ಸ್ಯಾನಿಟರಿ ಪ್ಯಾಡ್ ಜೊತೆಗೆ ಉಚಿತ ಕಪ್ ನೀಡುವುದಕ್ಕೆ ರಾಜ್ಯ ಸರ್ಕಾರ ನಿರ್ಧಾರ
ಕರ್ನಾಟಕ ಸರ್ಕಾರವು 'ಶುಚಿ' ಯೋಜನೆಯಡಿ, ಮುಂದಿನ ಶೈಕ್ಷಣಿಕ ವರ್ಷದಿಂದ 9 ರಿಂದ 12ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿನಿಯರಿಗೆ ಮುಟ್ಟಿನ ಕಪ್‌ಗಳನ್ನು ವಿತರಿಸಲು ನಿರ್ಧರಿಸಿದೆ. ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದ ಈ ಕ್ರಮವು, ಯಶಸ್ವಿ ಪ್ರಾಯೋಗಿಕ ಯೋಜನೆಯ ನಂತರ ಜಾರಿಯಾಗುತ್ತಿದೆ.

ಮೆನೆಸ್ಟ್ರುವಲ್ ಕಪ್ ವಿತರಿಸಲು ರಾಜ್ಯ ಸರ್ಕಾರ ನಿರ್ಧಾರ
ಪರಿಸರ ಸ್ನೇಹಿ ಹಾಗೂ ಕಡಿಮೆ ವೆಚ್ಚದಲ್ಲಿ ಮುಟ್ಟಿನ ಸ್ವಚ್ಛತಾ ಅಭ್ಯಾಸಗಳನ್ನುಜಾರಿಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು ಮುಂದಿನ ಶೈಕ್ಷಣಿಕ ವರ್ಷದಿಂದ ರಾಜ್ಯದೆಲ್ಲೆಡೆ ಸರ್ಕಾರಿ ಶಾಲೆ ಹೆಣ್ಣು ಮಕ್ಕಳಿಗೆ ಮೆನೆಸ್ಟ್ರುವಲ್ ಕಪ್ ಅಥವಾ ಮುಟ್ಟಿನ ಕಪ್ ಅನ್ನು ನೀಡುವ ನಿರ್ಧಾರ ಮಾಡಿದೆ. ಎರಡು ಜಿಲ್ಲೆಗಳಲ್ಲಿ ನಡೆಸಿದ ಪ್ರಯೋಗ ಯಶಸ್ವಿ ಎನಿಸಿದ ಹಿನ್ನೆಲೆ ಈಗ ಈ ಯೋಜನೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.
19.64 ಲಕ್ಷ ಹದಿಹರೆಯದ ಬಾಲಕಿಯರಿಗೆ ವಿತರಣೆ
2025–26ರ ಶುಚಿ ಕಾರ್ಯಕ್ರಮದಡಿಯಲ್ಲಿ 6ನೇ ತರಗತಿಯಿಂದ ದ್ವಿತೀಯ ಪಿಯುವರೆಗಿನ 19.64 ಲಕ್ಷ ಹದಿಹರೆಯದ ಬಾಲಕಿಯರಿಗೆ ಸ್ಯಾನಿಟರಿ ನ್ಯಾಪ್ಕಿನ್‌ಗಳು ಮತ್ತು ಮುಟ್ಟಿನ ಕಪ್‌ಗಳ ಖರೀದಿ ಮತ್ತು ವಿತರಣೆಗೆ ರಾಜ್ಯ ಸರ್ಕಾರ ಕಳೆದ ವಾರ ಪರಿಷ್ಕೃತ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. ಆದರೆ ಸರ್ಕಾರದ ಆದೇಶದ ಪ್ರಕಾರ, 9 ರಿಂದ 12 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಮಾತ್ರ ಸ್ಯಾನಿಟರಿ ಪ್ಯಾಡ್ ಜೊತೆಗೆ ಮುಟ್ಟಿನ ಕಪ್‌ಗಳನ್ನು ನೀಡಲಾಗುತ್ತದೆ. 6 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನೇ ಮುಂದುವರಿಸಲಾಗುವುದು. ಈ ಮುಟ್ಟಿನ ಕಪ್‌ಗಳ ಬಳಕೆ ಸಂಪೂರ್ಣವಾಗಿ ಸ್ವಯಂಪ್ರೇರಿತವಾಗಿದ್ದು, ಫಲಾನುಭವಿಗಳು ಸ್ಯಾನಿಟರಿ ಪ್ಯಾಡ್‌ಗಳನ್ನೇ ಇದರ ಬದಲು ಆಯ್ಕೆ ಮಾಡಿಕೊಳ್ಳುವುದನ್ನು ಮುಂದುವರಿಸಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
10.38 ಲಕ್ಷ ಮುಟ್ಟಿನ ಕಪ್
ಶಾಲಾ ಮಕ್ಕಳಿಗೆ ವಿತರಿಸಲು ಬಯಸಿರುವ ಈ ಸ್ಯಾನಿಟರಿ ಪ್ಯಾಡ್‌ಗಳನ್ನು ಹಾಗೂ ಈ ಮುಟ್ಟಿನ ಕಪ್‌ಗಳನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ (ಕೆಎಸ್ಎಂಎಸ್ಸಿಎಲ್) ಮೂಲಕ ಖರೀದಿ ಮಾಡಲಾಗುತ್ತದೆ. 2025–26ರ ಅವಧಿಗೆ ಒಂದು ಯೂನಿಟ್‌ಗೆ 30.47 ರೂನಂತೆ 1.79 ಕೋಟಿ ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ವಿತರಿಸಲಾಗುತ್ತದೆ. (1 ಯುನಿಟ್10 ಪ್ಯಾಡ್‌ಗಳನ್ನು ಒಳಗೊಂಡಿರುತ್ತದೆ) ಹಾಗೂ ಒಂದು ಕಪ್‌ಗೆ 65.34 ರೂನಂತೆ ಅಂದಾಜು ಯೂನಿಟ್ ವೆಚ್ಚದಲ್ಲಿ 10.38 ಲಕ್ಷ ಮುಟ್ಟಿನ ಕಪ್‌ಗಳನ್ನು ಖರೀದಿಸಲು ಸರ್ಕಾರ ಅನುಮೋದನೆ ನೀಡಿದೆ. ಇವುಗಳಿಗೆ ತಗಲುವ ಒಟ್ಟು ಅನುಮೋದಿತ ವೆಚ್ಚ ₹61.35 ಕೋಟಿಯಾಗಿದೆ.
ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕ ಪ್ರಯೋಗ
ಈ ಹಿಂದೆ ಚಾಮರಾಜನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಮುಟ್ಟಿನ ಕಪ್‌ಗಳನ್ನು ಪರಿಚಯಿಸಲಾಗಿತ್ತು, ಇದರ ಅಡಿಯಲ್ಲಿ ಸುಮಾರು 15,000 ಕಪ್‌ಗಳನ್ನು ವಿತರಿಸಲಾಗಿತು. ಹದಿಹರೆಯದ ಹುಡುಗಿಯರಲ್ಲಿ ಈ ಕಪ್‌ಗಳ ಬಳಕೆ, ಬಳಕೆಯ ಅಭ್ಯಾಸಗಳು ಮತ್ತು ಜಾಗೃತಿಯನ್ನು ನಿರ್ಣಯಿಸುವುದು ಪೈಲಟ್ ಯೋಜನೆಯ ಗುರಿಯಾಗಿತ್ತು.
9ರಿಂದ ದ್ವಿತೀಯ ಪಿಯುಸಿ ಮಕ್ಕಳಿಗೆ ಮುಟ್ಟಿನ ಕಪ್
ಈಗ ರಾಜ್ಯ ಸರ್ಕಾರದ ಕೈಗೊಂಡಿರುವ ಯೋಜನೆಯಡಿ 9 ಮತ್ತು 10 ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಪರಿಷ್ಕೃತ ವಿತರಣಾ ಮಾದರಿಯಡಿಯಲ್ಲಿ ಒಬ್ಬರಿಗೆ 12 ಯೂನಿಟ್ ನ್ಯಾಪ್ಕಿನ್‌ಗಳ ಬದಲಿಗೆ ಆರು ತಿಂಗಳವರೆಗೆ ಆರು ಯೂನಿಟ್ ಸ್ಯಾನಿಟರಿ ನ್ಯಾಪ್ಕಿನ್‌ಗಳು ಮತ್ತು ಒಂದು ಮುಟ್ಟಿನ ಕಪ್ ಅನ್ನು ನೀಡಲಾಗುತ್ತದೆ. ಇದು ಹೆಚ್ಚುವರಿ ನೈರ್ಮಲ್ಯ ಆಯ್ಕೆಯನ್ನು ನೀಡುವುದರ ಜೊತೆಗೆ ಸ್ಯಾನಿಟರಿ ನ್ಯಾಪ್ಕಿನ್‌ಗಳಿಗೆ ತಗುಲುವ ಸುಮಾರು ₹17.26 ಕೋಟಿ ಹಣವನ್ನು ಉಳಿಸುತ್ತದೆ.
ಮರುಬಳಕೆ ಮಾಡಬಹುದಾದ ಕಪ್
ಪ್ರತಿಯೊಬ್ಬ ವಿದ್ಯಾರ್ಥಿನಿಗೆ ಒಂದು ಮುಟ್ಟಿನ ಕಪ್ ದೊರೆಯಲಿದ್ದು, ಇದನ್ನು ಮರುಬಳಕೆ ಮಾಡಬಹುದಾಗಿದೆ ಮತ್ತು ಸರಿಯಾದ ನೈರ್ಮಲ್ಯದೊಂದಿಗೆ ಒಂದು ವರ್ಷದವರೆಗೆ ಸುರಕ್ಷಿತವಾಗಿ ಬಳಸಬಹುದಾಗಿದೆ.
ಕಪ್ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಲು ತರಬೇತಿ
ಸರಿಯಾದ ಬಳಕೆ, ಶುಚಿಗೊಳಿಸುವಿಕೆ ಮತ್ತು ಸಂಗ್ರಹಣೆಯ ಕುರಿತು ಮಾರ್ಗದರ್ಶನ ನೀಡಲು ಇದಕ್ಕಾಗಿ ಮಕ್ಕಳಿಗೆ ಶಾಲೆಗಳಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಟ್ಟಿನ ಕಪ್‌ಗಳು ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಬದಲಿಯಾಗಿಲ್ಲ, ಬದಲಾಗಿ ಹೆಚ್ಚುವರಿ ಆಯ್ಕೆಯಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

