Age Is Just a Number: 50ಕ್ಕೆ ಉದ್ಯಮ ಆರಂಭಿಸಿದ ನಾರಿ ಈಗ ಕೋಟಿಗೆ ಒಡತಿ
ಜೀವನದಲ್ಲಿ ಸಾಧಿಸುವ ಮನಸ್ಸೊಂದಿದ್ದರೆ ಸಾಕು ಎಷ್ಟೇ ಅಡೆತಡೆಗಳಿದ್ದರೂ ಏನನ್ನಾದರೂ ಸಾಧಿಸಬಹುದು ಅನ್ನೋದಕ್ಕೆ ಇವರೇ ಸಾಕ್ಷಿ. 50ರೂಪಾಯಿಯಲ್ಲಿ ಬಿಸಿನೆಸ್ ಆರಂಭಿಸಿದ ಈ ಮಹಿಳೆಯೀಗ ಹಲವು ಕಂಪೆನಿಗಳ ಒಡತಿ. ವಾರ್ಷಿಕ ಆದಾಯ ಕೋಟಿ ಕೋಟಿ ಮೀರುತ್ತದೆ. ಅವರು ಯಾರು, ಲೈಫ್‌ನಲ್ಲಿ ಸಕ್ಸಸ್ ಆಗಿದ್ದು ಹೇಗೆ ಅನ್ನೋ ಮಾಹಿತಿ ಇಲ್ಲಿದೆ.
'ಭಾರತದ ಶ್ರೀಮಂತ ಮಹಿಳೆ' ಎಂಬ ಪಟ್ಟ ಅಲಂಕರಿಸಿದ ಫಲ್ಗುಣಿ ನಾಯರ್ ಹಾಗೂ ಅವರ ಕುಟುಂಬ ಒಡೆತನದ ಸೌಂದರ್ಯ ಹಾಗೂ ಆರೋಗ್ಯ ಉತ್ಪನ್ನಗಳ ಕಂಪನಿ ನೈಕಾ ಕಳೆದ ವರ್ಷ ಶೇ.345ರಷ್ಟು ಅಭಿವೃದ್ಧಿ ಸಾಧಿಸಿದೆ. ಪ್ರಸ್ತುತ ಅವರ ಸಂಪತ್ತು 38,700 ಕೋಟಿ ರೂ.ಗೆ ಏರಿಕೆಯಾಗಿದೆ. ಫಲ್ಗುಣಿ ನಾಯರ್ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲ ವಿಷಯಗಳು ಇಲ್ಲಿವೆ.
ಫಲ್ಗುಣಿ ನಾಯರ್, ಭಾರತೀಯ ಸ್ವಯಂ ನಿರ್ಮಿತ ಮಹಿಳಾ ಬಿಲಿಯನೇರ್‌ಗಳಲ್ಲಿ ಒಬ್ಬರು. ಅವರು Nykaa ಸ್ಥಾಪಿಸಿದ್ದು, ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಫಲ್ಗುಣಿ ನಾಯರ್, ಮುಂಬೈನ ಸಿಡೆನ್‌ಹ್ಯಾಮ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಿಂದ ಪದವಿ ಪಡೆದರು. ಎಂಬಿಎ ಮುಗಿಸಲು ಅಹಮದಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ಗೆ ಸೇರಿದರು.
ಎಎಫ್ ಫರ್ಗುಸನ್ ಮತ್ತು ಕಂಪನಿಯಲ್ಲಿನ ತನ್ನ ಕೆಲಸವನ್ನು ತೊರೆದ ನಂತರ 1993ರಲ್ಲಿ ಕೊಟಕ್ ಮಹೀಂದ್ರಾ ಗ್ರೂಪ್‌ಗೆ ಸೇರಿದರು. ನಂತರ ಅವರು ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ಕೆಲಸ ಮಾಡಿದರು. 2001ರಲ್ಲಿ ಭಾರತಕ್ಕೆ ಮರಳಿದರು. 2005 ರಲ್ಲಿ ಅವರು ಕೊಟಕ್ ಮಹೀಂದ್ರಾ ಕ್ಯಾಪಿಟಲ್‌ನ ವ್ಯವಸ್ಥಾಪಕ ನಿರ್ದೇಶಕರಾದರು.
ಏಪ್ರಿಲ್ 2012ರಲ್ಲಿ, ಫಲ್ಗುಣಿ ನಾಯರ್ Nykaa ಕಂಪೆನಿಯನ್ನು ಸ್ಥಾಪಿಸಿದರು. ತಮ್ಮ ಸ್ವಂತ ಉಳಿತಾಯದ 2 ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದರು. ಕಂಪನಿಯು ವರ್ಷಗಳಲ್ಲಿ ಪ್ರಗತಿ ಕಂಡಿತು. ಪ್ರಸ್ತುತ ಅವರ ನಿವ್ವಳ ಮೌಲ್ಯವು 50000 ಕೋಟಿ ರೂ. ಫಲ್ಗುಣಿ ನಾಯರ್ ಅವರು ತಮ್ಮ 50ನೇ ವಯಸ್ಸಿನಲ್ಲಿ ಕಂಪನಿಯನ್ನು ಪ್ರಾರಂಭಿಸಿದರು, ಅವರೀಗ ಯಶಸ್ವೀ ಕಂಪನಿಯ ಸಿಇಒ.
ಫಲ್ಗುಣಿ ನಾಯರ್ ಹೊಸತು ಏನನ್ನಾದರೂ ಪ್ರಯತ್ನಿಸಲು ಉತ್ಸುಕರಾಗಿದ್ದರು. 50 ವರ್ಷ ವಯಸ್ಸಿನೊಳಗೆ ಉದ್ಯಮಶೀಲತೆಯನ್ನು ಪ್ರಯತ್ನಿಸಬೇಕು ಅಂದುಕೊಂಡಿದ್ದರು. ಹೀಗಾಗಿ 2012 ರಲ್ಲಿ ಫಲ್ಗುಣಿ ಕೋಟಾಕ್‌ನಿಂದ ನಿರ್ಗಮಿಸಿದಾಗ ನೈಕಾವನ್ನು ಸ್ಥಾಪಿಸಿದರು.
ಫಲ್ಗುಣಿ ನಾಯರ್, ಸಂಜಯ್ ನಗರ್ ಎಂಬವರನ್ನು ಮದುವೆಯಾಗಿದ್ದಾರೆ. ಅವರು ಕೊಹ್ಲ್ಬರ್ಗ್ ಕ್ರಾವಿಸ್ ರಾಬರ್ಟ್ಸ್ ಇಂಡಿಯಾದ CEO ಆಗಿದ್ದಾರೆ. ಅವರ ಇಬ್ಬರು ಮಕ್ಕಳು - ಅದ್ವೈತ ನಾಯರ್ ಮತ್ತು ಅಂಚಿತ್ ನಾಯರ್ ನೈಕಾದಲ್ಲಿ ಕೆಲಸ ಮಾಡುತ್ತಾರೆ.
ಫೋರ್ಬ್ಸ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ ಫಲ್ಗುಣಿ ನಾಯರ್ ಅವರು ಈಗ ಮುತ್ತೂಟ್ ಫೈನಾನ್ಸ್‌ನ ಮುತ್ತೂಟ್ ಕುಟುಂಬಕ್ಕಿಂತ ಶ್ರೀಮಂತರಾಗಿದ್ದಾರೆ. ಏಷ್ಯನ್ ಪೇಂಟ್ಸ್‌ನ ಅಭಯ್ ವಕೀಲ್, ಮಾರಿಕೋ ಸಂಸ್ಥಾಪಕ ಮತ್ತು ಅಧ್ಯಕ್ಷ ಹರ್ಷ್ ಮಾರಿವಾಲಾಗಿಂತಲೂ ಶ್ರೀಮಂತ ಎಂದು ಕರೆಸಿಕೊಂಡಿದ್ದಾರೆ.
2012 ರಲ್ಲಿ, Nykaa 60 ದೈನಂದಿನ ಸೌಂದರ್ಯ ಉತ್ಪನ್ನಗಳಿಂದ ಪ್ರಾರಂಭವಾಯಿತು. 'ಬೆಲೆಗಳನ್ನು ಕಡಿತಗೊಳಿಸುವ ಬಗ್ಗೆ ನಾವು ಎಂದಿಗೂ ಯೋಚಿಸಲಿಲ್ಲ. ಉತ್ತಮ ಗುಣಮಟ್ಟವನ್ನು ಪೂರ್ಣ ಬೆಲೆಗೆ ಮಾರಾಟ ಮಾಡುತ್ತೇವೆ' ಎಂದು ಫಲ್ಗುಣಿ ನಾಯರ್ ಸಂದರ್ಶನವೊಂದರಲ್ಲಿ ತಿಳಿಸಿದ್ದರು.
ಫಲ್ಗುಣಿ ತನ್ನ ಹಿಂದಿನ ಸಂದರ್ಶನಗಳಲ್ಲಿ ಬಹಿರಂಗಪಡಿಸಿದಂತೆ, ಅವರು ನೆವೆರ್ ಗಿವ್‌ಅಪ್ ಎಂಬ ವಿಚಾರವನ್ನು ಬಲವಾಗಿ ನಂಬುತ್ತಾರೆ.