ಸಿಲಿಂಡರ್ ಚಿಂತೆ ಬಿಡಿ: ಬೇಸಿಗೆಯ ಆರೋಗ್ಯಕ್ಕೆ ಟೇಸ್ಟಿ ಟೇಸ್ಟಿ 6 ಫಟಾಫಟ್ ತಂಬುಳಿ ರೆಸಿಪಿ ನಿಮಗಾಗಿ
ಬಿರು ಬಿಸಿಲಿನ ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಮತ್ತು ಗ್ಯಾಸ್ ಉಳಿತಾಯ ಮಾಡಲು ಹಲವು ಬಗೆಯ ತಂಬುಳಿಗಳು ಸಹಕಾರಿ. ಈ ಲೇಖನದಲ್ಲಿ ಜೀರಿಗೆ, ನೆಲ್ಲಿಕಾಯಿ, ಪುದೀನಾ ಸೇರಿದಂತೆ ಅನ್ನದೊಂದಿಗೆ ಸವಿಯಬಹುದಾದ ರುಚಿಕರ ಹಾಗೂ ಆರೋಗ್ಯಕರ ತಂಬುಳಿ ರೆಸಿಪಿಗಳನ್ನು ವಿವರಿಸಲಾಗಿದೆ.

ಬಿರು ಬಿಸಿಲಿಗೆ ತಂಬುಳಿ
ಬಿರು ಬಿಸಿಲು ಶುರುವಾಗಿದೆ. ಊಟವೂ ರುಚಿಸದ, ತುಂಬಾ ಮಸಾಲೆ ಇರುವ ಪದಾರ್ಥಗಳೂ ಹೆಚ್ಚು ಸೇರದ ಸಮಯವಿದು. ಸದಾ ಏನಾದರೂ ಕುಡಿಯುತ್ತಾ ಇರೋಣ ಎನ್ನಿಸುತ್ತದೆ. ಅದೇ ಇನ್ನೊಂದೆಡೆ ಗ್ಯಾಸ್ ಸಿಲಿಂಡರ್ ಪರದಾಟ. ಇವೆಲ್ಲಕ್ಕೂ ಒಂದೇ ಒಂದು ದಾರಿ ಎಂದರೆ, ಗ್ಯಾಸ್ ಕೂಡ ಹೆಚ್ಚು ಖರ್ಚಾಗದೇ, ಬೇಸಿಗೆಯಲ್ಲಿ ದೇಹವನ್ನೂ ಕೂಲ್ ಕೂಲ್ ಮಾಡುವ, ಆರೋಗ್ಯಕರ, ಅತ್ಯಂತ ಶೀಘ್ರದಲ್ಲಿ ಆಗುವ, ಕುಡಿಯಲು, ಅನ್ನಕ್ಕೂ ಟೇಸ್ಟಿ ಟೇಸ್ಟಿಯಾಗಿರುವ ತಂಬುಳಿ ರೆಸಿಪಿಯನ್ನು ಇಲ್ಲಿ ನೀಡಲಾಗಿದೆ.
ಜೀರಿಗೆ ತಂಬುಳಿ
ಸ್ವಲ್ಪ ಜೀರಿಗೆ, ಕರಿಮೆಣಸು ತುಪ್ಪದಲ್ಲಿ ಹುರಿದುಕೊಳ್ಳಿ. ತುರಿದ ತೆಂಗಿನಕಾಯಿ ಸೇರಿಸಿ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ ಮಜ್ಜಿಗೆ ಸೇರಿಸಿ. ಬಳಿಕ ಒಣಮೆಣಸಿನ ಕಾಯಿ, ಸಾಸಿವೆ, ಕರಿಬೇವು ಒಗ್ಗರಣೆ ಕೊಡಿ.
ನೆಲ್ಲಿಕಾಯಿ ತಂಬುಳಿ
ನೆಲ್ಲಿಕಾಯಿಯನ್ನು ಬೇಯಿಸಿ ಅದರ ಬೀಜ ತೆಗೆಯಿರಿ, ಕಾಯಿ, ಹಸಿಮೆಣಸು, ಜೀರಿಗೆ, ಉಪ್ಪು ಸೇರಿಸಿ ರುಬ್ಬಿ. ಮಜ್ಜಿಗೆ ಮತ್ತು ಒಗ್ಗರಣೆ ಸೇರಿಸಿ ಮಿಕ್ಸ್ ಮಾಡಿ. (ಒಗ್ಗರಣೆಗೆ ಸಾಸಿವೆ, ಜೀರಿಗೆ, ಕರಿಬೇವು ಸೇರಿಸಿ- ಇವು ಬಹುತೇಕ ಎಲ್ಲದ್ದಕ್ಕೂ ಅನ್ವಯ)
ಪುದೀನಾ ತಂಬುಳಿ
ಪುದೀನಾ ಎಲೆ ಸ್ವಲ್ಪ, ಹಸಿ ಮೆಣಸು ಮತ್ತು ಚಿಕ್ಕ ಶುಂಠಿಯನ್ನು ತುರಿದು ಎಲ್ಲವನ್ನೂ ಮೊದಲಿಗೆ ಎಣ್ಣೆಯಲ್ಲಿ ಫ್ರೈ ಮಾಡಿ. ಇದಕ್ಕೆ ಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಮಜ್ಜಿಗೆ ಸೇರಿಸಿ ನುಣ್ಣಗೆ ರುಬ್ಬಿ. ಸಾಸಿವೆ, ಕರಿಬೇವು ಮತ್ತು ಇಂಗಿನ ಒಗ್ಗರಣೆ ಹಾಕಿ.
ಮೆಂತ್ಯ ತಂಬುಳಿ
ಮೆಂತ್ಯದ ಕಾಳು, ಜೀರಿಗೆ, ಕಾಳು ಮೆಣಸನ್ನು ಎಣ್ಣೆಯಲ್ಲಿ ಹುರಿಯಿರಿ. ಕಾಯಿ, ಉಪ್ಪು, ಹುಣಸೆಹಣ್ಣು ಸೇರಿಸಿ ನುಗಣ್ಣಗೆ ರುಬ್ಬಿ. ಮಜ್ಜಿಗೆ ಸೇರಿಸಿ ಸಾಸಿವೆಯ ಒಗ್ಗರಣೆಯನ್ನು ಹಾಕಿ.
ಒಣಕೊಬ್ಬರಿ ತಂಬುಳಿ
ಒಣಕೊಬ್ಬರಿ ತುರಿ, ಒಣ ಮೆಣಸು (ಕೆಂಪು ಮೆಣಸು), ಜೀರಿಗೆಯನ್ನು ಒಣದಾಗಿ ಫ್ರೈ ಮಾಡಿಕೊಳ್ಳಿ. ಉಪ್ಪು, ಹುಣಸೇಹಣ್ಣು ನೀರು ಸೇರಿಸಿ ರುಬ್ಬಿ. ಮಜ್ಜಿಗೆ ಸೇರಿಸಿ ಇಂಗಿನ ಒಗ್ಗರಣೆ ಕೊಡಿ.
ಶುಂಠಿ ತಂಬುಳಿ
ಶುಂಠಿ, ಹಸಿಮೆಣಸು ತುಪ್ಪದಲ್ಲಿ (ಇಲ್ಲದಿದ್ದರೆ ಎಣ್ಣೆಯಲ್ಲಿ) ಹುರಿದುಕೊಳ್ಳಿ. ಅದಕ್ಕೆ ತೆಂಗಿನ ತುರಿ, ಉಪ್ಪು, ಜೀರಿಗೆ ಸೇರಿಸಿ ಪೇಸ್ಟ್ ಮಾಡಿ. ಮಜ್ಜಿಗೆ ಮತ್ತು ಒಗ್ಗರಣೆ ಸೇರಿಸಿ ಮಿಕ್ಸ್ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

