ಸುದ್ದಿ ವಾಹಿನಿಗಳು, ಸೋಷಿಯಲ್ ಮೀಡಿಯಾ ಎಲ್ಲಿ ನೋಡಿದ್ರೂ ಬರೀ ಕೊರೋನಾ ಸುದ್ದಿ. ಹೆಣಗಳ ರಾಶಿ,ಪ್ರೀತಿಪಾತ್ರರನ್ನುಕಳೆದುಕೊಂಡವರ ಆಕ್ರಂದನ, ಬೆಡ್, ಆಕ್ಸಿಜನ್ ಸಿಗದೆ ರೋಗಿಗಳ ನರಳಾಟ,ಸಂಬಂಧಿಕರ ಪರದಾಟ. ಇಂಥ ದೃಶ್ಯಗಳು ಕಲ್ಲು ಹೃದಯವನ್ನು ಕೂಡ ಕರಗಿಸುತ್ತವೆ. ಅಷ್ಟೇ ಅಲ್ಲ, ನಿರಂತರವಾಗಿ ಇಂಥ ದೃಶ್ಯ,ಸುದ್ದಿಗಳ ಕಾರಣಕ್ಕೆ ಮನಸ್ಸಿನ ಆರೋಗ್ಯ ನಿಧಾನವಾಗಿ ಹದಗೆಡಲು ಪ್ರಾರಂಭಿಸಿದೆ.

ಮನಸ್ಸಿನ ಮೂಲೆಯಲ್ಲಿ ಸದಾ ಭಯ,ಭೀತಿ. ನಾಳೆ ಏನಾಗುತ್ತೋ ಎಂಬ ಭೀತಿ ಜೊತೆಗೆ ನಂಗೆ ಕೊರೋನಾ ಬಂದಿದೆಯೇನೋ ಎಂಬ ಅನಗತ್ಯ ಸಂಶಯ ಕೂಡ ಕಾಡುತ್ತಿದೆ. ಪರಿಣಾಮ ಉದ್ವೇಗ,ಒತ್ತಡ ಹೆಚ್ಚುತ್ತಿದೆ. ನಮಗೇ ತಿಳಿಯದಂತೆ ನಮ್ಮ ರೋಗನಿರೋಧಕ ಶಕ್ತಿ ಕುಂದೋ ಜೊತೆ ಮಾನಸಿಕ ವ್ಯಾಧಿಗಳಿಗೆ ಶಿಕಾರಿಗಳಾಗೋ ಅಪಾಯ ಹೆಚ್ಚಿದೆ.ಇಂಥ ಸಮಯದಲ್ಲಿ ಮನಸ್ಸನ್ನು ಶಾಂತಗೊಳಿಸಿ, ಸಕಾರಾತ್ಮಕ ಚಿಂತನೆಗಳನ್ನು ಹೆಚ್ಚಿಸಿಕೊಳ್ಳೋದು ಹೇಗೆ ಎಂಬುದನ್ನು ನೋಡೋಣ.

ಮಹಿಳೆಯರ ಕಾಡೋ ಗುಪ್ತ ಸಮಸ್ಯೆ; ಗುಟ್ಟು ಮಾಡಿದ್ರೆ ಆಪತ್ತು!

ನಕಾರಾತ್ಮಕ ಸುದ್ದಿಗಳಿಂದ ಆದಷ್ಟು ದೂರವಿರಿ

ಸೋಷಿಯಲ್ ಮೀಡಿಯಾ, ನ್ಯೂಸ್ ಚಾನಲ್ ಅಷ್ಟೇ ಏಕೆ ಯಾರಿಗೆ ಕರೆ ಮಾಡಿದ್ರೂ ಕೊರೋನಾ ಸಾವು ನೋವಿನ ಸುದ್ದಿಯೇ ಕಿವಿಗೆ ಬೀಳುತ್ತೆ. ರೋಗ, ಸಾವು, ನೋವು ಎಂಬ ವಿಷಯಗಳು ನಮ್ಮನ್ನು ಭಯಭೀತಗೊಳಿಸೋದು ಸಹಜ ಕೂಡ. ಅದ್ರಲ್ಲೂ ಹೆಣ, ರೋಗಿಗಳು, ಅವರ ಸಂಬಂಧಿಕರ ಗೋಳಾಟದ ವಿಡಿಯೋ ಮನಸ್ಸಿನ ನೆಮ್ಮದಿ ಕಸಿದು ಬಿಟ್ಟಿವೆ. ಊಟ ಸೇರದ, ರಾತ್ರಿ ಕಣ್ಣಿಗೆ ನಿದ್ದೆ ಹತ್ತದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಇಂಥ ಸಮಯದಲ್ಲಿ ಮನಸ್ಸು ನಿರಂತರ  ಉದ್ವೇಗ, ಒತ್ತಡಕ್ಕೊಳಗಾಗುತ್ತಿದ್ರೆ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗೋ ಸಾಧ್ಯತೆಗಳಿರುತ್ತವೆ. ಹೀಗಾಗಿ ಪ್ರತಿದಿನ ನಕಾರಾತ್ಮಕ ಸುದ್ದಿಗಳಿಂದ ಆದಷ್ಟು ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸಿ.

ವಾಸ್ತವ ಒಪ್ಪಿಕೊಳ್ಳಿ

ಮಾಸ್ಕ್, ಲಾಕ್ಡೌನ್ ಇವೆಲ್ಲ ಕಳೆದೊಂದು ವರ್ಷದಿಂದ ನಮಗೆಲ್ಲ ಅಭ್ಯಾಸವಾಗಿ ಬಿಟ್ಟಿವೆ. ಆದ್ರೂ ಪ್ರತಿದಿನ ಮನೆಯ ನಾಲ್ಕು ಗೋಡೆಗಳ ಮಧ್ಯೆಯೇ ದಿನ ಕಳೆಯೋದು ಸುಲಭದ ಮಾತಲ್ಲ. ಆದ್ರೂ ಸದ್ಯದ ಪರಿಸ್ಥಿತಿಯಲ್ಲಿ ಮನೆಯೇ ಸುರಕ್ಷಿತ ಸ್ಥಳ ಎಂಬುದನ್ನು ಒಪ್ಪಿಕೊಳ್ಳಿ.

ಸಂಗೀತ ಕೇಳಿ

ಸಂಗೀತಕ್ಕೆ ಮನಸ್ಸನ್ನು ತಿಳಿಯಾಗಿಸೋ ಶಕ್ತಿಯಿದೆ. ದೇವರ ನಾಮ ಅಥವಾ ನಿಮ್ಮ ಮನಸ್ಸನ್ನು ಪ್ರಶಾಂತಗೊಳಿಸೋ ಹಾಡುಗಳನ್ನು ಕೇಳಿ. ಇದ್ರಿಂದ ಒತ್ತಡ ತಗ್ಗುತ್ತದೆ, ಮನಸ್ಸು ಸಕಾರಾತ್ಮಕ ಚಿಂತನೆಗಳತ್ತ ವಾಲುತ್ತದೆ. 

ಯೋಗ, ಧ್ಯಾನ ಮಾಡಿ
ಬೆಳಗ್ಗೆ ಎದ್ದ ತಕ್ಷಣ ಮನಸ್ಸಿನಲ್ಲಿರೋ ನಕಾರಾತ್ಮಕ ವಿಷಯಗಳನ್ನು ಹೊರಹಾಕಲು ಯೋಗ ಮತ್ತು ಧ್ಯಾನ ಅತ್ಯುತ್ತಮ ಸಾಧನಗಳು. ಇವೆರಡೂ ದಿನಕ್ಕೆ ಉತ್ತಮ ಆರಂಭವನ್ನೊದಗಿಸುತ್ತವೆ. ಇಂದಿನ ಸಂಕಷ್ಟದ ಸಮಯದಲ್ಲಿ ಮನಸ್ಸನ್ನು ಪ್ರಶಾಂತಗೊಳಿಸಲು ಯೋಗ ಮತ್ತು ಧ್ಯಾನ ಸಹಕಾರಿಯಾಗಿವೆ. ಪ್ರತಿದಿನ ಬೆಳಗ್ಗೆ ಕನಿಷ್ಠ 30 ನಿಮಿಷ ಇದಕ್ಕಾಗಿ ಮೀಸಲಿಡಿ.

ಕೊರೋನಾ ಗೆದ್ದು ಬಂದಿರುವಿರೇ? ಹಾಗಿದ್ರೆ ಟೂತ್ ಬ್ರಶ್ ಬದಲಿಸಿ

ವೇಳಾಪಟ್ಟಿ ರೂಪಿಸಿ

ಬೆಳಗ್ಗೆ ಬೇಗ ಎದ್ದು ಆಫೀಸ್ಗೆ ಹೊರಡೋ ಧಾವಂತವಿಲ್ಲ. ಮಹಿಳೆಯರಿಗಂತೂ ಗಂಡ, ಮಕ್ಕಳಿಗೆ ಟಿಫಿನ್ ಬಾಕ್ಸ್ ಸಿದ್ಧಪಡಿಸೋ ಅಗತ್ಯವಿಲ್ಲ. ಹೀಗಾಗಿ ನಿಧಾನಕ್ಕೆ ಮಾಡಿದರಾಯ್ತು ಎಂಬ ಉದಾಸೀನತೆ ಮೂಡೋದು ಸಹಜ. ಇದ್ರಿಂದ ದಿನಚರಿಯಲ್ಲಿ ಶಿಸ್ತಿರೋದಿಲ್ಲ. ಅದೇ ಪ್ರತಿದಿನ ಏನೆಲ್ಲ ಕೆಲಸ ಮಾಡ್ಬೇಕು ಎಂಬ ಬಗ್ಗೆ ವೇಳಾಪಟ್ಟಿ ಸಿದ್ಧಪಡಿಸಿಕೊಂಡು ಅದಕ್ಕನುಗುಣವಾಗಿ ಕಾರ್ಯನಿರ್ವಹಿಸಿದ್ರೆ ದಿನದ ಕೊನೆಯಲ್ಲಿ ತೃಪ್ತಿ ಭಾವ ಮೂಡುತ್ತೆ.

ಆತ್ಮೀಯರೊಂದಿಗೆ ಸಂಪರ್ಕದಲ್ಲಿರಿ

ಪ್ರಸಕ್ತ ಸನ್ನಿವೇಶದಲ್ಲಿ ಆತ್ಮೀಯರ ಭೇಟಿ ಸಾಧ್ಯವಾಗುತ್ತಿಲ್ಲ ನಿಜ. ಆದ್ರೆ ಮೊಬೈಲ್ ಇದೆಯಲ್ಲ, ಕರೆ ಮಾಡಿ ಮಾತನಾಡಿ, ಯೋಗಕ್ಷೇಮಾ ವಿಚಾರಿಸಿ. ವಾಟ್ಸ್ಅಪ್ನಲ್ಲಿ ಚಾಟ್ ಕೂಡ ಮಾಡ್ಬಹುದು. ಹಲವು ವರ್ಷಗಳಿಂದ ಸಿಗದ ಗೆಳೆಯ, ಸಂಪರ್ಕದಲ್ಲಿರದ ಬಂಧುಗಳನ್ನು ಹತ್ತಿರವಾಗಿಸಿಕೊಳ್ಳಲು ಈ ಸಮಯ ಬಳಸಿಕೊಳ್ಳಿ. ಇದ್ರಿಂದ ಮನಸ್ಸಿಗೆ ಖುಷಿ ಸಿಗೋ ಜೊತೆ ಚಿಂತೆ, ಆತಂಕ ಕೂಡ ದೂರವಾಗುತ್ತದೆ. 

ಸಿನಿಮಾ ನೋಡಿ

ಕೊರೋನಾ ಕಾಣಿಸಿಕೊಂಡ ಮೇಲೆ ಸಿನಿಮಾ ವೀಕ್ಷಕರ ಸಂಖ್ಯೆ ಕೂಡ ಹೆಚ್ಚಿದೆ. ಅಮೆಜಾನ್ ಫ್ರೈಮ್, ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಹೀಗೆ ಅನೇಕ ಆನ್ಲೈನ್ ತಾಣಗಳಲ್ಲಿ ಹೊಚ್ಚ ಹೊಸ, ವಿಭಿನ್ನ ಕಥಾ ಹಂದರ ಹೊಂದಿರೋ ದೇಶ, ವಿದೇಶಗಳ ಸಿನಿಮಾಗಳು ಲಭ್ಯವಿವೆ. ನೋಡಿ, ಆನಂದಿಸಿ. ಇದ್ರಿಂದ ಮನಸ್ಸು ರಿಲ್ಯಾಕ್ಸ್ ಆಗೋ ಜೊತೆ ನಕಾರಾತ್ಮಕ ಚಿಂತನೆಗಳು ದೂರವಾಗುತ್ತವೆ. 

ಡಬಲ್ ಮಾಸ್ಕ್ ಧರಿಸುವುದು..ಸತ್ಯ-ಮಿಥ್ಯಗಳನ್ನು ತಿಳಿದುಕೊಳ್ಳಿ

ಅನಗತ್ಯ ಭಯ ಬಿಡಿ

ಕೊರೋನಾ ಸಾವು, ನೋವಿನ ಸುದ್ದಿಯಿಂದ ಎಲ್ಲರಲ್ಲೂಅವ್ಯಕ್ತ ಭಯ ಮನೆ ಮಾಡಿದೆ.ನಂಗೂ ಜ್ವರ ಬಂದಿರಬೇಕೆಂದು ದಿನಕ್ಕೆ ನಾಲ್ಕಾರು ಬಾರಿ ಥರ್ಮೋಮೀಟರ್ನಲ್ಲಿ ಟೆಂಪರೇಚರ್ ನೋಡಿಕೊಳ್ಳೋದು, ಆಕ್ಸಿಜನ್ ಲೆವೆಲ್ ಕಡಿಮೆಯಾಗುತ್ತಿದೆ ಎಂದು ಭಾವಿಸಿ ಆಕ್ಸಿಮೀಟರ್ನಲ್ಲಿ ಆಕ್ಸಿಜನ್ ಮಟ್ಟ ಚೆಕ್ ಮಾಡೋವಷ್ಟು ಮಟ್ಟಿಗೆ ನಾವಿಂದು ಪ್ರತಿಕ್ಷಣ ಭಯದಲ್ಲೇ ಕಳೆಯುತ್ತಿದ್ದೇವೆ. ಈ ಅನಗತ್ಯ ಭಯವನ್ನುಮನಸ್ಸಿನಿಂದ ಹೊಡೆದೊಡಿಸಲು ಪ್ರಯತ್ನಿಸಬೇಕು. ಕೊರೋನಾ ಬಂದವರೆಲ್ಲ ಸಾಯೋದಿಲ್ಲ ಎಂಬುದನ್ನು ನೆನಪಿಡಿ. ಅಷ್ಟೇ ಅಲ್ಲ, ಕೊರೋನಾದಿಂದ ಗುಣಮುಖರಾದವರ ಸಂಖ್ಯೆ ಮೃತಪಟ್ಟವರಿಗಿಂತ ಹೆಚ್ಚಿದೆ. ಹೀಗಾಗಿ ಕೊರೋನಾದ ಸಕಾರಾತ್ಮಕ ಮುಖದತ್ತ ಗಮನ ಕೇಂದ್ರೀಕರಿಸಿ. 

ಅಗತ್ಯವಿದ್ರೆ ಮಾತ್ರ ಹೊರ ಹೋಗಿ

ಮನೆಯಿಂದ ಹೊರಗೆ ಹೋಗದೇ ಇರೋದೆ ಸದ್ಯದ ಪರಿಸ್ಥಿತಿಯಲ್ಲಿ ಉತ್ತಮ. ಆದ್ರೆ ಅಗತ್ಯ ವಸ್ತುಗಳಿಗಾಗಿ ಕೆಲವೊಮ್ಮೆ ಹೊರಹೋಗಲೇಬೇಕಾಗುತ್ತದೆ. ಇಂಥ ಸಮಯದಲ್ಲಿ ತಪ್ಪದೇ ಡಬ್ಬಲ್ ಮಾಸ್ಕ್ ಬಳಸಿ. ಯಾವುದೇ ಕಾರಣಕ್ಕೂ ಮಾಸ್ಕ್ ಬಳಸದೆ ಹೊರಹೋಗಬೇಡಿ. ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ ಕೂಡ ಮರೆಯಬೇಡಿ. ಕೊರೋನಾ ಸುರಕ್ಷಿತ ವಿಧಾನ ಪಾಲಿಸಿದ್ರೆ ಸಾಕು, ನೀವು ಸುರಕ್ಷಿತ. ಹೀಗಾಗಿ ಅನಗತ್ಯ ಭಯ ಬಿಟ್ಟು, ನೆಮ್ಮದಿಯಿಂದ ಮನೆಯಲ್ಲಿರಿ.