ಕೆಮ್ಮು, ನೆಗಡಿ, ಗಂಟಲು ಕಿರಿಕಿರಿಗೆ ರಾಮಬಾಣ ಶುಂಠಿ ಬರ್ಫಿ; ಮನೆಯಲ್ಲೇ ಮಾಡುವ ಸರಳ ವಿಧಾನ
Ginger Barfi : ವಾತಾವರಣ ಬದಲಾದಾಗ ಮಕ್ಕಳು ಮತ್ತು ಹಿರಿಯರಲ್ಲಿ ಕಾಡುವ ನೆಗಡಿ, ಒಣ ಕೆಮ್ಮು, ಗಂಟಲು ನೋವು ಸಾಮಾನ್ಯ. ಅತ್ಯುತ್ತಮ ಮನೆ ಮದ್ದು ಅಂದರೆ ಶುಂಠಿ ಮುರಬ್ಬಾ. ಅದನ್ನು ಹೇಗೆ ತಯಾರಿಸೋದು ಅನ್ನೋ ವಿವರ ಇಲ್ಲಿದೆ.

ಜಿಂಜರ್ ಕ್ಯಾಂಡಿ
ಒಂದಿನ ಮಳೆ, ಶೀತ, ಚಳಿ, ಗಾಳಿ, ಬಿಸಿಲು ಹೀಗೆ ಹವಾಮಾನ ಬದಲಾಗುತ್ತಲೇ ಇರುತ್ತದೆ. ಇದರಿಂದ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರೂ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ನೆಗಡಿ, ಒಣ ಕೆಮ್ಮು, ಗಂಟಲು ನೋವು, ವಾಂತಿ-ತಲೆಸುತ್ತು ಬರುವ ಲಕ್ಷಣಗಳೆಲ್ಲ ಕಾಣಿಸಿಕೊಳ್ತವೆ. ಇದಕ್ಕೆ ಸುಲಭ ಮನೆಮದ್ದು ಅಂದರೆ.. ‘ಶುಂಠಿ ಮುರಬ್ಬಾ’ (Ginger Candy). ಔಷಧಿ ಅಂಗಡಿಗಳ ಮಾತ್ರೆಗಳಿಗಿಂತ ಈ ಶುಂಠಿ ಮಿಠಾಯಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ..
ಬೇಕಾಗುವ ಪದಾರ್ಥಗಳು
- ಹಸಿ ಶುಂಠಿ: 1 ಕಪ್ (ಸಿಪ್ಪೆ ತೆಗೆದು, ಸಣ್ಣಗೆ ಹೆಚ್ಚಿದ್ದು)
- ಬೆಲ್ಲದ ಪುಡಿ: 1 ಕಪ್
- ಸಕ್ಕರೆ: 1 ಕಪ್
- ಉಪ್ಪು: 1 ಚಿಟಿಕೆ
- ನೀರು: 1 ರಿಂದ 2 ಚಮಚ (ರುಬ್ಬಲು ಮಾತ್ರ)
- ತುಪ್ಪ ಅಥವಾ ಎಣ್ಣೆ: ತಟ್ಟೆಗೆ ಸವರಲು ಸ್ವಲ್ಪ
ಮಾಡುವ ವಿಧಾನ
- ಶುಂಠಿಯನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆಯಿರಿ
- ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿ ಜಾರಿಗೆ ಹಾಕಿ
- ಕೇವಲ 1-2 ಚಮಚ ನೀರು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ
- ಅದೇ ಮಿಕ್ಸಿ ಜಾರಿಗೆ ಸಕ್ಕರೆ ಮತ್ತು ಬೆಲ್ಲದ ಪುಡಿ ಹಾಕಿ ತಿರುಗಿಸಿ
ಇಲ್ಲಿ ಕೇವಲ ಬೆಲ್ಲ ಹಾಕಿದರೆ ಮಿಠಾಯಿ ಗಟ್ಟಿಯಾಗುವುದಿಲ್ಲ, ಬರೀ ಸಕ್ಕರೆ ಹಾಕಿದರೆ ತೀರಾ ಗಟ್ಟಿಯಾಗುತ್ತದೆ; ಹಾಗಾಗಿ ಎರಡನ್ನೂ ಸಮಪ್ರಮಾಣದಲ್ಲಿ ಹಾಕುವುದು ಮುಖ್ಯ. ದಪ್ಪ ತಳದ ಬಾಣಲೆಗೆ ಈ ಮಿಶ್ರಣವನ್ನು ಹಾಕಿ, ಮಧ್ಯಮ ಉರಿಯಲ್ಲಿ ಕೈಯಾಡಿಸುತ್ತಾ ಇರಿ. ಬಿಸಿಗೆ ಸಕ್ಕರೆ-ಬೆಲ್ಲ ಕರಗಿ ನೀರಾಗುತ್ತದೆ. ಈ ಸಮಯದಲ್ಲಿ ಒಂದು ಚಿಟಿಕೆ ಉಪ್ಪು ಸೇರಿಸಿ ಕೈಯಾಡಿಸಿ. ಮಿಶ್ರಣ ಗಟ್ಟಿಯಾಗುತ್ತಾ ಬಂದಾಗ, ಒಂದು ಬಟ್ಟಲು ನೀರಿಗೆ ಸ್ವಲ್ಪ ಮಿಶ್ರಣ ಹಾಕಿ ನೋಡಿ. ಅದು ಕೈಗೆ ಅಂಟಿಕೊಳ್ಳದೆ ಮೃದುವಾದ ಉಂಡೆಯಂತಾದರೆ (Soft Ball) ಪಾಕ ಸಿದ್ಧವಾಗಿದೆ ಎಂದರ್ಥ. ತಕ್ಷಣ ಗ್ಯಾಸ್ ಆಫ್ ಮಾಡಿ.
ಆಕಾರ ನೀಡಿ
ಮೊದಲೇ ತುಪ್ಪ ಸವರಿಟ್ಟುಕೊಂಡ ತಟ್ಟೆಗೆ ಈ ಬಿಸಿ ಮಿಶ್ರಣವನ್ನು ಹಾಕಿ ಸಮನಾಗಿ ಹರಡಿ. ಮಿಶ್ರಣ ಸ್ವಲ್ಪ ಉಗುರುಬೆಚ್ಚಗಿರುವಾಗಲೇ ಚಾಕುವಿನಿಂದ ಚೌಕಾಕಾರವಾಗಿ ಗೆರೆಗಳನ್ನು ಎಳೆದು ಕಟ್ ಮಾಡಿ ಇಟ್ಟುಕೊಳ್ಳಿ. ಸುಮಾರು 1 ಗಂಟೆಯ ನಂತರ ಸಂಪೂರ್ಣವಾಗಿ ತಣ್ಣಗಾದ ಮೇಲೆ ತುಂಡುಗಳನ್ನು ಬೇರ್ಪಡಿಸಿ.
ಪ್ರಯೋಜನ ಏನು?
ಇವುಗಳನ್ನು ಗಾಳಿಯಾಡದ ಗಾಜಿನ ಸೀಸಾದಲ್ಲಿ ಹಾಕಿಟ್ಟರೆ ತಿಂಗಳುಗಳ ಇಟ್ಟು ತಿನ್ನಬಹುದು. ಗಂಟಲು ಕೆರೆತ, ಕೆಮ್ಮು, ನೆಗಡಿ ಇದ್ದಾಗ ಇದನ್ನು ತಿಂದರೆ ನಿಮಗೆ ತಕ್ಷಣ ಪರಿಹಾರ ಸಿಗಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

