ಬಾಣಂತನದ ನಂತರ ಮಗು ನಗಲು ಶುರು ಮಾಡುತ್ತಿದ್ದಂತೆ ತಾಯಿಯ ಕೂದಲು ಉದುರಲು ಶುರುವಾಗುತ್ತದೆ ಎಂದು ಹಳ್ಳಿ ಕಡೆ ಜನ ಹೇಳುವುದನ್ನು ಕೇಳಬಹುದು. ಕೆಲವು ಸಲಹೆಗಳನ್ನು ಪಾಲಿಸುವುದರಿಂದ ಈ ಸಮಯದಲ್ಲಿ ಉದರುವ ಕೂದಲನ್ನು ನಿಯಂತ್ರಣಕ್ಕೆ ತರಬಹುದು. 

ಬಾಣಂತನದ ನಂತರ ಮಗು ನಗಲು ಶುರು ಮಾಡುತ್ತಿದ್ದಂತೆ ತಾಯಿಯ ಕೂದಲು ಉದುರಲು ಶುರುವಾಗುತ್ತದೆ ಎಂದು ಹಳ್ಳಿ ಕಡೆ ಜನ ಹೇಳುವುದನ್ನು ಕೇಳಬಹುದು. ಅಂದರೆ ಬಾಣಂತನದ ವೇಳೆ ಚೆನ್ನಾಗಿ ಎಣ್ಣೆ ನೀರು ಕಂಡ ತಲೆಕೂದಲು ಚೆನ್ನಾಗಿ ಉದ್ದನೇ ಬೆಳೆಯುತ್ತದೆ. ಆದರೆ ನಂತರ ಅದೇ ಆರೈಕೆ ಇಲ್ಲದೇ ಹೋದಾಗ ಉದುರಲು ಶುರುವಾಗುತ್ತದೆ. ಬಾಣಂತನದ ನಂತರ ತಲೆಕೂದಲು ಉದುರುವುದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಇದು ಮಗುವಿಗೆ ಜನ್ಮ ನೀಡಿದ ಪ್ರತಿಯೊಬ್ಬ ಮಹಿಳೆಗೂ ಆಗುತ್ತದೆ. ಆದರೆ ಹೀಗೆ ಕೂದಲು ಉದುರುವುದಕ್ಕೆ ಹೆಚ್ಚು ಚಿಂತೆ ಮಾಡಬೇಕಾಗಿಲ್ಲ. ಕೆಲವು ಸಲಹೆಗಳನ್ನು ಪಾಲಿಸುವುದರಿಂದ ಈ ಸಮಯದಲ್ಲಿ ಉದರುವ ಕೂದಲನ್ನು ನಿಯಂತ್ರಣಕ್ಕೆ ತರಬಹುದು. 

ಅನೇಕರು ಕೂದಲು ಉದುರುತ್ತಿದೆ ಎಂದು ಬಹಳ ಗಾಬರಿಗೊಳಗಾಗುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸಲು, ಹೆಚ್ಚಿನ ಹೊಸ ತಾಯಂದಿರು ಬಯೋಟಿನ್ ಪೂರಕಗಳ ಮೇಲೆ ಗಮನ ಕೇಂದ್ರೀಕರಿಸುತ್ತಾರೆ. ಆದರೆ ಇನ್ಸ್ಟಾಗ್ರಾಮ್‌ನಲ್ಲಿ ಪೌಷ್ಟಿಕತಜ್ಞೆ ಲೊವ್ನೀತ್ ಬಾತ್ರಾ ಎಂಬುವವರು ಈ ರೀತಿ ಬಾಣಂತನದ ನಂತರ ಕೂದಲು ಉದುರುವುದರಿಂದ ಪರಿಹಾರ ಕಾಣಲು ಕೆಲವು ಸಲಹೆಗಳನ್ನು ನೀಡಿದ್ದಾರೆ. ಇದಕ್ಕೆ ಕೇವಲ ಬಯೋಟಿನ್ ಪೂರಕಗಳನ್ನು ಸೇವಿಸುವುದು ಪರಿಹಾರವಲ್ಲ ಎಂದು ಅವರು ಹೇಳಿದ್ದಾರೆ. 

ಪ್ರಸವಾನಂತರದ ಕೂದಲು ಉದುರುವಿಕೆ ತುಂಬಾ ಸಾಮಾನ್ಯವಾಗಿದೆ. ಆದರೆ ಅನೇಕ ಹೊಸ ತಾಯಂದಿರು ಮಾಡುವ ದೊಡ್ಡ ತಪ್ಪುಗಳಲ್ಲಿ ಒಂದು ಕೂದಲು ಉದುರುವಿಕೆಯನ್ನು ಎದುರಿಸುವಾಗ ಬಯೋಟಿನ್ ಮೇಲೆ ಮಾತ್ರ ಗಮನಹರಿಸುವುದು. ಈಗ, ನೀವು ಅರ್ಥಮಾಡಿಕೊಳ್ಳಬೇಕಾದದ್ದು ಏನೆಂದರೆ ಗರ್ಭಾವಸ್ಥೆಯಲ್ಲಿ ನಿಮ್ಮ ದೇಹದ ಕಬ್ಬಿಣ, ವಿಟಮಿನ್ ಡಿ ಮತ್ತು ಒಮೆಗಾ -3 ಸಂಗ್ರಹವೂ ಖಾಲಿಯಾಗಿರುತ್ತದೆ ಎಂಬುದು. 

ಪ್ರೋಟೀನ್: 
ಹೀಗಾಗಿ ಪ್ರಸವಾನಂತರದ ಅವಧಿಯಲ್ಲಿ, ನಿಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯಗಳು ಹೆಚ್ಚಾಗುತ್ತವೆ. ಆದ್ದರಿಂದ ನೀವು ಸಮಗ್ರ ಆಹಾರ ವಿಧಾನವನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ, ಅನೇಕ ಹೊಸ ತಾಯಂದಿರು ದೇಹಕ್ಕೆ ಬೇಕಾದಷ್ಟು ಆಹಾರವನ್ನು ಪಡೆಯುವುದಿಲ್ಲ. ಬಲವಾದ, ಆರೋಗ್ಯಕರ ಕೂದಲಿನ ಜೊತೆ ನೀವು ಸ್ಟ್ರಾಂಗ್ ಆಗಲು ಪ್ರತಿದಿನ 80-100 ಗ್ರಾಂ ಪ್ರೋಟಿನ್ ಸೇವನೆಯ ಗುರಿಯಿಡಿ.

ವಿಟಮಿನ್ ಡಿ: ವಿಟಮಿನ್ ಡಿ ಕಡಿಮೆ ಆಗುವುದರಿಂದ ಹೆಚ್ಚಿನ ಕೂದಲು ಉದುರುತ್ತದೆ. ಹೀಗಾಗಿ ಸೂರ್ಯನ ಎಳೆಬಿಸಿಲಿಗೆ ಮೈಯೊಡ್ಡಿಕೊಳ್ಳಿ. ಅಥವಾ ವಿಟಾಮಿನ್ ಡಿ ಪೂರಕವನ್ನು ಸೇವಿಸಿ.

ಕಬ್ಬಿಣಾಂಶ: ಪ್ರಸವಾನಂತರದ ರಕ್ತಸ್ರಾವದ ಜೊತೆಗೆ ನಿದ್ದೆ ಇಲ್ಲದ ರಾತ್ರಿಗಳು, ಖಾಲಿಯಾದ ಕಬ್ಬಿಣಾಂಶ. ಇವೆಲ್ಲವೂ ನಿಮ್ಮ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹೀಗಾಗಿ ಕಬ್ಬಿಣಾಂಶವಿರುವ ಆಹಾರವನ್ನು ಹೆಚ್ಚು ಸೇವಿಸಿ. 

ಸತು: ಜಿಂಕ್ ಅಥವಾ ಸತುವು ಕೂದಲು ಬೆಳವಣಿಗೆ ಮತ್ತು ನೆತ್ತಿಯ ಆರೋಗ್ಯಕ್ಕೆ ಅತ್ಯಗತ್ಯ, ಕಾಳುಗಳು, ಬೀಜಗಳು, ಸಮುದ್ರಾಹಾರಗಳು ಮುಂತಾದ ಆಹಾರವನ್ನು ಸೇವಿಸುವ ಮೂಲಕ ಇವುಗಳನ್ನು ನೀವು ನಿಮ್ಮ ದೇಹಕ್ಕೆ ತುಂಬಬಹುದು. 

ಬಯೋಟಿನ್: ಬಯೋಟಿನ್ ಕೂಡ ನಿಮ್ಮ ದೇಹಕ್ಕೆ ಕೂದಲಿನ ಆರೈಕೆಯಲ್ಲಿ ಬಹಳ ಸಹಾಯ ಮಾಡುತ್ತದೆ, ಆದರೆ ಇದೊಂದೇ ಇದ್ದರೆ ಸಾಕಾಗುವುದಿಲ್ಲ, ಎಲ್ಲಾ ಪೋಷಕಾಂಶಗಳ ಸಮತೋಲನ ಬಹಳ ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಹೀಗಾಗಿ ಕೂದಲಿನ ಉತ್ತಮ ಬೆಳವಣಿಗೆಗೆ ಬಯೋಟಿನ್ ಜೊತೆಗೆ ವಿಟಮಿನ್ ಡಿ, ಕಬ್ಬಿಣ, ಸತು ಮತ್ತು ವಿಟಮಿನ್ ಬಿ ಪೂರಕಗಳನ್ನು ತೆಗೆದುಕೊಳ್ಳುವಂತೆ ಅವರು ಸಲಹೆ ನೀಡಿದ್ದಾರೆ. ಕೂದಲು ಉದುರುವುದು ಕೇವಲ ಬಯೋಟಿನ್ ಸಮಸ್ಯೆಯಿಂದ ಬರುವುದಲ್ಲ, ಇದು ಪೌಷ್ಟಿಕಾಂಶದ ಕೊರತೆಯಿಂದ ಬರುತ್ತದೆ. ಹೀಗಾಗಿ ನೀವು ನಿಮ್ಮ ದೇಹಕ್ಕೆ ಸರಿಯಾಗಿ ಇಂಧನ ತುಂಬಿಸಿ ಆಗ ನಿಮ್ಮ ಕೂದಲು ನಿಮಗೆ ಧನ್ಯವಾದ ಹೇಳುತ್ತದೆ ಎಂದು ಅವರು ಹೊಸ ತಾಯಂದಿರಿಗೆ ಸಲಹೆ ನೀಡಿದ್ದಾರೆ.