ಪುರುಷನಿಗೆ ಹೋಲಿಸಿದ್ರೆ ಮಹಿಳೆ ದೇಹ ಸಾಕಷ್ಟು ಬದಲಾವಣೆಗೊಳಗಾಗುತ್ತೆ. ಋತುಮತಿಯಾಗೋದ್ರಿಂದ ಹಿಡಿದು ಗರ್ಭಧಾರಣೆ,ಹೆರಿಗೆ,ಬಾಣಂತನ,ಋತುಬಂಧ ಇವೆಲ್ಲಆಕೆಯ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ.ಇದರೊಂದಿಗೆ ಲೈಂಗಿಕ ಆರೋಗ್ಯದಲ್ಲಿ ಕೂಡ ಆಗಾಗ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.ಆದ್ರೆ ಬಹುತೇಕ ಮಹಿಳೆಯರು ಇಂಥ ಸಮಸ್ಯೆಗಳಿಗೆ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಪಡೆಯಲು ಹಿಂಜರಿಯುತ್ತಾರೆ.ಇದ್ರಿಂದ ಸಮಸ್ಯೆ ಇನ್ನಷ್ಟು ತೀವ್ರ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆಯಿರುತ್ತದೆ. ಹೀಗಾಗಿ ಅದೆಷ್ಟೇ ನಾಚಿಕೆ, ಮುಜುಗರದ ಆರೋಗ್ಯ ಸಮಸ್ಯೆಯಾಗಿದ್ರೂ ಅದನ್ನು ಮುಚ್ಚಿಡೋ ಬದಲು ಆದಷ್ಟು ಬೇಗ ವೈದ್ಯರ ಸಲಹೆ ಪಡೆದು ಪರಿಹರಿಸಿಕೊಳ್ಳೋದು ಉತ್ತಮ.ಹಾಗಾದ್ರೆ ಮಹಿಳೆಯರನ್ನು ಸಾಮಾನ್ಯವಾಗಿ ಕಾಡೋ ಗುಪ್ತ ಆರೋಗ್ಯ ಸಮಸ್ಯೆಗಳು ಯಾವುವು?

ಕೋವಿಡ್-19 ಸೋಂಕಿತೆ ಕಂದಮ್ಮನಿಗೆ ಎದೆ ಹಾಲುಣಿಸಬಹುದಾ?

ಮೂತ್ರನಾಳ ಸೋಂಕು
ಇದು ಮಹಿಳೆಯರಲ್ಲಿ ಕಾಣಿಸೋ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ರೂ ಸೂಕ್ತ ಚಿಕಿತ್ಸೆ ಪಡೆಯದಿದ್ರೆ ಕೆಲವೊಮ್ಮೆ ಗಂಭೀರ ಸ್ವರೂಪ ಪಡೆದುಕೊಳ್ಳೋ ಸಾಧ್ಯತೆಯಿರುತ್ತೆ. ಇ-ಕೊಲಿ ಬ್ಯಾಕ್ಟೀರಿಯಾ ಸೋಂಕಿನಿಂದ ಈ ಸಮಸ್ಯೆ ಉಂಟಾಗುತ್ತೆ. ಮೂತ್ರ ವಿಸರ್ಜಿಸೋವಾಗ ಉರಿ ಅಥವಾ ಕಿರಿಕಿರಿ, ಪದೇಪದೆ ಮೂತ್ರ ಮಾಡಬೇಕೆಂದೆನಿಸೋದು, ಕಿಬ್ಬೊಟ್ಟೆ ನೋವು ಮೂತ್ರನಾಳ ಸೋಂಕಿನ ಸಾಮಾನ್ಯ ಲಕ್ಷಣವಾಗಿದೆ. ಕೆಲವೊಮ್ಮೆ ಮನೆಮದ್ದುಗಳಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಆದ್ರೆ ಸೋಂಕು ಹೆಚ್ಚಿದ್ದಾಗ ಅಥವಾ ಪದೇಪದೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯೋದು ಅಗತ್ಯ. 

ಸ್ತನಗಳಲ್ಲಿ ಗಡ್ಡೆ
ಪ್ರಾರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಿದ್ರೆ ಗುಣಪಡಿಸಲು ಸಾಧ್ಯವಿದೆ. ಆದ್ರೆ ಬಹುತೇಕ ಮಹಿಳೆಯರು ಮುಜುಗರದ ಕಾರಣಕ್ಕೆ ಸ್ತನದಲ್ಲಿ ಗಡ್ಡೆಗಳು ಕಾಣಿಸಿಕೊಂಡಾಗ ವೈದ್ಯರ ಬಳಿ ಹೋಗೋದಿಲ್ಲ. ಸ್ತನ ಹಾಗೂ ಅದರ ಸುತ್ತಮುತ್ತ ಕಾಣಿಸಿಕೊಳ್ಳೋ ಗಡ್ಡೆಗಳು ಕ್ಯಾನ್ಸರ್ ಗಡ್ಡೆಗಳೇ ಆಗಿರುತ್ತವೆ ಎಂದು ಹೇಳಲಾಗದು. ಮುಟ್ಟಿನ ಸಮಯದಲ್ಲಿ ಅಥವಾ ಹಾರ್ಮೋನ್ ಬದಲಾವಣೆಯಿಂದ ಕೂಡ ಗಡ್ಡೆಗಳು ಕಾಣಿಸಿಕೊಳ್ಳುತ್ತವೆ. ಆದ್ರೆ ಇವು ಸ್ವಲ್ಪ ದಿನಗಳಲ್ಲೇ ಮಾಯವಾಗುತ್ತವೆ. ಆದ್ರೆ ಗಡ್ಡೆ ದೀರ್ಘ ಸಮಯದಿಂದ ಇದ್ರೆ ಹಾಗೂ ಸ್ತನಗಳಲ್ಲಿ ಅಸಹಜ ಬದಲಾವಣೆ ಗೋಚರಿಸಿದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. 

ಗರ್ಭಾವಸ್ಥೆಯಲ್ಲಿ ಖಿನ್ನತೆ : ಇವಿಷ್ಟು ಗೊತ್ತಿದ್ದರೆ ಒಳ್ಳೆಯದು

ಬಿಳಿ ಸ್ರಾವ
ಬಿಳಿ ಸ್ರಾವ ಮಹಿಳೆಯರಲ್ಲಿ ಸಾಮಾನ್ಯವಾದ್ರೂ ಹಳದಿ ಅಥವಾ ಹಸಿರು ಬಣ್ಣ ಹೊಂದಿದ್ದು, ತುರಿಕೆ ಹಾಗೂ ವಾಸನೆಯಿಂದ ಕೂಡಿದ್ರೆ ಸೋಂಕಿನ ಸೂಚನೆಯಾಗಿದೆ. ಯೀಸ್ಟ್ ಅಥವಾ ಬ್ಯಾಕ್ಟೀರಿಯಾ ಸೋಂಕಿನಿಂದ ಅಸಹಜ ಬಿಳಿ ಸ್ರಾವ ಕಾಣಿಸಿಕೊಳ್ಳುತ್ತದೆ. ಇಂಥ ಸಮಯದಲ್ಲಿ ತಪ್ಪದೇ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. 

ತುರಿಕೆ
ಇದು ಕೂಡ ಮಹಿಳೆಯರನ್ನು ಕಾಡೋ ಸಾಮಾನ್ಯ ಸಮಸ್ಯೆ. ಯೀಸ್ಟ್ ಅಥವಾ ಬ್ಯಾಕ್ಟೀರಿಯಾ ಸೋಂಕು, ಲೈಂಗಿಕ ರೋಗಗಳು, ಚರ್ಮ ಸಮಸ್ಯೆ, ಅಲರ್ಜಿ, ಒತ್ತಡ ಮುಂತಾದ ಕಾರಣಕ್ಕೆ ಇದು ಕಾಣಿಸಿಕೊಳ್ಳುತ್ತೆ. ಮೂತ್ರನಾಳಗಳಲ್ಲಿ ಉರಿ, ಮೂತ್ರ ವಿಸರ್ಜಿಸೋವಾಗ ನೋವು, ಗುಪ್ತಾಂಗಗಳಲ್ಲಿ ಊತ ಕಂಡುಬಂದ್ರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ. 

ವಾಸನೆ
ಯೋನಿ ವಾಸನೆಯಿಂದ ಕೂಡಿದ್ರೆ ಸೋಂಕು ಉಂಟಾಗಿದೆ ಎಂದೇ ಅರ್ಥ. ಹೀಗಾಗಿ ಯೋನಿ ವಾಸನೆ ಬೀರುತ್ತಿದ್ರೆ ಸಂಕೋಚ ಪಡದೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯಬೇಕು. 

ಮಲಗಿಸೋ ರೀತಿಯಲ್ಲಿದೆ ಕಂದಮ್ಮನ ಆರೋಗ್ಯದ ಗುಟ್ಟು..!

ಅಸಹಜ ಋತುಸ್ರಾವ
ಋತುಚಕ್ರದ ಸಮಯದಲ್ಲಿ ರಕ್ತಸ್ರಾವ ಸಾಮಾನ್ಯವಾಗಿ 4-7 ದಿನವಿರುತ್ತೆ. ಒಂದು ವೇಳೆ ಋತುಸ್ರಾವ 7 ದಿನಕ್ಕಿಂತಲೂ ಹೆಚ್ಚಿದ್ದು,ವಿಪರೀತ ಹೊಟ್ಟೆನೋವು, ಸೆಳೆತ, ವಾಂತಿಯಿದ್ರೆ ನಿಮ್ಮ ಗರ್ಭಕೋಶದಲ್ಲಿ ಏನೋ ಸಮಸ್ಯೆಯಿದೆ ಎಂದೇ ಅರ್ಥ. ಹಾಗೆಯೇ 21ದಿನಗಳೊಳಗೆ ಅಥವಾ 35 ದಿನಗಳ ನಂತರ ತಿಂಗಳ ಮುಟ್ಟು ಕಾಣಿಸಿಕೊಳ್ಳೋದು ಕೂಡ ಸಮಸ್ಯೆಯ ಸಂಕೇತ. ಪಾಲಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಒಎಸ್), ಗರ್ಭಕೋಶದ ಗಡ್ಡೆಗಳು, ಒತ್ತಡ ಮುಂತಾದ ಕಾರಣಗಳಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಋತುಚಕ್ರ ಅಥವಾ ಸ್ರಾವದಲ್ಲಿ ನಿರಂತರ ವ್ಯತ್ಯಾಸ ಕಂಡುಬರುತ್ತಿದ್ರೆ ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.