ಕಾನ್ಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ವಾರ್ಮರ್ ಯಂತ್ರಕ್ಕೆ ಬೆಂಕಿ ತಗುಲಿ ನವಜಾತ ಹೆಣ್ಣು ಶಿಶುವೊಂದು ಸಜೀವ ದಹನಗೊಂಡಿದೆ. ಜನಿಸಿದ ಕೆಲವೇ ಗಂಟೆಗಳಲ್ಲಿ ನಡೆದ ಈ ದುರಂತಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ದೂರು ದಾಖಲಿಸಿದ್ದಾರೆ.
ಅನೇಕ ಮಕ್ಕಳು ಹುಟ್ಟುವಾಗ ಹಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿರುತ್ತವೆ. ಅಮ್ಮನ ಹೊಟ್ಟೆಯೊಳಗೆ ಬೆಚ್ಚಗಿದ್ದ ಮಕ್ಕಳಿಗೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಸಮಯ ಬೇಕಾಗುತ್ತದೆ. ಕೆಲವು ಮಕ್ಕಳಿಗೆ ಬೆಚ್ಚನೆಯ ಹೊದಿಕೆ ಸಾಕಾದರೆ ಇನ್ನು ಕೆಲವು ಮಕ್ಕಳನ್ನು ಬೆಚ್ಚನೆ ಮಾಡುವ ಯಂತ್ರದಲ್ಲಿ ಮಲಗಿಸಿ ಬೆಚ್ಚಗಿರಿಸಲಾಗುತ್ತದೆ. ಆದರೆ ಇಲ್ಲೊಂಡು ಕಡೆ ಬೆಚ್ಚನೆ ಮಾಡುವ ಯಂತ್ರದಲ್ಲಿ(warmer machine) ಮಲಗಿಸಿದ್ದ ಮಗುವೊಂದು ಸಜೀವ ದಹನಗೊಂಡ ದುರಂತ ಘಟನೆ ನಡೆದಿದೆ. ಉತ್ತರ ಪ್ರದೇಶ ಕಾನ್ಪುರದ ಖಾಸಗಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಮಗುವಿನ ಮುಖ ಹೊಟ್ಟೆ ಸಂಪೂರ್ಣ ಸುಟ್ಟು ಹೋಗಿ ಮಗು ಸಾವನ್ನಪ್ಪಿದ್ದು, ನೋಡುವುದಕ್ಕೆ ಆಗದಂತಹ ಸ್ಥಿತಿಯಲ್ಲಿತ್ತು ಮಗುವಿನ ಮೃತದೇಹ. ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದ್ದು, ಘಟನೆಯಿಂದ ಪುಟ್ಟ ಮಗುವಿನ ಪೋಷಕರು ಕಂಗಾಲಾಗಿದ್ದು, ಕುಟುಂಬದವರು ಆಸ್ಪತ್ರೆ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಬೆಚ್ಚಗಾಗಲು ಇನ್ಕ್ಯುಬೇಟರ್‌ಲ್ಲಿಟ್ಟ ಮಗು ಸಜೀವ ದಹನ
ನಿನ್ನೆ ಸಂಜೆ ಖಾಸಗಿ ಆಸ್ಪತ್ರೆಯ ಎನ್‌ಐಸಿಯುನಲ್ಲಿ( Neonatal Intensive Care Unit)ನವಜಾತ ಹೆಣ್ಣು ಶಿಶುವೊಂದನ್ನು ಮಲಗಿಸಿದ್ದ ಈ ವಾರ್ಮರ್ ಮೆಷಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಈ ದುರಂತ ನಡೆದಿದೆ. ಪರಿಣಾಮ ಜನಿಸಿದ ಕೆಲ ಗಂಟೆಗಳಲ್ಲಿ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಮಗು ಸಜೀವ ದಹನಗೊಂಡಿದೆ.
ಬಿಥೂರ್‌ನ ಬ್ರಹ್ಮನಗರ ಪ್ರದೇಶದಲ್ಲಿರುವ ರಾಜಾ ನರ್ಸಿಂಗ್ ಹೋಂನಲ್ಲಿ ಈ ದುರಂತ ಸಂಭವಿಸಿದೆ. ಮಗುವಿನ ಕುಟುಂಬದವರ ಪ್ರಕಾರ, ಮಗು ಈ ಆಸ್ಪತ್ರೆಯಲ್ಲಿ ಜನಿಸಿದ್ದು, ಜನನದ ನಂತರ NICU ಗೆ ದಾಖಲಿಸಲಾಗಿತ್ತು. ಈ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮಗುವಿಗೆ ತೀವ್ರ ತೀವ್ರ ಸುಟ್ಟ ಗಾಯಗಳಾಗಿದ್ದು, ಆಕೆಯ ಮುಖ, ಎದೆ, ಹೊಟ್ಟೆ ಮತ್ತು ತೊಡೆಗಳು ತೀವ್ರವಾಗಿ ಸುಟ್ಟಹೋಗಿ ಬೆಂಕಿಯಿಂದಾಗಿ ಆಕೆಯ ದೇಹವು ಕಪ್ಪು ಬಣ್ಣಕ್ಕೆ ತಿರುಗಿತು. ಯಾರಿಗೂ ಆಕೆಯನ್ನು ಉಳಿಸಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ಸಿಬ್ಬಂದಿಯ ಗಂಭೀರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಮಗುವಿನ ಸಾವಿನಿಂದ ಆಕ್ರೋಶಗೊಂಡ ಸಂಬಂಧಿಕರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ದು, ನಂತರ ಮಗುವಿನ ಚಿಕ್ಕಮ್ಮ ಬಿಥೂರ್ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆಯ ವಿರುದ್ಧ ದೂರು ದಾಖಲಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.
ಘಟನೆ ನಡೆದು 5 ಗಂಟೆಗಳೇ ಕಳೆದಿದ್ದರೂ ಈ ವಿಚಾರವನ್ನು ಮಗುವಿನ ಸಂಬಂಧಿಕರಿಗೆ ತಿಳಿಸದೇ ಮುಚ್ಚಿಟ್ಟಿದ್ದರು ಎಂದು ಆಸ್ಪತ್ರೆ ವಿರುದ್ಧ ಪೋಷಕರು ಆರೋಪ ಮಾಡಿದ್ದಾರೆ. ಬಕರ್‌ಗಂಜ್ ನಿವಾಸಿ ಅರುಣ್ ನಿಶಾದ್ ಎಂಬುವವರ ಮಗು ಈ ದುರಂತದಲ್ಲಿ ಮೃತಪಟ್ಟ ಹಸುಗೂಸು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅರುಣ್ ನಿಶಾದ್ ಅವರ ಪತ್ನಿ ಬಿಟ್ಟು ಅವರಿಗೆ ಭಾನುವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರು ಪತ್ನಿಯನ್ನು ಈ ರಾಜಾ ಆಸ್ಪತ್ರೆಗೆ ಕರೆತಂದಿದ್ದರು. ಅಲ್ಲಿ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಕ್ಕೆ ಹೇಳಿದ್ದು, ನಂತರ ಸಂಜೆ 4 ಗಂಟೆ ಸುಮಾರಿಗೆ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದು ದಂಪತಿಯ ಮೊದಲ ಮಗುವಾಗಿತ್ತು..
ಹೆರಿಗೆಯ ನಂತರ ವೈದ್ಯರು ಪತ್ನಿಯನ್ನು ವಾರ್ಡ್‌ಗೆ ಸ್ಥಳಾಂತರಿಸಿ, ಅವರ ಮಗಳನ್ನು ಆಸ್ಪತ್ರೆಯ NICU ಗೆ ದಾಖಲಿಸಿದ್ದರು. ಆದರೆ ಮಗು ಮಲಗಿದ್ದ NICU ನಲ್ಲಿನ ವಾರ್ಮರ್ ಯಂತ್ರಕ್ಕೆ ಬೆಂಕಿ ಕಾಣಿಸಿಕೊಂಡಿದ್ದು, ಜನಿಸಿದ ಸ್ವಲ್ಪ ಹೊತ್ತಿನಲ್ಲೇ ಮಗು ಸಾವನ್ನಪ್ಪಿದೆ. ನಾಲ್ಕೈದು ಗಂಟೆಗಳ ಕಾಲ ಆಸ್ಪತ್ರೆ ಸಿಬ್ಬಂದಿ ಈ ಘಟನೆಯನ್ನು ಪೋಷಕರಿಂದ ಮರೆಮಾಡಿದ್ದಾರೆ.
ಇದನ್ನೂ ಓದಿ: ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕನ ಚಡ್ಡಿ ಕತ್ತರಿಸಿ 50 ಲಕ್ಷ ಮೌಲ್ಯದ ಚಿನ್ನ ಹೊರತೆಗೆದ ಕಸ್ಟಮ್ಸ್ ಅಧಿಕಾರಿಗಳು
ಘಟನೆಗೆ ಅರುಣ್ ನಿಶಾದ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು,ಈ ಆಸ್ಪತ್ರೆಯನ್ನು ಮುಚ್ಚಬೇಕು, ಇಡೀ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು, ನಾವು ಮಗುವನ್ನು ತೋರಿಸಲು ಕೇಳಿದಾಗ, ಸಿಬ್ಬಂದಿ ಅವಳನ್ನು ದಾಖಲಿಸುವ ಬಗ್ಗೆ ಮಾತನಾಡಿದರು. ಸಂಜೆ ತಡವಾಗಿ, ನಾವು ನಮ್ಮ ಮಗಳನ್ನು ತೋರಿಸಲು ಪದೇ ಪದೇ ಕೇಳಿದೆವು.ಆಗಲೂ ಅವರು ತೋರಿಸದೇ ಇದ್ದಾಗ ಸಿಬ್ಬಂದಿ ಘಟನೆಯ ಬಗ್ಗೆ ನಮಗೆ ತಿಳಿಸಿದರು. ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ. ನನ್ನ ಮಗಳ ಸಾವಿಗೆ ಆಸ್ಪತ್ರೆ ಅಧಿಕಾರಿಗಳೇ ಕಾರಣ. ಆಸ್ಪತ್ರೆಯನ್ನು ಮುಚ್ಚಬೇಕು. ಇಡೀ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಮಗುವಿನ ಸಾವಿನ ನಂತರ ಆಸ್ಪತ್ರೆಯಲ್ಲಿ ಸಂಬಂಧಿಕರು ಗಲಾಟೆ ಮಾಡಿದಾಗ ಆಸ್ಪತ್ರೆ ಆಡಳಿತ ಮಂಡಳಿ ಅವರನ್ನು ಸಮಾಧಾನಪಡಿಸಿ. ಪ್ರಕರಣವನ್ನು ಮುಚ್ಚಿಹಾಕಲು 2 ಲಕ್ಷ ರೂಪಾಯಿ ಹಣ ನೀಡಲು ಮುಂದಾಯ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ. ನಿರ್ಲಕ್ಷ್ಯಕ್ಕೆ ಬಲಿಯಾದ ಮುಗ್ಧ ಜೀವಕ್ಕೆ ಬೆಲೆ ಕಟ್ಟಿದ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಕುಟುಂಬದವರು ಮತ್ತಷ್ಟು ಕೋಪಗೊಂಡರು. ನಂತರ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇದನ್ನೂ ಓದಿ: ತ್ರಿಬಲ್ ರೈಡ್: ಡಿವೈಡರ್‌ಗೆ ಡಿಕ್ಕಿ ಹೊಡೆದ ಬೈಕ್: ಅಮ್ಮ ಹೊಸದಾಗಿ ಮದುವೆಯಾದ ಮಗ ಗರ್ಭಿಣಿ ಸೊಸೆ ಸಾವು
ಮಗುವನ್ನು ಒಮ್ಮೆಯೂ ಜೀವಂತವಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಮಗುವಿನ ತಾಯಿ ಕಣ್ಣೀರಿಟ್ಟರೆ, ನನ್ನ ಮೊಮ್ಮಗಳನ್ನು ನೋಡಲು ನಾನು ಕಾತರಳಾಗಿದ್ದೆ. ಲಕ್ಷ್ಮಿ ನನ್ನ ಮನೆಗೆ ಬಂದಿದ್ದಾಳೆಂದು ನನಗೆ ಸಂತೋಷವಾಯಿತು. ಆದರೆ, ಅವಳು ನಿರ್ಲಕ್ಷ್ಯಕ್ಕೆ ಬಲಿಯಾದಳು ಎಂದು ಮಗುವಿನ ಅಜ್ಜಿ ಪ್ರೇಮಾ ಹೇಳಿದ್ದಾರೆ.
ಭೂಮಿಯ ಮೇಲೆ ದೇವರುಗಳೆಂದು ಕರೆಯಲ್ಪಡುವವರ ವೈದ್ಯರು ವ್ಯವಸ್ಥೆ ಮತ್ತು ಸಿಬ್ಬಂದಿ ಮಗುವಿನ ಜೀವವನ್ನು ತೆಗೆದುಕೊಂಡರು. ತಾಯಿಗೆ ತನ್ನ ಮಗುವನ್ನು ಒಂದು ಬಾರಿಯೂ ಜೀವಂತವಾಗಿ ಎದೆಗೆ ಹಿಡಿದಿಟ್ಟುಕೊಳ್ಳಲು ಸಹ ಸಾಧ್ಯವಾಗಲಿಲ್ಲ. ತನ್ನ ಮಗಳನ್ನು ಹೇಗೆ ಜೀವಂತವಾಗಿ ಸುಟ್ಟುಹಾಕಲಾಯಿತು ಎಂದು ಅವಳಿಗೆ ಹೇಳುವ ಧೈರ್ಯ ನನಗಿಲ್ಲ ಎಂದು ಅವರು ಕಣ್ಣಿರೀಟ್ಟಿದ್ದಾರೆ.
ಘಟನೆಯ ಬಗ್ಗೆ ತನಿಖೆಗೆ 3ಸದಸ್ಯರ ಸಿಮಿತಿ ರಚಿಸಲಾಗಿದೆ ಎಂದು ಹೆಚ್ಚುವರಿ ವೈದ್ಯಕೀಯ ಅಧಿಕಾರಿ ರಮಿತ್ ರಸ್ತೋಗಿ ಹೇಳಿದ್ದಾರೆ. 24 ಗಂಟೆಯೊಳಗೆ ಪ್ರಕರಣದ ಬಗ್ಗೆ ವರದಿ ಕೇಳಲಾಗಿದೆ. ಘಟನೆಯ ಕಾರಣವನ್ನು ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.


