ಮಳೆಗಾಲದಲ್ಲಿ ಬಟ್ಟೆಯಿಂದ ದುರ್ವಾಸನೆ ಬರ್ಬಾರದು ಅಂದ್ರೆ ವಾಷಿಂಗ್ ಮಷಿನ್ ಗೆ ಈ ಒಂದು ವಸ್ತು ಹಾಕಿ
ಮಳೆಗಾಲ ಶುರುವಾದ್ರೆ ಸಾಕು, ಬಟ್ಟೆಗಳನ್ನು ಒಣಗಿಸುವುದೇ ದೊಡ್ಡ ಸವಾಲು. ಬಟ್ಟೆ ಸರಿಯಾಗಿ ಒಣಗದೆ ವಾಸನೆ ಬರಲು ಶುರುವಾಗುತ್ತೆ. ಎಷ್ಟೇ ದುಬಾರಿ ಡಿಟರ್ಜೆಂಟ್ ಅಥವಾ ಫ್ಯಾಬ್ರಿಕ್ ಸಾಫ್ಟನರ್ ಬಳಸಿದರೂ ಕೆಲವೊಮ್ಮೆ ಈ ದುರ್ವಾಸನೆ ಹೋಗುವುದಿಲ್ಲ. ಅದಕ್ಕೆ ಸುಲಭ ಟಿಪ್ಸ್ ಇಲ್ಲಿದೆ

ಬಟ್ಟೆಯ ತೇವಾಂಶ
ಮಳೆಗಾಲದಲ್ಲಿ ಬಹುತೇಕ ಎಲ್ಲರನ್ನು ಕಾಡುವ ಸಮಸ್ಯೆ ಇದು. ಬಟ್ಟೆ ಸರಿಯಾಗಿ ಒಣಗದೆ ಬಟ್ಟೆಯಿಂದ ದುರ್ವಾಸನೆ ಬರುತ್ತದೆ. ಎಷ್ಟೇ ಸೆಂಟ್ ಹಾಕಿಕೊಂಡ್ರೂ ಈ ವಾಸನೆ ಹೋಗೋದಿಲ್ಲ. ಬಟ್ಟೆಗಳಲ್ಲಿ ಉಂಟಾಗುವ ತೇವದ ವಾಸನೆಗೆ ಪ್ರಮುಖ ಕಾರಣ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರ. ಇವು ಬಟ್ಟೆಯ ನಾರುಗಳಲ್ಲಿ ಬೆಳೆಯುವುದರಿಂದ ದುರ್ವಾಸನೆ ಉಂಟಾಗುತ್ತದೆ.
ಬಿಳಿ ವಿನೆಗರ್
ನಿಮ್ಮ ಅಡುಗೆ ಮನೆಯಲ್ಲಿರುವ ಬಿಳಿ ವಿನೆಗರ್ (White Vinegar) ಬರೀ ಅಡುಗೆ ಕೆಲಸಕ್ಕೆ ಸಹಾಯಕಾರಿ ಅಲ್ಲ. ಇದು ನೈಸರ್ಗಿಕ ಸ್ಯಾನಿಟೈಸರ್ ಮತ್ತು ಡಿಯೋಡರೈಸರ್ ಆಗಿ ಕೆಲ್ಸ ಮಾಡುತ್ತದೆ. ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಬಟ್ಟೆಯ ದುರ್ವಾಸನೆ ಕಡಿಮೆ ಮಾಡಿ ತಾಜಾತನವನ್ನು ನೀಡುತ್ತದೆ.
ಬಿಳಿ ವಿನೆಗರ್ ಬಳಕೆ ಹೇಗೆ?
ನೀವು ಪ್ರತಿ ದಿನ ತೊಳೆಯುವ ರೀತಿಯಲ್ಲೇ ಬಟ್ಟೆಯನ್ನು ತೊಳೆಯಿರಿ. ನೀವು ಬಳಸುವ ಡಿಟರ್ಜೆಂಟ್ ಬಳಸಿಯೇ ಬಟ್ಟೆ ಕ್ಲೀನ್ ಮಾಡ್ಬಹುದು. ವಾಷಿಂಗ್ ಮಶಿನ್ ನಲ್ಲಿ ನೀವು ಬಟ್ಟೆ ಹಾಕ್ತಿದ್ದರೆ ಬಟ್ಟೆ ವಾಶ್ ಗೆ ಡಿಟರ್ಜೆಂಟ್ ಬಳಸಿ. ಕೊನೆಯಲ್ಲಿ ರಿನ್ಸ್ (Rinse) ಮಾಡುವ ವೇಳೆ ವಾಶಿಂಗ್ ಮಶಿನ್ ಗೆ ಅರ್ಧ ಕಪ್ ಬಿಳಿ ವಿನೆಗರ್ ಸೇರಿಸಿ.
ಕೈನಲ್ಲಿ ಬಟ್ಟೆ ಕ್ಲೀನಿಂಗ್ ವೇಳೆ ಹೀಗೆ ಮಾಡಿ
ಒಂದ್ವೇಳೆ ನೀವು ಕೈನಲ್ಲಿ ಬಟ್ಟೆ ಕ್ಲೀನ್ ಮಾಡ್ತಿದ್ದರೆ ಬಕೆಟ್ ಗೆ ಶುದ್ಧ ನೀರನ್ನು ಹಾಕಿ, ಅದಕ್ಕೆ ಅರ್ಧ ಕಪ್ ಬಿಳಿ ವಿನೆಗರ್ ಸೇರಿಸಿ. ನಂತರ ಬಟ್ಟೆಗಳನ್ನು 5–10 ನಿಮಿಷ ನೆನೆಸಿಟ್ಟು ಹಿಸುಕಿ ಒಣಗಿಸಿ.
ಬಟ್ಟೆಗೆ ವಿನೆಗರ್ ವಾಸನೆ?
ನೀವು ಹೀಗೆ ಬಟ್ಟೆಯನ್ನು ಕ್ಲೀನ್ ಮಾಡಿದಾಗ ಬಟ್ಟೆಯಲ್ಲಿ ಯಾವುದೇ ವಿನೆಗರ್ ವಾಸನೆ ಉಳಿಯೋದಿಲ್ಲ. ಬಟ್ಟೆ ಸಂಪೂರ್ಣವಾಗಿ ಒಣಗಿದಾಗ ವಿನೆಗರ್ ವಾಸನೆ ಮಾಯವಾಗಿ ಬಟ್ಟೆ ತಾಜಾ ಹಾಗೂ ಸ್ವಚ್ಛವಾಗುತ್ತದೆ.
ಬಿಳಿ ವಿನೆಗರ್ ಬಳಕೆಯಿಂದ ಲಾಭ
ನೀವು ಬಟ್ಟೆ ಕ್ಲೀನ್ ಮಾಡಲು ವಿನೆಗರ್ ಬಳಸ್ತಿದ್ದರೆ ಇದು ದುರ್ವಾಸನೆ ಕಡಿಮೆ ಮಾಡುತ್ತದೆ. ನೈಸರ್ಗಿಕ ಫ್ಯಾಬ್ರಿಕ್ ಸಾಫ್ಟನರ್ ಆಗಿ ಕೆಲಸ ಮಾಡುತ್ತದೆ. ಬಟ್ಟೆಗಳನ್ನು ಮೃದುವಾಗಿರಿಸುತ್ತದೆ. ಬಣ್ಣ ಮಸುಕಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಮಳೆಗಾಲದಲ್ಲಿ ಬಟ್ಟೆ ಫ್ರೆಶ್ ಆಗಿರಲು ಹೀಗೆ ಮಾಡಿ
ಬಟ್ಟೆಗಳನ್ನು ಒಂದರ ಮೇಲೊಂದು ಹಾಕದೆ ಗಾಳಿ ಚೆನ್ನಾಗಿ ತಾಗುವಂತೆ ಹರಡಿ. ಸಾಧ್ಯವಾದರೆ ಫ್ಯಾನ್ ಅಥವಾ ಉತ್ತಮ ಗಾಳಿಯಿರುವ ಜಾಗದಲ್ಲಿ ಒಣಗಿಸಿ. ಬಟ್ಟೆಗಳನ್ನು ಅಲಮಾರಿಯಲ್ಲಿ ಇಡುವಾಗ ಕರ್ಪೂರ ಅಥವಾ ಲವಂಗವನ್ನು ಒಂದು ಮೂಲೆಯಲ್ಲಿ ಇಡಿ. ಇದು ತೇವಾಂಶ ಮತ್ತು ದುರ್ವಾಸನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

