ನೆಗಡಿ, ಕೆಮ್ಮಿನಂತೆ ಅನೇಕರಿಗೆ ಆಸಿಡಿಟಿ ಸಾಮಾನ್ಯ ಖಾಯಿಲೆ. ಹಾಗಾಗಿವೈದ್ಯರ ಬಳಿ ಹೋಗ್ದೆ ಮೆಡಿಕಲ್ ಶಾಪ್ ಗೆ ಹೋಗ್ತಾರೆ. ಆದ್ರೆ ಕೆಲ ಆಸಿಡಿಟಿ ಔಷಧಿಗೆ ನಿಯಮಗಳಿವೆ. ಅದನ್ನು ಖರೀದಿ ಮಾಡುವ ಮೊದಲು ಎಚ್ಚರ ಇರಲಿ.
ಆಸಿಡಿಟಿ ಅಥವಾ ಎದೆಯುರಿ ಕಾಣಿಸಿಕೊಳ್ತಿದ್ದಂತೆ ಬಹುತೇಕರು ಡಾಕ್ಟರ್ ಬಳಿ ಹೋಗುವ ಬದಲು ಮೆಡಿಕಲ್ ಶಾಪ್ ಗೆ ಹೋಗ್ತಾರೆ. ವೈದ್ಯರ ಸಲಹೆ ಇಲ್ದೆ ಆಸಿಡಿಟಿ ಮಾತ್ರೆ – ಔಷಧಿ ತೆಗೆದುಕೊಳ್ತಾರೆ. ಆದ್ರೆ ಇದು ಸಾಧ್ಯವಿಲ್ಲ. ಆಸಿಡಿಟಿ ಚಿಕಿತ್ಸೆಗೆ ಬಳಸುವ ವೊನೊಪ್ರಜಾನ್ (Vonoprazan) ಔಷಧಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸ್ಲಿಪ್ ಇಲ್ದೆ ಸಿಗೋದಿಲ್ಲ ಆಸಿಡಿಟಿ ಮಾತ್ರೆ
ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ CDSCO ದಾಖಲೆಗಳ ಪ್ರಕಾರ, ವೊನೊಪ್ರಜಾನ್ 10 ಮತ್ತು 20 ಮಿ.ಗ್ರಾಂ ಮಾತ್ರೆಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಆಧಾರದ ಮೇಲೆ ಮಾತ್ರ ಮಾರಾಟ ಮಾಡುವ ಷರತ್ತು ಇದೆ. ಈ ಔಷಧಿಯನ್ನು ರಿಫ್ಲಕ್ಸ್ ಸಮಸ್ಯೆ, ಗ್ಯಾಸ್ಟ್ರಿಕ್ ಮತ್ತು ಡ್ಯುಒಡೆನಲ್ ಅಲ್ಸರ್ ಸೇರಿದಂತೆ ಕೆಲವು ಹೊಟ್ಟೆ ಹಾಗೂ ಜೀರ್ಣಾಂಗದ ಸಮಸ್ಯೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಹಾಗಾಗಿ ಜನರು ಸ್ಲಿಪ್ ಇಲ್ದೆ ಈ ಮಾತ್ರೆಗಳನ್ನು ಮೆಡಿಕಲ್ ಶಾಪ್ ನಲ್ಲಿ ಖರೀದಿಸುವಂತಿಲ್ಲ.
ಯಾಕೆ ಈ ನಿಯಮ?
ಪದೇ ಪದೇ ಆಸಿಡಿಟಿ ಆಗ್ತಿದ್ರೂ ಡಾಕ್ಟರ್ ಭೇಟಿಯಾಗದೆ, ಆಸಿಡಿಟಿ ಮಾತ್ರೆ ಸೇವನೆ ಮಾಡೋದು ಸರಿಯಾದ ಕ್ರಮವಲ್ಲ. ಆಗಾಗ ಆಸಿಡಿಟಿ ಆಗುತ್ತಿದ್ದರೆ ಅದರ ಹಿಂದೆ ಬೇರೆ ಕಾರಣಗಳಿರಬಹುದು. ಅದನ್ನು ವೈದ್ಯರಿಂದ ಪರೀಕ್ಷಿಸಿಕೊಳ್ಳಬೇಕು. ಕೆಲವು ಆಸಿಡಿಟಿ ಔಷಧಿಗಳನ್ನು ದೀರ್ಘಕಾಲ ಬಳಸಿದಾಗ ಕೆಲವರಿಗೆ ವಿಟಮಿನ್ B12 ಅಥವಾ ಮ್ಯಾಗ್ನೀಷಿಯಂ ಮಟ್ಟ ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಔಷಧಿ ತೆಗೆದುಕೊಳ್ಳುವ ಪ್ರತಿಯೊಬ್ಬರಿಗೂ ಇಂತಹ ಸಮಸ್ಯೆ ಉಂಟಾಗುತ್ತದೆ ಎಂದರ್ಥವಲ್ಲ.
ಪ್ರತಿದಿನ ಆಸಿಡಿಟಿ ಔಷಧಿ ತೆಗೆದುಕೊಳ್ಳುತ್ತಿದ್ದೀರಾ?
ನಿಮಗೆ ಪ್ರತಿದಿನ ಅಥವಾ ದೀರ್ಘಕಾಲ ಔಷಧಿ ತೆಗೆದುಕೊಳ್ಳುವ ಅಗತ್ಯ ಬರುತ್ತಿದ್ದರೆ, ಸ್ವಯಂ ಔಷಧಿ ತೆಗೆದುಕೊಳ್ಳುವುದನ್ನು ಮುಂದುವರಿಸುವ ಬದಲು ವೈದ್ಯರನ್ನು ಸಂಪರ್ಕಿಸಿ. ಪದೇ ಪದೇ ಕಾಣಿಸಿಕೊಳ್ಳುವ ಆಸಿಡಿಟಿಯ ಕಾರಣವನ್ನು ಪತ್ತೆಹಚ್ಚುವುದು ಮುಖ್ಯ.
ಬೇರೆ ಔಷಧಿಗಳಲ್ಲೂ ಎಚ್ಚರಿಕೆ
ಇತ್ತೀಚೆಗೆ CDSCO ನೋವು ನಿವಾರಕ ಔಷಧಿಗಳು ಮತ್ತು ಆ್ಯಂಟಿಬಯೋಟಿಕ್ಗಳನ್ನು ವೈದ್ಯರ ಸಲಹೆಯಿಲ್ಲದೆ ಅಥವಾ ಅನಗತ್ಯವಾಗಿ ಬಳಸುವುದರ ಬಗ್ಗೆಯೂ ಎಚ್ಚರಿಕೆ ನೀಡಿದೆ. ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಔಷಧಿಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು ಎಂದು ಸಂಸ್ಥೆ ಒತ್ತಿಹೇಳಿದೆ. ಹೀಗಾಗಿ ಸಣ್ಣ ಸಮಸ್ಯೆ ಎಂದುಕೊಂಡು ಪದೇ ಪದೇ ಮೆಡಿಕಲ್ ಶಾಪ್ನಿಂದ ಔಷಧಿ ತೆಗೆದುಕೊಳ್ಳುವ ಬದಲು, ಸಮಸ್ಯೆ ಮರುಕಳಿಸುತ್ತಿದ್ದರೆ ವೈದ್ಯರ ಸಲಹೆ ಪಡೆಯುವುದು ಹೆಚ್ಚು ಸುರಕ್ಷಿತ.


