ಕಿವಿ ನಮ್ಮ ದೇಹದ ಸೂಕ್ಷ್ಮಿ ಅಂಗಗಳಲ್ಲಿ ಒಂದು. ಕಿವಿಯೊಳಗೆ ಕೀಟ ಹೋದ್ರೆ ನಾನಾ ಸಮಸ್ಯೆ ಎದುರಾಗುತ್ತದೆ. ಕೀಟ ಹೋಗ್ತಿದ್ದಂತೆ ಮೊದಲು ಏನು ಮಾಡ್ಬೇಕು ಹಾಗೂ ಏನು ಮಾಡ್ಬಾರದು ಎಂಬುದನ್ನು ತಿಳಿದ್ಕೊಳ್ಳಿ.
ಹೊರಗೆ ಆಟವಾಡುವಾಗ ಅಥವಾ ಕೆಲವೊಮ್ಮೆ ಮಲಗಿರುವಾಗ ಸಣ್ಣ ಕೀಟಗಳು ಕಿವಿಯೊಳಗೆ ಸೇರಿಬಿಡುತ್ವೆ. ಸಾಮಾನ್ಯವಾಗಿ ಕೆಲವೇ ಸೆಕೆಂಡ್ಗಳಲ್ಲಿ ಕೀಟ ಹೊರಗೆ ಬರೋದಿದೆ. ಆದ್ರೆ ಕೆಲ ಕೀಟಗಳು ಕಿವಿಯೊಳಗಿದ್ದು ಹಿಂಸೆ ನೀಡುತ್ವೆ. ಉಣುಗಿನಂತ ಕೀಟಗಳು ಕಿವಿಯೊಳಗೆ ಸೇರಿದ್ರೆ ನೋವು ಸಹಿಸೋದು ಕಷ್ಟ. ಇಂಥ ಸಂದರ್ಭದಲ್ಲಿ ಏನು ಮಾಡ್ಬೇಕು ಗೊತ್ತಾ?
ಕಿವಿಯೊಳಗೆ ಕೀಟ ಸೇರಿದ್ರೆ ಏನು ಮಾಡ್ಬೇಕು?
ಕಿವಿಯೊಳಗೆ ಕೀಟ ಸೇರ್ತಿದ್ದಂತೆ ಗಾಬರಿಯಾಗೋದು ಸಾಮಾನ್ಯ. ಮಕ್ಕಳಿರಲಿ, ದೊಡ್ಡವರಿರಲಿ, ಕಿರುಚಿಕೊಂಡು ಕಿವಿಯೊಳಗೆ ಕೈ ಹಾಕ್ತಾರೆ. ತಜ್ಞರ ಪ್ರಕಾರ ಕಿವಿಯೊಳಗೆ ಕೈ ಬೆರಳು ಹಾಕೋದಾಗ್ಲಿ ಇಲ್ಲ ಬಡ್ಸ್ ಸೇರಿದಂತೆ ಬೇರೆ ಯಾವುದೇ ವಸ್ತು ಹಾಕಿ ಕೀಟವನ್ನು ತೆಗೆಯಲು ಪ್ರಯತ್ನಿಸಬಾರದು. ಇದ್ರಿಂದ ಸಮಸ್ಯೆ ಹೆಚ್ಚಾಗಬಹುದು. ಒಳಗಿರುವ ಕೀಟ, ಚರ್ಮಕ್ಕೆ ಹಾನಿ ಮಾಡ್ಬಹುದು. ಕಚ್ಚಬಹುದು. ಇಲ್ಲವೆ ಮತ್ತಷ್ಟು ಆಳಕ್ಕೆ ಹೋಗುವ ಸಾಧ್ಯತೆ ಇದೆ. ಅಲ್ದೆ ನೀವು ಬಳಸುವ ವಸ್ತು ಕಿವಿಗೆ ತೊಂದರೆಯುಂಟು ಮಾಡಬಹುದು. ಕಿವಿ ಪದರವನ್ನು ಹಾನಿಗೊಳಿಸಬಹುದು.
ಇಎನ್ ಟಿ (ENT ) ಸ್ಪೆಷಲಿಸ್ಟ್ ಮತ್ತು ಸರ್ಜನ್ ಗೀತಾ ತೇಜವಾನಿ ತಮ್ಮ ಇನ್ಸ್ಟಾಗ್ರಾಂನಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಕಿವಿಯೊಳಗೆ ಜೀವಂತ ಕೀಟ ಹೋದರೆ ಏನು ಮಾಡಬೇಕು ಎಂಬುದನ್ನು ಅವರು ತಿಳಿಸಿದ್ದಾರೆ. ಕಿವಿಯೊಳಗೆ ಕೀಟ ಹೋಗಿದೆ ಅನ್ನೋದು ಗೊತ್ತಾದ ತಕ್ಷಣ ಮೊದಲು ಗಾಬರಿಯಾಗದೆ ಶಾಂತವಾಗಿರಬೇಕು. ಕಿವಿಯೊಳಗೆ ಬೆರಳು ಹಾಕಿ ಕೀಟವನ್ನು ತೆಗೆಯಲು ಪ್ರಯತ್ನಿಸಬಾರದು ಎಂದವರು ಹೇಳಿದ್ದಾರೆ.
ಏನು ಮಾಡಬೇಕು?
ಗೀತಾ ತೇಜವಾನಿ ಅವರ ಸಲಹೆಯ ಪ್ರಕಾರ, ಕಿವಿಯೊಳಗೆ ಕೀಟ ಓಡಾಡುತ್ತಿರುವ ಅನುಭವವಾಗುತ್ತಿದ್ದರೆ 2-3 ಹನಿ ತೆಂಗಿನ ಎಣ್ಣೆ ಅಥವಾ ಸಾಸಿವೆ ಎಣ್ಣೆ ಹಾಕಬಹುದು. ಎಣ್ಣೆ ಕೀಟದ ಮೇಲೆ ಒಂದು ಪದರದಂತೆ ಆವರಿಸುವುದರಿಂದ ಕೀಟ ಸಾಯುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಎಣ್ಣೆ ಹಾಕಿದ ನಂತರವೂ ಕಿವಿಯೊಳಗೆ ಬೆರಳು ಅಥವಾ ಇಯರ್ಬಡ್ಸ್ ಹಾಕಿ ಕೀಟವನ್ನು ಸ್ವತಃ ತೆಗೆಯಲು ಪ್ರಯತ್ನಿಸಬಾರದು. ಇದರಿಂದ ಕೀಟ ಮತ್ತಷ್ಟು ಒಳಗೆ ಹೋಗಬಹುದು ಮತ್ತು ಕಿವಿಗೆ ಗಾಯ ಅಥವಾ ಇನ್ಫೆಕ್ಷನ್ ಆಗುವ ಅಪಾಯವೂ ಇರುತ್ತದೆ.
ಹೀಗಾಗಿ ಕೀಟ ಹೊರಗೆ ಬರದಿದ್ದರೆ ಅಥವಾ ಕಿವಿಯಲ್ಲಿ ನೋವು, ರಕ್ತಸ್ರಾವ, ಕೇಳಿಸುವುದರಲ್ಲಿ ತೊಂದರೆ ಇದ್ದರೆ ಸಾಧ್ಯವಾದಷ್ಟು ಬೇಗ ಇಎನ್ ಟಿ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಸುರಕ್ಷಿತವಾಗಿ ಕೀಟವನ್ನು ಕಿವಿಯಿಂದ ತೆಗೆಯುತ್ತಾರೆ. ಕಿವಿಗೆ ಯಾವುದೇ ಎಣ್ಣೆ ಹಾಕಲು ಭಯವಿದ್ರೆ ನೀವು ಕೀಟ ಕಿವಿಯೊಳಗೆ ಹೋಗ್ತಿದ್ದಂತೆ ವೈದ್ಯರನ್ನು ಭೇಟಿಯಾದಲ್ಲಿ ಉತ್ತಮ. ಇದರಿಂದ ಸಮಸ್ಯೆ ಉಲ್ಬಣವಾಗೋದನ್ನು ತಪ್ಪಿಸಬಹುದು.


