Asianet Suvarna News Asianet Suvarna News

ದೇಹ ದಂಡಿಸಿದ್ದೇ ಬಂತು ಬೊಜ್ಜು ಕರಗಿಲ್ಲವೆಂದ್ರೆ ನೀವು ಈ ತಪ್ಪು ಮಾಡ್ತಿರೋದು ಖಾತ್ರಿ!

ದೇಹ ದಂಡಿಸಿದ್ದೇ ಬಂತು ತೂಕ ಮಾತ್ರ ಕೆಳಗಿಳಿಯುತ್ತಿಲ್ಲ ಎಂಬುದು ಅನೇಕರ ದೂರು.ನಿತ್ಯ ವ್ಯಾಯಾಮ ಮಾಡಿದ್ರೂ ಹೀಗೇಕೆ ಆಗುತ್ತೆ ಗೊತ್ತಾ? ಮನಸ್ಸಾದಾಗ,ಹೊತ್ತುಗೊತ್ತು ಇಲ್ಲದೆ ವ್ಯಾಯಾಮ ಮಾಡೋದ್ರಿಂದ ದೇಹವೇನೂ ಬೆಂಡಾಗುತ್ತೆ,ಆದ್ರೆ ನಿರೀಕ್ಷಿತ ಫಲ ಮಾತ್ರ ಸಿಗಲ್ಲ.

Do you make these mistakes while exercising and while on gym
Author
Bangalore, First Published Dec 18, 2020, 3:56 PM IST

ವ್ಯಾಯಾಮ ಆರೋಗ್ಯಕ್ಕೆ ಒಳ್ಳೆಯದು ಎಂದು ನಂಬಿ ನೀವು ದೇಹವನ್ನುಅದೆಷ್ಟೇ ದಂಡಿಸಿದ್ರು ತೂಕ ಇಳಿಯುತ್ತಿಲ್ಲ,ಆರೋಗ್ಯ ಸುಧಾರಿಸುತ್ತಿಲ್ಲಅಂದ್ರೆ ಅಲ್ಲೇನು ಸಮಸ್ಯೆಯಿದೆ ಎಂದೇ ಅರ್ಥ.ಅದೆಷ್ಟೇ ಯೋಚಿಸಿದ್ರೂ ಸಮಸ್ಯೆಯ ಮೂಲ ಏನು ಅನ್ನೋದೇ ತಿಳಿಯುತ್ತಿಲ್ಲವೆಂದಾದ್ರೆ ನೀವು ನಿತ್ಯ ಎಷ್ಟು ಹೊತ್ತು,ಯಾವ ಸಮಯದಲ್ಲಿ ವ್ಯಾಯಾಮ ಮಾಡುತ್ತಿದ್ದೀರಿ ಎನ್ನೋದನ್ನು ಪರಿಶೀಲಿಸಬೇಕಾಗುತ್ತೆ.ಕೆಲವರು ದಿನಕ್ಕೆ 5-10 ನಿಮಿಷ ಕೈ-ಕಾಲು ಅಲ್ಲಾಡಿಸಿ ವ್ಯಾಯಾಮ ಮುಗಿಸುತ್ತಾರೆ.ಇಂಥ ವ್ಯಾಯಾಮದಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲಎನ್ನೋದು ಅನೇಕ ಅಧ್ಯಯನಗಳಲ್ಲಿ ಸಾಬೀತಾಗಿದೆ. ದಿನಕ್ಕೆ ಕನಿಷ್ಠ 3೦ ನಿಮಿಷವಾದ್ರೂ ವ್ಯಾಯಾಮ ಮಾಡ್ಬೇಕು.ಹಾಗೆ ಮಾಡಿದ್ರೆ ಮಾತ್ರ ದೇಹಕ್ಕೆ ಏನಾದ್ರೂ ಲಾಭ ಸಿಗಲು ಸಾಧ್ಯ.ಇನ್ನು ಕೆಲವರು ವ್ಯಾಯಾಮ ಮಾಡೋಕೆ ದಿನದಲ್ಲಿಇಂಥದ್ದೇ ನಿರ್ದಿಷ್ಟ ಸಮಯ ಎಂದು ಫಿಕ್ಸ್‌ ಮಾಡಿಕೊಂಡಿರೋದಿಲ್ಲ.ಸಮಯ ಸಿಕ್ಕಾಗ ಅಥವಾ ಮನಸ್ಸಾದಾಗ ಯಾವ ಸಮಯದಲ್ಲಾದ್ರೂ ವ್ಯಾಯಾಮ ಮಾಡ್ತಾರೆ. ಆದ್ರೆ ಪ್ರತಿದಿನ ವ್ಯಾಯಾಮಕ್ಕೆಂದು ನಿರ್ದಿಷ್ಟ ಸಮಯ ನಿಗದಿಪಡಿಸಿಕೊಂಡು ಅದಕ್ಕೆ ಒಗ್ಗಿಕೊಂಡ್ರೆ ತೂಕ ಇಳಿಸಿಕೊಳ್ಳೋದು ಸುಲಭದ ಕೆಲಸ ಎನ್ನೋದು ಅನುಭವಿಗಳ ಮಾತು.ಇತ್ತೀಚೆಗೆ ಪ್ರಕಟಗೊಂಡ ಒಂದು ಅಧ್ಯಯನ ವರದಿ ಕೂಡ ಈ ಮಾತಿನಲ್ಲಿ ನಿಜಾಂಶವಿದೆ ಎಂಬುದನ್ನು ದೃಢಪಡಿಸಿದೆ.

ಬಾಳೆಹಣ್ಣು ತಿಂದ್ರೆ ಅಪಾರ ಗುಣ..!

ಅಧ್ಯಯನದಲ್ಲಿ ಏನಿದೆ?
ಒಬೇಸಿಟಿ ಎಂಬ ಜರ್ನಲ್‌ ನಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡೋದ್ರಿಂದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಲು ಸಾಧ್ಯವಿದೆ.ಇದು ಹೇಗೆ ಸಾಧ್ಯ ಎಂಬುದನ್ನು ಕೂಡ ಅಧ್ಯಯನದಲ್ಲಿ ಪತ್ತೆ ಹಚ್ಚಲಾಗಿದೆ. ಪ್ರತಿದಿನ ನಿಗದಿತ ಸಮಯಕ್ಕೆ ವ್ಯಾಯಾಮ ಮಾಡೋದ್ರಿಂದ ಶಾರೀರಿಕ ಚಟುವಟಿಕೆಯ ಮಟ್ಟ ಹೆಚ್ಚಿರೋದು ಕಂಡುಬಂದಿದೆ. ಹಾಗಂತ ಪ್ರತಿ ವ್ಯಕ್ತಿಯೂ ಬೆಳಗ್ಗೆಯೇ ನಿರ್ದಿಷ್ಟ ಸಮಯಕ್ಕೆ ವ್ಯಾಯಾಮ ಮಾಡ್ಬೇಕು ಎಂದು ಈ ಅಧ್ಯಯನ ಹೇಳುತ್ತಿಲ್ಲ.ಬೆಳಗ್ಗೆ,ಮಧ್ಯಾಹ್ನ,ಸಂಜೆ ಹೀಗೆ ದಿನದಲ್ಲಿ ಯಾವ ಹೊತ್ತಾದ್ರೂ ಸರಿ,ಆದ್ರೆ ಶಾಲೆ ಬೆಲ್‌ ಹೊಡೆದಂತೆ ಚಾಚೂತಪ್ಪದೆ ಪ್ರತಿದಿನ ಅದೇ ಸಮಯಕ್ಕೆ ವ್ಯಾಯಾಮ ಮಾಡ್ಬೇಕು ಅಷ್ಟೆ.

ವರ್ಕ್ ಫ್ರಮ್ ಹೋಂ ಖಿನ್ನತೆಗೆ ಕಾರಣವಾಗ್ತಾ ಇದ್ಯಾ?

ಹೀಗಿತ್ತು ಅಧ್ಯಯನ
ಈ ಅಧ್ಯಯನಕ್ಕಾಗಿ ಸಂಶೋಧಕರು 375 ಆರೋಗ್ಯವಂತ ವಯಸ್ಕರನ್ನುಆಯ್ಕೆ ಮಾಡಿದ್ದರು. ಇವರೆಲ್ಲ ತಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಹಾಗೂ ಫಿಟ್‌ ಆಗಿರಲು ಪ್ರತಿದಿನ ವ್ಯಾಯಾಮ ಮಾಡೋರಾಗಿದ್ರು.ಇವರಲ್ಲಿ ಶೇ.68 ಮಂದಿ ನಿತ್ಯ ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡೋ ಅಭ್ಯಾಸ ಹೊಂದಿದ್ರೆ, ಉಳಿದವರು ದಿನದಲ್ಲಿ ಯಾವಾಗ ಬಿಡುವು ಸಿಗುತ್ತೋ ಆಗ ವ್ಯಾಯಾಮ ಮಾಡೋರು. ಇವರೆಲ್ಲರ ಗುರಿ ಮಾತ್ರ ಒಂದೇ ಆಗಿತ್ತು.ಅದೇ ಬೊಜ್ಜು ಕರಗಿಸೋದು,ತೂಕ ಇಳಿಸಿಕೊಳ್ಳೋದು. ಇವರೆಲ್ಲರ ಆರೋಗ್ಯ ಮಾಹಿತಿ ಸಂಗ್ರಹಿಸಿ, ಕೆಲವು ದಿನಗಳ ಕಾಲ ಗಮನಿಸಿದಾಗ ಪ್ರತಿದಿನ ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡೋರು ದಿನದ ಬೇರೆ ಬೇರೆ ಸಮಯದಲ್ಲಿ ವ್ಯಾಯಾಮ ಮಾಡೋರಿಗಿಂತ ಹೆಚ್ಚು ಕ್ಯಾಲೋರಿ ಕಳೆದುಕೊಂಡಿರೋದು ಹಾಗೂ ಅವರ ತೂಕದಲ್ಲಿ ಇಳಿಕೆಯಾಗಿರೋದು ಕಂಡುಬಂದಿದೆ. ದಿನದ ಒಂದೇ ಸಮಯದಲ್ಲಿ ವರ್ಕ್‌ಔಟ್‌ ಮಾಡೋದ್ರಿಂದ ಅದೊಂದು ಹವ್ಯಾಸವಾಗಿ ಮಾರ್ಪಡುತ್ತದೆ ಹಾಗೂ ಪ್ರತಿದಿನ ಆ ಸಮಯವನ್ನು ವ್ಯಾಯಾಮಕ್ಕಾಗಿಯೇ ಮೀಸಲಿಡುತ್ತಾರೆ ಎಂಬ ಅಭಿಪ್ರಾಯವನ್ನು ಅಧ್ಯಯನ ವ್ಯಕ್ತಪಡಿಸಿದೆ.ಈ ರೀತಿ ವ್ಯಾಯಾಮಕ್ಕೆ ನಿರ್ದಿಷ್ಟ ಸಮಯ ನಿದಿಪಡಿಸಿಕೊಳ್ಳೋದ್ರಿಂದ ಪ್ರತಿದಿನ ತಪ್ಪದೆ ವ್ಯಾಯಾಮ ಮಾಡೋ ಅಭ್ಯಾಸ ಸಹಜವಾಗಿಯೇ ಬೆಳೆಯುತ್ತೆ. 

ಈ ಆಯುರ್ವೇದ ಪದ್ಧತಿಯಿಂದ ದೂರವಾಗುತ್ತೆ ಒತ್ತಡ!

Do you make these mistakes while exercising and while on gym

ಬೊಜ್ಜುಕರಗೋದಷ್ಟೇ ಅಲ್ಲ,ಇನ್ನೂ ಏನೇನೋ ಲಾಭವಿದೆ
ನಮ್ಮಲ್ಲಿ ಬಹುತೇಕರು ದೇಹವನ್ನು ದಂಡಿಸೋ ಉದ್ದೇಶವೇ ಬೊಜ್ಜು ಕರಗಿಸಿ, ತೂಕ ಇಳಿಸಿಕೊಂಡು ಸ್ಲಿಮ್‌ ಆಗಿ ಕಾಣಿಸೋಕೆ. ಆದ್ರೆ ವ್ಯಾಯಾಮ ಬರೀ ದೇಹದ ತೂಕ ಇಳಿಸಲ್ಲ, ಆರೋಗ್ಯಕ್ಕೂ ಅನೇಕ ಲಾಭಗಳನ್ನು ಒದಗಿಸುತ್ತೆ. ದೇಹವನ್ನು ದಂಡಿಸಿ ನರನಾಡಿಗಳಲ್ಲಿ ಚೈತನ್ಯ ತುಂಬಿ, ಎಲ್ಲ ಅಂಗಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡೋ ಜೊತೆ ಮನಸ್ಸಿಗೂ ಶಾಂತಿ, ನೆಮ್ಮದಿ ಒದಗಿಸುತ್ತೆ. ಹೃದಯದ ಆರೋಗ್ಯ ರಕ್ಷಣೆಗೆ ವ್ಯಾಯಾಮ ಅತ್ಯುತ್ತಮ ಸಾಧನ. ಒತ್ತಡ, ಉದ್ವೇಗಗಳನ್ನು ತಗ್ಗಿಸಿ ಮಾನಸಿಕ ಆರೋಗ್ಯವರ್ಧನೆಗೆ ನೆರವು ನೀಡೋ ಕಾರ್ಯವನ್ನು ವ್ಯಾಯಾಮ ಮಾಡುತ್ತದೆ. ಮಿದುಳಿನ ಆರೋಗ್ಯವನ್ನೂ ಸುಧಾರಿಸೋ ಸಾಮರ್ಥ್ಯ ವ್ಯಾಯಾಮಕ್ಕಿದೆಯಂತೆ. ಅಷ್ಟೇ ಏಕೆ, ವಯಸ್ಸನ್ನು ಮರೆಮಾಚಿ ಚಿರಯೌವನದ ಸೌಂದರ್ಯ ಪಡೆಯಲು ಸಿಕ್ಕಸಿಕ್ಕ ಬ್ಯೂಟಿ ಪ್ರಾಡಕ್ಟ್‌ ಬಳಸೋ ಬದಲು ನಿತ್ಯ ವ್ಯಾಯಾಮ ಮಾಡಿದ್ರೆ ಮುಖದಲ್ಲಿ ಯಂಗ್‌ ಲುಕ್‌ ಕಾಣಿಸುತ್ತೆ. ಇನ್ನು ಬೆಳಗ್ಗೆ ವಾಕಿಂಗ್‌, ಯೋಗ, ವ್ಯಾಯಾಮ ಅಥವಾ ದೇಹ ದಂಡಿಸೋ ಯಾವುದೇ ಚಟುವಟಿಕೆ ನಡೆಸಿದ್ರು ಆ ದಿನವಿಡೀ ಅದರ ಪ್ರಭಾವ ನಮ್ಮ ನರನಾಡಿಗಳಲ್ಲಿರುತ್ತೆ ಎಂಬುದು ಅನುಭವಸ್ಥರ ಅನುಭವಕ್ಕೆ ಬಂದಿರುತ್ತೆ. ಕೆಲವು ಅಧ್ಯಯನಗಳ ಪ್ರಕಾರ ಸೆಕ್ಸ್‌ ಲೈಫ್‌ ಚೆನ್ನಾಗಿರಬೇಕೆಂದ್ರೆ ನಿತ್ಯ ವ್ಯಾಯಾಮ ಮಾಡ್ಬೇಕಂತೆ. ಹೀಗೆ ವ್ಯಾಯಾಮದ ಕರಮತ್ತನ್ನು ಪಟ್ಟಿ ಮಾಡುತ್ತ ಹೋದ್ರೆ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳು ಸಿಗುತ್ತಲೇ ಹೋಗುತ್ತವೆ. ಇಷ್ಟೆಲ್ಲ ಆರೋಗ್ಯಲಾಭಗಳಿರೋ ವ್ಯಾಯಾಮದ ಫಲ ನಮಗೆ ಸಮರ್ಪಕವಾಗಿ ಲಭಿಸಬೇಕಂದ್ರೆ ಪ್ರತಿದಿನ ನಿರ್ದಿಷ್ಟ ಹೊತ್ತಿನಲ್ಲಿ ವ್ಯಾಯಾಮ ಮಾಡೋ ಅಭ್ಯಾಸ ರೂಢಿಸಿಕೊಳ್ಳೋದು ಅಗತ್ಯ. 

Follow Us:
Download App:
  • android
  • ios