ದೈಹಿಕ ಮಾತ್ರವಲ್ಲದೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಆಯುರ್ವೇದವನ್ನು ಮನೆಮನೆಗೆ ಕೊಂಡೊಯ್ದು ನಿತ್ಯ ಜೀವನಶೈಲಿಯಲ್ಲಿ ಅಳವಡಿಕೆ ಮಾಡುಕೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದು ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ಬೆಂಗಳೂರು (ಡಿ.27): ದೈಹಿಕ ಮಾತ್ರವಲ್ಲದೆ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡುವ ಆಯುರ್ವೇದವನ್ನು ಮನೆಮನೆಗೆ ಕೊಂಡೊಯ್ದು ನಿತ್ಯ ಜೀವನಶೈಲಿಯಲ್ಲಿ ಅಳವಡಿಕೆ ಮಾಡುಕೊಳ್ಳುವಂತೆ ಪ್ರೇರೇಪಿಸಬೇಕಿದೆ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಹೇಳಿದರು. ಎರಡನೇ ವಿಶ್ವ ಆಯುರ್ವೇದ ಸಮ್ಮೇಳನದ 2ನೇ ದಿನವಾದ ಶುಕ್ರವಾರ ಮುಖ್ಯವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಆಯುರ್ವೇದ ದೃಷ್ಟಿಯಲ್ಲಿ ಕೇವಲ ದೈಹಿಕವಾಗಿ ಆರೋಗ್ಯವಾಗಿದ್ದರೆ ಸಾಲದು, ಮಾನಸಿಕ ಸ್ವಾಸ್ಥ್ಯವೂ ಮುಖ್ಯ ಎನ್ನುತ್ತದೆ. ಆಯುರ್ವೇದ ನಮ್ಮ ಭಾರತೀಯ ಪರಂಪರೆಯ ಭಾಗವಾಗಿದೆ. ಅಲ್ಲದೆ ಈ ಚಿಕಿತ್ಸಾ ಪದ್ಧತಿ ಕೇವಲ ಲೌಕಿಕ ಜಗತ್ತಿನ ವಿಚಾರವಲ್ಲ. ಇದು ಅಧ್ಯಾತ್ಮಿಕತೆಯ ಭಾಗವೂ ಆಗಿದೆ ಎಂದರು.
ಆಯುರ್ವೇದ, ಯೋಗ ಪದ್ಧತಿ ಭಾರತ ಜಗತ್ತಿಗೆ ನೀಡಿದ ಕೊಡುಗೆ. ನಮ್ಮ ನಾಡು, ನುಡಿಯ ಬಗ್ಗೆ ಹೆಮ್ಮೆ ಇಟ್ಟುಕೊಳ್ಳುವಂತೆ ನಮ್ಮ ವೈದ್ಯಕೀಯ ಪದ್ಧತಿ ಬಗ್ಗೆಯೂ ಪ್ರಚಾರ ಆಗಬೇಕಿದೆ. ಗ್ರಾಮ, ನಗರಗಳಲ್ಲಿ ಆಯುರ್ವೇದದ ಮೂಲ ಉದ್ದೇಶ ತಿಳಿಸಿಕೊಡಬೇಕು. ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿ. ಇದರಿಂದ ಆಸ್ಪತ್ರೆ ಹಾಗೂ ನ್ಯಾಯಾಲಯಗಳಲ್ಲಿ ಜನರು ಸಂತೆಯಂತೆ ತುಂಬಿಕೊಳ್ಳುವುದು ತಪ್ಪಲಿದೆ ಎಂದು ಹೇಳಿದರು.ಮಧ್ಯಾಹ್ನ ಆಯುರ್ವೇದ ಕ್ಷೇತ್ರದಲ್ಲಿ ಸಾಧನೆ ಮಾಡಿದ ನೂರು ಸಾಧಕರಿಗೆ ‘ಆಯುರ್ವೇದ ವಿಶ್ವರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ಜತೆಗೆ ಆಯುರ್ವೇದ ಕುರಿತ ತಾಂತ್ರಿಕ ಉಪನ್ಯಾಸಗಳು ನಡೆದವು. ಭರತನಾಟ್ಯ, ಯಕ್ಷಗಾನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು. ಎರಡನೇ ದಿನವಾದ ಶುಕ್ರವಾರವೂ ಸಾವಿರಾರು ಸಂಖ್ಯೆಯಲ್ಲಿ ಜನತೆ ಆಗಮಿಸಿದ್ದರು.
‘ಜೀವನ ಪದ್ಧತಿ ಪರಿಷ್ಕರಿಸಿ’: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ದೈಹಿಕ ಸದೃಢತೆ ಜತೆಗೆ ಮಾನಸಿಕ ಸದೃಢತೆಯೂ ಮುಖ್ಯ. ಅದಕ್ಕಾಗಿ ನಮ್ಮ ಸಂಸ್ಕೃತಿ ಹಾಗೂ ಜೀವನ ಪದ್ಧತಿ ಮರು ಪರಿಷ್ಕರಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮುಂದಿನ ಪೀಳಿಗೆ ಆಹಾರ ಪದ್ಧತಿ, ಆರೋಗ್ಯ ಪದ್ಧತಿ ಬೆಳೆಸಿಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು. ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ, ಆಧುನಿಕ ವೈದ್ಯಕೀಯ ಪದ್ಧತಿ ತತ್ಕಾಲದ ಪರಿಹಾರ ಸೂಚಿಸಿದರೆ ಆಯುರ್ವೇದ ದೀರ್ಘಕಾಲಿಕ ಪರಿಹಾರ ನೀಡುತ್ತದೆ.
ಆಯುರ್ವೇದ ನಮ್ಮ ನೆಲಮೂಲದ ಪದ್ಧತಿಯಾಗಿದ್ದು, ಈ ಹಿಂದೆ ಬಹುತೇಕ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ಆಯುರ್ವೇದ ಆಧಾರಿತ ಮನೆ ಮದ್ದು ಚಾಲ್ತಿಯಲ್ಲಿತ್ತು ಎಂದು ಸ್ಮರಿಸಿದರು. ಇದೀಗ ಆಧುನಿಕ ಔಷಧಗಳು ಎಲ್ಲೆಡೆ ವ್ಯಾಪಿಸುತ್ತಿದೆ. ಆದರೆ, ಇದು ಪೂರ್ಣ ಆರೋಗ್ಯದ ಚಿಕಿತ್ಸೆ ನೀಡುತ್ತಿಲ್ಲ. ಅಡ್ಡ ಪರಿಣಾಮದ ಜತೆಗೆ ಇನ್ನಿತರ ಆರೋಗ್ಯ ಸಮಸ್ಯೆ ತಂದೊಡ್ಡುತ್ತಿವೆ. ಹೀಗಾಗಿ ನಿರಂತರ ಆರೋಗ್ಯ ಕಾಪಿಟ್ಟುಕೊಳ್ಳಲು ಆಯುರ್ವೇದಕ್ಕೆ ಮರಳಬೇಕಿದೆ ಎಂದರು.
ಕಜೆಯವರ ಕಾರ್ಯ ಶ್ಲಾಘನೀಯ
ಅವದೂತ ವಿನಯ್ ಗುರೂಜಿ ಮಾತನಾಡಿ, ಆಯುರ್ವೇದ ನಮ್ಮ ವೇದಗಳ ಭಾಗವೇ ಆಗಿದೆ. ಇದರಲ್ಲಿ ಕ್ಯಾನ್ಸರ್ ಸೇರಿ ಎಲ್ಲಾ ಪ್ರಮುಖ ಆರೋಗ್ಯ ಸಮಸ್ಯೆಗಳಿಗೂ ಪರಿಹಾರವಿದೆ. ಪ್ರಕೃತಿ ಹಾಗೂ ಮನುಷ್ಯನ ಸಂಬಂಧವನ್ನು ಇನ್ನಷ್ಟು ಹತ್ತಿರಗೊಳಿಸುವ ವೈದ್ಯಕೀಯ ಪದ್ಧತಿ ಇದಾಗಿದೆ. ಈ ಸಂಬಂಧ ಜನಜಾಗೃತಿ ಮೂಡಿಸಲು ಡಾ.ಗಿರಿಧರ ಕಜೆಯವರು ಈ ಸಮ್ಮೇಳನ ಆಯೋಜಿಸಿರುವುದು ಶ್ಲಾಘನೀಯ ಎಂದರು. ಆಯುರ್ವೇದ ಸಮ್ಮೇಳನದ ರುವಾರಿ ಡಾ.ಗಿರಿಧರ ಕಜೆ, ಆಯುರ್ವೇದ ಎಲ್ಲರಿಗೂ ಸಲ್ಲುವ ವೈದ್ಯಕೀಯ ಪದ್ಧತಿಯಾಗಿದೆ.
ರೋಗ ಬರದಂತೆ ತಡೆಯುವ ಜೀವನ ಶೈಲಿಯನ್ನು ಆಯುರ್ವೇದ ಸೂಚಿಸುವುದಷ್ಟೇ ಅಲ್ಲದೇ, ರೋಗ ಬಂದಾಗ ಅದನ್ನು ನಿವಾರಿಸುವ ಸಾಮರ್ಥ್ಯವನ್ನೂ ಹೊಂದಿದೆ. ಆಧುನಿಕ ಜಗತ್ತು ಎಷ್ಟೇ ಮುಂದುವರಿದಿದ್ದರೂ ಜನರ ದೈಹಿಕ ಸಾಮರ್ಥ್ಯ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗುತ್ತಿದೆ. ಆಯುರ್ವೇದದ ದಿನಚರ್ಯೆ ಬಿಟ್ಟಿರುವುದೇ ಇದಕ್ಕೆ ಕಾರಣವಾಗಿದೆ. ಈ ಜೀವನ ಕ್ರಮ ಅನುಸರಣೆಯಿಂದ ಸತ್ವಶಾಲಿಯಾದ ಬದುಕು ಸಾಧ್ಯ ಎಂದರು. ವಿಆರ್‌ಎಲ್ ಸಮೂಹದ ಮುಖ್ಯಸ್ಥ ವಿಜಯ ಸಂಕೇಶ್ವರ ಮಾತನಾಡಿದರು.


