲ್ಲಿ ಸಂಶಯವಿಲ್ಲ ಎಂದಿದ್ದಾರೆ.

'ಕೊರೋನಾ 2ನೇ ಅಲೆಯಲ್ಲಿ ತಲ್ಲಣ : ಕಾಯದೇ ಲಸಿಕೆ ಪಡೆಯಿರಿ' ..

ಪ್ರಸ್ತುತ ಇರುವ ಕೋವಿಡ್‌ ಸಾಂಕ್ರಾಮಿಕ 4ರಿಂದ 5 ತಿಂಗಳು ಇರಬಹುದು. ಆ ಬಳಿಕ ನಾವು ಮೂರನೇ ಅಲೆಗೆ ಸಿದ್ಧರಾಗಬೇಕು. ಇದಕ್ಕೆ ದೇಶ ಯುದ್ಧೋಪಾದಿಯಲ್ಲಿ ಸಿದ್ಧತೆ ನಡೆಸಬೇಕು. ಅಂತಿಮ ವರ್ಷದ ಎಂಬಿಬಿಎಸ್‌, ನರ್ಸಿಂಗ್‌ ವಿದ್ಯಾರ್ಥಿಗಳಿಗೆ ಒಂದು ವರ್ಷ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸೂಚಿಸಬೇಕು. ಆ ಬಳಿಕ ಅವರಿಗೆ ಸರ್ಕಾರಿ ಉದ್ಯೋಗ, ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚುವರಿ ಅಂಕ ನೀಡುವ ಕೊಡುಗೆ ನೀಡಬೇಕು. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ಭಾರತದಲ್ಲಿ ಸೇವೆ ಸಲ್ಲಿಸಲು ಬಯಸುತ್ತಿರುವವರನ್ನು ಕೂಡ ಕೋವಿಡ್‌ ಸೇವೆಗೆ ಬಳಸಿಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಡಾ.ದೇವಿ ಶೆಟ್ಟಿಸಲಹೆ ನೀಡಿದ್ದಾರೆ.

- ಅಂತಿಮ ವರ್ಷದ ವೈದ್ಯ, ನರ್ಸಿಂಗ್‌ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಿ

- ಇಲ್ಲದಿದ್ದರೆ ವೈದ್ಯರಿಲ್ಲದೆ ಕೋವಿಡ್‌ ರೋಗಿಗಳು ಸಾಯುತ್ತಾರೆ

- ಮೊದಲ ಅಲೆಯಲ್ಲಿ ಪಿಪಿಇ ಕಿಟ್‌, ಸ್ಯಾನಿಟೈಸರ್‌ ಕೊರತೆ

- 2ನೇ ಅಲೆಯಲ್ಲಿ ಆಕ್ಸಿಜನ್‌, ವೆಂಟಿಲೇಟರ್‌, ಬೆಡ್‌ ಕೊರತೆ

- 3ನೇ ಅಲೆಯಲ್ಲಿ ವೈದ್ಯರು, ವೈದ್ಯಕೀಯ ಸಿಬ್ಬಂದಿ ಕೊರತೆ