Male Fertility:ದೀರ್ಘಕಾಲದ ಒತ್ತಡವು ಕೇವಲ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲ, ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯದ (male fertility) ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ಒತ್ತಡದಿಂದ ಫಲವತ್ತತೆ ಸಮಸ್ಯೆ ಯಾಕೆ ಹೆಚ್ಚುತ್ತದೆ ಇಲ್ಲಿದೆ ತಜ್ಞರು ನೀಡಿದಂತಹ ಸಂಪೂರ್ಣ ಮಾಹಿತಿ.

ದೀರ್ಘಕಾಲದ ಒತ್ತಡ ನಿಮ್ಮ ತಂದೆಯಾಗುವ ಕನಸಿಗೆ ಅಡ್ಡಿ

ಇಂದಿನ ವೇಗದ ಜೀವನದಲ್ಲಿ ಒತ್ತಡ ಎಲ್ಲರ ಬದುಕಿನ ಭಾಗವಾಗಿದೆ. ಆದರೆ ದೀರ್ಘಕಾಲದ ಒತ್ತಡವು ಕೇವಲ ಮಾನಸಿಕ ಆರೋಗ್ಯವನ್ನಷ್ಟೇ ಅಲ್ಲ, ಪುರುಷರ ಸಂತಾನೋತ್ಪತ್ತಿ ಸಾಮರ್ಥ್ಯದ (male fertility) ಮೇಲೂ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ. ತಜ್ಞರು ಹೇಳುವ ಪ್ರಕಾರ, ಒತ್ತಡ ಮಾತ್ರವೇ ಬಂಜೆತನಕ್ಕೆ ನೇರ ಕಾರಣವಲ್ಲ. ಆದರೆ ದೀರ್ಘಕಾಲದ ದೈಹಿಕ ಮತ್ತು ಮಾನಸಿಕ ಒತ್ತಡವು ಹಾರ್ಮೋನ್ ಸಮತೋಲನ ಹಾಗೂ ಸಂತಾನೋತ್ಪತ್ತಿ ಆರೋಗ್ಯವನ್ನು ಹಾಳುಮಾಡಿ, ದಂಪತಿಗಳಿಗೆ ಗರ್ಭಧಾರಣೆ ಕಷ್ಟವಾಗುವಂತೆ ಮಾಡಬಹುದು.

ಒತ್ತಡದಿಂದ ಫಲವತ್ತತೆ ಹೇಗೆ ಕಡಿಮೆಯಾಗುತ್ತದೆ?

ದೀರ್ಘಕಾಲ ಒತ್ತಡದಲ್ಲಿರುವ ಪುರುಷರ ದೇಹದಲ್ಲಿ ಕಾರ್ಟಿಸೋಲ್ (Cortisol) ಎಂಬ ಸ್ಟ್ರೆಸ್ ಹಾರ್ಮೋನ್ ಪ್ರಮಾಣ ಹೆಚ್ಚಾಗುತ್ತದೆ. ಇದು ಟೆಸ್ಟೋಸ್ಟೆರೋನ್ ಹಾರ್ಮೋನ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಟೆಸ್ಟೋಸ್ಟೆರೋನ್ ಆರೋಗ್ಯಕರ ವೀರ್ಯಾಣು ಉತ್ಪತ್ತಿಗೆ ಅತ್ಯಗತ್ಯ.

ಸ್ಟ್ರೆಸ್ ಹಾರ್ಮೋನ್ ಹೆಚ್ಚಾದರೆ ಏನೆಲ್ಲಾ ಸಮಸ್ಯೆ ಕಾಡುತ್ತದೆ?

  • ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗಬಹುದು.
  • ಅವುಗಳ ಚಲನೆಯ ಸಾಮರ್ಥ್ಯ (Motility) ಕುಗ್ಗಬಹುದು.
  • ವೀರ್ಯಾಣುಗಳ ಆಕಾರ ಹದಗೆಡಬಹುದು.
  • ಕೆಲವು ಅಧ್ಯಯನಗಳ ಪ್ರಕಾರ, ದೀರ್ಘಕಾಲದ ಒತ್ತಡವು ಆಕ್ಸಿಡೇಟಿವ್ ಸ್ಟ್ರೆಸ್ ಹೆಚ್ಚಿಸಿ, ವೀರ್ಯಾಣುಗಳ ಗುಣಮಟ್ಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
  • ಜೀವನಶೈಲಿಯ ಮೇಲೂ ಬೀಳುತ್ತದೆ ಪರಿಣಾಮ
  • ಒತ್ತಡವು ಪರೋಕ್ಷವಾಗಿ ಜೀವನಶೈಲಿಯನ್ನು ಬದಲಾಯಿಸಿ ಸಂತಾನೋತ್ಪತ್ತಿ ಆರೋಗ್ಯಕ್ಕೆ ಹಾನಿ ಮಾಡಬಹುದು.

ನಿರಂತರ ಒತ್ತಡದಲ್ಲಿರುವ ಪುರುಷರಲ್ಲಿ ನಿದ್ರಾಹೀನತೆ, ಅನಾರೋಗ್ಯಕರ ಆಹಾರ ಸೇವನೆ, ಅತಿಯಾದ ಮದ್ಯಪಾನ, ಧೂಮಪಾನದ ಅಭ್ಯಾಸ, ವ್ಯಾಯಾಮದ ಕೊರತೆ, ದೇಹದ ತೂಕ ಹೆಚ್ಚಳ ಉಂಟಾಗುತ್ತದೆ. ಈ ಎಲ್ಲ ಕಾರಣಗಳು ಫಲವತ್ತತೆಯನ್ನು ಮತ್ತಷ್ಟು ಕಡಿಮೆಯಾಗುತ್ತದೆ. ಇದರ ಜೊತೆಗೆ, ಒತ್ತಡವು ಲೈಂಗಿಕ ಆಸಕ್ತಿ ಕಡಿಮೆಯಾಗುವುದು, ಶಿಶ್ನದ ನಿಮಿರುವಿಕೆ ಅಥವಾ ವೀರ್ಯಸ್ಖಲನಸಮಸ್ಯೆಗಳನ್ನು ಉಂಟುಮಾಡಬಹುದು. ಇದರಿಂದ ಗರ್ಭಧಾರಣೆಯ ಸಾಧ್ಯತೆ ಕಡಿಮೆಯಾಗುತ್ತದೆ.

ಈ ಸಮಸ್ಯೆಯನ್ನು ಹೇಗೆ ನಿಯಂತ್ರಿಸಬಹುದು?

ಒತ್ತಡದಿಂದ ಉಂಟಾಗುವ ಹೆಚ್ಚಿನ ಫಲವತ್ತತೆ ಸಮಸ್ಯೆಗಳನ್ನು ಜೀವನಶೈಲಿಯಲ್ಲಿ ಬದಲಾವಣೆ ಮಾಡುವ ಮೂಲಕ ನಿಯಂತ್ರಿಸಬಹುದು. ಇದಕ್ಕಾಗಿ ನೀವು ಪ್ರತಿದಿನ ನಿಯಮಿತ ವ್ಯಾಯಾಮ ಮಾಡಿ, ಸಾಕಷ್ಟು ನಿದ್ರೆ ಮಾಡಿ, ಪೌಷ್ಟಿಕ ಆಹಾರ ಸೇವಿಸಿ, ಯೋಗ ಅಥವಾ ಧ್ಯಾನ ಅಭ್ಯಾಸ ಮಾಡಿ, ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ದಂಪತಿ ಒಂದು ವರ್ಷದಿಂದ ಮಗುವಿಗಾಗಿ ಪ್ರಯತ್ನಿಸುತ್ತಿದ್ದರೂ ಯಶಸ್ಸು ಸಿಗದಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಮಹಿಳೆಯ ವಯಸ್ಸು 35 ವರ್ಷಕ್ಕಿಂತ ಹೆಚ್ಚು ಇದ್ದರೆ, ಆರು ತಿಂಗಳ ಪ್ರಯತ್ನದ ಬಳಿಕವೇ ಫಲವತ್ತತೆ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ವೈದ್ಯಕೀಯ ಪರೀಕ್ಷೆಯ ಜೊತೆಗೆ ವೀರ್ಯ ಪರೀಕ್ಷೆ (Semen Analysis) ಮಾಡಿಸಿದರೆ, ಸಮಸ್ಯೆಗೆ ಒತ್ತಡ ಕಾರಣವೇ ಅಥವಾ ಬೇರೆ ವೈದ್ಯಕೀಯ ಕಾರಣವಿದೆಯೇ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು.