Fertility massage ಅಂದ್ರೇನು? ಇದು ಗರ್ಭಿಣಿಯಾಗಲು ಸಹಾಯ ಮಾಡುತ್ತದೆಯೇ?
ಗರ್ಭಧಾರಣೆ ಕೂಡ ಮಹಿಳೆಯರ ಜೀವನದ ಪ್ರಮುಖ ಭಾಗವಾಗಿದೆ. ಪ್ರತಿಯೊಬ್ಬ ಮಹಿಳೆಯು ತಾಯ್ತನದ ಸುಖವನ್ನು ಅನುಭವಿಸಲು ಬಯಸುತ್ತಾಳೆ. ಆದರೆ ಕೆಲವರಿಗೆ ಇದು ಸಾಧ್ಯವಾಗದೇ ಇರಬಹುದು. ಹಲವಾರು ಪ್ರಯತ್ನಗಳನ್ನು ಮಾಡಿದ ನಂತರವೂ ಗರ್ಭಿಣಿಯಾಗುವ ಯಾವುದೇ ಸೂಚನೆ ದೊರೆಯದೇ ಇದ್ದರೆ, ಅದಕ್ಕಾಗಿ ಫರ್ಟಿಲಿಟಿ ಮಸಾಜ್ ಮಾಡಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಮುಂದೆ ಓದಿ.
ತಾಯಿಯಾಗುವುದು ಪ್ರತಿಯೊಬ್ಬ ಮಹಿಳೆಗೆ ಕನಸು ನನಸಾಗುವ ಕ್ಷಣ ಎಂದೇ ಹೇಳಬಹುದು ಆದರೂ ಇದೇನೂ ಸುಲಭವಲ್ಲ, ಗರ್ಭಧರಿಸಲು ಪ್ರಯತ್ನಿಸುವುದು ಕಷ್ಟಕರವಾದ ಮತ್ತು ಒತ್ತಡದ ಕೆಲಸವಾಗಬಹುದು. ವಿಶೇಷವಾಗಿ ಮಹಿಳೆಯರು ಅನೇಕ ಬಾರಿ ಪ್ರಯತ್ನಿಸಿದ ನಂತರವೂ ಗರ್ಭಿಣಿಯಾಗಲು ಸಾಧ್ಯವಾಗದಿದ್ದಾಗ, ಅವರು ತುಂಬಾ ಒತ್ತಡಕ್ಕೊಳಗಾಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಫರ್ಟಿಲಿಟಿ ಮಸಾಜ್ (fertility massage) ಇತ್ತೀಚಿನ ದಿನಗಳಲ್ಲಿ ಫಲವತ್ತತೆಯನ್ನು ಹೆಚ್ಚಿಸಲು ಮತ್ತು ಗರ್ಭಧರಿಸುವ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯಾ ಮಾಡುತ್ತಿದೆ.
ಹೆಚ್ಚಿನ ಮಹಿಳೆಯರು ಈ ಆರೋಗ್ಯಕರ ಫರ್ಟಿಲಿಟಿ ಮಸಾಜ್ ಮೂಲಕ ಗರ್ಭಧಾರಣೆ ಹೊಂದಲು ಮುಂದೆ ಬಂದಿದ್ದಾರೆ. ನಿಮಗೂ ಈ ಬಗ್ಗೆ ತಿಳಿಯುವ ಆಸಕ್ತಿ ಇದೆಯೇ? ಹಾಗಿದ್ರೆ ಈ ಫರ್ಟಿಲಿಟಿ ಮಸಾಜ್ ಎಂದರೇನು ಮತ್ತು ಇದು ನಿಜವಾಗಿಯೂ ಗರ್ಭಿಣಿಯಾಗಲು (pregnant) ಸಹಾಯ ಮಾಡುತ್ತದೆಯೇ ಎಂದು ಇಂದು ತಿಳಿಯೋಣ...
ಫರ್ಟಿಲಿಟಿ ಮಸಾಜ್ ಎಂದರೇನು?
ಫರ್ಟಿಲಿಟಿ ಮಸಾಜ್ ಇದು ಸಂತಾನೋತ್ಪತ್ತಿ ಅಂಗಗಳ ಫಲವತ್ತತೆ ಮತ್ತು ಆರೋಗ್ಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಒಂದು ರೀತಿಯ ಮಸಾಜ್ ಆಗಿದೆ. ಇದು ಒಂದು ನೈಸರ್ಗಿಕ ತಂತ್ರವಾಗಿದೆ (natural technic). ಇದನ್ನು ಮಾಡುವುದರಿಂದ ಬೇಗನೆ ಗರ್ಭ ಧರಿಸಲು ಸಾಧ್ಯವಾಗುತ್ತೆ ಎನ್ನಲಾಗುತ್ತೆ.
ಫರ್ಟಿಲಿಟಿ ಸಮಸ್ಯೆಗಳನ್ನು ಹೊರತುಪಡಿಸಿ, ಕರುಳಿನ ಆರೋಗ್ಯ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಋತುಚಕ್ರವನ್ನು (menstrual cycle) ಸುಧಾರಿಸಲು ಈ ಮಸಾಜ್ ಸಹಾಯ ಮಾಡುತ್ತದೆ. ಈ ಮಸಾಜ್ ಅನ್ನು ಜಠರದ ಕೆಳಭಾಗ, ಪೆಲ್ವಿಕ್ ಬೋನ್ ಮತ್ತು ತೊಡೆಗಳ ನಡುವೆ ಮಾಡಲಾಗುತ್ತದೆ. ಹರಳೆಣ್ಣೆ ಮತ್ತು ಅನೇಕ ರೀತಿಯ ಎಣ್ಣೆಯನ್ನು ಇದಕ್ಕಾಗಿ ಬಳಸಲಾಗುತ್ತದೆ.
ಫರ್ಟಿಲಿಟಿ ಮಸಾಜ್ ನ ಪ್ರಯೋಜನಗಳೇನು?
ನಿಯಮಿತವಾಗಿ ಮಸಾಜ್ ಮಾಡುವುದರಿಂದ ಅಂಗಗಳಲ್ಲಿ ರಕ್ತದ ಹರಿವನ್ನು ಸುಧಾರಿಸಬಹುದು ಮತ್ತು ಹಾರ್ಮೋನುಗಳನ್ನು ಸಮತೋಲನಗೊಳಿಸಲು (hormonal balance) ಸಹ ಇದು ಪ್ರಯೋಜನಕಾರಿಯಾಗಿದೆ.
ಅಂಡೋತ್ಪತ್ತಿ ಮತ್ತು ಗರ್ಭದಲ್ಲಿರುವ ಎಂಡೋಮೆಟ್ರಿಯಲ್ ಒಳಪದರವನ್ನು ದಪ್ಪಗೊಳಿಸಲು ಸಹಾಯ ಮಾಡುತ್ತದೆ
ಆಕ್ಸಿಟೋಸಿನ್ (oxytocin) ನಂತಹ ಉತ್ತಮ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಫರ್ಟಿಲಿಟಿ ಮಸಾಜ್ ಪರಿಣಾಮಕಾರಿ ಎಂದು ಪರಿಗಣಿಸಲಾಗುತ್ತೆ..
ದೇಹದ ವಿವಿಧ ಭಾಗಗಳ ನೋವನ್ನು ಕಡಿಮೆ ಮಾಡುತ್ತದೆ.
ಋತುಚಕ್ರದ ಸಮಯದಲ್ಲಿ ರಕ್ತದ ಹರಿವನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.
ಫರ್ಟಿಲಿಟಿ ಮಸಾಜ್ ಗರ್ಭಧಾರಣೆಗೆ ಸಹಾಯ ಮಾಡಬಹುದೇ?
ಇಲ್ಲಿಯವರೆಗೆ, ಫರ್ಟಿಲಿಟಿ ಮಸಾಜ್ ನೇರವಾಗಿ ಫಲವತ್ತತೆಯನ್ನು ಸುಧಾರಿಸುತ್ತದೆಯೇ ಎಂಬುದರ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ. ಆದಾಗ್ಯೂ, ಮಸಾಜ್ ದೇಹದಲ್ಲಿ ಸ್ಟ್ರೆಸ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಡೋಪಮೈನ್ (dopamine) ಮತ್ತು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸುತ್ತದೆ, ಆ ಮೂಲಕ ಮನಸ್ಥಿತಿಯನ್ನು ಸುಧಾರಿಸುತ್ತದೆ ಎಂದು ಸಾಕಷ್ಟು ಅಧ್ಯಯನಗಳು ತೋರಿಸಿವೆ. ಆದ್ದರಿಂದ, ಫರ್ಟಿಲಿಟಿ ಮಸಾಜ್ ಮಾಡೋದು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೇ ಎಂಬುದಕ್ಕೆ ನೇರ ಉತ್ತರವಿಲ್ಲ.
ಫಲವತ್ತತೆ ಮಸಾಜ್ ಅನ್ನು ಯಾವಾಗ ತಪ್ಪಿಸಬೇಕು?
1. ನೀವು ಗರ್ಭಿಣಿಯಾಗಬಹುದಾದರೆ ಅಥವಾ ಗರ್ಭಿಣಿಯಾಗಿದ್ದರೆ.
2. ಪ್ರತಿ ತಿಂಗಳಲ್ಲಿ, ಅಂಡೋತ್ಪತ್ತಿ ನಂತರದ ಸಮಯವು ಫರ್ಟಿಲಿಟಿ ಮಸಾಜ್ಗೆ ಸೂಕ್ತವಲ್ಲ, ಏಕೆಂದರೆ ಇದು ಮುಂದಿನ ಋತುಚಕ್ರದ ಮೇಲೆ ಪರಿಣಾಮ ಬೀರಬಹುದು.
3. ಮಸಾಜ್ ಮಾಡುವಾಗ ನಿಮಗೆ ನೋವು ಉಂಟಾದರೆ. ವೈದ್ಯರನ್ನು ಸಂಪರ್ಕಿಸಿದ ನಂತರವೇ ಮಸಾಜ್ ಮಾಡಿಸಿಕೊಳ್ಳಿ.
4. ಮುಟ್ಟಿನ ಸಮಯದಲ್ಲಿ ಫರ್ಟಿಲಿಟಿ ಮಸಾಜ್ ಮಾಡೋದು ಬೇಡ.
5. ನೀವು ಸ್ತನ್ಯಪಾನ ಮಾಡುತ್ತಿದ್ದರೆ, ಫರ್ಟಿಲಿಟಿ ಮಸಾಜ್ ಪಡೆಯುವುದನ್ನು ತಪ್ಪಿಸಬೇಕು.