- Home
- Life
- Women
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಮಿಡ್ ನೈಟ್ ಫಿಜ್ಜಾ – ಯಂಗ್ ಹುಡುಗಿಯರ ಲೈಫ್ ಹಾಳು ಮಾಡ್ತಿದೆ ಕೆಟ್ಟ ಡಯಟ್
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಮಿಡ್ ನೈಟ್ ಫಿಜ್ಜಾ – ಯಂಗ್ ಹುಡುಗಿಯರ ಲೈಫ್ ಹಾಳು ಮಾಡ್ತಿದೆ ಕೆಟ್ಟ ಡಯಟ್
Young Women Health Issues : ಕೆಲ್ಸದ ಒತ್ತಡದಲ್ಲಿ ಜನರು ಆಹಾರವನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ. ಇದು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರ್ತಿದೆ. ಅವರ ಡಯಟ್ ಅವರ ಆರೋಗ್ಯವನ್ನು ನಿಧಾನವಾಗಿ ಹಾಳು ಮಾಡ್ತಿದೆ.

ಮಹಿಳೆಯರಲ್ಲಿ ಅಪೌಷ್ಠಿಕತೆ
ಈಗ ಆರೋಗ್ಯವಾಗಿದ್ದ ವ್ಯಕ್ತಿ ಇನ್ನೊಂದು ಅರೆ ಕ್ಷಣದಲ್ಲಿ ಕುಸಿದು ಬೀಳೋ ಘಟನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೆಟ್ಟ ಜೀವನಶೈಲಿ ಅವರ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರ್ತಿದೆ. ಕ್ಯಾನ್ಸರ್ನಿಂದ ಹಿಡಿದು ಮೂತ್ರಪಿಂಡ ವೈಫಲ್ಯದವರೆಗಿನ ನಾನಾ ಅನಾರೋಗ್ಯ ಸಮಸ್ಯೆ ವೇಗವಾಗಿ ಹೆಚ್ಚಾಗ್ತಿದೆ. ಈಗ ಸಂಶೋಧನೆಯೊಂದು ಆಘಾತಕಾರಿ ವಿಷ್ಯವನ್ನು ಹೊರಗೆ ಹಾಕಿದೆ. 18 ರಿಂದ 40 ವರ್ಷದ ಮಹಿಳೆಯರಲ್ಲಿ ಪೌಷ್ಠಿಕಾಂಶದ ಕೊರತೆ ಎದ್ದು ಕಾಣ್ತಿದೆ ಎಂದು ವರದಿ ಹೇಳಿದೆ.
ಅಧ್ಯಯನ ಹೇಳೋದೇನು?
ಐಸಿಎಂಆರ್ನಿಂದ ಧನಸಹಾಯ ಪಡೆದ ಅಧ್ಯಯನದ ಪ್ರಕಾರ, 18 ರಿಂದ 40 ವರ್ಷ ವಯಸ್ಸಿನ ಭಾರತೀಯ ಮಹಿಳೆಯರಲ್ಲಿ ಸುಮಾರು ಶೇಕಡಾ 40 ರಷ್ಟು ಮಹಿಳೆಯರು ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆ, ವಿಟಮಿನ್ ಕೊರತೆ ಮತ್ತು ಇನ್ಸುಲಿನ್ ಪ್ರತಿರೋಧದಂತಹ ಸಮಸ್ಯೆ ಕಾಣಿಸಿಕೊಳ್ತಿದೆ. ಮೇಲ್ನೋಟಕ್ಕೆ ಈ ಮಹಿಳೆಯರು ಆರೋಗ್ಯವಂತರಾಗಿ ಕಾಣಿಸಿದ್ರೂ ಒಳಗಿನಿಂದಲೇ ದುರ್ಬಲರಾಗಿರುತ್ತಾರೆ. ದೀರ್ಘಕಾಲ ಅವರ ಸಮಸ್ಯೆ ತಿಳಿಯೋದಿಲ್ಲ ಎಂದು ಅಧ್ಯಯನ ಹೇಳಿದೆ. ಮಹಿಳೆಯರು ಆದಷ್ಟು ಬೇಗ ಎಚ್ಚೆತ್ತುಕೊಳ್ದೆ ಹೋದ್ರೆ ಆರೋಗ್ಯ, ಫಲವತ್ತತೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಅಧ್ಯಯನ ಎಚ್ಚರಿಕೆ ನೀಡಿದೆ.
ಉಪಹಾರಕ್ಕೆ ಬಿಸ್ಕತ್, ಟೀ
ಈ ವಯಸ್ಸಿನ ಬಹುತೇಕ ಮಹಿಳೆಯರ ದಿನಚರಿ ಚೆನ್ನಾಗಿಲ್ಲ. ಬೆಳಿಗ್ಗೆ ಬಹುತೇಕ ಸಮಯವನ್ನು ಉಪಹಾರವಿಲ್ಲದೆ ಕಳೆಯುತ್ತಾರೆ. ಕೆಲವೊಮ್ಮೆ ಬರೀ ಚಹಾ, ಕಾಫಿ ಇಲ್ಲವೆ ಒಂದೆರಡು ಬಿಸ್ಕತ್ ತಿಂದು ಉಪಹಾರ ಮುಗಿಸಿರ್ತಾರೆ. ಪ್ರತಿಯೊಬ್ಬ ವ್ಯಕ್ತಿಗೆ ಉಪಹಾರ ಬಹಳ ಮುಖ್ಯ. ಅದು ಇಡೀ ದಿನ ಕೆಲಸ ಮಾಡುವ ಶಕ್ತಿಯನ್ನು ದೇಹಕ್ಕೆ ನೀಡಯತ್ತದೆ. ಆದ್ರೆ ಉಪಾಹಾರ ಬಿಡುವುದ್ರಿಂದ ದೇಹವು ಅಗತ್ಯವಾದ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಇದ್ರಿಂದ ದೇಹದಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ಒಂದ್ಕಡೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.
ತಪ್ಪಾದ ಮಧ್ಯಾಹ್ನದ ಊಟ
ಬೆಳಿಗ್ಗೆ ಗಡಿಬಿಡಿಯಲ್ಲಿ ಸ್ಕೂಲ್, ಕೆಲಸ, ಮನೆ ಕೆಲಸದಲ್ಲಿ ಬ್ಯುಸಿಯಾಗುವ ಮಹಿಳೆಯರು ಸರಿಯಾಗಿ ಉಪಹಾರ ಸೇವನೆ ಮಾಡೋದಿಲ್ಲ. ಇದ್ರಿಂದ ಮಧ್ಯಾಹ್ನದ ಹೊತ್ತಿಗೆ ಹಸಿವು ಹೆಚ್ಚಾಗುತ್ತದೆ. ಹಸಿವನ್ನನು ತಣಿಸಿಕೊಳ್ಳಲು ಕ್ಯಾಂಟೀನ್ ನಲ್ಲಿ ಚಿಪ್ಸ್, ಸಮೋಸಾ ಅಥವಾ ಸಿಹಿ ತಿಂಡಿಗಳನ್ನು ತಿನ್ನುತ್ತಾರೆ. ಇನ್ನು ಕೆಲವರು ಸಂಸ್ಕರಿಸಿದ ಆಹಾರವನ್ನು ಪ್ರತಿ ದಿನ ಸೇವನೆ ಮಾಡ್ತಾರೆ. ಇದಯ ಅವರ ದೇಹವನ್ನು ನಿಧಾನವಾಗಿ ಹಾಳು ಮಾಡ್ತಾ ಬರುತ್ತದೆ. ಫೈಬರ್ ಮತ್ತು ಪೋಷಕಾಂಶದ ಕೊರತೆ ಕಾಣಿಸಿಕೊಳ್ಳುತ್ತದೆ. ಎಣ್ಣೆ ಆಹಾರ, ಫಾಸ್ಟ್ ಫುಡ್, ಸಂಸ್ಖರಿಸಿದ ಆಹಾರಗಳು ಹೊಟ್ಟೆ ಕಿರಿಕಿರಿ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ. ಮಧ್ಯಾಹ್ನದ ಊಟಕ್ಕೆ ನೂಡಲ್ಸ್, ಬರ್ಗರ್ ಅಥವಾ ಪಿಜ್ಜಾ ಸೇವನೆ ಅತ್ಯಂತ ಅಪಾಯಕಾರಿ. ತರಕಾರಿ, ದ್ವಿದಳ ಧಾನ್ಯ, ಹಣ್ಣುಗಳು ಮಹಿಳೆ ಊಟದ ತಟ್ಟೆಯಲ್ಲಿ ಕಾಣಿಸೋದು ಬಹಳ ಅಪರೂಪ.
ಸಂಜೆ ಸ್ನ್ಯಾಕ್ಸ್
ಮಧ್ಯಾಹ್ನ ಮಾತ್ರವಲ್ಲ ಸಂಜೆ ಸ್ನ್ಯಾಕ್ಸ್ ಹೆಸರಿನಲ್ಲೂ ಅನೇಕ ಮಹಿಳೆಯರು ಕೋಲ್ಡ್ ಡ್ರಿಂಕ್ಸ್, ಬೇಕರಿ ಆಹಾರ, ಬೀದಿ ಬದಿ ಆಹಾರಗಳ ಸೇವನೆ ಮಾಡ್ತಾರೆ. ಇದ್ರಲ್ಲಿ ಕೆಲ ಆಹಾರ ರಕ್ತದ ಸಕ್ಕರೆ ಮಟ್ಟವನ್ನು ಅತಿ ಬೇಗ ಹೆಚ್ಚಿಸುತ್ತದೆ, ಚಿಕ್ಕ ವಯಸ್ಸಿನಲ್ಲಿಯೇ ಬೊಜ್ಜು, ಇನ್ಸುಲಿನ್ ಪ್ರತಿರೋಧ ಮತ್ತು ಕೊಬ್ಬಿನ ಪಿತ್ತಜನಕಾಂಗದ ಅಪಾಯ ಹೆಚ್ಚಿಸುತ್ತದೆ. ಇವು ಹೊಟ್ಟೆಯನ್ನು ಭಾರಗೊಳಿಸುತ್ತವೆ. ಆಮ್ಲ ಹಿಮ್ಮುಖ ಹರಿವು ಮತ್ತು ನಿದ್ರೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ತಡರಾತ್ರಿ ಊಟ
ಬರೀ ಸಂಜೆ ಸ್ನ್ಯಾಕ್ಸ್ ಮಾತ್ರವಲ್ಲ ಮಧ್ಯರಾತ್ರಿ ಆಹಾರ ಸೇವನೆ ಮಾಡುವ ಅಭ್ಯಾಸ ಅನೇಕರಿಗಿದೆ. ತಡರಾತ್ರಿ ಊಟ ಇಲ್ಲವೆ ಸ್ನ್ಯಾಕ್ಸ್, ಫಿಜ್ಜಾ ಸೇವನೆ ಮಾಡ್ತಾರೆ. ಒಂದೆರಡು ದಿನ ಇದು ಹಿತವೆನ್ನಿಸಿದ್ರೂ ಭವಿಷ್ಯದಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಚಯಾಪಚಯ ಮತ್ತು ಹಾರ್ಮೋನುಗಳ ಸಮತೋಲನಕ್ಕೆ ಅಡಿಪಾಯ ಹಾಕುತ್ತದೆ.
ದಿನಚರಿ ಹೇಗಿರಬೇಕು?
ತಜ್ಞರ ಪ್ರಕಾರ ಬೆಳಿಗ್ಗೆ ಎದ್ದ ಒಂದು ಗಂಟೆಯೊಳಗೆ ಉತ್ತಮ ಉಪಹಾರ ಸೇವನೆ ಮಾಡಬೇಕು. ಪ್ರೋಟೀನ್ ಮತ್ತು ಸಂಕೀರ್ಣ ಕಾರ್ಬೋಹೈಡ್ರೇಟ್ಗಳ ಸಂಯೋಜನೆ ರಕ್ತದಲ್ಲಿನ ಸಕ್ಕರೆಯನ್ನು ಸ್ಥಿರಗೊಳಿಸಲು ಸಹಾಯ ಮಾಡುತ್ತದೆ. ಮೆದುಳನ್ನು ಸಕ್ರಿಯವಾಗಿರಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯಬಾರದು. ಇದು ಆತಂಕ, ಹೃದಯ ಬಡಿತದ ವೇಗ ಹೆಚ್ಚಳ, ಆಮ್ಲೀಯತೆ ಮತ್ತು ಆಯಾಸಕ್ಕೆ ಕಾರಣವಾಗಬಹುದು. ಸಂಸ್ಕರಿಸಿದ ಆಹಾರದ ಬದಲು ಪ್ರೋಟೀನ್, ತರಕಾರಿಗಳು ಮತ್ತು ಧಾನ್ಯದ ಊಟ ಸೇವನೆ ಮಾಡಬೇಕು. ಹಗುರವಾದ ಆದರೆ ಪೌಷ್ಟಿಕವಾದ ಸಂಜೆ ತಿಂಡಿಗಳಿಗೆ ಆದ್ಯತೆ ನೀಡಬೇಕು. ರಾತ್ರಿಯ ಭೋಜನ ಯಾವಾಗಲೂ ಮಧ್ಯಾಹ್ನದ ಊಟಕ್ಕಿಂತ ಹಗುರವಾಗಿರಬೇಕು. ಮಲಗುವ ಸಮಯಕ್ಕಿಂತ 2 ರಿಂದ 3 ಗಂಟೆ ಮೊದಲು ಆಹಾರ ಸೇವಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

