ಹೀಗಾಗ್ತಿದ್ರೆ ಅಕಾಲಿಕ ಮೆನೋಪಾಸ್ ಹತ್ತಿರದಲ್ಲೇ ಇದೆ ಎಂದರ್ಥ! ತಡೆಯಲು ಏನು ಮಾಡಬೇಕು?
ಸುಮಾರಾಗಿ 45 ವರ್ಷ ದಾಟಿದ ಮಹಿಳೆಯರಲ್ಲಿ ಮೆನೋಪಾಸ್ ಅಥವಾ ಮುಟ್ಟು ನಿಲ್ಲುತ್ತದೆ. ಆದರೆ ಇತ್ತೀಚೆಗೆ ಕೆಲವರಲ್ಲಿ 35 ವರ್ಷ ದಾಟಿದ ಕೂಡಲೇ ಮುಟ್ಟು ನಿಲ್ಲುವ ಲಕ್ಷಣಗಳು ಕಾಣಿಸುವುದು ವೈದ್ಯರನ್ನೂ ಚಿಂತೆಗೀಡು ಮಾಡಿದೆ. ಇದನ್ನು ಪತ್ತೆ ಮಾಡುವುದು ಹೇಗೆ? ಏನಿದಕ್ಕೆ ಕಾರಣ? ತಡೆಯುವುದು ಹೇಗೆ? ಇಲ್ಲಿ ಓದಿ.
ಮಹಿಳೆಯರಲ್ಲಿ ತಿಂಗಳಿಗೊಮ್ಮೆ ಅಂಡಾಶಯದಿಂದ ಅಂಡಾಣು ಬಿಡುಗಡೆಗೊಂಡು ಗರ್ಭನಾಳದ ಮುಖಾಂತರ ಗರ್ಭಕೋಶವನ್ನು ಸೇರುತ್ತದೆ. ಪಿಟ್ಯುಟರಿ ಗ್ರಂಥಿಯಿಂದ ಉತ್ಪತ್ತಿಗೊಳ್ಳುವ ಹಾರ್ಮೋನ್‌ಗಳು ಅಂಡಾಶಯದ ಹಾರ್ಮೋನ್‌ಗಳನ್ನು ಪ್ರಚೋದಿಸಿ ಗರ್ಭಾಶಯದ ಎಂಡೋಮೆಟ್ರಿಯಮ್ ಎಂಬ ಪದರವನ್ನು ಹರಿದಾಗ ರಕ್ತಸ್ರಾವ ಉಂಟಾಗುತ್ತದೆ. ಮೆನೋಪಾಸ್ ಆದಾಗ ಹಾರ್ಮೋನ್‌ಗಳಲ್ಲಿ ವ್ಯತ್ಯಾಸವುಂಟಾಗುವುದರಿಂದ ಈಸ್ಟೋಜನ್ ಹಾರ್ಮೋನ್‌ನ ಪ್ರಮಾಣ ಕಡಿಮೆಯಾಗಿ ಮುಟ್ಟು ನಿಂತು ಹೋಗುವುದು.
ಸಾಮಾನ್ಯವಾಗಿ ವಯಸ್ಸು 45 ದಾಟುತ್ತಿದ್ದಂತೆ ಮಹಿಳೆಯರಲ್ಲಿ ಮುಟ್ಟು ನಿಲ್ಲುವ ಲಕ್ಷಣಗಳು ಕಂಡು ಬರುತ್ತದೆ, ಇದನ್ನು ಮೆನೋಪಾಸ್ ಎಂದು ಕರೆಯುತ್ತಾರೆ. ಮೆನೋಪಾಸ್ ಒಂದು ಸಹಜ ಪ್ರಕ್ರಿಯೆ. ಮೆನೋಪಾಸ್ ಬಳಿಕ ಮಹಿಳೆಯಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಕುಂದುತ್ತದೆ. ಮೆನೋಪಾಸ್ 45 ವರ್ಷ ಕಳೆದ ಮೇಲೆ ಉಂಟಾದರೆ ಅದು ಸಹಜ. ಆದರೆ ಕೆಲವರಿಗೆ ವಯಸ್ಸು 30 ದಾಟುತ್ತಿದ್ದಂತೆ ಈ ಸಮಸ್ಯೆ ಕಂಡು ಬರುತ್ತದೆ, ಇದು ಅಸಹಜ.
ಹಾಗಿದ್ದರೆ ಇದಕ್ಕೇನು ಕಾರಣ? ಅಕಾಲಿಕ ಮೆನೋಪಾಸ್‌ಗೆ ಜೀವನಶೈಲಿಯೇ ಪ್ರಮುಖ ಕಾರಣ ಎನ್ನಬಹುದು. ಅತಿಯಾದ ಜಂಕ್ ಫುಡ್ ಸೇವನೆ, ಕೃತಕ ಗರ್ಭಧಾರಣೆ, ರಾಸಾಯನಿಕಯುಕ್ತ ಆಹಾರ, ಕಲುಷಿತ ವಾತಾವರಣ ಇವೆಲ್ಲಾ ಅಕಾಲಿಕ ಮೆನೋಪಾಸ್‌ಗೆ ಕಾರಣಗಳಾಗಿರಬಹುದು.
ಈ ಜಪಾನೀಸ್ ಕ್ರಮ ಅಳವಡಿಸೋ ಮೂಲಕ ಸೋಮಾರಿತನ ದೂರ ಮಾಡಿ
ಹೇಗೆ ತಿಳಿಯುವುದು?
- ಅನಿಯಮಿತ ಮುಟ್ಟು, ಅಧಿಕ ರಕ್ತಸ್ರಾವ, ಕಡಿಮೆ ರಕ್ತಸ್ರಾವ.
- ಸಾಮಾನ್ಯವಾಗಿ ಹಾಟ್ ಫ್ಲ್ಯಾಷ್ ಅಂದರೆ ತುಂಬಾ ಸೆಕೆಯಾಗುವ ಸಮಸ್ಯೆ. ಮೈ ಬೆವರಿ ಉದ್ವೇಗ ಹೆಚ್ಚಾಗುವುದು, ವಿನಾಕಾರಣ ಬೇಸರ, ಪದೇಪದೆ ಮೂತ್ರವಿಸರ್ಜನೆ, ವಿಪರೀತ ತಲೆನೋವು, ನಿದ್ರೆ ಬಾರದಿರುವುದು
- ಮಾನಸಿಕ ಕಿರಿಕಿರಿ, ಖಿನ್ನತೆ ಕಾಣಿಸಿಕೊಳ್ಳುವುದು
- ಹೊಟ್ಟೆಯ ಭಾಗದಲ್ಲಿ ಚರ್ಮ ಸುಕ್ಕಾಗುವುದು
- ಲೈಂಗಿಕ ಕ್ರಿಯೆಯ (Sex) ಸಂದರ್ಭದಲ್ಲಿ ನೋವು ಉಂಟಾಗುವುದು, ಯೋನಿ ಒದ್ದೆಯಾಗದಿರುವಿಕೆ
- ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದು, ಮೂಳೆಗಳ ಸಮಸ್ಯೆ
- ಕೆಲವರು ತುಂಬಾ ಖಿನ್ನತೆಗೆ ಒಳಗಾಗುತ್ತಾರೆ. ಸೂಕ್ತ ಚಿಕಿತ್ಸೆ(Tratment) ನೀಡಿದರೆ ಸರಿಯಾಗುತ್ತದೆ.
- ಶಸ್ತ್ರ ಚಿಕಿತ್ಸೆಯ ಮೂಲಕ ಅಂಡಾಶಯವನ್ನು ತೆಗೆಸಿದಾಗ ಮೆನೋಪಾಸ್(Menopause) ಆಗಬಹುದು. ಅದೇ ರೀತಿ ಗರ್ಭಪಾತ, ಕೃತಕ ಗರ್ಭಧಾರಣೆ, ಕ್ಯಾನ್ಸರ್‌ಗೆ ಚಿಕಿತ್ಸೆ ತೆಗೆದುಕೊಂಡಾಗಲೂ ಅಕಾಲಿಕ ಮೆನೋಪಾಸ್ ಉಂಟಾಗಬಹುದು.
- ಹಾರ್ಮೋನ್‌ಗಳ ವ್ಯತ್ಯಾಸದಿಂದ ದೇಹದ ತೂಕ ಹೆಚ್ಚಾಗುವುದು ಇಲ್ಲಾ ತುಂಬಾ ಕಡಿಮೆಯಾಗುವುದು ಉಂಟಾಗುತ್ತದೆ.
Intimate Health: ಮುಟ್ಟಿನ ಸಮಯದಲ್ಲಿ ದದ್ದು ಬೆವರು ಕಾಣಿಸಿಕೊಳ್ತಿದ್ರೆ ಪ್ಯಾಡ್ ಬದಲಿಸಿ
ಈ ಲಕ್ಷಣಗಳು ಕಾಣಬೇಕು ಎಂದು ಕಾಯಬೇಡಿ. ಯವ್ವನದಿಂದಲೇ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಹೀಗೆ ಮಾಡಿಕೊಂಡರೆ ಮೆನೋಪಾಸ್ ಅನ್ನು ದೂರ ಸರಿಸಬಹುದು.
- ಮೀನು, ಕಾಳುಗಳು, ಬಟಾಣಿ, ಬೀನ್ಸ್ ಇವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಿ.
- ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರಿ. ಹೆಚ್ಚು ನೀರು(water), ಹಣ್ಣಿನ ರಸ ಕುಡಿಯಿರಿ. ವಾರದಲ್ಲಿ 3-4 ಎಳನೀರು ಕುಡಿಯಿರಿ.
- ಗಂಜಿ, ಸೂಪ್ ಇವುಗಳು ನಿಮ್ಮ ಆಹಾರಕ್ರಮದಲ್ಲಿರಲಿ. ಸೊಪ್ಪು, ತರಕಾರಿ ಸೇವಿಸಿ.
- ಯೋಗಾಸನ ತುಂಬಾ ಸಹಕಾರಿ. ಮುಖ್ಯವಾಗಿ ಶವಾಸನ, ವಜ್ರಾಸನ, ಜಲನೇತಿ, ಸೂತ್ರನೇತಿ. ಪ್ರಾಣಾಯಾಮಗಳು, ನಾಡಿ ಶೋಧನ, ಭ್ರಮರಿಯನ್ನು ದಿನನಿತ್ಯ ಅಭ್ಯಾಸ ಮಾಡಿ.
- ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡಲೇಬೇಕು.
- ಧ್ಯಾನ, ಎಣ್ಣೆ ಮಸಾಜ್, ತಲೆಗೆ ಶಿರೋಧಾರ, ಮಣ್ಣಿನ ಸ್ನಾನ, ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯ.
ಮೆನೋಪಾಸ್ ಆದಾಗ
- ಮೆನೋಪಾಸ್ ಸಮಯದಲ್ಲಿ ಕ್ಯಾಲ್ಸಿಯಂ ಕೊರತೆ ಉಂಟಾಗುವುದರಿಂದ ಆಹಾರದ ಮೂಲಕ ಆ ಕೊರತೆ ಉಂಟಾಗದಂತೆ ನೋಡಿಕೊಳ್ಳಿ. ಹಾಲು, ಮೊಸರು, ಮಜ್ಜಿಗೆಯ ಬಳಕೆಯನ್ನು ಹೆಚ್ಚಿಸಿ, ನುಗ್ಗೆಸೊಪ್ಪನ್ನು ತಿನ್ನಿ. ಅಡುಗೆಯಲ್ಲಿ ಕರಿಬೇವು ಬಳಸಿ, ಇದು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಕಾರಿ. ತಾಜಾ ಸೊಪ್ಪು, ತರಕಾರಿಗಳು ಮತ್ತು ಹಣ್ಣುಗಳನ್ನು ಬಳಸಿ.
- ಮೆನೋಪಾಸ್ ಉಂಟಾದಾಗ ಮಹಿಳೆಗೆ ಮನೆಯಲ್ಲಿ ಪತಿ ಹಾಗೂ ಮಕ್ಕಳ ಆರೈಕೆ ಬೇಕಾಗುತ್ತದೆ. ಅವಳಿಗೆ ಭಾವನಾತ್ಮಕವಾಗಿ ಬೆಂಬಲ ನೀಡಿ.
- ಆರೋಗ್ಯ ತಪಾಸಣೆ ಮಾಡಿಸಿ, ಈ ಸಮಯದಲ್ಲಿ ಥೈರಾಯ್ಡ್, ಗರ್ಭಕೋಶದ ಸಮಸ್ಯೆಯಿದ್ದರೆ ಪತ್ತೆ ಹಚ್ಚಲು ಸಹಾಯವಾಗುತ್ತದೆ.
- ಪ್ರತಿನಿತ್ಯ ವ್ಯಾಯಾಮ ಮಾಡಿ. ವಿಟಮಿನ್ ಡಿ ದೇಹದಲ್ಲಿರಲಿ. ನಾರಿನಂಶ, ವಿಟಮಿನ್ಸ್, ಖನಿಜಾಂಶಗಳು ಅಧಿಕವಿರುವ ಆಹಾರ ಆಹಾರಕ್ರಮದಲ್ಲಿರಲಿ.