Bed Bug Bite: ತಿಗಣೆ ಕಚ್ಚುವುದರಿಂದ ಯಾವ ಕಾಯಿಲೆ ಬರುತ್ತದೆ? ಬೆಡ್ಬಗ್ ಕಚ್ಚಿದಾಗ ಚರ್ಮದ ಮೇಲೆ ಕಾಣಿಸಿಕೊಳ್ಳುವ ಲಕ್ಷಣಗಳು ಯಾವುವು? ಇದು ಎಷ್ಟು ಅಪಾಯಕಾರಿ ಮತ್ತು ಕಚ್ಚಿದಾಗ ಏನು ಮಾಡಬೇಕು? ತಿಗಣೆ ಗಳನ್ನು ಗುರುತಿಸುವುದು ಹೇಗೆ ಎಂಬ ಸಂಪೂರ್ಣ ಆರೋಗ್ಯ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯಿರಿ.
ಮನೆಯಲ್ಲಿ ತಿಗಣೆ ಕಾಟವೇ?
ತಿಗಣೆಗಳು ಸಾಮಾನ್ಯವಾಗಿ ಮನೆಯ ಹಾಸಿಗೆ, ಹಾಸಿಗೆಯ ಮೆತ್ತೆ ಹಾಗೂ ಅದರ ಸುತ್ತಮುತ್ತ ಅಡಗಿಕೊಂಡು ವಾಸಿಸುವ ಸಣ್ಣ ಕೀಟಗಳಾಗಿವೆ. ಇವು ರಾತ್ರಿ ಸಮಯದಲ್ಲಿ ಹೆಚ್ಚು ಸಕ್ರಿಯವಾಗಿರುತ್ತವೆ. ನಾವು ಮಲಗಿರುವಾಗ ದೇಹದ ರಕ್ತವನ್ನು ಹೀರಿ ಆಹಾರವಾಗಿ ಬಳಸುತ್ತವೆ. ತಿಗಣೆ ಕಚ್ಚಿದ ತಕ್ಷಣ ಕೆಲವೊಮ್ಮೆ ನಮಗೆ ತಿಳಿಯುವುದಿಲ್ಲ. ಏಕೆಂದರೆ ಕಚ್ಚುವ ಸಮಯದಲ್ಲಿ ಇವು ಚರ್ಮದ ಮೇಲೆ ಒಂದು ರೀತಿಯ ವಸ್ತುವನ್ನು ಬಿಡುತ್ತವೆ. ಇದರಿಂದ ಸ್ವಲ್ಪ ಸಮಯದವರೆಗೆ ಕಚ್ಚಿದ ಜಾಗದಲ್ಲಿ ಯಾವುದೇ ಅನುಭವವಾಗುವುದಿಲ್ಲ. ನಂತರ ಚರ್ಮದ ಮೇಲೆ ತುರಿಕೆ, ಕೆಂಪು ಗುರುತುಗಳು ಅಥವಾ ಉಬ್ಬಿದ ಗುಳ್ಳೆಗಳು ಕಾಣಿಸಿಕೊಳ್ಳಬಹುದು.
ತಿಗಣೆ ಕಚ್ಚಿದರೆ ಯಾವ ಕಾಯಿಲೆ ಬರುತ್ತದೆ?
ಸಾಮಾನ್ಯವಾಗಿ ತಿಗಣೆ ಕಚ್ಚುವುದರಿಂದ ಯಾವುದೇ ಗಂಭೀರ ಕಾಯಿಲೆ ಬರುವುದಿಲ್ಲ. ಈ ಕೀಟಗಳು ರೋಗಗಳನ್ನು ಹರಡುವ ಕೀಟಗಳೆಂದು ಪರಿಗಣಿಸಲಾಗುವುದಿಲ್ಲ. ಆರೋಗ್ಯ ಮಾಹಿತಿಯನ್ನು ನೀಡುವ Cleveland Clinic ಸಂಸ್ಥೆಯ ಪ್ರಕಾರ, ತಿಗಣೆ ಗಳು ಯಾವುದೇ ಕಾಯಿಲೆಗಳನ್ನು ಹರಡುವುದಿಲ್ಲ. ಇವು ಕಚ್ಚುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಸೋಂಕು ಹರಡುವುದಿಲ್ಲ. ಆದರೆ ಇವು ಕಚ್ಚುವುದರಿಂದ ಉಂಟಾಗುವ ತುರಿಕೆ ಮತ್ತು ಚರ್ಮದ ಉರಿ ಸಾಕಷ್ಟು ತೊಂದರೆ ನೀಡಬಹುದು. ಹೆಚ್ಚಿನ ಜನರಲ್ಲಿ ತಿಗಣೆ ಕಚ್ಚಿದ ಗುರುತುಗಳು ಸ್ವಲ್ಪ ಸಮಯದ ನಂತರ ಗುಣವಾಗುತ್ತವೆ. ಆದರೆ ಕೆಲವರಲ್ಲಿ ಕಚ್ಚಿದ ಜಾಗದಲ್ಲಿ ಹೆಚ್ಚಿನ ಊತ ಕಾಣಿಸಿಕೊಳ್ಳಬಹುದು. ತುರಿಕೆ ಮತ್ತು ನೋವು ಕೂಡ ಹೆಚ್ಚಾಗಬಹುದು. ನಿರಂತರವಾಗಿ ತುರಿಕೆ ಮಾಡಿಕೊಳ್ಳುವುದರಿಂದ ಚರ್ಮದ ಮೇಲೆ ಗಾಯಗಳು ಅಥವಾ ಸಣ್ಣ ಸೀಳುಗಳು ಉಂಟಾಗಬಹುದು. ಇದರಿಂದ ಚರ್ಮದ ಸೋಂಕು ಉಂಟಾಗುವ ಅಪಾಯವೂ ಇರುತ್ತದೆ.
ತಿಗಣೆ ಕಚ್ಚಿದರೆ ಗುರುತುಗಳು ಹೇಗೆ ಕಾಣಿಸುತ್ತವೆ?
ತಿಗಣೆ ಕಚ್ಚಿದ ಗುರುತುಗಳು ಪ್ರತಿಯೊಬ್ಬರ ಚರ್ಮದ ಮೇಲೆ ಒಂದೇ ರೀತಿಯಾಗಿ ಕಾಣಿಸುವುದಿಲ್ಲ. ಕೆಲವರಲ್ಲಿ ಚರ್ಮದ ಮೇಲೆ ಸಣ್ಣದಾಗಿ ಉಬ್ಬಿದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಈ ಗುಳ್ಳೆಗಳು ನೇರವಾದ ಸಾಲಿನಲ್ಲಿ, ಅಂಕುಡೊಂಕಾದ ಸಾಲಿನಲ್ಲಿ ಅಥವಾ ದೇಹದ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಗುಳ್ಳೆಗಳ ಮಧ್ಯಭಾಗ ಗಾಢ ಕೆಂಪು ಬಣ್ಣದಲ್ಲಿ ಕಾಣಿಸಬಹುದು. ಇನ್ನು ಕೆಲವರಲ್ಲಿ ಕಚ್ಚಿದ ನಂತರ ಸಣ್ಣ ಕೆಂಪು ಅಥವಾ ನೇರಳೆ ಬಣ್ಣದ ಉಬ್ಬಿದ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಚರ್ಮದ ಮೇಲೆ ನೀರಿನಿಂದ ತುಂಬಿದ ಸಣ್ಣ ಗುಳ್ಳೆಗಳೂ ಉಂಟಾಗಬಹುದು. ಆದರೆ ಕೆಲವರ ಚರ್ಮದ ಮೇಲೆ ತಿಗಣೆ ಕಚ್ಚಿದರೂ ಯಾವುದೇ ಸ್ಪಷ್ಟ ಗುರುತುಗಳು ಕಾಣಿಸಿಕೊಳ್ಳುವುದಿಲ್ಲ.
ತಿಗಣೆ ಕಚ್ಚುವುದು ಅಪಾಯಕಾರಿಯೇ?
ಹೆಚ್ಚಿನ ಸಂದರ್ಭಗಳಲ್ಲಿ ತಿಗಣೆ ಕಚ್ಚುವುದರಿಂದ ಗಂಭೀರ ಅಪಾಯ ಉಂಟಾಗುವುದಿಲ್ಲ. ಆದರೆ ಕೆಲವು ಜನರಲ್ಲಿ ಕಚ್ಚಿದ ನಂತರ ದೇಹದಲ್ಲಿ ತೀವ್ರ ಪ್ರತಿಕ್ರಿಯೆ ಉಂಟಾಗಬಹುದು. ಅತಿಯಾದ ತುರಿಕೆ, ನೋವು ಮತ್ತು ಊತದಿಂದ ಸಾಕಷ್ಟು ತೊಂದರೆಯಾಗಬಹುದು. ನಿರಂತರವಾಗಿ ತುರಿಕೆ ಮಾಡಿಕೊಳ್ಳುವುದರಿಂದ ಚರ್ಮ ಒಡೆದು ಸೋಂಕು ಉಂಟಾಗುವ ಸಾಧ್ಯತೆಯೂ ಇರುತ್ತದೆ. ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ತಿಗಣೆ ಕಚ್ಚುವುದರಿಂದ ತೀವ್ರ ಅಲರ್ಜಿಯ ಪ್ರತಿಕ್ರಿಯೆ ಉಂಟಾಗಬಹುದು. ಇದರ ಪ್ರಮುಖ ಲಕ್ಷಣಗಳೆಂದರೆ ಉಸಿರಾಟದ ತೊಂದರೆ, ನಾಲಿಗೆಯಲ್ಲಿ ಊತ, ಚರ್ಮದ ಮೇಲೆ ಗುಳ್ಳೆಗಳು, ಜ್ವರ, ಹೃದಯ ಬಡಿತದಲ್ಲಿ ಏರುಪೇರು ಮತ್ತು ದೇಹದಲ್ಲಿ ತೀವ್ರ ಅಸ್ವಸ್ಥತೆ ಕಾಣಿಸಿಕೊಳ್ಳುವುದು. ಇಂತಹ ಲಕ್ಷಣಗಳು ಕಂಡುಬಂದರೆ ತಡಮಾಡದೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು. ವಿ
ತಿಗಣೆ ಕಚ್ಚಿದಾಗ ಏನು ಮಾಡಬೇಕು?
ತಿಗಣೆ ಕಚ್ಚಿದ ಜಾಗವನ್ನು ಮೊದಲು ಸಾಬೂನು ಮತ್ತು ನೀರಿನಿಂದ ನಿಧಾನವಾಗಿ ಸ್ವಚ್ಛಗೊಳಿಸಬೇಕು. ತುರಿಕೆಯನ್ನು ಕಡಿಮೆ ಮಾಡಲು ತುರಿಕೆ ನಿವಾರಕ ಕ್ರೀಮ್ ಅಥವಾ ಲೋಷನ್ ಬಳಸಬಹುದು. ಒಂದು ವೇಳೆ ತುರಿಕೆ ಅತಿಯಾಗಿ ಹೆಚ್ಚಾದರೆ ಅಥವಾ ದಿನನಿತ್ಯದ ಕೆಲಸಗಳಿಗೂ ತೊಂದರೆಯಾಗುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಉತ್ತಮ.










