ಚೊಚ್ಚಲ ಹೆರಿಗೆಗಾಗಿ ಆಸ್ಪತ್ರೆಗೆ ಹೋಗುವ ಮುನ್ನ ನಿಮ್ಮ ಬ್ಯಾಗ್‌ನಲ್ಲಿರಲಿ ಈ ಅಗತ್ಯ ವಸ್ತುಗಳು
ಹೆರಿಗೆಗೆ ಆಸ್ಪತ್ರೆಗೆ ಹೋಗುವಾಗ ಏನೆಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎಂಬ ಬಗ್ಗೆ ಹೊಸದಾಗಿ ತಾಯಿಯಾಗುತ್ತಿರುವವರಿಗೆ ಇಲ್ಲಿದೆ ಮಾಹಿತಿ.

ಹೊಸ ತಾಯಿಗೆ ಅಮೂಲ್ಯ ಸಲಹೆಗಳು
ಮಗುವಿಗೆ ಜನ್ಮ ನೀಡುವುದು ಪ್ರತಿಯೊಬ್ಬ ಮಹಿಳೆಯ ಜೀವನದಲ್ಲೂ ಒಂದು ವಿಶೇಷ ಅನುಭವವಾಗಿದೆ. ಒಂದು ಜೀವಕ್ಕೆ ಜೀವ ನೀಡುವ ಈ ಪ್ರಕ್ರಿಯೆಯಲ್ಲಿ ಹಲವು ಸವಾಲುಗಳಿರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ, ಅನೇಕ ದಂಪತಿಗಳು ಗರ್ಭಧಾರಣೆಯ ಆರಂಭಿಕ ದಿನಗಳಿಂದ ತಮ್ಮ ಮಗುವಿನ ಬಗ್ಗೆ ಅನೇಕ ಕನಸುಗಳನ್ನು ಕಾಣುತ್ತಾರೆ. ಆದರೆ ಹೆರಿಗೆ ಒಂದು ಸಂಕೀರ್ಣ ಪ್ರಕ್ರಿಯೆ, ಆದರೆ ಸರಿಯಾದ ಮಾರ್ಗದರ್ಶನ, ವ್ಯಾಯಾಮ, ಆಹಾರ ಪದ್ಧತಿ ಮತ್ತು ಸಕಾಲಿಕವಾಗಿ ಅಗತ್ಯವಿರುವ ಔಷಧಿಗಳೊಂದಿಗೆ, ಇದನ್ನು ಸರಳವಾಗಿಸಬಹುದು.
ಅಮ್ಮನಾಗುತ್ತಿರುವವಳಿಗೆ ಅಮೂಲ್ಯ ಸಲಹೆಗಳು
ಹೆರಿಗೆಗೆ ನಿಜವಾದ ತಯಾರಿ ಸಾಮಾನ್ಯವಾಗಿ ಗರ್ಭಧಾರಣೆಯ ಆರಂಭದಲ್ಲಿ ಅಥವಾ ಗರ್ಭಧಾರಣೆಯ ಮಧ್ಯದಲ್ಲಿ ಪ್ರಾರಂಭವಾಗುತ್ತದೆ. ನಿಮ್ಮ ವೈದ್ಯರ ಮಾರ್ಗದರ್ಶನದ ಪ್ರಕಾರ ಉತ್ತಮ ಆಹಾರ ಪದ್ಧತಿ ಮತ್ತು ಉತ್ತಮ ವ್ಯಾಯಾಮವು ನೈಸರ್ಗಿಕ ಹೆರಿಗೆಯನ್ನು ಆಯ್ಕೆ ಮಾಡಲು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ಆದರೆ ಮಗುವಿಗೆ ಜನ್ಮ ನೀಡುವ ದಿನ ಆಸ್ಪತ್ರೆಗೆ ಹೋಗುವ ವೇಳೆ ನೀವು ತೆಗೆದುಕೊಂಡು ಹೋಗುವ ನಿಮ್ಮ ಚೀಲದಲ್ಲಿ ಅಗತ್ಯವಾಗಿ ಏನೇನಿರಬೇಕು ಎಂಬುದು ಬಹುತೇಕ ಚೊಚ್ಚಲ ತಾಯಂದಿರಿಗೆ ಗೊತ್ತೇ ಇರುವುದಿಲ್ಲ, ಮನೆಯಲ್ಲಿ ಹಿರಿಯರಿದ್ದರೆ ಈ ಬಗ್ಗೆ ಮಾರ್ಗದರ್ಶನ ಮಾಡುತ್ತಾರೆ.
ಅಮ್ಮನಾಗುತ್ತಿರುವವಳಿಗೆ ಅಮೂಲ್ಯ ಸಲಹೆಗಳು
ಅನೇಕ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗಳು ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ಸಿದ್ದಪಡಿಸಿಕೊಂಡಿರುತ್ತವೆ, ಇದು ನವಜಾತ ಶಿಶುವಿಗೆ ಅಗತ್ಯವಾಗಿರುತ್ತದೆ. ಆದರೂ, ಆಸ್ಪತ್ರೆಗೆ ದಾಖಲಾಗುವ ಮೊದಲು ನಿಮ್ಮ ಚೀಲವನ್ನು ಸಿದ್ಧವಾಗಿಟ್ಟುಕೊಳ್ಳುವಾಗ ನೀವು ತೆಗೆದಿಟ್ಟುಕೊಳ್ಳಬೇಕಾದ ಅಗತ್ಯ ವಸ್ತುಗಳು ಏನು ಎಂಬುದನ್ನು ನೋಡೋಣ.
ಎಲ್ಲಾ ವೈದ್ಯಕೀಯ ದಾಖಲೆಗಳು ಜೊತೆಗಿರಲಿ
ಗರ್ಭಧಾರಣೆಯ ಆರಂಭಿಕ ದಿನಗಳ ಎಲ್ಲಾ ವೈದ್ಯಕೀಯ ವರದಿಗಳು ಮತ್ತು ವೈದ್ಯರ ಪ್ರಿಸ್ಕ್ರಿಪ್ಟ್ನ್‌ಗಳನ್ನು ಹಾರ್ಡ್ ಕಾಪಿ ಸ್ವರೂಪದಲ್ಲಿ ಜೊತೆಗೆ ಇಟ್ಟುಕೊಂಡಿರಬೇಕು. ಕ್ಲಿನಿಕಲ್ ತಂಡಕ್ಕೂ ತುರ್ತು ಸಂದರ್ಭದಲ್ಲಿ ಇದರ ಅಗತ್ಯವಿರುತ್ತದೆ. ಹೆರಿಗೆಯ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಸುಗಮಗೊಳಿಸಲು ಮತ್ತು ತೊಡಕುಗಳನ್ನು ತಪ್ಪಿಸಲು ನಿಮ್ಮ ವೈದ್ಯಕೀಯ ದಾಖಲೆಗಳನ್ನು ಯಾವಾಗಲೂ ಕೈಯಲ್ಲಿ ಇಟ್ಟುಕೊಳ್ಳುವುದು ಬಹಳ ಅಗತ್ಯ. ಇದರ ಜೊತೆಗೆ ನಿಮ್ಮ ಹೆರಿಗೆ ಆದ್ಯತೆಯ ಯೋಜನೆಯನ್ನು ಅನೇಕ ಉತ್ತಮ ಆಸ್ಪತ್ರೆಗಳಲ್ಲಿ, ಗರ್ಭಿಣಿ ಮಹಿಳೆ ಮತ್ತು ಕುಟುಂಬದೊಂದಿಗೆ ಸುಮಾರು 34 ವಾರಗಳಲ್ಲಿ ಚೆನ್ನಾಗಿ ಚರ್ಚಿಸಲಾಗುತ್ತದೆ. ಇದನ್ನು ಕೂಡ ನಿಮ್ಮ ಸಾಮಗ್ರಿಗಳು ಮತ್ತು ದಾಖಲೆಗಳೊಂದಿಗೆ ಕೊಂಡೊಯ್ಯಬೇಕು. ಈ ಯೋಜನೆಯ ಕಾರಣದಿಂದಾಗಿ, ನೀವು ಮತ್ತು ಕ್ಲಿನಿಕಲ್ ತಂಡವು ಒಂದೇ ಮನಸ್ಥಿತಿಯಲ್ಲಿರುತ್ತೀರಿ ಹಾಗೂ ಇದರಿಂದ ನಿಮಗೆ ನಿಮ್ಮ ಹೆರಿಗೆಯೂ ಸ್ಮರಣೀಯ ಅನುಭವ ಆಗಬಹುದು.
ಗರ್ಭಿಣಿ ಮಹಿಳೆ ಮತ್ತು ಪತಿಯ ಫೋಟೋ ಐಡಿಗಳು
ಗರ್ಭಿಣಿ ಮತ್ತು ಆಕೆಯ ಪತಿಯ ಫೋಟೋ ಐಡಿಗಳು ಈ ಸಮಯದಲ್ಲಿ ಬಹಳ ಅಗತ್ಯವಾಗಿರುತ್ತದೆ. ಪ್ರವೇಶ ಪ್ರಕ್ರಿಯೆ ನಡೆಸಲು, ಗರ್ಭಿಣಿ ಮಹಿಳೆಯರಿಗೆ ಬ್ಯಾಂಡ್‌ಗಳನ್ನು ಸಿದ್ಧಪಡಿಸಲು ಮತ್ತು ಜನನದ ನಂತರ ನವಜಾತ ಶಿಶುಗಳಿಗೆ ಬ್ಯಾಂಡ್‌ಗಳನ್ನು ಸಿದ್ಧಪಡಿಸಲು ಇದು ಬಹಳ ಮುಖ್ಯ. ಈ ದಾಖಲೆಗಳು ನಿಮ್ಮ ಆರೋಗ್ಯ ವಿಮೆಯನ್ನು ಬಳಸಿಕೊಳ್ಳುವುದಕ್ಕೆ ಹಾಗೂ ಸರ್ಕಾರಿ ಪೋರ್ಟಲ್‌ನಲ್ಲಿ ಜನನ ಪ್ರಮಾಣಪತ್ರಗಳು ಮತ್ತು ಅಗತ್ಯವಿರುವ ದಾಖಲಾತಿಗಳನ್ನು ಪೂರ್ಣಗೊಳಿಸಲು ಅಗತ್ಯವಾಗಿದೆ.
ಆರೋಗ್ಯ ವಿಮಾ ಪಾಲಿಸಿ ಮತ್ತು ಕಾರ್ಡ್:
ನಿಮ್ಮ ನಗದು ರಹಿತ ಆಸ್ಪತ್ರೆ ವೆಚ್ಚಕ್ಕೆ ದಾಖಲೀಕರಣ ಪ್ರಕ್ರಿಯೆ ಮಾಡಲು ಆರೋಗ್ಯ ವಿಮಾ ಪಾಲಿಸಿ ಮತ್ತು ಕಾರ್ಡ್ಅತ್ಯಗತ್ಯವಾಗಿದೆ. ಹೆಚ್ಚಿನ ಸಂದರ್ಭಗಳಲ್ಲಿ, ಆರಂಭಿಕ ಪ್ರಕ್ರಿಯೆಗೆ ಸಾಫ್ಟ್ ಕಾಪಿ ಕೂಡ ಸಾಕಾಗುತ್ತದೆ, ಆದರೆ ಡಿಸ್ಚಾರ್ಜ್ ಆಗುವ ಮೊದಲು ಮತ್ತು ಕ್ಲೈಮ್ ಅನುಮೋದನೆಯ ಅಂತಿಮ ಪ್ರಕ್ರಿಯೆಗೆ ಮೊದಲು ಹಾರ್ಡ್ ಕಾಪಿ ಕಡ್ಡಾಯವಾಗಿದೆ. ಈಗಾಗಿ ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲೇ ನೀವು ದಾಖಲೆಗಳ ಹಾರ್ಡ್ ಕಾಪಿಯನ್ನು ಒದಗಿಸಿದರೆ ಅದು ಹೆಚ್ಚು ಅನುಕೂಲಕರವಾಗಿರುತ್ತದೆ.
ವೈಯಕ್ತಿಕ ಬಟ್ಟೆಗಳು:
ಇತ್ತೀಚಿನ ದಿನಗಳಲ್ಲಿ, ಸಾಮಾನ್ಯವಾಗಿ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವುದು ಸುಮಾರು 3 ರಿಂದ 4 ದಿನಗಳು, ಆದ್ದರಿಂದ ನೀವು ಅದಕ್ಕೆ ಅನುಗುಣವಾಗಿ ನಿಮ್ಮ ಬ್ಯಾಗನ್ನು ಸಿದ್ಧಪಡಿಸಿಕೊಳ್ಳಬೇಕು. ಗರ್ಭಿಣಿ ಮಹಿಳೆಯ ಬಟ್ಟೆಗಳು ಆರಾಮದಾಯಕ ಮತ್ತು ಸಡಿಲವಾಗಿರಬೇಕು.
ಅನೇಕ ಆಸ್ಪತ್ರೆಗಳು ಆಸ್ಪತ್ರೆಗೆ ದಾಖಲಾಗುವ ಅವಧಿಯಲ್ಲಿ ಆಸ್ಪತ್ರೆ ಬಟ್ಟೆಗಳನ್ನು ಧರಿಸಲು ಪ್ರೋಟೋಕಾಲ್ ಅನ್ನು ಹೊಂದಿವೆ. ನೀವು ಆಸ್ಪತ್ರೆಯ ನಿಯಮವನ್ನು ಮುಂಚಿತವಾಗಿ ಚರ್ಚಿಸಬೇಕು. ತೊಳೆದು ಇಸ್ತ್ರಿ ಮಾಡಿದ ಫೀಡಿಂಗ್ ಗೌನ್‌ಗಳು ಮತ್ತು ಫೀಡಿಂಗ್ ಬ್ರಾಗಳನ್ನು ದಿನಕ್ಕೆ 2 ಬೇಕಾಗುವಂತೆ ತೆಗೆದುಕೊಳ್ಳಬೇಕು. ಒಳಗಿನ ಬಟ್ಟೆಗಳನ್ನು ಅದೇ ರೀತಿ ಚೀಲಗಳಲ್ಲಿ ಇಡಬೇಕು. ಕನಿಷ್ಠ 4 ರಿಂದ 5 ಕೈ ಟವೆಲ್‌ಗಳನ್ನು ತೆಗೆದುಕೊಳ್ಳಬೇಕು. ಪರಿಸ್ಥಿತಿಗಳಿಗೆ ಅನುಗುಣವಾಗಿ ಚಳಿಗಾಲದ ಉಡುಪುಗಳನ್ನು ಸಿದ್ಧವಾಗಿಡಬೇಕು. ಎರಡು ಸೆಟ್ ಆರಾಮದಾಯಕ ಪಾದರಕ್ಷೆಗಳನ್ನು ಚೀಲದೊಳಗೆ ಇಡಬೇಕು.
ವೈಯಕ್ತಿಕ ಶೌಚಾಲಯ ಸಾಮಗ್ರಿಗಳು
ಸಾಮಾನ್ಯವಾಗಿ ಆಸ್ಪತ್ರೆಗಳು ಆ ಸೌಲಭ್ಯಗಳನ್ನು ಹೊಂದಿರುತ್ತವೆ. ಆದರೆ ನೀವು ಆಯ್ಕೆ ಮಾಡಿದ ಶೌಚಾಲಯ ಸಾಮಗ್ರಿಗಳಾದ ಹ್ಯಾಂಡ್ ವಾಶ್, ಡಿಯೋಡರೆಂಟ್, ಟೂತ್ ಬ್ರಷ್, ಟೂತ್ ಪೇಸ್ಟ್, ಮಾಯಿಶ್ಚರೈಸರ್, ಶವರ್ ಜೆಲ್ ಇತ್ಯಾದಿಗಳನ್ನು ನಿಮ್ಮೊಂದಿಗೆ ಇಟ್ಟುಕೊಂಡರೆ ಉತ್ತಮ.
ಮಗುವಿಗೆ ಬಟ್ಟೆಗಳು: ಆರಂಭಿಕ ದಿನಗಳಲ್ಲಿ ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ, ಸಾಮಾನ್ಯವಾಗಿ, ನಿಮ್ಮ ಮಗುವಿಗೆ ಹೆಚ್ಚಿನ ಸುತ್ತು ಬಟ್ಟೆಗಳು ಬೇಕಾಗುತ್ತವೆ. ನಿಮ್ಮ ನವಜಾತ ಶಿಶುವಿಗೆ ನೀವು ಈಗಾಗಲೇ ಕೆಲವು ಜೋಡಿ ಬಟ್ಟೆಗಳನ್ನು ಖರೀದಿಸಿದ್ದರೆ, ಅವುಗಳನ್ನು ಸರಿಯಾಗಿ ತೊಳೆದು ಒಣಗಿಸಿಟ್ಟುಕೊಳ್ಳಿ. ಸಾಮಾನ್ಯವಾಗಿ ಆಸ್ಪತ್ರೆಗಳಲ್ಲಿ ಬಿಸಾಡಬಹುದಾದ ಡೈಪರ್‌ಗಳು ಲಭ್ಯವಿರುತ್ತವೆ, ಆದ್ದರಿಂದ ಅವುಗಳನ್ನು ಕೊಂಡೊಯ್ಯುವ ಅಗತ್ಯವಿಲ್ಲ.
ನಿಮ್ಮ ಮಗುವಿನೊಂದಿಗೆ ಮನೆಗೆ ಮರಳಲು ಅಗತ್ಯವಾದ ವಸ್ತುಗಳು
ನಿಮಗೆ ಮತ್ತು ನಿಮ್ಮ ಮಗುವಿಗೆ ಮನೆಗೆ ಹಿಂತಿರುಗಲು ಹೆಚ್ಚುವರಿಯಾಗಿ ಒಂದು ಜೋಡಿ ಬಟ್ಟೆಗಳನ್ನು ಸಹ ಕೊಂಡೊಯ್ಯಬೇಕು. ನಿಮ್ಮ ಮಗುವಿಗೆ ಆರಾಮವಾಗಿ ಹಾಲುಣಿಸಲು ಸುಲಭವಾಗುವ ಪಿಲ್ಲೋಗಳನ್ನುಕೊಂಡೊಯ್ಯಬಹುದು. ಆಸ್ಪತ್ರೆಯಿಂದ ಮನೆಗೆ ಹಿಂತಿರುಗಲು ಕಾರಿನಲ್ಲಿ ಶಿಶು ಕಾರ್ ಸೀಟ್ ಅಥವಾ ಟ್ರಾಲಿಯನ್ನು ಸಿದ್ಧವಾಗಿ ಇಡಬಹುದು.
ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳು: ನೀವು ಕನ್ನಡಕ ಅಥವಾ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವವರಾದರೆ ಸರಿಯಾದ ಶುಚಿಗೊಳಿಸುವ ಲೋಷನ್‌ನೊಂದಿಗೆ ಅವುಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಬಹುದು.
ಪ್ರಸವಪೂರ್ವ ಅನುಭವಕ್ಕಾಗಿ ಸಂಗೀತ: ನಿಮ್ಮ ಪ್ರಸವಪೂರ್ವದ ನೋವಿನ ಸಮಯದಲ್ಲಿ ಖುಷಿಯಾಗಿರಲು ನಿಮ್ಮ ಆಯ್ಕೆಯ ಸಂಗೀತ ಪ್ಲೇ ಲಿಸ್ಟ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ.
ನಗದು ಮತ್ತು ಕ್ರೆಡಿಟ್ ಕಾರ್ಡ್‌ಗಳು
ಔಷಧಿ ಡಬ್ಬಿ: ದಿನವೂ ಸೇವಿಸುವ ಔಷಧಿ ಇದ್ದರೆ ಅದನ್ನು ಜೊತೆಗೆ ಕೊಂಡೊಯ್ಯಲು ಮರೆಯದಿರಿ.
ನಗದು ಮತ್ತು ಕ್ರೆಡಿಟ್ ಕಾರ್ಡ್‌ಗಳು: ಕ್ರೆಡಿಟ್ ಕಾರ್ಡ್‌ಗಳಲ್ಲಿ ಸ್ವಲ್ಪ ಹಣವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು ಏಕೆಂದರೆ ನಿಮ್ಮ ವಿಮೆಯ ಅಡಿಯಲ್ಲಿ ಒಳಗೊಳ್ಳದ ಕೆಲವು ವೆಚ್ಚಗಳು ಇರಬಹುದು.
ಮೇಲಿನ ಪಟ್ಟಿಯು ಹೆರಿಗೆಯ ಸಮಯದಲ್ಲಿ ನೀವು ಕೊಂಡೊಯ್ಯಬೇಕಾದ ಬಹುತೇಕ ಎಲ್ಲವನ್ನೂ ಒಳಗೊಂಡಿದೆ. ಆದರೆ ಈ ಸಮಯದಲ್ಲಿ ನಿಮ್ಮ ಸಕಾರಾತ್ಮಕ ಮನಸ್ಥಿತಿ, ಆತ್ಮವಿಶ್ವಾಸ ಮತ್ತು ನಿಮ್ಮ ಪ್ರೀತಿಪಾತ್ರರನ್ನು ನಿಮ್ಮ ಬೆಂಬಲಕ್ಕಾಗಿ ಕರೆದೊಯ್ಯುವುದು ಎಲ್ಲದಕ್ಕಿಂತ ಮುಖ್ಯವಾದುದು. ಉತ್ತಮ ತಯಾರಿಯು ಹೆರಿಗೆಯ ಅಮೂಲ್ಯ ಘಟನೆಗಳ ನೆನಪುಗಳನ್ನು ಶಾಶ್ವತವಾಗಿ ಸೃಷ್ಟಿಸಲು ನಿಮಗೆ ಸಹಾಯ ಮಾಡುತ್ತದೆ.