ಒಂಟಿತನದ ಭಾವನೆ ಅನೇಕರನ್ನು ಕಾಡುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು, ಜನರೊಂದಿಗೆ ಮಾತನಾಡಲು ಹಿಂಜರಿಯುವುದು, ಅತಿಯಾಗಿ ಯೋಚಿಸುವುದು, ಹಾಗೂ ಅತಿಯಾದ ಕೋಪ, ಭಯ ಮತ್ತು ಅಸ್ತಿತ್ವದ ಬಗ್ಗೆ ಗೊಂದಲಗಳು ಒಂಟಿತನದ ಸೂಚಕಗಳಾಗಿರಬಹುದು. 

ಕೆಲವು ವ್ಯಕ್ತಿಗಳು ಜನರ ಮಧ್ಯೆ ಇದ್ದರು ಎಲ್ಲರ ಜೊತೆಗೆ ನಗುನಗುತ್ತಾ,ಉತ್ಸಾಹದಿಂದ ಇದ್ದರೂ ಆದರೆ ಅವರ ಮನಸ್ಸಿನ ಒಂದು ಆಳದಲ್ಲಿ,ಒಂಟಿತನದ ಭಾವನೆ ಆಳವಾಗಿ ನೆಲೆಸಿರುತ್ತದೆ. ಎಲ್ಲರೊಟ್ಟಿಗೆ ಬೆರೆತರೂ ಸಹ ಅವರ ಮನಸ್ಸಿನಲ್ಲಿ ಒಂದು ಒಂಟಿತನ ಕಾಡುತ್ತಿರುತ್ತದೆ. ಈ ಭಾವನೆಯನ್ನ ಒಮ್ಮೆಲೆ ಅವರಲ್ಲಿ ಗುರುತಿಸಲು ಸಾಧ್ಯವಾಗುವುದಿಲ್ಲ. ಹೆಚ್ಚಾಗಿ ಅವರು ಅದನ್ನ ತೋರ್ಪಡಿಸಲು ಇಷ್ಟಪಡುವುದಿಲ್ಲ.ಈ ಭಾವನೆ ಹಲವು ಸೂಕ್ಷ್ಮ ಲಕ್ಷಣಗಳ ಮೂಲಕ ಹೊರಹೊಮ್ಮಬಹುದು ಉದಾಹರಣೆಗೆ ಅತಿಯಾಗಿ ಯಾರ ಜೊತೆ ಮಾತನಾಡದೇ ಇರುವುದು,ಮಾತನಾಡುವ ಸಂಧರ್ಬದಲ್ಲಿ ತಕ್ಷಣ ಮಾತು ನಿಲ್ಲಿಸಿ ಬಿಡುವುದು, ಯಾರು ನಿಜವಾಗಿ ನಮ್ಮನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ ಎಂಬ ಅನುಮಾನ, ಹಾಗೂ ಸಾಮಾಜಿಕ ಸಂಬಂಧಗಳಲ್ಲಿ ಸೇರುವಿಕೆಯ ಕೊರತೆ ಅವರಲ್ಲಿ ಹೆಚ್ಚಾಗಿ ಕಂಡುಬರುತ್ತಿರುತ್ತದೆ.

ಈ ರೀತಿಯ ಸಂಕೇತಗಳನ್ನು ಗುರುತಿಸುವುದು ಅತ್ಯಂತ ಮುಖ್ಯ, ಏಕೆಂದರೆ ದೀರ್ಘಕಾಲದ ಒಂಟಿತನವು ಅವರ ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.ಮುಂದೆ ಅವರನ್ನ ಆದು ಖಿನ್ನತೆಗೆ ದೂಡಬಹುದು. ಇದರಿಂದ ತಪ್ಪಿಸಿಕೊಳ್ಳಲು ನಿಜವಾದ ಮಾರ್ಗೊಪಾಯ ಎಂದರೆ ಜನರ ಜೊತೆ ಹೆಚ್ಚೆಚ್ಚು ಬೆರೆಯುವುದು ಮತ್ತು ಸಮಾಜದಲ್ಲಿ ಎಲ್ಲರೊಟ್ಟಿಗೆ ಧೈರ್ಯವಾಗಿ ಮಾತನಾಡುವಂತಹ ಪ್ರಯತ್ನವನ್ನ ಅವರು ಮಾಡುವುದರಿಂದ ಇಂತಹ ಒಂಟಿತನದಿಂದ ದೂರು ಉಳಿಯಬಹುದಾಗಿದೆ.

ಒಂಟಿತನದ ನಾಲ್ಕು ಮುಖ್ಯ ಚಿಹ್ನೆಗಳು

1. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದು: ಒಂಟಿತನದ ಭಾವನೆ ಬಲವಾಗಿ ಕಾಡುತ್ತಿರುವವರು ತಮ್ಮ ಸ್ನೇಹಿತರು, ಕುಟುಂಬದವರು ಅಥವಾ ಪರಿಚಿತರೊಂದಿಗೆ ಸಂಪರ್ಕದಲ್ಲಿರುವುದಕ್ಕಿಂತ ಹೆಚ್ಚಿನ ಸಮಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯುತ್ತಾರೆ. ಮನಶ್ಶಾಸ್ತ್ರಜ್ಞರ ಪ್ರಕಾರ ಇಂತಹವರು ಪ್ರತಿನಿತ್ಯ ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡುತ್ತಾ, ಅವುಗಳ ಮೂಲಕ ಸಂಪರ್ಕ ಉಳಿಸಿಕೊಂಡಿರುವ ಭಾವನೆ ಪಡೆದುಕೊಳ್ಳುತ್ತಾರೆ. ಮೊಬೈಲ್‌ನಲ್ಲೇ ಮುಳುಗಿಹೋಗಿರುತ್ತಾರೆ.

2. ಯಾರ ಜೊತೆಗೂ ಮಾತನಾಡದೇ ಇರುವುದು: ಒಂಟಿತನ, ಖಿನ್ನತೆಗೆ ಒಳಗಾಗಿರುವಂತಹ ವ್ಯಕ್ತಿ ಹೆಚ್ಚು ಇನ್ನೊಬ್ಬರೊಟ್ಟಿಗೆ ಇರಲು ಬಯಸುವುದಿಲ್ಲ, ತನ್ನೊಟ್ಟಿಗೆ ತಾನೇ ಇರಲು ಹೆಚ್ಚು ಬಯಸುತ್ತಾನೆ. ಬೇರೆಯವರ ಜೊತೆಗೆ ಮಾತನಾಡುತ್ತಾರೆ ಆದರೆ ಈ ಸಂಭಾಷಣೆಗಳು ಮೇಲ್ನೋಟಕ್ಕೆ ಇದ್ದರೂ,ತಮ್ಮಲ್ಲೇ ತಾವು ಕೀಳರಿಮೆ ಅಥವಾ ನನ್ನನ್ನ ಯಾರೂ ಅರ್ಥಮಾಡಿಕೊಳ್ಳುವುದಿಲ್ಲ ಎನ್ನುವಂತಹ ಭಾವನೆ ಅವರ ಮನಸ್ಸಿನಲ್ಲಿ ಬೇರೂರಿರುತ್ತದೆ. ಈ ಕಾರಣದಿಂದಾಗಿ ಅವರು ಮತ್ತಷ್ಟು ಒಂಟಿತನಕ್ಕೆ ಒಳಗಾಗುತ್ತಾರೆ.

3. ಅತಿಯಾಗಿ ಯೋಚಿಸುವ ಮಾನಸಿಕತೆ: ಒಂಟಿತನದಿಂದ ಬಾಧೆಪಡುವ ಕೆಲವರು, ನಡೆದ ಸಂಭಾಷನೆಗಳನ್ನು ಪುನಃ ಪುನಃ ನೆನಪಿಸಿಕೊಂಡು ಅದರ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ. "ಅವರು ಏನಂತ್ರು?", "ನಾನೇನಾದ್ರು ತಪ್ಪಾಗಿ ಹೇಳ್ಬಿಟೆನಾ?" ಎಂಬಂತ ಸಂದೇಹಗಳು ಅವರ ಮನಸ್ಸಿನಲ್ಲಿ ಬೇರೂರುತ್ತವೆ. ಈ ಅತಿಯಾದ ಯೋಚನೆಯು, ಸಾಮಾನ್ಯ ಸಂಭಾಷನೆಯನ್ನು ಸಹ ಗಂಭೀರ ಸಮಸ್ಯೆಯಂತೆ ಅನುಭವಿಸಲು ಕಾರಣವಾಗಬಹುದು.

4.ಅತಿಯಾದ ಕೋಪ, ಭಯ :ಒಂಟಿತನ ಅಥವಾ ಖಿನ್ನತೆಯಲ್ಲಿರುವವರಿಗೆ ಅತಿಯಾದ ಕೋಪ ಹಾಗೂ ಅತಿಯಾದ ಭಯ ಇರುತ್ತದೆ.ಜೊತೆಗೆ ಕೀಳರಿಮೆ ಸಹ ಇರುತ್ತದೆ. ಯಾವ ಸಂದರ್ಭದಲ್ಲಿ ಯಾವ ಭಾವನೆ ಬರುತ್ತದೆ ಎಂಬುದು ಸಹ ಅವರಿಗೆ ಗೊತ್ತಿರುವುದಿಲ್ಲ.ಹೆಚ್ಚಾಗಿ ಅಳುವುದು ಸಹ ಕೆಲವೊಬ್ಬರಲ್ಲಿ ಕಾಣಿಸಿಕೊಳ್ಳುವಂತಹ ಗುಣ

5.ಅಸ್ತಿತ್ವದ ಬಗ್ಗೆ ಗೊಂದಲ: ತೀವ್ರವಾದ ಒಂಟಿತನ ಅನುಭವಿಸುವವರು ಕೆಲವೊಮ್ಮೆ ತಮ್ಮ ಅಸ್ತಿತ್ವದ ಬಗ್ಗೆ ಅನುಮಾನದಲ್ಲಿರುತ್ತಾರೆ – "ನಾನು ನಿಜವಾಗಿಯೂ ಯಾರಿಗೆ ಬೇಕಾದವನು/ವಳು?", "ಇಲ್ಲಿ ನನ್ನ ಸ್ಥಾನವೇನು?" ಎಂಬ ರೀತಿಯ ಪ್ರಶ್ನೆಗಳು ಮನಸ್ಸಿನಲ್ಲಿ ಮೂಡುತ್ತವೆ. ಈ ಗೊಂದಲಗಳು ಅವರು ಬೆಳೆಯುತ್ತಾ ಈ ಯೋಚನೆಗಳೂ ಹೆಚ್ಚಾಗುತ್ತಾ ಹೋಗಿ, ಅವರಿಗೆ ಆಂತರಿಕ ಅಶಾಂತಿಯನ್ನುಂಟುಮಾಡುತ್ತವೆ.

ಈ ರೀತಿಯ ಆಲೋಚನೆಗಳು ತಾತ್ಕಾಲಿಕವಲ್ಲ — ಅವು ಮುಂದುವರಿದರೆ, ಗಂಭೀರವಾದ ಮಾನಸಿಕ ಒತ್ತಡ ಹಾಗೂ ಖಿನ್ನತೆ ತರಬಲ್ಲವು. ಇಂತಹ ಲಕ್ಷಣಗಳು ನಿಮ್ಮಲ್ಲಿದ್ದರೆ, ಅವುಗಳನ್ನು ಲಘುವಾಗಿ ನೋಡದೇ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣ ವೈದ್ಯರನ್ನ ಸಂಪರ್ಕಿಸುವುದೂ, ಅಥವಾ ಒಳ್ಳೆ ಅಭ್ಯಾಸಗಳನ್ನ ಅಳವಡಿಸಿಕೊಳ್ಳುವುದರಿಂದ ಒಂಟಿತನ , ಖಿನ್ನತೆಯಿಂದ ದೂರವಾಗಬಹುದು.