Israel Life Expectancy: ಇಸ್ರೇಲ್ನ ಜನರ ಸರಾಸರಿ ಆಯುಷ್ಯ 83 ವರ್ಷಗಳಿಗಿಂತ ಹೆಚ್ಚಿದೆ. ಈ ದೀರ್ಘಾಯಸ್ಸಿಗಾಗಿ ಇಸ್ರೇಲ್ ಜನರು ಏನು ತಿನ್ನುತ್ತಾರೆ. ಅದರ ಜೊತೆಗೆ ಏನೇನೋ ಮಾಡುತ್ತಾರೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. ನಿಮಗೂ ದೀರ್ಘಾಯಸ್ಸು ಬೇಕು ಅಂದ್ರೆ ನೀವು ಇಸ್ರೇಲ್ ಜನರ ಈ ಜೀವನ ಶೈಲಿ ಫಾಲೋ ಮಾಡಿ.
ಇಸ್ರೇಲ್ ಜನರು ಎಷ್ಟು ವರ್ಷ ಬದುಕುತ್ತಾರೆ? ಅಲ್ಲಿ ಹೆಚ್ಚಾಗಿ ತಿನ್ನುವ ಆಹಾರ ಯಾವುದು?
ಜಗತ್ತಿನಲ್ಲಿ ಹಲವು ದೇಶಗಳ ಜನರು ದೀರ್ಘಕಾಲ ಬದುಕುತ್ತಾರೆ. ಇಸ್ರೇಲ್ ಕೂಡ ಅಂತಹ ದೇಶಗಳಲ್ಲಿ ಒಂದಾಗಿದೆ. ಇಲ್ಲಿನ ಜನರ ಸರಾಸರಿ ಆಯುಷ್ಯ ಸುಮಾರು 83ರಿಂದ 84 ವರ್ಷಗಳಷ್ಟಿದೆ. ದೀರ್ಘಾಯುಷ್ಯದ ಹಿಂದೆ ಹಲವು ಕಾರಣಗಳಿವೆ. ಅವುಗಳಲ್ಲಿ ಆಹಾರ ಪದ್ಧತಿ, ದೈನಂದಿನ ಜೀವನಶೈಲಿ ಮತ್ತು ಉತ್ತಮ ಆರೋಗ್ಯ ಸೇವೆಗಳು ಪ್ರಮುಖವಾಗಿವೆ. ಇಸ್ರೇಲ್ನ ಆಹಾರ ಪದ್ಧತಿಯಲ್ಲಿ ತಾಜಾ ತರಕಾರಿಗಳು, ಹಣ್ಣುಗಳು, ಬೇಳೆಕಾಳುಗಳು ಮತ್ತು ಆಲಿವ್ ಎಣ್ಣೆಯನ್ನು ಹೆಚ್ಚಾಗಿ ಬಳಸಲಾಗುತ್ತದೆ. ಅಲ್ಲಿನ ಹಲವು ಸಾಂಪ್ರದಾಯಿಕ ಆಹಾರಗಳು ಆರೋಗ್ಯಕ್ಕೂ ಉತ್ತಮವೆಂದು ಪರಿಗಣಿಸಲಾಗುತ್ತದೆ. ಹಾಗಾದರೆ ಇಸ್ರೇಲ್ನ ಜನರು ಸಾಮಾನ್ಯವಾಗಿ ಯಾವ ಆಹಾರಗಳನ್ನು ಸೇವಿಸುತ್ತಾರೆ ಎಂಬುದನ್ನು ತಿಳಿಯೋಣ.
ಹಮ್ಮಸ್ ಮತ್ತು ಫಲಾಫೆಲ್
ಇಸ್ರೇಲ್ನಲ್ಲಿ ಹಮ್ಮಸ್ ಮತ್ತು ಫಲಾಫೆಲ್ ಬಹಳ ಜನಪ್ರಿಯವಾಗಿವೆ. ಹಮ್ಮಸ್ ಅನ್ನು ಬೇಯಿಸಿದ ಕಡಲೆ, ಎಳ್ಳಿನ ಪೇಸ್ಟ್, ನಿಂಬೆ ರಸ, ಬೆಳ್ಳುಳ್ಳಿ ಮತ್ತು ಆಲಿವ್ ಎಣ್ಣೆಯನ್ನು ಬಳಸಿ ತಯಾರಿಸಲಾಗುತ್ತದೆ. ಇದನ್ನು ಬ್ರೆಡ್ ಅಥವಾ ಸಲಾಡ್ನೊಂದಿಗೆ ಸೇವಿಸಲಾಗುತ್ತದೆ.
ಇನ್ನು ಫಲಾಫೆಲ್ ಕಡಲೆ ಅಥವಾ ಇತರ ಬೇಳೆಕಾಳುಗಳನ್ನು ಬಳಸಿ ತಯಾರಿಸುವ ಖಾದ್ಯವಾಗಿದೆ. ಇವುಗಳಿಗೆ ಸಣ್ಣ ಉಂಡೆಗಳ ಆಕಾರ ನೀಡಿ ಕರಿಯಲಾಗುತ್ತದೆ. ಕಡಲೆಯಿಂದ ತಯಾರಿಸುವ ಈ ಎರಡೂ ಆಹಾರಗಳಲ್ಲಿ ಪ್ರೋಟೀನ್ ಮತ್ತು ನಾರಿನಂಶ ದೊರೆಯುತ್ತದೆ.
ಊಟದಲ್ಲಿ ತಾಜಾ ತರಕಾರಿಗಳು ಮತ್ತು ಸಲಾಡ್ಗೆ ಹೆಚ್ಚಿನ ಆದ್ಯತೆ
ಇಸ್ರೇಲ್ನ ಜನರು ತಮ್ಮ ಆಹಾರದಲ್ಲಿ ಸೌತೆಕಾಯಿ, ಟೊಮೆಟೊ, ಈರುಳ್ಳಿ ಮತ್ತು ಇತರ ತಾಜಾ ತರಕಾರಿಗಳನ್ನು ಸೇರಿಸಿಕೊಳ್ಳುತ್ತಾರೆ. ಇವುಗಳಿಂದ ಸಲಾಡ್ ತಯಾರಿಸಿ ಊಟದ ಜೊತೆಗೆ ಸೇವಿಸುತ್ತಾರೆ. ಇದಲ್ಲದೆ, ಅಲ್ಲಿ ಆಲಿವ್ ಎಣ್ಣೆಯ ಬಳಕೆಯೂ ಹೆಚ್ಚಾಗಿದೆ. ಇದರಲ್ಲಿ ಆರೋಗ್ಯಕರ ಕೊಬ್ಬಿನಂಶವಿದ್ದು, ಸೂಕ್ತ ಪ್ರಮಾಣದಲ್ಲಿ ಸೇವಿಸಿದಾಗ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಪ್ರತಿದಿನ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ಗಳು ಹಾಗೂ ಇತರ ಪೋಷಕಾಂಶಗಳು ದೊರೆಯುತ್ತವೆ.
ಬೇಳೆಕಾಳುಗಳು, ಹಣ್ಣುಗಳು ಮತ್ತು ಧಾನ್ಯಗಳಿಗೂ ಮಹತ್ವ
ಇಸ್ರೇಲ್ನ ಜನರ ಆಹಾರ ಪದ್ಧತಿಯಲ್ಲಿ ಬೇಳೆಕಾಳುಗಳು, ವಿವಿಧ ದ್ವಿದಳ ಧಾನ್ಯಗಳು, ಸಂಸ್ಕರಿಸದ ಧಾನ್ಯಗಳು ಮತ್ತು ತಾಜಾ ಹಣ್ಣುಗಳಿಗೂ ಪ್ರಮುಖ ಸ್ಥಾನವಿದೆ. ಇವು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಹೊಟ್ಟೆ ಹೆಚ್ಚು ಸಮಯ ತುಂಬಿದ ಅನುಭವ ನೀಡುತ್ತವೆ. ಅಲ್ಲಿನ ಅನೇಕರು ಮೀನು, ವಿವಿಧ ಬಗೆಯ ಬೀಜಗಳು ಮತ್ತು ಡ್ರೈ ಫ್ರುಟ್ಸ್ ಸೇವಿಸುತ್ತಾರೆ. ಜೊತೆಗೆ, ಸಮತೋಲಿತ ಆಹಾರ ಸೇವನೆ ಮತ್ತು ಪ್ರತಿದಿನ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೂ ಆದ್ಯತೆ ನೀಡುತ್ತಾರೆ.
ದೀರ್ಘಾಯುಷ್ಯಕ್ಕೆ ಕೇವಲ ಆಹಾರ ಪದ್ಧತಿಯೊಂದೇ ಕಾರಣವಲ್ಲ. ಉತ್ತಮ ಆರೋಗ್ಯ ಸೇವೆಗಳು, ವ್ಯಾಯಾಮ, ದೈನಂದಿನ ಜೀವನಶೈಲಿ ಮತ್ತು ಇತರ ಸಾಮಾಜಿಕ ಹಾಗೂ ಪರಿಸರ ಸಂಬಂಧಿತ ಅಂಶಗಳೂ ಮಹತ್ವದ ಪಾತ್ರ ವಹಿಸುತ್ತವೆ.







