ಚಿತ್ರರಂಗದಲ್ಲಿ ಖ್ಯಾತ ನಟಿ. ಕೌಟುಂಬಿಕ ಸಂಸಾರದ ದೋಣಿ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗ ಬಂದ ಬಿರುಕು, ಸರಿ ಮಾಡಲಿ 3 ವರ್ಷ ಹೆಣಗಾಡಿದರೂ ಹೊಂದಿಕೊಳ್ಳದೆ ಡಿವೋರ್ಸ್ ಅನಿವಾರ್ಯವಾಯಿತು. ಆಗಿದ್ದಾಗಲಿ ಎಂದು ಡಿವೋರ್ಸ್ ಕೊಟ್ಟು ನೋವಿನಲ್ಲಿ ಬದುಕ್ಕಿದ್ದವಳಿಗೆ ಜೀವಕ್ಕೆ ಎರವಾಯ್ತು ಮಹಾಮಾರಿ ಕ್ಯಾನ್ಸರ್!

ಚಿತ್ರರಂಗದಲ್ಲಿ ಖ್ಯಾತ ನಟಿ. ಕೌಟುಂಬಿಕ ಸಂಸಾರದ ದೋಣಿ ಸುಸೂತ್ರವಾಗಿ ಸಾಗುತ್ತಿದೆ ಎನ್ನುವಾಗ ಬಂದ ಬಿರುಕು, ಸರಿ ಮಾಡಲಿ 3 ವರ್ಷ ಹೆಣಗಾಡಿದರೂ ಹೊಂದಿಕೊಳ್ಳದೆ ಡಿವೋರ್ಸ್ ಅನಿವಾರ್ಯವಾಯಿತು. ಆಗಿದ್ದಾಗಲಿ ಎಂದು ಡಿವೋರ್ಸ್ ಕೊಟ್ಟು ನೋವಿನಲ್ಲಿ ಬದುಕ್ಕಿದ್ದವಳಿಗೆ ಜೀವಕ್ಕೆ ಎರವಾಯ್ತು ಮಹಾಮಾರಿ ಕ್ಯಾನ್ಸರ್!

Add Asianetnews Kannada as a Preferred SourcegooglePreferred

ಈ ಜೀವಂತ ಖತೆ ಬೇರೆ ಯಾರದ್ದೂ ಅಲ್ಲ, ಸದಾ ನಗುಮುಖದೊಂದಿಗೆ ಕಾರ್ಯಕ್ರಮಗಳನ್ನು ನಿರೂಪಿಸುತ್ತಾ, ಸಿನಿಮಾಗಳಲ್ಲಿ ನಟಿಸುತ್ತಾ ಎಲ್ಲರ ಮನಗೆದ್ದಿದ್ದ ಮಲೆಯಾಳಂ ನಟಿ ಹಾಗೂ ನಿರೂಪಕಿ ಜುವೆಲ್ ಮೇರಿ ಅವರದ್ದಾಗಿದೆ. ನಗುವಿನ ಹಿಂದೆ ಅಡಗಿದ್ದ ಕರಾಳ ಕಥೆಯೊಂದು ಇದೀಗ ಹೊರಬಿದ್ದಿದೆ. ವಿಚ್ಛೇದನದ ನೋವು, ಕೌಟುಂಬಿಕ ಕಲಹದ ಒತ್ತಡ ಮತ್ತು ಆ ನಂತರ ಅನಿರೀಕ್ಷಿತವಾಗಿ ಎದುರಾದ ಕ್ಯಾನ್ಸರ್ ಎಂಬ ಮಹಾಮಾರಿಯ ವಿರುದ್ಧ ಜುವೆಲ್ ನಡೆಸಿದ ಹೋರಾಟವನ್ನು ಹಿರಿಯ ನಿರ್ಮಾಪಕ ಆಲಪ್ಪಿ ಅಶ್ರಫ್ ಅವರು ಸಮಾಜದ ಮುಂದಿಟ್ಟಿದ್ದಾರೆ. ನಟಿ ಮಮತಾ ಮೋಹನ್‌ದಾಸ್ ಅವರಂತೆ ಜುವೆಲ್ ಕೂಡ ಒಬ್ಬ ರಿಯಲ್ ಫೈಟರ್ ಎಂದು ಅಶ್ರಫ್ ಬಣ್ಣಿಸಿದ್ದಾರೆ.

ವಿಚ್ಛೇದನ ಮತ್ತು 'ವರ್ಬಲ್ ರೇಪ್':

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಲಪ್ಪಿ ಅಶ್ರಫ್, ಜುವೆಲ್ ಮೇರಿ ಅವರ ದಾಂಪತ್ಯ ಜೀವನದ ಸಂಕಷ್ಟಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 2021ರಿಂದ ಪತಿಯಿಂದ ದೂರವಿರುವ ಜುವೆಲ್, ವಿಚ್ಛೇದನ ಪಡೆಯಲು ಪಟ್ಟ ಪಾಡು ಅಷ್ಟಿಷ್ಟಲ್ಲ. ಮದುವೆ ಉಳಿಸಿಕೊಳ್ಳಲು ಮೂರು ವರ್ಷಗಳ ಕಾಲ ಹೋರಾಡಿದರೂ ಕೊನೆಗೆ ವಿಚ್ಛೇದನ ಅನಿವಾರ್ಯವಾಯಿತು. ಈ ಸಮಯದಲ್ಲಿ ಅವರು ಅನುಭವಿಸಿದ ಮಾನಸಿಕ ಒತ್ತಡವೇ ಮುಂದೆ ಕ್ಯಾನ್ಸರ್‌ನಂತಹ ಕಾಯಿಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ವಿಚ್ಛೇದನದ ಕೌನ್ಸಿಲಿಂಗ್ ವೇಳೆ ತಮಗಾದ ಕಹಿ ಅನುಭವವನ್ನು ಜುವೆಲ್ ಹಂಚಿಕೊಂಡಿದ್ದನ್ನು ಅಶ್ರಫ್ ಪ್ರಸ್ತಾಪಿಸಿದ್ದಾರೆ. 'ಕೌನ್ಸಿಲಿಂಗ್ ನಡೆಸುತ್ತಿದ್ದ ಪುರುಷರೊಬ್ಬರು ಅತ್ಯಂತ ಅನಗತ್ಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅದು ಎಷ್ಟರಮಟ್ಟಿಗೆ ಇತ್ತೆಂದರೆ ಅದೊಂದು ರೀತಿಯ 'ವರ್ಬಲ್ ರೇಪ್' (ಮೌಖಿಕ ಅತ್ಯಾ*ಚಾರ) ಎನ್ನಬಹುದು. ವಿದ್ಯಾವಂತೆಯಾದ ನಾನೇ ಇದನ್ನು ಪ್ರಶ್ನಿಸಿದೆ, ಆದರೆ ಅಲ್ಲಿಗೆ ಬರುವ ಅದೆಷ್ಟೋ ಮುಗ್ಧ ಹೆಣ್ಣುಮಕ್ಕಳ ಪಾಡೇನು?' ಎಂದು ಜುವೆಲ್ ಆತಂಕ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ತಾಯಿ ಕೂಡ ಸರಿಹೋಗುತ್ತೆ ಎಂದು ಸಮಾಧಾನ ಹೇಳಿದ್ದರಾದರೂ, ಜುವೆಲ್ ಅವರ ತಂಗಿ ಮಾತ್ರ 'ನೀನು ಇನ್ಮುಂದೆ ಆ ಮನೆಗೆ ಹೋಗಬೇಡ' ಎಂದು ಗಟ್ಟಿಯಾಗಿ ನಿಂತು ಅಕ್ಕನಿಗೆ ಬೆಂಬಲ ನೀಡಿದ್ದರು.

ಕ್ಯಾನ್ಸರ್ ಪತ್ತೆ ಮತ್ತು ಭಯಾನಕ ದಿನಗಳು

ಒಂಟಿಯಾಗಿ ವಿದೇಶ ಪ್ರವಾಸ ಮುಗಿಸಿ ಬಂದ ಬಳಿಕ ಥೈರಾಯ್ಡ್ ತಪಾಸಣೆಗೆ ಹೋದಾಗ ಜುವೆಲ್ ಅವರಿಗೆ ಆಘಾತ ಕಾದಿತ್ತು. ವೈದ್ಯರು ಸ್ಕ್ಯಾನಿಂಗ್ ಮತ್ತು ಬಯಾಪ್ಸಿ ನಡೆಸಿದಾಗ ಗಂಭೀರ ಕಾಯಿಲೆ ಇರುವುದು ದೃಢಪಟ್ಟಿತ್ತು. 'ಬಯಾಪ್ಸಿ ರಿಸಲ್ಟ್ ಕೇಳಿದಾಗ ನನ್ನ ಕಾಲುಗಳು ನೆಲಕ್ಕೆ ಅಂಟಿಕೊಂಡಂತಾಯಿತು' ಎಂದು ಜುವೆಲ್ ಹೇಳಿದ್ದನ್ನು ಅಶ್ರಫ್ ಸ್ಮರಿಸಿದ್ದಾರೆ. ತಕ್ಷಣವೇ ಸರ್ಜರಿ ನಡೆಸಿ ಥೈರಾಯ್ಡ್ ಸುತ್ತಲಿದ್ದ ಗಂಟುಗಳನ್ನು ತೆಗೆಯಲಾಯಿತು.

ಶಸ್ತ್ರಚಿಕಿತ್ಸೆಯ ನಂತರದ ದಿನಗಳು ನರಕದಂತಿದ್ದವು. ನಿರೂಪಕಿಯಾಗಿದ್ದ ಜುವೆಲ್ ಅವರ ಧ್ವನಿಯೇ ಸಂಪೂರ್ಣವಾಗಿ ಹೋಗಿತ್ತು. ಎಡಗೈ ಎತ್ತಲಾಗದ ಸ್ಥಿತಿ, ಕುತ್ತಿಗೆಯ ಸೌಂದರ್ಯ ಹಾಳಾದ ನೋವು, ಸ್ಪರ್ಶ ಜ್ಞಾನವಿಲ್ಲದ ಕುತ್ತಿಗೆಯ ಭಾಗ.. ಹೀಗೆ ದೈಹಿಕ ಮತ್ತು ಮಾನಸಿಕವಾಗಿ ಜುವೆಲ್ ಕುಗ್ಗಿಹೋಗಿದ್ದರು. ಆದರೆ ಫಿಸಿಯೋಥೆರಪಿ ಮತ್ತು ಛಲದ ಮೂಲಕ ಒಂದೂವರೆ ತಿಂಗಳ ಬಳಿಕ ಧ್ವನಿಯನ್ನು ಮರಳಿ ಪಡೆದರು.

ಅನುಕಂಪ ಬೇಡ, ಅವಕಾಶ ನೀಡಿ

ಸಂತೋಷವಿಲ್ಲದ ದಾಂಪತ್ಯದಲ್ಲಿ ಕಾಂಪ್ರಮೈಸ್ ಮಾಡಿಕೊಂಡು ಆರೋಗ್ಯ ಹಾಳುಮಾಡಿಕೊಳ್ಳುವ ಬದಲು, ನೆಮ್ಮದಿ ಕಂಡುಕೊಳ್ಳುವುದು ಮುಖ್ಯ' ಎಂಬ ಜುವೆಲ್ ಮಾತನ್ನು ಅಶ್ರಫ್ ಉಲ್ಲೇಖಿಸಿದ್ದಾರೆ. ಈಗ ಜುವೆಲ್ ಮೇರಿ ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರಿಗೆ ಈಗ ಬೇಕಿರುವುದು ಜನರ ಅನುಕಂಪವಲ್ಲ, ಬದಲಿಗೆ ಅವರ ವೃತ್ತಿಜೀವನಕ್ಕೆ ಬೆಂಬಲ. ಚಿತ್ರರಂಗದವರು ಅವರಿಗೆ ಅವಕಾಶ ನೀಡಿ ಜೊತೆಗೆ ಕರೆದೊಯ್ಯಬೇಕು. ಪ್ರತಿಯೊಂದು ಕೊರತೆಯಲ್ಲೂ ನಾವು ಕಾಣದ ಒಂದು ಶಕ್ತಿಯಿರುತ್ತದೆ ಎಂದು ಆಲಪ್ಪಿ ಅಶ್ರಫ್ ಮಾರ್ಮಿಕವಾಗಿ ನುಡಿದಿದ್ದಾರೆ.