ಹೃದ್ರೋಗಿಗಳಿಗೆ ಮಲಗಲು ಒಂದೇ ನಿರ್ದಿಷ್ಟ ಭಂಗಿಯಿಲ್ಲ, ಆದರೆ ಉಸಿರಾಟಕ್ಕೆ ಆರಾಮದಾಯಕವಾದ ಭಂಗಿ ಆಯ್ಕೆ ಮಾಡಿಕೊಳ್ಳುವುದು ಮುಖ್ಯ. ಎಡ ಅಥವಾ ಬಲ ಮಗ್ಗುಲಿನಲ್ಲಿ ಮಲಗುವುದು ಸುರಕ್ಷಿತ, ಆದರೆ ದಿಂಬುಗಳ ಸಹಾಯದಿಂದ ತಲೆ ಎತ್ತರಿಸಿ ಮಲಗುವುದು ಉಸಿರಾಟಕ್ಕೆ ಸಹಕಾರಿ. ವೈದ್ಯರು ಹೇಳಿದ್ದೇನು ತಿಳಿಯಿರಿ.

ನಿದ್ದೆ ಎಂದರೆ ಸಾಮಾನ್ಯವಾಗಿ ಆರಾಮಕ್ಕೆ ಸಂಬಂಧಿಸಿದ ವಿಚಾರ ಎಂದುಕೊಳ್ಳುತ್ತೇವೆ. ಆದರೆ ಹೃದ್ರೊಗದಿಂದ ಬಳಲುತ್ತಿರುವವರಿಗೆ ಇದು ಬೇರೆ ರೀತಿಯದ್ದಾಗಿದೆ. ರಾತ್ರಿ ಮಲಗುವಾಗ ದೇಹದಲ್ಲಿ ಕಾಣಿಸುವ ಕೆಲವು ಬದಲಾವಣೆಗಳು ಆರೋಗ್ಯದ ಕುರಿತು ಕೆಲವು ಸೂಚನೆಗಳು ನೀಡಬಹುದು. ಹೃದಯದ ಸಮಸ್ಯೆ ಇರುವವರು ರಾತ್ರಿ ಯಾವ ಭಂಗಿಯಲ್ಲಿ ಮಲಗಬೇಕು, ತಲೆದಿಂಬು ಇಟ್ಟುಕೊಳ್ಳುವುದು ಸೂಕ್ತವೇ? ಹಾರ್ಟ್ ಪೆಶೆಂಟ್ ಗಳು ರಾತ್ರಿ ಊಟದ ನಂತರ ಏನು ಮಾಡಬೇಕು? ಮಲಗುವ ಮುನ್ನ ತಿಳಿದಿರಬೇಕಾ ವಿಷಯಗಳೇನು ಎಂಬುದು ಇಲ್ಲಿ ತಿಳಿಯೋಣ.

ಹಾರ್ಟ್ ಪ್ರಾಬ್ಲಂ ಇರುವ ಎಲ್ಲರಿಗೂ ಅನ್ವಯಿಸುವ ಒಂದೇ ರೀತಿಯ ಅಥವಾ ಇದೇ ಭಂಗಿಯಲ್ಲಿ ಮಲಗಬೇಕು ಎಂಬ ನಿಯಮವೇನು ಇಲ್ಲ. ಆದರೆ ವ್ಯಕ್ತಿಯ ಹೃದಯದ ಸಮಸ್ಯೆ, ಕಾಣಿಸಿಕೊಳ್ಳುವ ಲಕ್ಷಣಗಳು ಸೇರಿ ಒಟ್ಟಾರೆ ಆರೋಗ್ಯ ಸ್ಥಿತಿಯನ್ನ ಆಧರಿಸಿ ಮಲಗುವ ಭಂಗಿ ಬದಲಾಗಬಹುದು.

ಹಾಗಾದರೆ ಹೃದ್ರೋಗಿಗಳು ಹೇಗೆ? ಯಾವ ಭಂಗಿಯಲ್ಲಿ ಮಲಗಬೇಕು?

ಐಎಸ್‌ಐಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಕಾರ್ಡಿಯಾಕ್ ಸೈನ್ಸಸ್ ವಿಭಾಗದ ನಿರ್ದೇಶಕ ಹಾಗೂ ಮುಖ್ಯಸ್ಥ ಡಾ. ಅಸೀಮ್ ಧಲ್ ಹೇಳುವ ಪ್ರಕಾರ, ಹೃದಯದ ಸಮಸ್ಯೆ ನಿಯಂತ್ರಣದಲ್ಲಿರುವ ವ್ಯಕ್ತಿ ಯಾವುದೇ ಲಕ್ಷಣಗಳು ಹೆಚ್ಚಾಗದಂತೆ ಆರಾಮವಾಗಿ ಉಸಿರಾಡಲು ಸಾಧ್ಯವಾಗುವ ಭಂಗಿಯಲ್ಲಿ ಮಲಗುವುದು ಸೂಕ್ತ ಎಂದಿದ್ದಾರೆ. ಆದರೆ ಇಲ್ಲಿ ಒಂದು ವಿಷಯ ಗಮನಿಸಬೇಕು ಮಲಗುವ ಭಂಗಿ ನಿಮಗೆ ಆರಾಮ ನೀಡಬಹುದೇ ಹೊರತು ಹೃದಯದ ಮೂಲ ಸಮಸ್ಯೆ ಗುಣಪಡಿಸುವುದಿಲ್ಲ.

ಎಡಮಗ್ಗುಲಿನಲ್ಲಿ ಮಲಗುವುದು ಹಾನಿಕಾರಕವೇ?

ಹೃದಯ ಎಡಭಾಗದಲ್ಲಿರುವುದರಿಂದ ಹೃದ್ರೋಗಿಗಳು ಎಡ ಮಗ್ಗುಲಿನಲ್ಲಿ ಮಲಗಬಾರದೆಂದು ಬಹಳ ಜನ ನಂಬಿದ್ದಾರೆ. ಹೀಗಾಗಿ ಹೃದ್ರೋಗಿಗಳು ಬಲ ಮಗ್ಗುಲಿಗೆ ಮಲಗಿಕೊಳ್ಳುತ್ತಾರೆ. ಆದರೆ ಈ ನಂಬಿಕೆ ನಿಜವಲ್ಲ. ಹೃದಯ ಎದೆಯ ಒಳಭಾಗದಲ್ಲಿ ಸುರಕ್ಷಿತವಾಗಿರುವುದರಿಂದ ಹೃದಯ ಸಮಸ್ಯೆ ಇರುವವರು ಎಡ ಮಗ್ಗುಲಿನಲ್ಲಿ ಮಲಗಿದರೂ ಹೃದಯಕ್ಕೆ ಹಾನಿಯಾಗುವುದಿಲ್ಲ. ಆದರೆ ಕೆಲವರಿಗೆ ಈ ಭಂಗಿಯಲ್ಲಿ ಹೃದಯಬಡಿತ ಹೆಚ್ಚು ಸ್ಪಷ್ಟವಾಗಿ ಅನುಭವವಾಗಬಹುದು ಇದರಿಂದ ಅಸ್ವಸ್ಥತೆ ಉಂಟಾಗಬಹುದು.

ಒಂದು ವೇಳೆ ಎಡ ಮಗ್ಗುಲಿನಲ್ಲಿ ಮಲಗುವುದು ಆರಾಮದಾಯಕವೆನಿಸದಿದ್ದರೆ ಬಲ ಮಗ್ಗುಲಿನಲ್ಲಿ ಮಲಗುವುದು ಅಥವಾ ದೇಹದ ಮೇಲ್ಭಾಗವನ್ನು ಸ್ವಲ್ಪ ಎತ್ತರದಲ್ಲಿಡುವ ರೀತಿ ಮಲಗುವುದು ಸೂಕ್ತ ಎಂದು ಡಾ. ಧಲ್ ಹೇಳುತ್ತಾರೆ.

ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ಇತ್ತೀಚಿನ ಗೈಡ್‌ಲೈನ್ಸ್‌ನಲ್ಲೂ ಹೃದ್ರೋಗಿಗಳ ಮಲಗುವ ಭಂಗಿ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ ಎಂದು ತಿಳಿಸಲಾಗಿದೆ. ಹಾರ್ಟ್ ಫೇಲ್, ಸ್ಲೀಪ್ ಅಪ್ನಿಯಾದಂತಹ ಕೆಲವು ಸಮಸ್ಯೆಗಳಲ್ಲಿ ಮಲಗುವ ಭಂಗಿಗೆ ಹೆಚ್ಚಿನ ಮಹತ್ವ ಇರಬಹುದು.

ಹೃದ್ರೋಗಿಗಳು ತಲೆದಿಂಬು ಬಳಸಬಹುದು?

ಹೃದಯದ ಸಮಸ್ಯೆ ಇರುವ ನೇರವಾಗಿ ಅಂದರೆ ತಲೆದಿಂಬು ಬಳಸದೆ ಮಲಗಿದಾಗ ಉಸಿರಾಟ ಕಷ್ಟವಾಗಬಹುದು. ಅಂತಹ ಸಂದರ್ಭದಲ್ಲಿ ತಲೆದಿಂಬು ಬಳಸಿ ತಲೆ ಮತ್ತು ದೇಹದ ಭಾಗ ಎತ್ತರದಲ್ಲಿರುವಂತಹ ಭಂಗಿಯಲ್ಲಿ ಮಲಗುವುದು ಆರಾಮದಾಯಕ, ಉಸಿರಾಟವೂ ಸಹಜವಾಗಿ ನಡೆಯುತ್ತದೆ. ಆದರೆ ಇಲ್ಲಿ ಒಂದು ಮುಖ್ಯ ವಿಷಯವಿದೆ. ಆರಾಮವಾಗಿ ಮಲಗಲು ಇದ್ದಕ್ಕಿದ್ದಂತೆ ಹಲವು ದಿಂಬುಗಳು ಬೇಕೆನಿಸುತ್ತಿದ್ದರೆ ಅದನ್ನ ಕೇವಲ ಆರಾಮ ಎನಿಸುವ ಕಾರಣಕ್ಕೆಂದು ಭಾವಿಸಿ ನಿರ್ಲಕ್ಷ್ಯಿಸಬಾರದು ಮತ್ತೊಮ್ಮೆ ವೈದ್ಯರಿಂದ ಹೃದಯದ ತಪಾಸಣೆ ಮಾಡಿಸುವುದು ಒಳ್ಳೆಯದು.

ಹೃದ್ರೋಗಿಗಳು ಈ ಭಂಗಿಯಲ್ಲಿ ಮಲಗುವ ಬಗ್ಗೆ ಎಚ್ಚರಿಕೆ

ಹೃದ್ರೊಗಿಗಳು ಎಡಕ್ಕೋ, ಬಲಕ್ಕೋ ಮಗ್ಗುಲು ಬದಲಿಸಿ ಮಲಗುವುದಕ್ಕಿಂತ ಹೆಚ್ಚಾಗಿ ಆ ಭಂಗಿಯಲ್ಲಿ ಮಲಗಿದಾಗ ದೇಹದಲ್ಲಿ ಏನೇನು ಬದಲಾವಣೆಗಳಾಗುತ್ತವೆ ಎಂಬುದು ತುಂಬಾ ಮುಖ್ಯ. ಅಂದರೆ ಯಾವುದೇ ಭಂಗಿಯಲ್ಲಿ ಮಲಗಿದಾಗ ಉಸಿರಾಟ ತೊಂದರೆ, ಎದೆನೋವು ಅಥವಾ ದೇಹದಲ್ಲಿ ಅಸ್ವಸ್ಥತೆ, ತಲೆತಿರುಗುವಿಕೆ, ಅಸಹಜ ಹೃದಯಬಡಿತ ಕಂಡುಬಂದರೆ ಎಚ್ಚರಿಕೆ ವಹಿಸಬೇಕು. ಈ ಲಕ್ಷಣಗಳು ಕಂಡುಬಂದಾಗಲೂ ಅದೇ ಭಂಗಿಯಲ್ಲಿ ಮಲಗುವುದು ಒಳ್ಳೆಯದಲ್ಲ.

ಇನ್ನು ಹೊಟ್ಟೆಯ ಮೇಲೆ ಮಲಗಿಕೊಳ್ಳುವುದು ಎಲ್ಲ ಸಂದರ್ಭದಲ್ಲೂ ಅಪಾಯಕಾರಿ ಎಂದೇನಿಲ್ಲ. ಆದರೆ ಇದರಿಂದ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದರೆ ಆ ಭಂಗಿಯಲ್ಲಿ ಮಲಗುವುದು ತಪ್ಪಿಸಿ. ಬೇರೆ ಭಂಗಿಯಲ್ಲಿ ಅಥವಾ ತಲೆ, ದೇಹ ಸ್ವಲ್ಪ ಎತ್ತರಿಸಿ ಅಂಗಾತ ಸ್ಥಿತಿಯಲ್ಲಿ ಮಲಗುವುದು ಉತ್ತಮ.

ಸ್ಲೀಪ್ ಅಪ್ನಿಯಾ ಇದ್ದವರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು

ಸ್ಲೀಪ್ ಅಪ್ನಿಯಾ ಇರುವವರಲ್ಲಿ ಮತ್ತೊಂದು ವಿಚಾರ ಗಮನಿಸಬೇಕು. ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಪ್ರಕಾರ ಬೆನ್ನಿನ ಮೇಲೆ ಮಲಗಿದಾಗ ಒಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ(Obstructive Sleep Apnea) ಸಮಸ್ಯೆ ಹೆಚ್ಚಾಗಬಹುದು. ಕೆಲವರಿಗೆ ಮಗ್ಗುಲಿನಲ್ಲಿ ಮಲಗುವುದರಿಂದ ಈ ಸಮಸ್ಯೆ ಕಡಿಮೆಯೂ ಆಗುತ್ತದೆ.

ಮಲಗುವಾಗ ಕಾಣಿಸುವ ಯಾವ ಸಮಸ್ಯೆ ಹೃದಯದ ಎಚ್ಚರಿಕೆಯ ಸೂಚನೆ?

ರಾತ್ರಿ ಊಟದ ಬಳಿಕ ಮಲಗುವಾಗ ಗಮನಿಸಬೇಕಾದ ಪ್ರಮುಖ ವಿಚಾರ ಎಂದರೆ ಮಲಗುವ ಭಂಗಿಯೇ ಆಗಬೇಕೆಂದೇನಿಲ್ಲ. ಆದರೆ ಸಾಮಾನ್ಯವಾಗಿ ಯಾವುದೇ ಭಂಗಿಯಲ್ಲಿ ಮಲಗಿದರೂ ದೇಹದಲ್ಲಿ ಏನಾದರೂ ಬದಲಾವಣೆ ಕಾಣಿಸಿಕೊಳ್ಳುತ್ತಿದೆ ಎಂಬುದನ್ನ ಹೃದ್ರೋಗಿಗಳು ಗಮನಿಸುವುದು ಬಹಳ ಮುಖ್ಯ.

ಈ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ಇರಲಿ

  • ಹಠಾತ್ ಉಸಿರಾಡಲು ಒದ್ದಾಡುತ್ತಾ ಎಚ್ಚರವಾಗುವುದು
  • ಮಲಗಿದಾಗ ಹೊಸದಾಗಿ ಉಸಿರಾಟದ ತೊಂದರೆ ಕಾಣಿಸಿಕೊಳ್ಳುವುದು
  • ಮೊದಲಿಗಿಂತ ಹೆಚ್ಚಾಗುವುದು.
  • ಮಲಗಲು ಹೆಚ್ಚು ದಿಂಬುಗಳ ಬೇಕೆನಿಸುವುದು,
  • ಕಾಲುಗಳಲ್ಲಿ ಊತ ಹೆಚ್ಚಾಗುವುದು ಹೃದಯ ವೈಫಲ್ಯ ಉಲ್ಬಣಗೊಳ್ಳುತ್ತಿರುವ ಸೂಚನೆಯಾಗಿರಬಹುದು.

ಇಂತಹ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರಿಗೆ ತಿಳಿಸಬೇಕು ಎಂದು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸಲಹೆ ನೀಡಿದೆ.

ಹೊಸದಾಗಿ ಎದೆನೋವು ಕಾಣಿಸಿಕೊಳ್ಳುವುದು, ಮೂರ್ಛೆ ಹೋಗುವುದು, ತೀವ್ರ ಉಸಿರಾಟದ ತೊಂದರೆ ಅಥವಾ ಬೆವರು ಮತ್ತು ವಾಕರಿಕೆಯೊಂದಿಗೆ ಎದೆನೋವು ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.

ಡಾ. ಧಲ್ ಅವರ ಪ್ರಕಾರ, ಹೃದ್ರೋಗಿಗಳು ‘ಯಾವ ಮಗ್ಗುಲಿನಲ್ಲಿ ಮಲಗಬೇಕು?’ ಎಂಬುದಕ್ಕಿಂತ ಹೃದಯದ ಸಮಸ್ಯೆಯನ್ನು ಸರಿಯಾಗಿ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯ. ಹೃದಯಾಘಾತದ ನಂತರ, ಹೃದಯಕ್ಕೆ ಸಂಬಂಧಿಸಿದ ಯಾವುದೇ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಬಳಿಕ ಹೃದಯದಲ್ಲಿ ಸಮಸ್ಯೆ ಇರುವುದು ದೃಢಪಟ್ಟಿದ್ದರೆ, ಮಲಗುವ ಕುರಿತ ಸಲಹೆಗಳನ್ನು ವೈದ್ಯರು ಸೂಚಿಸಿರುವ ಔಷಧಗಳು ನಿಯಮಿತ ತಪಾಸಣೆ ಮತ್ತು ಹೃದ್ರೋಗ ತಜ್ಞರ ಸಲಹೆಗಳನ್ನ ತಪ್ಪದೇ ಫಾಲೋ ಮಾಡಬೇಕು.