ಅಲೋವೆರಾ ಗಿಡ ಸೊಂಪಾಗಿ ಪೊದೆ ತರಹ ಬೆಳಿಬೇಕಾ, ಹಾಗಿದ್ರೆ ಇದನ್ನ ಮಾಡಿ ನೋಡಿ
Aloe Vera plant care tips: ಮನೆಯ ಅಂದ ಹೆಚ್ಚಿಸುವುದರ ಜೊತೆಗೆ ಹತ್ತಾರು ಆರೋಗ್ಯ ಗುಣಗಳನ್ನು ಹೊಂದಿರುವ ಅಲೋವೆರಾ ಗಿಡ ನಿಮ್ಮ ಮನೆಯಲ್ಲೂ ಇದೆಯೇ? ಅದು ಸರಿಯಾಗಿ ಬೆಳೆಯುತ್ತಿಲ್ಲ ಎಂಬ ಚಿಂತೆ ನಿಮಗಿದ್ದರೆ, ಗಿಡವನ್ನು ಸೊಂಪಾಗಿ ಮತ್ತು ಹಸಿರಾಗಿ ಬೆಳೆಸಲು ಇಲ್ಲಿದೆ ಕೆಲವು ಸುಲಭ ಉಪಾಯಗಳು.

ಸೊಂಪಾಗಿ ಬೆಳೆಯಲು ಟಿಪ್ಸ್
ಆರೋಗ್ಯ ಮತ್ತು ಸೌಂದರ್ಯಕ್ಕೆ ರಾಮಬಾಣವಾಗಿರುವ ಅಲೋವೆರಾ ಗಿಡವನ್ನು ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಮನೆಗಳಲ್ಲಿ ಬೆಳೆಸುತ್ತಿದ್ದಾರೆ. ಕೆಲವರು ನೇರವಾಗಿ ಮಣ್ಣಿನಲ್ಲಿ ನೆಟ್ಟರೆ, ಇನ್ನು ಕೆಲವರು ಸ್ಥಳದ ಅಭಾವದಿಂದ ಬಾಲ್ಕನಿಗಳಲ್ಲಿ ಕುಂಡಗಳಲ್ಲಿ ಬೆಳೆಸುತ್ತಾರೆ. ಆದರೆ ಸರಿಯಾದ ಆರೈಕೆಯಿಲ್ಲದೆ ಗಿಡಗಳು ಬಾಡಿಹೋಗುವುದು ಅಥವಾ ಸರಿಯಾಗಿ ಬೆಳೆಯದಿರುವುದು ಸಾಮಾನ್ಯ. ನಿಮ್ಮ ಮನೆಯ ಬಾಲ್ಕನಿಯಲ್ಲಿ ಅಲೋವೆರಾ ಗಿಡ ಸೊಂಪಾಗಿ ಬೆಳೆಯಲು ಈ ಕೆಳಗಿನ 5 ಟಿಪ್ಸ್ ಅನುಸರಿಸಿ.
1. ಸರಿಯಾದ ಕುಂಡದ ಆಯ್ಕೆ
ಅನೇಕರು ಪ್ಲಾಸ್ಟಿಕ್ ಬಕೆಟ್ ಅಥವಾ ಚಿಕ್ಕ ಪ್ಲಾಸ್ಟಿಕ್ ಕುಂಡಗಳಲ್ಲಿ ಅಲೋವೆರಾ ಬೆಳೆಸುತ್ತಾರೆ. ಆದರೆ ಅಲೋವೆರಾ ಬೇರುಗಳು ಹೆಚ್ಚು ಆಳಕ್ಕೆ ಹೋಗುವುದಿಲ್ಲ, ಬದಲಿಗೆ ಅಗಲವಾಗಿ ಹರಡುತ್ತವೆ. ಆದ್ದರಿಂದ ಅಗಲವಾದ ಮತ್ತು ಕಡಿಮೆ ಆಳವಿರುವ ಮಣ್ಣಿನ ಕುಂಡಗಳನ್ನು ಆರಿಸಿಕೊಳ್ಳುವುದು ಉತ್ತಮ. ಕುಂಡದ ತಳದಲ್ಲಿ ನೀರು ಸರಾಗವಾಗಿ ಹೊರಹೋಗಲು ಸಣ್ಣ ರಂಧ್ರಗಳಿರಲಿ.
2. ಮಣ್ಣಿನ ಮಿಶ್ರಣ
ಕುಂಡದಲ್ಲಿ ನೀರು ನಿಂತರೆ ಗಿಡ ಕೊಳೆಯುತ್ತದೆ. ಆದ್ದರಿಂದ ಕೇವಲ ಮಣ್ಣನ್ನು ಬಳಸುವ ಬದಲು, ಮಣ್ಣಿನ ಜೊತೆಗೆ ಮರಳು (Sand) ಮಿಶ್ರಣ ಮಾಡಿ. ಅಥವಾ ಮಾರುಕಟ್ಟೆಯಲ್ಲಿ ಸಿಗುವ 'ಕ್ಯಾಕ್ಟಸ್ ಮಿಕ್ಸ್' ಬಳಸಬಹುದು. ಇದು ನೀರು ಮಣ್ಣಿನಲ್ಲಿ ನಿಲ್ಲದಂತೆ ತಡೆಯುತ್ತದೆ.
3. ಸೂರ್ಯನ ಬೆಳಕು
ಅಲೋವೆರಾ ಗಿಡಕ್ಕೆ ನೇರವಾದ ಬಿಸಿಲಿಗಿಂತ ಪರೋಕ್ಷ ಸೂರ್ಯನ ಬೆಳಕು (Indirect Sunlight) ಹೆಚ್ಚು ಅವಶ್ಯಕ. ವಿಪರೀತ ಬಿಸಿಲು ನೇರವಾಗಿ ಬಿದ್ದರೆ ಎಲೆಗಳು ಸುಟ್ಟು ಕಂದು ಬಣ್ಣಕ್ಕೆ ತಿರುಗಬಹುದು. ಆದ್ದರಿಂದ ಬಾಲ್ಕನಿಯ ನೆರಳಿರುವ ಜಾಗದಲ್ಲಿ ಕುಂಡವನ್ನು ಇರಿಸಿ.
4. ನೀರುಣಿಸುವ ವಿಧಾನ
ಈ ಗಿಡಕ್ಕೆ ಅತಿ ಹೆಚ್ಚು ನೀರಿನ ಅವಶ್ಯಕತೆ ಇಲ್ಲ. ಕುಂಡದ ಮಣ್ಣು ಸಂಪೂರ್ಣವಾಗಿ ಒಣಗಿದಾಗ ಮಾತ್ರ ನೀರು ಹಾಕಿ. ಪದೇ ಪದೇ ನೀರು ಹಾಕುವುದರಿಂದ ಕುಂಡದಲ್ಲಿ ತೇವಾಂಶ ಹೆಚ್ಚಾಗಿ ಬೇರುಗಳು ಕೊಳೆಯುವ ಅಪಾಯವಿರುತ್ತದೆ.
5. ಗೊಬ್ಬರದ ಬಳಕೆ
ಅಲೋವೆರಾ ಗಿಡಕ್ಕೆ ಪದೇ ಪದೇ ಗೊಬ್ಬರ ಹಾಕುವ ಅಗತ್ಯವಿಲ್ಲ. ವರ್ಷಕ್ಕೆ ಒಮ್ಮೆ ಅಥವಾ ಎರಡು ಬಾರಿ ನೈಸರ್ಗಿಕ ಗೊಬ್ಬರ (Organic Fertilizer) ಹಾಕಿದರೆ ಗಿಡ ಆರೋಗ್ಯವಾಗಿ ಮತ್ತು ಹಸಿರಾಗಿ ಬೆಳೆಯುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

