ಅಮೆರಿಕದ 'ಮಾಸ್ಟರ್‌ಷೆಫ್ ಸೀಸನ್ 16' ರಿಯಾಲಿಟಿ ಷೋನಲ್ಲಿ ಭಾರತದ ಯುವತಿ ಐಶು ಚಲ್ಲಾ ಅವರು ಜನಪ್ರಿಯ ತಿನಿಸಾದ ಆಲೂಬೋಂಡಾವನ್ನು ತಯಾರಿಸಿ ವಿಶ್ವದ ಗಮನ ಸೆಳೆದಿದ್ದಾರೆ. ಅವರ ಆಲೂಬೋಂಡಾ ಮತ್ತು ಕಾಯಿಚಟ್ನಿಯನ್ನು ಮೆಚ್ಚಿದ ತೀರ್ಪುಗಾರರು, ಅವರಿಗೆ ಷೋನ ಅತ್ಯುನ್ನತ ಗೌರವವಾದ 'ಇಮ್ಯುನಿಟಿ ಪಿನ್' ನೀಡಿ ಗೌರವಿಸಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಬಹಳ ಜನಪ್ರಿಯ ತಿನಿಸುಗಳಲ್ಲಿ ಒಂದು ಆಲೂಬೋಂಡಾ. ಮಳೆಗಾಲದಲ್ಲಿ ಜುಮುರು ಜುಮುರು ಮಳೆ ಬೀಳುತ್ತಿರುವಾಗ ಅಥವಾ ಚಳಿಗಾಲದಲ್ಲಿ ಚುಮುಚುಮು ಚಳಿ ಇರುವಾಗ ಬಿಸಿಬಿಸಿ ಆಲೂಬೋಂಡಾ.... ಆಹಾ... ನೆನೆಸಿಕೊಂಡರೇ ಬಹುತೇಕ ಎಲ್ಲರ ಬಾಯಲ್ಲೂ ನೀರು ಬರುವುದು ಉಂಟು. ಹಾಗೆಂದು ಬೇಸಿಗೆ ಕಾಲದಲ್ಲಿ ಇದಕ್ಕೆ ಡಿಮಾಂಡ್ ಕಮ್ಮಿ ಏನಿಲ್ಲ. ಬೀದಿಬದಿಯ ವ್ಯಾಪಾರದಲ್ಲಿ ಇದರದ್ದೇ ಪಾರುಪತ್ಯ. ದಿನನಿತ್ಯವೂ ಇದರಿಂದಲೇ ನಾಲ್ಕೈದು ಸಾವಿರಕ್ಕಿಂತ ಹೆಚ್ಚು ಆದಾಯ ಗಳಿಸುವ ಹಲವಾರು ವ್ಯಾಪಾರಿಗಳು ಇದ್ದಾರೆ ಎಂದರೆ ಆಲೂ ಬೋಂಡಾಕ್ಕಿರುವ ಡಿಮಾಂಡ್ ತಿಳಿದುಬರುತ್ತದೆ.
ಇಂತಿಪ್ಪ ಆಲೂಬೋಂಡಾ ಮತ್ತು ಕಾಯಿಚಟ್ನಿ ಇದೀಗ ವಿಶ್ವದ ಗಮನ ಸೆಳೆದಿದೆ. ಭಾರತದ ಯುವತಿ ಅಮೆರಿಕದಲ್ಲಿ ಅಡುಗೆಯ ರಿಯಾಲಿಟಿ ಷೋ ಮಾಸ್ಟರ್ಷೆಫ್ನಲ್ಲಿ ಒಂದರಲ್ಲಿ ತಯಾರಿಸಿದ ಆಲೂಬೋಂಡಾ, ಹಲವಾರು ದೇಶಗಳ ತಿನಿಸನ್ನು ಹಿಂದಿಕ್ಕಿ ಟಾಪ್ಮೋಸ್ಟ್ ಸ್ಥಾನವನ್ನು ಪಡೆದುಕೊಂಡಿದೆ! ಯುವತಿ ಐಶು ಚಲ್ಲಾ ಮಾಡಿದ ಆಲೂಬೋಂಡಾ ಈಗ ವಿಶ್ವದ ಗಮನ ಸೆಳೆದಿದ್ದು, ದಕ್ಷಿಣ ಭಾರತದ ಆಲೂಬೋಂಡಾ ರೆಸಿಪಿಗಾಗಿ ಈ ಷೋ ಬಳಿಕ ಗೂಗಲ್ನಲ್ಲಿ ಸಿಕ್ಕಾಪಟ್ಟೆ ಸರ್ಚ್ ಶುರುವಾಗಿದೆ.
ಏಷ್ಯಾ-ಪೆಸಿಫಿಕ್ ತಂಡದ ಪ್ರತಿನಿಧಿ
ಮಾಸ್ಟರ್‌ಷೆಫ್ ಸೀಸನ್ 16ನಲ್ಲಿ ಐಶು ಸಾಧನೆ 'ಮಾಸ್ಟರ್‌ಶೆಫ್ ಯುಎಸ್ಎ ಸೀಸನ್ 16 - ಗ್ಲೋಬಲ್ ಗಾಂಟ್ಲೆಟ್' ಸ್ಪರ್ಧೆಯಲ್ಲಿ ಏಷ್ಯಾ-ಪೆಸಿಫಿಕ್ ತಂಡವನ್ನು ಐಶು ಪ್ರತಿನಿಧಿಸುತ್ತಿದ್ದು, ಮೇ ತಿಂಗಳಲ್ಲಿ ನಡೆದ ಸಂಚಿಕೆಯಲ್ಲಿ ನಮ್ಮ ಜನಪ್ರಿಯ ತಿನಿಸಾದ ಆಲೂ ಬೋಂಡಾ ತಯಾರಿಸಿದ್ದರು. ಕಾಯಿ ಚಟ್ನಿ ಮಾತ್ರವಲ್ಲದೇ ತೆಂಗಿನ ತುರಿಯನ್ನೂ ಸೇರಿಸಿ ಅವರು ಮಾಡಿದ ಆಲೂ ಬೋಂಡಾ ಸವಿದ ತೀರ್ಪುಗಾರರು ಕಣ್ ಕಣ್ ಬಿಟ್ಟು ವ್ಹಾರೆವ್ಹಾ ಎಂದಿದ್ದಾರೆ. ಇದಕ್ಕಾಗಿ, ಐಶು ಅವರಿಗೆ ಪ್ರತಿಷ್ಠಿತ 'ಇಮ್ಯುನಿಟಿ ಪಿನ್' ಕೂಡ ನೀಡಲಾಗಿದೆ. ಇದು ಈ ಷೋನ ಅತ್ಯಂತ ಗೌರವದ ಸಂಕೇತವಾಗಿದೆ.
ಬಾಯಲ್ಲಿ ನೀರೂರಿಸಿದ ಆಲೂ ಬೋಂಡಾ
ಮಾಸ್ಟರ್‌ಷೆಫ್ ಕಾರ್ಯಕ್ರಮದಲ್ಲಿ ಈ ಬೋಂಡಾವನ್ನು 'ಸೇವರಿ ಡೋನಟ್'ಅಂದರೆ ಖಾರದ ಡೋನಟ್ ಎಂದು ಹೇಳಿದ್ದಾರೆ. ಅಡುಗೆಯ ಸ್ಪರ್ಧೆಯಲ್ಲಿ ಐಶು ಅವರು, ಮಸಾಲೆ ಬೆರೆಸಿದ ಬೇಯಿಸಿದ ಆಲೂಗಡ್ಡೆ , ತುರಿದ ತೆಂಗಿನಕಾಯಿ, ಹುರಿದ ಜೀರಿಗೆಯ ಸ್ವಾದದೊಂದಿಗೆ, ತೆಂಗಿನಕಾಯಿ ಮತ್ತು ಪುದೀನಾ-ಕೊತ್ತಂಬರಿ ಚಟ್ನಿಯ ಜೊತೆ ಇದನ್ನು ನೀಡಿದರು. ಗರಿಗರಿಯಾದ ಚಿನ್ನದ ಬಣ್ಣದ ಆಲೂ ಬೋಂಡಾ ತೀರ್ಪುಗಾರರಿಂದ ಮೆಚ್ಚುಗೆ ಗಳಿಸಿತು.


