ಆಯುರ್ವೇದವು ಕೇವಲ ಮನೆಮದ್ದಲ್ಲ, ಅದೊಂದು ವೈಜ್ಞಾನಿಕ ವೈದ್ಯಕೀಯ ಶಾಸ್ತ್ರ. ಸೋಶಿಯಲ್ ಮೀಡಿಯಾದಲ್ಲಿನ ತಪ್ಪು ಮಾಹಿತಿ ನಂಬಿ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳುವ ಬದಲು, ಯಾವುದೇ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಪದವಿ ಪಡೆದ ನೋಂದಾಯಿತ ಆಯುರ್ವೇದ ವೈದ್ಯರಿಂದಲೇ ಸಲಹೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಗತ್ಯ.

ಆಯುರ್ವೇದ, ಅದರ ಬಗೆಗಿನ ತಪ್ಪು ಕಲ್ಪನೆಗಳ ಬಿಟ್ಟು ಬಿಡಿ....

ಬಹಳಷ್ಟು ಜನರಿಗೆ ತಾವು ಮನೆಯಲ್ಲಿ ತಿನ್ನುವ ಅಥವಾ ಉಪಯೋಗಿಸುವ ಆಹಾರ ಪದಾರ್ಥಗಳೇ ಆಯುರ್ವೇದ ಔಷಧಗಳು ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಆಯುರ್ವೇದ ಅನ್ನುವುದು ವೈಜ್ಞಾನಿಕ ವೈದ್ಯಕೀಯ ಶಾಸ್ತ್ರವಾಗಿದ್ದು, ರೋಗಿಗಳು ಏನು ತಿನ್ನಬೇಕು ಅಥವಾ ತಿನ್ನಬಾರದು ಅಥವಾ ಯಾವ ಔಷಧದ ಅವಶ್ಯಕತೆ ಇದೆ ಅನ್ನುವುದನ್ನು ಪ್ರಮಾಣೀಕೃತ ಪದವಿಯುಳ್ಳ ವೈದ್ಯರು ಮಾತ್ರ ಅವರ ಪ್ರಕೃತಿಯನ್ನು ಪರಿಶೀಲಿಸಿ ಸೂಕ್ತ ಮಾರ್ಗದರ್ಶನ ನೀಡುವ ಪರಿಪೂರ್ಣ ಶಾಸ್ತ್ರವಾಗಿದ್ದು, ಜನರಿಗೆ ಯೋಗ್ಯ ವಿಶ್ವವಿದ್ಯಾಲಯದಿಂದ ಪದವಿ ಪಡೆದ ವೈದ್ಯರಿಂದ ಮಾತ್ರ ಇಂತಹ ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಅಥವಾ ಮಾರ್ಗದರ್ಶನ ನೀಡಲು ಸಾಧ್ಯ.

ತಪ್ಪು ಮಾಹಿತಿ ನಂಬಬೇಡಿ

ಸೋಶಿಯಲ್ ಮೀಡಿಯಾಗಳಲ್ಲಿ ಬರುವ ತಪ್ಪು ಮಾಹಿತಿಗಳಿಗೆ ಪದವಿ ಪಡೆದು ವೃತ್ತಿ ನೀತಿಗನುಸಾರ (as per medical ethics), ವೈದ್ಯ ವೃತ್ತಿ ನಡೆಸುತ್ತಿರುವ ವೈದ್ಯರು ಜವಾಬ್ದಾರರಲ್ಲ. ಈ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡುವುದು ಎಲ್ಲ ನೋಂದಾಯಿತ ಹಾಗೂ ಸೂಕ್ತ ಆಯುರ್ವೇದ ಪದವಿ ಪಡೆದ ವೈದ್ಯರ ಕರ್ತವ್ಯವಾಗಿದೆ.

ಉದಾಹರಣೆಗೆ ಜನರು ಡಯಾಬಿಟಿಸ್ ರೋಗಿಗಳಾಗಿದ್ದರೆ ಅವರು ತಿನ್ನುವ ಮೆಂತೆ ಇತ್ಯಾದಿ ಆಹಾರ ಪದಾರ್ಥಗಳು ರೋಗಕ್ಕೆ ಪೂರಕವಾಗಿಯೇ ಹೊರತು ಅದುವೇ ಪೂರ್ಣ ಔಷಧವಲ್ಲ ಅಥವಾ ಕಿಡ್ನಿಯಲ್ಲಿ ಕಲ್ಲು ಅಥವಾ ಅದಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿದ್ದರೆ ಅವರು ತಿನ್ನುವ ಹುರುಳಿ, ಬಾಳೆ ದಿಂಡು, ಅಥವಾ ನೆಗ್ಗಿಲ ಮುಳ್ಳು ಇತ್ಯಾದಿ ಆ ರೋಗಕ್ಕೆ ಪೂರಕವಾದ ಆಹಾರವೇ ಹೊರತು ಅದುವೇ ಪೂರ್ಣ ಪ್ರಮಾಣದ ಔಷಧವಾಗಲಾರದು.

ರೋಗಿಗಳು ಅವರ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಪದವಿ ಪಡೆದ ವೈದ್ಯರನ್ನು ನಂಬಬೇಕೇ ಹೊರತು ಗೂಗಲ್ ಅಥವಾ ಇತರ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಳ್ಳುವ ತಮ್ಮನ್ನು ತಾವೇ ವೈದ್ಯಕೀಯ ಜ್ಞಾನದ ಪರಮಾಧಿಕಾರ ಉಳ್ಳವರು ಅನ್ನುವ ಅರೆ ಬರೆ ಜ್ಞಾನವನ್ನು ಕೇವಲ ಪ್ರಚಾರಕ್ಕೋಸ್ಕರ ಬಳಸುವ ಅಥವಾ ಹಂಚುವ ನಕಲಿ ವೈದ್ಯರನ್ನು ಅಲ್ಲ.

ಆಯುರ್ವೇದ ಜೊತೆಗೆ ಆಧುನಿಕ ವೈದ್ಯಕೀಯ ಜ್ಞಾನದ ಅಧ್ಯಯನ

ವೈದ್ಯಕೀಯ ನೀತಿ ಸಂಹಿತೆ ಪ್ರಕಾರ ಯಾವುದೇ ವೈದ್ಯರು ನಾವು ಇಂತಹ ರೋಗ ಗುಣಪಡಿಸುತ್ತೇವೆ ಅನ್ನುವುದನ್ನು ಜಾಹೀರಾತುಗಳಲ್ಲಿ ಅಥವಾ ಇತರ ಪ್ರಚಾರ ಮಾಧ್ಯಮಗಳಲ್ಲಿ ಕ್ಲೈಮ್ ಮಾಡುವಂತಿಲ್ಲ. ಜನರಿಗೆ ಆರೋಗ್ಯದ ಬಗ್ಗೆ ಸಮಸ್ಯೆಗಳು ಎದುರಾದಾಗ ಪದವಿ ಪಡೆದ ನೋಂದಾಯಿತ ವೈದ್ಯರು ಮಾತ್ರ ರೋಗಿಗಳನ್ನು ಕೂಲಂಕಷವಾಗಿ ತಪಾಸಣೆ ಮಾಡಿ ಸೂಕ್ತ ಮಾರ್ಗದರ್ಶನ ನೀಡಬಲ್ಲರು. ಯಾಕೆಂದರೆ ಅವರು ತಮ್ಮ ಶಿಕ್ಷಣ ಮತ್ತು ತರಬೇತಿಯ ಅವಧಿಯಲ್ಲಿ ಆಯುರ್ವೇದದ ಜೊತೆಗೆ ಆಧುನಿಕ ವೈದ್ಯಕೀಯ ಶಾಸ್ತದ ಬಗ್ಗೆ ಕೂಡ ವಿಸ್ತೃತ ತಿಳಿವಳಿಕೆ, ಬೋಧನೆ ಮತ್ತು ತರಬೇತಿ ಪಡೆದಿರುತ್ತಾರೆ.

ಆದ್ದರಿಂದ ಆರೋಗ್ಯ ಸಮಸ್ಯೆಗಳು ಎದುರಾದಾಗ ಮಿತ್ರರು ಅಥವಾ ಸಹೋದ್ಯೋಗಿಗಳ ಸಲಹೆಗಳಿಗೆ ಕಿವಿಗೊಡದೆ ತಮ್ಮ ಹತ್ತಿರದ ಅರ್ಹ ( ಸೂಕ್ತ ವಿಶ್ವವಿದ್ಯಾಲಯದಿಂದ ಸೂಕ್ತ ಪದವಿ ಪಡೆದ) ವೈದ್ಯರನ್ನು ಸಂಪರ್ಕಿಸಿ ಅಂತಹ ಸಲಹೆಗಳನ್ನು ಧೃಡೀಕರಿಸಿಕೊಳ್ಳಿ ಮತ್ತು ಅಂತಹ ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಸೂಕ್ತ ಸಲಹೆ ಪಡೆದುಕೊಳ್ಳಿ. ಯಾವುದೇ ಜಾಹೀರಾತಿನಲ್ಲಿ ಬರುವ ಸಲಹೆಗಳನ್ನು ನಂಬಿ ನಿಮ್ಮ ಅಮೂಲ್ಯವಾದ ಈ ದೇಹವನ್ನು ಪಣಕ್ಕೊಡಬೇಡಿ.

-ಡಾ.ಕೃಷ್ಣ ಗೋಖಲೆ.
ಕನ್ಸಲ್ಟಂಟ್ ಆಯುರ್ವೇದ ಫಿಶಿಷಿಯನ್, ಶಕ್ತಿನಗರ, ಮಂಗಳೂರು