ಮರ ಕಡಿವಷ್ಟು ಮೂರ್ಖನಾ...?: ನಮ್ಮವರೇ ನಮಗೆ ಶತ್ರುಗಳಾ? ರಾಕಿಂಗ್ ಸ್ಟಾರ್ ಯಶ್ ಮುನಿಸು!

ಯಶ್ ಕುದಿಯುತ್ತಿದ್ದಾರೆ. ಇನ್ನೊಂದು ಕಡೆ ಬೇಯುತ್ತಿದ್ದಾರೆ. ಏನೋ ಮಾಡಲು ಏನೋ ಆಗಿಬಿಟ್ಟಿತಲ್ಲ...ಹೀಗಂತ ಒಳಗೊಳಗೆ ನರಳುತ್ತಿದ್ದಾರೆ. ಅದಕ್ಕೆ ಕಾರಣ ಟಾಕ್ಸಿಕ್ ಹಗರಣ. ಕನ್ನಡದ ಜನ ಹಾಗೂ ಕನ್ನಡದ ನೆಲಕ್ಕೆ ಒಳಿತಾಗಲಿ ಎಂದು ಮಾಡಿದ್ದು ಅಪರಾಧವಾಯಿತಾ ?

First Published Nov 17, 2024, 5:30 PM IST | Last Updated Nov 17, 2024, 5:30 PM IST

ಯಶ್ ಕುದಿಯುತ್ತಿದ್ದಾರೆ. ಇನ್ನೊಂದು ಕಡೆ ಬೇಯುತ್ತಿದ್ದಾರೆ. ಏನೋ ಮಾಡಲು ಏನೋ ಆಗಿಬಿಟ್ಟಿತಲ್ಲ...ಹೀಗಂತ ಒಳಗೊಳಗೆ ನರಳುತ್ತಿದ್ದಾರೆ. ಅದಕ್ಕೆ ಕಾರಣ ಟಾಕ್ಸಿಕ್ ಹಗರಣ. ಕನ್ನಡದ ಜನ ಹಾಗೂ ಕನ್ನಡದ ನೆಲಕ್ಕೆ ಒಳಿತಾಗಲಿ ಎಂದು ಮಾಡಿದ್ದು ಅಪರಾಧವಾಯಿತಾ ? ಏಕಾಏಕಿ ಕೋರ್ಟ್‌ ಮುಂದೆ ಹಾಜರಾಗುವ ಸ್ಥಿತಿ ತಂದಿತಾ ? ನಮ್ಮ ಸರ್ಕಾರವೇ ನಮ್ಮ ಬಣ್ಣದ ಲೋಕಕ್ಕೆ ಮುಳುವಾಯಿತಾ ? ರಾಕಿಭಾಯ್...ಇದೊಂದು ಹೆಸರು ಈಗ ಬರೀ ಕನ್ನಡದ ಸ್ವತ್ತಾಗಿ ಉಳಿದಿಲ್ಲ. ಭಾರತಕ್ಕಷ್ಟೇ ಸೀಮಿತವಾಗಿಲ್ಲ. ವಿಶ್ವವೇ ರಾಕಿ ಅಂದರೆ ಸಾಕು ಎದ್ದು ನಿಲ್ಲುತ್ತದೆ. ಬಾಲಿವುಡ್ ಸ್ಟಾರ್ಸ್ ಒಮ್ಮೆ ಬೆವರು ಒರೆಸಿಕೊಳ್ಳುತ್ತಾರೆ. ಅಲ್ಲಿಯ ಹೀರೋಯಿನ್ಸ್, ನಮಗೊಂದು ಚಾನ್ಸ್ ಕೊಡಿ ಎನ್ನುತ್ತಾ ಕದ್ದು ಸಂದೇಶ ಕಳಿಸುತ್ತಾರೆ. ಅದಕ್ಕೆಲ್ಲ ಸಿಂಗಲ್ ಕಾರಣ ಯಶ್.

ಕನ್ನಡದ ಬಾವುಟವನ್ನು ಜಗತ್ತಿನ ತುಂಬಾ ಹಾರಿಸಿದ ರಾಕಿಭಾಯ್. ಪ್ಯಾನ್ಇಂಡಿಯಾ ಪಟ್ಟದಿಂದ ಗ್ಲೋಬಲ್ ಗದ್ದುಗೆಗೆ ಕಾಲಿಟ್ಟಿರುವ ರಾಮಾಚಾರಿ. `ಟಾಕ್ಸಿಕ್' ಈಗ ಅದನ್ನು ಸಾಬೀತು ಪಡಿಸಲು ಸರಪಟಾಕಿ ಹಚ್ಚಲು ಸಜ್ಜಾಗುತ್ತಿದೆ. ಒಂದೇ ಒಂದು ಕೆಜಿಎಫ್...ಮಂಡ್ಯದ ಹುಡುಗನನ್ನು ಇಲ್ಲಿಗೆ ಮುಟ್ಟಿಸುತ್ತದಾ ? ಹೀಗೊಂದು ಅನುಮಾನ ಈ ಸಿನಿಮಾ ಬಿಡುಗಡೆ ಮೊದಲು ಇತ್ತು. ಶಾರುಖ್ಖಾನ್ `ಜೀರೊ' ಸಿನಿಮಾ ಎದುರು ಗೆದ್ದು ಬೀಗುತ್ತಾನಾ ಕನ್ನಡದ ಹುಡುಗ ? ಕೆಲವರು ನಕ್ಕಿದ್ದರು. ಆದರೆ ಅದ್ಯಾವ ರೀತಿ ಯಶ್ ಒಂದೇ ಒಂದು ರಾತ್ರಿಯಲ್ಲಿ ಬಾಲಿವುಡ್ ಅಂಗಳದಲ್ಲಿ ಕೆಂಡ ಸುರಿದರೋ ಏನೊ ? ಅಲ್ಲಿಂದ ಇಲ್ಲಿತನಕ ಬಿರುಗಾಳಿಯೂ ಉಸಿರಾಡಲು ಪುರುಸೊತ್ತಿಲ್ಲದೆ ಫಡಫಡಿಸುತ್ತಿದೆ. 

ಕೆಜಿಎಫ್ ಬರೀ ಕನ್ನಡದ ಚಿತ್ರವಾಗಿ ಉಳಿಯಲಿಲ್ಲ... ಯಶ್ ಅದೇ ಹಡಗಿನಲ್ಲಿ ದಿಬ್ಬಣ ಹೊರಟಿದ್ದು ಸುಳ್ಳಲ್ಲ. ಪ್ರಶಾಂತ್ ನೀಲ್, ವಿಜಯ ಕಿರಗಂದೂರ್, ಯಶ್...ಈ ತ್ರಿಮೂತರ್ಿಗಳು ಹಣೆಗೆ ತಿಲಕ ಇಟ್ಟುಕೊಂಡು ಅಖಾಡಕ್ಕೆ ಇಳಿದಾಗ ಸದ್ದಾಗಲಿಲ್ಲ. ಸಂಕಷ್ಟ ಹರ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿದ ಸುದ್ದಿ ಗುಡುಗಲಿಲ್ಲ. ಕೋಲಾರದ ಗಣಿಯಲ್ಲಿ ಕಪ್ಪು ಕಪ್ಪು ಮಣ್ಣಿನ ಧೂಳಲ್ಲಿ ರೀಲು ಉರುಳಿದ್ದು ಗೊತ್ತಾಗಲಿಲ್ಲ...ಈ ಎಲ್ಲ ಇಲ್ಲ ಇಲ್ಲಗಳ ನಡುವೆ ಅದೊಂದು ದಿನ ಕೆಜಿಎಫ್ ಭಾರತದ ತುಂಬಾ ಮೆರವಣಿಗೆ ಹೊರಟಿತು ನೋಡಿ...ಫಿನಿಶ್...ಬಾಲಿವುಡ್, ಕಾಲಿವುಡ್, ಟಾಲಿವುಡ್ ಹಾಗೂ ಮಾಲಿವುಡ್ ಮಂದಿ ಕ್ಷಣ ಬೆಚ್ಚಿಬಿದ್ದರು. 

ಮತ್ತೊಂದು ಬ್ರಹ್ಮಾಸ್ತ್ರ ಚಂದನವನದಲ್ಲಿ ಹುಟ್ಟಿದೆ ಎನ್ನುತ್ತಾ ಕೈ ಮುಗಿದರು. ಎಸ್ ಎಸ್ ರಾಜಮೌಳಿ...ಕೆಜಿಎಫ್ ಬರೋವತನಕ ಇದೊಂದೇ ಹೆಸರು ಬಾಲಿವುಡ್ಗೆ ಗೊತ್ತಿತ್ತು. ಯಾವಾಗ ಕೆಜಿಎಫ್ ಕಹಳೆ ಊದಿತೋ...ಪ್ರಶಾಂತ್ ನೀಲ್ ಅನಾಯಾಸವಾಗಿ ಸಿಂಹಾಸನ ಏರಿದರು. ಜೊತೆಗೆ ರಾಕಿಭಾಯ್ ಕೂಡ ಪಕ್ಕದಲ್ಲಿ ಬಂದು ನಿಂತರು. ಕನ್ನಡ ನಾಡು ಮೊದಲ ಬಾರಿಗೆ ಎದೆ ಉಬ್ಬಿಸಿತು...ಕಾಲರ್ ಟೈಟ್ ಮಾಡಿಕೊಂಡಿತು.. ಕನ್ನಡಕ್ಕೆ ದಕ್ಕಿದ ನಯಾ ಕಿರೀಟವನ್ನು ಹೊತ್ತು ಮೆರೆಸಿತು. ಮುಂದಾಗಿದ್ದೆಲ್ಲ ತಿಕ್ಕಿ ಒರೆಸಿದರೂ ಅಳಿಸಲಾಗದ ಇತಿಹಾಸ. ಆ ಪುಟದಲ್ಲಿ ನೀಲ್ ಅಂಡ್ ಯಶ್ ಹೆಗಲ ಮೇಲೆ ಕೈ ಹಾಕಿ ಕೇಕೆ ಹಾಕುತ್ತಿದ್ದರು.